ಲಿಂಗೈಕ್ಯ ಶರಣೆ ನೀಲಮ್ಮ ಅವರಿಗೆ ನುಡಿನಮನ
ನಂಜನಗೂಡು:
ಹೋಮ, ಹವನ, ಶಾಸ್ತ್ರಗಳೆಂಬ ಮೌಢ್ಯ, ಆಡಂಬರದ ಆಚರಣೆಗಳ ಹೆಸರಿನಲ್ಲಿ ಹಣ ಹಾಗೂ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ, ಬಸವಾದಿ ಶರಣರ ವಚನಗಳಲ್ಲಿರುವ ಜೀವನ ಸಂದೇಶವನ್ನು ಅರ್ಥಮಾಡಿಕೊಂಡು ಉತ್ತಮವಾಗಿ ಬದುಕಬೇಕು ಎಂದು ಬಸವತತ್ವ ಚಿಂತಕ ಚೌಹಳ್ಳಿ ಲಿಂಗರಾಜಪ್ಪ ಸಲಹೆ ನೀಡಿದರು.
ತಾಲೂಕಿನ ಕಲ್ಮಹಳ್ಳಿಯಲ್ಲಿ ಲಿಂಗೈಕ್ಯ ಶರಣೆ ನೀಲಮ್ಮನವರ ಜೀವನ ಸಾಧನೆ, ಸೇವಾ ಮನೋಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಾದಿ ಪ್ರಮಥರ ವಚನಗಳಲ್ಲಿ ಅಡಕವಾಗಿರುವ ಮಾನವೀಯ ಮೌಲ್ಯಗಳು, ಕಾಯಕ, ದಾಸೋಹ ಮತ್ತು ಸಮಾನತೆಯ ತತ್ವಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡುತ್ತ, ದೀಪದಂತೆ ಬೆಳಗಿ, ಜನಮನಗಳಲ್ಲಿ ಅಮರರಾದವರು ಶರಣೆ ನೀಲಮ್ಮ ಅವರು. ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದ ನೀಲಮ್ಮನವರು ತಮ್ಮ ಬದುಕನ್ನು ಮಕ್ಕಳ ಲಾಲನೆ-ಪಾಲನೆ, ಶಿಕ್ಷಣ ಹಾಗೂ ಸಮಾಜಸೇವೆಗೆ ಮುಡಿಪಾಗಿಟ್ಟಿದ್ದರು.
ವಿವಾಹವಾಗದಿದ್ದರೂ ನೂರಾರು ಮಕ್ಕಳಿಗೆ ತಾಯಿಯ ಮಮತೆಯನ್ನು ಹಂಚಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ನೀಲಮ್ಮ ಅವರು ದೀಪದಂತೆ ಬೆಳಕು ನೀಡಿದರು. ಮೇಘದಂತೆ ಕರುಣೆ ಸುರಿಸಿದರು. ಶಿಶುವಿನಂತೆ ನಿರ್ಮಲವಾಗಿ ಬದುಕಿದರು.

ಅಂಗನವಾಡಿಯ ಪುಟ್ಟ ಮಕ್ಕಳ ಬದುಕಿನಲ್ಲಿ ಮಮತೆಯ ತಾಯಿಯಾಗಿ ನೆಲೆಸಿದರು. ಅವರ ಸೇವೆಯ ಸುವಾಸನೆ ಬಾವನ್ನದ ವೃಕ್ಷದ ಪರಿಮಳದಂತೆ ಇಂದಿಗೂ ಜನರ ಹೃದಯಗಳಲ್ಲಿ ಹರಡುತ್ತಿದೆ. ಅವರದು ಸತ್ತು ಬದುಕಿದವರ ಸಾಲಿಗೆ ಸೇರಿದ ಅಪರೂಪದ ವ್ಯಕ್ತಿತ್ವ.
ಕೆಲವರು ಸತ್ತು ಸತ್ತವರಾಗುತ್ತಾರೆ, ಕೆಲವರು ಬದುಕಿ ಸತ್ತವರಾಗುತ್ತಾರೆ. ಆದರೆ ಕೆಲವರು ಮಾತ್ರ ಸತ್ತು ಬದುಕಿದವರಾಗುತ್ತಾರೆ. ನೀಲಮ್ಮ ಅವರು ತಮ್ಮ ಸೇವೆ, ಪ್ರೀತಿ ಮತ್ತು ಮಾನವೀಯತೆಯ ಮೂಲಕ ಸತ್ತು ಬದುಕಿದವರಾಗಿ ಜನಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ಅಂಗನವಾಡಿಯ ಪುಟ್ಟ ಮಕ್ಕಳ ನಗುವಿನಲ್ಲಿ ಬದುಕಿದ ನೀಲಮ್ಮ ಅವರು ಕಾಲವನ್ನು ಕಳೆಯಲಿಲ್ಲ. ಕಾಲವನ್ನೇ ಕಾಯಕವನ್ನಾಗಿಸಿದರು. ಆದ್ದರಿಂದ ಅವರ ಮರಣವು ಅಂತ್ಯವಲ್ಲ, ಸಾರ್ಥಕ ಬದುಕಿನ ಮಹಾನವಮಿಯಾಗಿದೆ ಕುಮಾರಸ್ವಾಮಿ ಹೇಳಿದರು.

ನೀಲಮ್ಮ ಅವರ ಸಹೋದರರಾದ ಕಲ್ಮಹಳ್ಳಿ ನಟರಾಜು ಅವರು ಭಾವಪೂರ್ಣ ನುಡಿನಮನ ಸಲ್ಲಿಸಿ, ಈ ಜಗತ್ತಿನ ಸಂಬಂಧಗಳು ರಕ್ತಸಂಬಂಧಕ್ಕಿಂತಲೂ ಆತ್ಮೀಯತೆ, ಪ್ರೀತಿ ಮತ್ತು ಕರುಣೆಯ ನೆಲೆಯಲ್ಲಿ ಬೆಳೆಯುತ್ತವೆ. ನನ್ನ ಸಹೋದರಿ ನೀಲಮ್ಮ ಅವರು ಕೇವಲ ನಮ್ಮ ಕುಟುಂಬದ ಸದಸ್ಯೆಯಾಗಿರಲಿಲ್ಲ; ಊರಿನ ನೂರಾರು ಮಕ್ಕಳಿಗೆ ತಾಯಿಯಾಗಿ, ಅನೇಕ ಕುಟುಂಬಗಳಿಗೆ ಆತ್ಮೀಯ ಬಂಧುವಾಗಿ ಬದುಕಿದ್ದರು. ಅದಕ್ಕಾಗಿಯೇ ಅವರ ಅಗಲಿಕೆಯ ನೋವು ಇಡೀ ಗ್ರಾಮವನ್ನು ಕಾಡುತ್ತಿದೆ.
ಸಾವು ಎಂಬುದು ಯಾರಿಗೂ ತಪ್ಪದ ಸತ್ಯ. ದೇವರು, ದಾನವರು, ಮಹಾಪುರುಷರು ಸೇರಿದಂತೆ ಎಲ್ಲರಿಗೂ ಸಾವುಂಟು. ಆದರೆ ಸಮಾಜದ ಒಳಿತಿಗಾಗಿ ಬದುಕಿದವರು ತಮ್ಮ ಕಾರ್ಯಗಳ ಮೂಲಕ ಚಿರಂಜೀವಿಗಳಾಗುತ್ತಾರೆ. ನೀಲಮ್ಮ ಅವರ ಜೀವನವೂ ಅಂತಹದೇ ಆಗಿತ್ತು” ಎಂದು ನುಡಿದರು.

ವಚನ ಚೂಡಾಮಣಿ ಅವರು ಶರಣರ ವಚನಗಳನ್ನು ಸುಶ್ರಾವ್ಯವಾಗಿ ಗಾಯನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಭಾವದ ಕಳೆ ತಂದರು. ಅವರ ಮನಮುಟ್ಟುವ ವಚನಗಾಯನವು ನೆರೆದಿದ್ದ ಶರಣಾಭಿಮಾನಿಗಳನ್ನು ಭಾವಲೋಕಕ್ಕೆ ಕರೆದೊಯ್ದು ಕಾರ್ಯಕ್ರಮದ ಘನತೆಯನ್ನು ಮತ್ತಷ್ಟು ಹೆಚ್ಚಿಸಿತು. ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಬಿ.ಆರ್. ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶರಣ ಚಿಂತಕ ದೇವನೂರು ಪ್ರಶಾಂತ, ಪ್ರಭುಸ್ವಾಮಿ, ಬಾನಹಳ್ಳಿ ಸಂತೋಷ, ಗಜೇಂದ್ರ ಪ್ರಭುಸ್ವಾಮಿ, ಪಟೇಲ್ ಬಾಬು, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
