ಶರಣರಿಗೆ ಪ್ರೇರಣೆಯಾಗಿದ್ದು ವೇದಗಳಲ್ಲ ತಮಿಳು ಪುರಾತನರು, ನಾಥರು

(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ)

ಧಾರವಾಡ

ವೇದ ಆಗಮಗಳು ಶರಣ ತತ್ವದ ಮೂಲವೆಂದು ಕೆಲವರು ಹೇಳುತ್ತಾರೆ. ಇದಕ್ಕೆ ಯಾವುದೇ ಆಧಾರವಿಲ್ಲ. ಕೆಲವು ಆಗಮಗಳ ಕೊನೆಯಲ್ಲಿ ಶರಣ ತತ್ವ ಜೋಡಿಸಿ ಒಂದು ಕಲ್ಪಿತ ಇತಿಹಾಸ ಸೃಷ್ಟಿಸುವ ಪ್ರಯತ್ನವಷ್ಟೇ.

ತಮಿಳು ಪುರಾತನರು

ವಚನಗಳು ಯಾವುದೇ ಸಂಸ್ಕೃತ ಸಾಹಿತ್ಯದಿಂದ ಹುಟ್ಟಲಿಲ್ಲ. ಶರಣರಿಗೆ ಸ್ವಲ್ಪ ಮಟ್ಟಿಗೆ ಪ್ರೇರಣೆಯಾಗಿದ್ದು ತಮಿಳಿನ ಪುರಾತನರು ಮತ್ತು ಜಾತ್ಯತೀತವಾಗಿದ್ದ ಪ್ರಾಚೀನ ನಾಥ ಪಂಥ.

ತಮಿಳುನಾಡಿನ ೬೩ ಪುರಾತನರು ೧೦ನೇ ಶತಮಾನಕ್ಕಿಂತ ಮುಂಚೆ ಬದುಕ್ಕಿದ್ದವರು. ತಮಿಳು ಶೈವ ಪರಂಪರೆಯನ್ನು ಬೆಳೆಸಿದ ಅನೇಕ ಪುರಾತನರು ಹಿಂದುಳಿದ ಮತ್ತು ದಲಿತ ಜಾತಿಗಳಿಂದ ಬಂದಿದ್ದರು.

ಪುರಾತನರು ರಚಿಸಿದ ತಮಿಳು ಭಕ್ತಿ ಸಾಹಿತ್ಯವೇ ‘ತೆವಾರಂ’. ತಮಿಳು ವೈಷ್ಣವ ಆಚಾರ್ಯರು ಇವರನ್ನು ಬದಿಗಿರಿಸಿ ಸಂಸ್ಕೃತ ಭಾಷೆಯ ಆಗಮ ನಿಷ್ಠ ಸಿದ್ದಾಂತ ಸಾಹಿತ್ಯ ಬೆಳೆಸಿದರು.

ಬಸವಣ್ಣನವರೂ ಸೇರಿದಂತೆ ಅನೇಕ ಶರಣರು ತಮ್ಮ ವಚನಗಳಲ್ಲಿ ಪುರಾತನರನ್ನು ನೆನೆಯುತ್ತಾರೆ. ಆಚಾರ್ಯರ ಆಗಮ ನಿಷ್ಠ ಸಂಸ್ಕೃತ ಸಾಹಿತ್ಯದ ಬದಲು ಶರಣರು ಪುರಾತನರ ದೇಶೀ ಸಾಹಿತ್ಯ ಮನ್ನಿಸಿದರು.

ಶರಣರ ಮೇಲಾದ ಪುರಾತನರ ಪ್ರಭಾವ ಅನೇಕ ಶಾಸನಗಳಲ್ಲಿಯೂ ಕಾಣುತ್ತವೆ. ಅರ್ಜುನವಾಡ ಶಾಸನದಲ್ಲಿ ಬಸವಣ್ಣನವರ ವಂಶಸ್ಥ ಹಾಲ ಬಸವಿದೇವ ಭಕ್ತಿಯಿಂದ ಪುರಾತನರನ್ನು ಸ್ಮರಿಸುತ್ತಾನೆ.

(‘ತಮಿಳು ಪುರಾತನ ಶೈವ ಪಂಥ – ನಾಥ ಪಂಥ-ಶರಣ ಪಂಥ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)

ಶರಣರ ಮೇಲೆ ನಾಥರ ಪ್ರಭಾವ

ಶಿವ ಭಕ್ತಿಯ ಪ್ರಾಚೀನ ನಾಥ ಪಂಥದಿಂದಲೂ ಶರಣರು ಪ್ರೇರೇಪಿತರಾದರು. ಜನಿವಾರ ಹರಿದು, ವೈದಿಕ ಧರ್ಮ ತ್ಯಜಿಸಿ ಬಸವಣ್ಣನವರು ನಾಥ ಪಂಥ ಸೇರಿದರು ಎನ್ನಲು ಆಧಾರವಿದೆ.

ಬಾಗೇವಾಡಿ, ಕೂಡಲ ಸಂಗಮ, ಮಂಗಳವಾಡಿ, ಕಲ್ಯಾಣ ಮುಂತಾದ ಸ್ಥಳಗಳು ಬಸವಣ್ಣನವರ ಬದುಕಿನ ಮುಖ್ಯ ನೆಲೆಗಳಾಗಿದ್ದವು. ಅವು ಆ ಕಾಲದ ನಾಥ ಪಂಥದ ಪ್ರಸಿದ್ಧ ಕೇಂದ್ರಗಳೂ ಆಗಿದ್ದವು.

ಅನೇಕ ವಚನಗಳು ನಾಥರನ್ನು ಸ್ಮರಿಸುತ್ತವೆ. ನಾಥ ಗುರು ಗೋರಕ್ಷರ ೧೧ ವಚನಗಳು ದೊರಕಿವೆ. ಗೋರಕ್ಷ, ಬಸವಣ್ಣನವರ ವಚನಗಳಲ್ಲಿ ಹೋಲಿಕೆಯಿದೆ. ನಾಥ ಸಾಹಿತ್ಯದಲ್ಲಿಯೂ ‘ಲಿಂಗಧಾರಿ’ಗಳ ಉಲ್ಲೇಖವಿದೆ.

ಅಲ್ಲಮ, ಅಕ್ಕ, ಸಿದ್ದರಾಮರಂತಹ ಸುಪ್ರಸಿದ್ಧ ಶರಣರು ನಾಥ ಮೂಲದಿಂದ ಬಂದವರು. ಹಲವಾರು ವಚನಕಾರರ ಮುದ್ರಿಕೆಯಲ್ಲಿ ‘ನಾಥ’ ಪದವಿದೆ. ಉದಾ: ರಾಮನಾಥ (ಜೇಡರ ದಾಸಿಮಯ್ಯ).

ಜಗಳೂರಿನ ಕಲ್ಲೇದೇವರಪುರ ಶಾಸನದಲ್ಲಿ (೧೨೭೯) ನಾಥ ಗುರು ಮತ್ತು ಪ್ರಸಿದ್ಧ ಶರಣರ ಹೆಸರುಗಳು ಒಟ್ಟಿಗೇ ಕಾಣಿಸುತ್ತದೆ: ಚತುರಂಗಿನಾಥ , ಗೋರಖನಾಥ, ಬಸವರಾಜ, ಚೆನ್ನ, ಹೊನ್ನ, ಬಂಕ ಇತ್ಯಾದಿ.

ಬಾಲಸಂಗಯ್ಯನ ವಚನಗಳು (೧೫-೧೬ನೇ ಶತಮಾನ) “ಕೂಡಲಸಂಗಮಾವದೂತನ ವಚನಗಳು” ಶೀರ್ಷಿಕೆಯಿಂದ ಪ್ರಕಟವಾಗಿವೆ. ನಾಥರಿಗೆ ‘ಆವದೂತ’ರೆಂದೂ ಕರೆಯುತ್ತಿದ್ದರು.

(‘ನಾಥ ಸಂಪ್ರದಾಯ- ಶರಣ ಸಂಪ್ರದಾಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)

ನಾಥರಿಗಿಂತ ಭಿನ್ನವಾಗಿ ಬೆಳೆದ ಶರಣರು

ಪ್ರಾಚೀನ ನಾಥ ಪಂಥ ಭಾರತದಲ್ಲಿ ವ್ಯಾಪಕವಾಗಿ ಹರಡಿತ್ತು. ಅದರ ಯೋಗನಿಷ್ಠೆ, ವರ್ಣ, ಲಿಂಗ ಬೇಧಗಳನ್ನು ನಿರಾಕರಿಸುವ ನೀತಿಯಿಂದ ಶರಣರು ಆಕರ್ಷಿತರಾದರೂ ಅವರಿಗಿಂತ ಭಿನ್ನವಾಗಿಯೇ ಬೆಳೆದರು.

ಅನೇಕ ನಾಥ ಪಂಗಡಗಳು ಮದ್ಯ, ಮಾಂಸ, ಮಹಿಳೆಯರನ್ನು ಬಳಸಿಕೊಳ್ಳುವ ವಾಮಾಚಾರಕ್ಕೆ ತಿರುಗಿದ್ದವು. ಅಂತಹ ‘ಕಾಪಾಲಿಕಾ ಆಚರಣೆ’ಗಳನ್ನು ಅಲ್ಲಮ ಮುಂತಾದ ಶರಣರು ತಿರಸ್ಕರಿಸಿದರು.

ನಾಥರು ಧಾರ್ಮಿಕವಾಗಿ ಜಾತ್ಯತೀತವಾಗಿದ್ದರು. ಯಾವ ಜಾತಿಯವರು ಬೇಕಾದರೂ ಅವರನ್ನು ಸೇರಬಹುದಿತ್ತು. ಸಹ ಭೋಜನಕ್ಕೆ ಮಾನ್ಯತೆಯಿದ್ದರೂ ಅವರಲ್ಲಿ ಜಾತ್ಯತೀತ ರಕ್ತ ಸಂಬಂಧಗಳಿಗೆ ಅವಕಾಶವಿರಲಿಲ್ಲ.

“ಉಂಬುವುದು ಉಡುವುದು ಶಿವಾಚಾರ, ಕೊಂಬುದು ಕೊಡುವುದು ಕುಲಾಚಾರ… ” ಎಂದು ಶರಣರು ಈ ದ್ವಂದ್ವತೆಯನ್ನು ಖಂಡಿಸಿದರು. ತಮ್ಮ ಜಾತ್ಯತೀತತೆಯನ್ನು ರಕ್ತ ಸಂಬಂಧದವರೆಗೂ ವಿಸ್ತರಿಸಿದರು.

ನಾಥರ ಯೋಗ ನಿಷ್ಠೆ ಮತ್ತು ಜಾತ್ಯತೀತ ನಿಲುವಿಗೆ ಬಸವಣ್ಣನವರು ಇಷ್ಟಲಿಂಗ, ಜಂಗಮ, ಕಾಯಕ, ದಾಸೋಹಗಳಂತಹ ಅಂಶಗಳನ್ನು ಜೋಡಿಸಿ ಹೊಸ ಧರ್ಮವನ್ನು ಅಸ್ತಿತ್ವಕ್ಕೆ ತಂದರು.

ಪ್ರಸಿದ್ಧ ನಾಥ ಗುರು ಸಿದ್ಧರಾಮರು ಬಸವಣ್ಣನವರ ಅನುಯಾಯಿಗಳಾದರು. ಮಹಾರಾಷ್ಟ್ರ, ಕರ್ನಾಟಕದಲ್ಲಿ ಅಪಾರ ಸಂಖ್ಯೆಯಲ್ಲಿದ್ದ ಅವರ ಭಕ್ತರು ಕೂಡ ಬಸವ ಧರ್ಮದಲ್ಲಿ ಲೀನವಾದರು.

(‘ನಾಥ ಸಂಪ್ರದಾಯ- ಶರಣ ಸಂಪ್ರದಾಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *