ಪ್ರವಚನ: ಅನಿಮಿಷನ ಕರದಿಷ್ಟಲಿಂಗವ ಪಡೆದ ಅಲ್ಲಮ

ಬಸವ ಮೀಡಿಯಾ
ಬಸವ ಮೀಡಿಯಾ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 17

ಕಲಬುರಗಿ:

ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಅರಿವು, ಆಚಾರ, ಅನುಭವಗಳ ಸಂಗಮವಾಗಿ ಕಲ್ಯಾಣ ಕಟ್ಟುವ ಮಹಾಕಾರ್ಯದಲ್ಲಿ ಬಸವಣ್ಣನವರು ತೊಡಗಿದ್ದರು. ಅತ್ತ ಇದೇ ವೇಳೆ ಮಯಾಕೋಲಾಹಲಿ, ವೈರಾಗ್ಯ ವಿಭು ಅಲ್ಲಮಪ್ರಭು ಬನವಸೆಯಿಂದ ಸಂಚಾರಿಯಾಗಿ ಹೊರಟ ಅಲ್ಲಮನ ಅಮೃತ ಚರಿತ್ರೆಯನ್ನು ಚಾಮರಸ ಬಿಚ್ಚಿಡುತ್ತಾನೆ.

ಹುಡಿ ಹೊದ್ದದ ಗಾಳಿಯಂತೆ

ಮಳೆಗರೆದರೆ ನೆನೆಯದಿರುವ ಆಕಾಶದಂತೆ

ಗಾಳಿ ಬೀಸಿದರೆ ಆರದೆ ಇರುವ

ಬೆಂಕಿ ಹಚ್ಚಿದರೆ ಸುಡದಿರುವ

ಆಕಾಶದಂತೆ ನಿರ್ಲಿಪ್ತ ಜಂಗಮ ಅಲ್ಲಮ.

ಬನವಸೆ, ಮಾಳಗೊಂಡನಕೊಪ್ಪ, ಶಿರಾಳಕೊಪ್ಪ, ಕಪನಳ್ಳಿ,‌ ಕಾಳೇನಹಳ್ಳಿ ಕಡೆ ಬರುತ್ತಿರುವಾಗ ತೋಟದಲ್ಲಿ ಕೆಲಸ ಮಾಡುವ ಗೊಗ್ಗಯ್ಯ ಮತ್ತು ಅಲ್ಲಮರ ಭೇಟಿಯಾಗುವ ಪ್ರಸಂಗವನ್ನು ಚಾಮರಸ ಕವಿ ಬಹಳ ಅದ್ಭುತವಾಗಿ ಕಟ್ಟಿಕೊಡುತ್ತಾನೆ.

ಎಲ್ಲದರಲ್ಲೂ ಇದ್ದು ಎಲ್ಲದರಲ್ಲೂ ಇಲ್ಲವಾದವನು. ಎಲ್ಲದರೊಳಿದ್ದು ಇದ್ದು ಇಲ್ಲದವನು ನಾನು ಅಲ್ಲಮ.

ನೀನಾರು ಎಂದು ಕೇಳಿದ ಗೊಗ್ಗಯ್ಯನಿಗೆ ಅಲ್ಲಮ ಉತ್ತರಿಸುವ ಪರಿ ಮುಂದ್ನೋಡಿ ದುಡಿಯುತ್ತಿದ್ದ ಗೊಗ್ಗಯ್ಯನಿಗೆ ಆಶ್ಚರ್ಯವಾಗುತ್ತದೆ.

ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮ ಬೀಜವ ಅಖಂಡ ಮಂಡಲವೆಂಬ ಬಾವಿ ಪವನವೆ ರಾಟಾಳ ಸುಷುಮ್ನನಾಳದಿಂದ ಉದಕವ ತಿದ್ದಿ ಬಸವಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ!

ನೀ ಮಾಡುವ ಬಹಿರಂಗದ ಕೃಷಿಯ ಜೊತೆಗೆ ಶರೀರವೆಂಬ ಹೊಲ ಹಸನುಮಾಡುವ ಅಂತರಂಗದ ಕೃಷಿ ಕೂಡ ಬಹಳ ಅಗತ್ಯ.‌ ಸಮತೆ, ಸೈರಣೆಯನೆಂಬ ಬೇಲಿಯನ್ನಿಕ್ಕಿ ರಕ್ಷಿಸು ಎಂದು ಒತ್ತಿ ಹೇಳುತ್ತಾನೆ. ಅಲ್ಲಮರ ಈ ಆಧ್ಯಾತ್ಮಿಕ ಶಿವಯೋಗದ ಕೃಷಿ ಕಂಡವರು ಬಲ್ಲವರು, ಶರಣರು ಜನರ ಚಿಂತಿ ಕಳೆದು ನಿಶ್ಚಿಂತರಾಗುವುದನ್ನು ಕಲಿಸಲು ಮರ್ತ್ಯಕ್ಕೆ ಬಂದರು ಎಂದು ಹೇಳುತ್ತಾರೆ.

ಅದೇ ವೇಳೆಯಲ್ಲಿ ಅಲ್ಲಮರಿಗೆ ಅನಿಮಿಷನ ಕರದಿಷ್ಟಲಿಂಗ ತನ್ನ ಕೈಗೆ ಬಂದಂತಹ ಅದ್ಭುತ ಅನುಭೂತಿ ಆಗುತ್ತದೆ. ಅರಸುವ ಬಳ್ಳಿ ಕಾಲಿಗೆ ಸುತ್ತಿದಂತೆ ಹಠಯೋಗ, ರಾಜಯೋಗ, ಲಯಯೋಗ ಮಾರ್ಗದ ಅಲ್ಲಮ ಶಿವಯೋಗದೆಡೆಗೆ ವಾಲುತ್ತಾನೆ.

ಅಂತೆಯೇ ಅನಿಮಿಷನಿಗೆ (ಅಮೀನಗಡದ ಅನುಷರಾಜ) ಲಿಂಗ ಕೊಟ್ಟ ಬಸವಣ್ಣನ ಸಾನ್ನಿಧ್ಯದಿಂದ ಸುಖಿಯಾದೆ ನಾನು. ಬಸವಣ್ಣನ ಸಂಪ್ರದಾಯವ ಕಂದ ನಾನು ಎಂದು ಅಲ್ಲಮ ಕಲ್ಯಾಣದತ್ತ ಮುಖ ಮಾಡಿದ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *