ಚಿಟಗುಪ್ಪ:
ಬಸವಕಲ್ಯಾಣವು ಜಗತ್ತಿಗೆ ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶ ನೀಡಿದ ಬಸವಣ್ಣನವರ ನೆಲ. ಇಂತಹ ಪವಿತ್ರ ನೆಲದಲ್ಲಿ ಬಸವಾದಿ ಶರಣರ ಮೂಲ ತತ್ವಗಳಿಗೆ ವಿರುದ್ಧವಾದ ಯಾವುದೇ ಕಾರ್ಯಕ್ರಮಗಳು ನಡೆಯಬಾರದು ಎಂದು ಬಸವತತ್ವ ಪ್ರಚಾರಕಿ ಇಂದುಮತಿ ಗಾರಂಪಳ್ಳಿ ಅಕ್ಕನವರು ಹೇಳಿದರು.
ಪಟ್ಟಣದಲ್ಲಿ ಮಾನ್ಯ ತಹಶೀಲ್ದಾರ್ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಬಸವಾದಿ ಶರಣರ ಮೌಲ್ಯಗಳು ಎಂದರೆ ಮಾನವೀಯತೆ, ಸಹಬಾಳ್ವೆ, ಸಮಾನತೆ ಮತ್ತು ಶಾಂತಿ.
ಈ ಮೌಲ್ಯಗಳಿಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಮಾಡುವುದು ತಾಲೂಕಿನ ಬಸವಪರ ಸಂಘಟನೆಗಳು ಖಂಡಿಸುತ್ತವೆ. “ಅನುಭವ ಮಂಟಪ” ಹೆಸರೇ ಹೇಳುವ ಹಾಗೆ – ಇಲ್ಲಿ ಎಲ್ಲಾ ಮತ, ಜಾತಿ, ಭಾಷೆಯ ಜನರಿಗೆ ಒಂದೇ ಆಸನ. ಈ ಪರಂಪರೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ.
ಕಾರಣ ಬಸವಕಲ್ಯಾಣದಲ್ಲಿ ಇದೆ ತಿಂಗಳು 28 ರಂದು ನಡೆಯಲಿರುವ ಹಿಂದುತ್ವವಾದಿ ಸಂಘಟನೆಗಳ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ರದ್ದುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ.
ಆದ್ದರಿಂದ ಬಸವಕಲ್ಯಾಣದ ಪಾವಿತ್ರ್ಯಕ್ಕೆ ಚ್ಯುತಿ ಬಾರದಂತೆ, ಬಸವ ತತ್ವಗಳ ರಕ್ಷಣೆಗಾಗಿ, ಸಾಮಾಜಿಕ ಸೌಹಾರ್ದತೆ ಕಾಪಾಡಲು ಸಂಬಂಧಿಸಿದ ಕಾರ್ಯಕ್ರಮದ ಬಗ್ಗೆ ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತವು ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗಮೇಶ ಜವಾದಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಚಂದ್ರಶೇಖರ ತಂಗಾ ಮತ್ತಿತರರು ಇದ್ದರು.
