ಪೂಜ್ಯ ಶರಣಬಸವ ದೇವರ ಸಿದ್ಧಲಿಂಗೇಶ್ವರ ಚರಿತಾಮೃತ ಪ್ರವಚನದ ಮಂಗಲೋತ್ಸವ
ಮುಂಡರಗಿ:
ವಿರಕ್ತಮಠದ ಪರಂಪರೆಯಲ್ಲಿ ಎಡೆಯೂರ ಸಿದ್ದಲಿಂಗೇಶ್ವರರು ವಚನ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದರು.
೧೨ನೇ ಶತಮಾನದಲ್ಲಿ ಬಸವಾದಿ ಶರಣರಿಂದ ಬೆಳೆದ ವಚನ ಸಾಹಿತ್ಯವು ಕಾಲಾಂತರದಲ್ಲಿ ಗರ್ಭದಡಿ ಸೇರಿ, ನಶಿಸಿ ಹೋಗುತ್ತಿರುವ ಹಂತದಲ್ಲಿದ್ದಾಗ ಅದನ್ನು ಉಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಡಂಬಳ ಗದಗ ತೋಂಟದಾರ್ಯ ಮಠದ ಪೀಠಾಪತಿ ಡಾ. ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.

ಪೂಜ್ಯ ಶರಣಬಸವ ದೇವರು ನಡೆಸಿಕೊಟ್ಟ ಸಿದ್ಧಲಿಂಗೇಶ್ವರ ಚರಿತಾಮೃತ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಲಿಂಗಾಯತ ಧರ್ಮದ ತತ್ವಜ್ಞಾನ ಹಾಗೂ ಸಂಸ್ಕೃತಿ ಉಳಿಸಿ ಶಿಷ್ಯ ಪರಂಪರೆಯು ಎಲ್ಲೆಡೆ ಇಂದಿಗೂ ಮುಂದುವರೆದಿದೆ ಎಂದರು.
ಕತ್ತಲೆಯಲ್ಲಿ ಸರಿದಿದ್ದ ವಚನ ಸಾಹಿತ್ಯವನ್ನು ನಂತರದಲ್ಲಿ ಬಂದ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಪುನಃ ಬೆಳಕಿಗೆ ತಂದರು. ತಮ್ಮ ೭೦೧ ಜನ ಶಿಷ್ಯರೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಯಾತ್ರೆ ನಡೆಸಿದ ಅವರು, ಧರ್ಮ ಪ್ರಚಾರದ ಜೊತೆಗೆ ಚದುರಿಹೋಗಿದ್ದ ವಚನಗಳನ್ನು ಸಂಗ್ರಹಿಸಿ, ಸಂಕಲಿಸಿದರು.

ಇಂದು ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಘನತೆ ಮತ್ತು ಗೌರವ ಸಿಗಲು ಈ ವಚನ ಸಾಹಿತ್ಯವೇ ಮೂಲ ಕಾರಣ. ಅಂತಹ ಎಡೆಯೂರು ಸಿದ್ದಲಿಂಗೇಶ್ವರರ ಚರಿತಾಮೃತವನ್ನು ಎಲ್ಲರೂ ಕೇಳಿ ಆನಂದಿಸುವ ವ್ಯವಸ್ಥೆ ಮಾಡಿದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹಾಗೂ ಎಲ್ಲರಿಗೂ ತಿಳಿಯುವಂತೆ ಪ್ರವಚನ ನೀಡಿದ ಶರಣಬಸವ ದೇವರಿಗೆ ಅಭಿನಂದಿಸಿದರು.
ಪ್ರವಚನಕಾರ ಶರಣಬಸವ ದೇವರು ಮಂಗಲೋತ್ಸವದಲ್ಲಿ ಮಾತನಾಡಿ, ೧೨ನೇ ಶತಮಾನದ ಬಸವಾದಿ ಶರಣರ ನಂತರ ಕನ್ನಡ ನಾಡಿನಲ್ಲಿ ಸಿದ್ದಲಿಂಗೇಶ್ವರರಷ್ಟು ಪೂಜಿಸ್ಪಟ್ಟ ಹಾಗೂ ಪ್ರಸಿದ್ದಿ ಪಡೆದ ಮತ್ತೊಬ್ಬ ಶಿವಯೋಗಿ ಇಲ್ಲ.
ಇವರ ಕುರಿತು ಷಟ್ಪದಿ, ಸಾಂಗತ್ಯ, ಸ್ತೋತ್ರ, ನಾಮಾವಳಿ ಮುಂತಾದ ಅಪಾರ ಸಾಹಿತ್ಯ ರಚನೆಯಾಗಿದ್ದು, ಇವರು ಬಸವಾದಿ ಶರಣರ ತತ್ವಗಳನ್ನು ಪುನರುಜ್ಜೀವನಗೊಳಿಸಿ ಜಗತ್ತಿಗೆ ಸಾರಿದರು.

ಸಿದ್ಧಲಿಂಗೇಶ್ವರರು ಕೇವಲ ಹಠಯೋಗ ಅಥವಾ ಬಾಹ್ಯ ತಪಸ್ಸನ್ನು ಪುರಸ್ಕರಿಸದೆ, ಬಸವಾದಿ ಪ್ರಮಥರು ತೋರಿದ ಶಿವಯೋಗ, ಷಟ್ಸ್ಥಲ ಹಾಗೂ ಇಷ್ಟಲಿಂಗ-ಪ್ರಾಣಲಿಂಗ-ಭಾವಲಿಂಗಗಳ ಆರಾಧನೆಗೆ ಪ್ರಾಮುಖ್ಯತೆ ನೀಡಿದರು.
ಅಲ್ಲದೆ, ಬಸವಣ್ಣನವರ ವಚನಗಳನ್ನು ಸಂಗ್ರಹಿಸಿ ಸಂಕಲನ ಮಾಡಿಸುವಲ್ಲಿಯೂ ಪ್ರಮುಖ ಕಾರಣೀಕರ್ತರಾಗಿದ್ದರು ಎಂದರು.
ನೇತತ್ವ ವಹಿಸಿದ್ದ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ ಮಾತನಾಡಿ, ೧೫ ದಿನಗಳ ಕಾಲ ಜರುಗಿದ ಆಷಾಢ ಮಾಸದ ಪ್ರವಚನದಲ್ಲಿ ಎಡೆಯೂರು ಶ್ರೀ ಸಿದ್ದಲಿಂಗೇಶ್ವರರ ಚರಿತಾಮೃತ ಪ್ರವಚನವನ್ನು ಶರಣಬಸವ ದೇವರು ಚನ್ನಾಗಿ ವಿವರಿಸಿದರು. ಅದರಂತೆ ಪ್ರವಚನ ಸಮಿತಿಯವರು ಉತ್ತಮವಾಗಿ ಸಂಘಟಿಸಿ ಯಶಸ್ವಿಗೊಳಿಸಿದರು.
ಡಾ. ಸಿದ್ದರಾಮ ಸ್ವಾಮೀಜಿಯವರು ಸ್ಥಳೀಯ ಕಲ್ಯಾಣ ಮಂಟಪದ ನಿರ್ಮಾಣಕ್ಕಾಗಿ ಈಗಾಗಲೇ ಕೋಟ್ಯಾಂತರ ಹಣ ಖರ್ಚು ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಕಲ್ಯಾಣ ಮಂಟಪದ ಕೆಲಸ ಮುಗಿಯಲಿದೆ ಎಂದರು.

ಪ್ರವಚನ ಸಮಿತಿ ಅಧ್ಯಕ್ಷ ಸಿ.ಕೆ. ಗಣಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ೧೫ ದಿನಗಳಿಂದ ಜರುಗಿದ ಈ ಪ್ರವಚನವು ಭಕ್ತರಲ್ಲಿ ವೆಜ್ಞಾನಿಕ ಮನೋಭಾವನೆ ಹಾಗೂ ಬಸವತತ್ವಗಳನ್ನು ಬಿತ್ತರಿಸುವಲ್ಲಿ ಯಶಸ್ವಿಯಾಗಿದೆ. ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ, ಸಿದ್ದರಾಮ ಶ್ರೀಗಳ ಆಶಿರ್ವಾದ ಹಾಗೂ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸುಸೂತ್ರವಾಗಿ ನಡೆದಿದೆ.
ಇದಕ್ಕೆ ತನು, ಮನ, ಧನದಿಂದ ಸಹಾಯ ಸಹಕಾರ ನೀಡಿದ ಎಲ್ಲರಿಗೂ ಅಭಿನಂದಿಸಿದರು.

ಮಮ್ಮಿಗಟ್ಟಿಯ ಬಸವಾನಂದ ಸ್ವಾಮಿಜಿ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಡಾ. ನಿಂಗು ಸೊಲಗಿ ಹಾಗೂ ಗದಗ ವಾಣಿಜ್ಯೋದ್ಯಮ ಸಂಸ್ಥೆಯಿಂದ ಶ್ರೇಷ್ಠ ವರ್ತಕ ಪ್ರಶಸ್ತಿ ಪಡೆದಿರುವ ಗೌತಮಚಂದ್ ಚೋಪ್ರಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಗಂಗಮ್ಮ ವೀ. ಕುರಕುಂದಿ, ಪ್ರವಚನ ಸಮಿತಿಯ ಉಪಾಧ್ಯಕ್ಷ ಬಸಯ್ಯ ಗಿಂಡಿಮಠ, ಶರಣಪ್ಪ ಕುಬಸದ, ಸುರೇಶ ಬಣಗಾರ, ಶಿವಕುಮಾರ ಬೆಟಗೇರಿ, ವಿಶ್ವನಾಥ ಉಳ್ಳಾಗಡ್ಡಿ, ಶಿವಯೋಗಿ ಗಡ್ಡದ, ದೇವೆಂದ್ರಪ್ಪ ರಾಮೇನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಕೊಟ್ರೇಶ ಅಂಗಡಿ ನಿರೂಪಿಸಿದರು.

ಒಳ್ಳೆಯ ಕಾರ್ಯಕ್ರಮವಾಗಿದೆ
ಪೂಜ್ಯ ಶರಣಬಸವ ಸ್ವಾಮಿಗಳು ಶರಣರ ಚರಿತ್ರೆಯನ್ನು ಮನಮುಟ್ಟುವಂತೆ ಹೇಳುತ್ತಾರೆ, ನಮಗೆ ಬಸವ ತತ್ವದ ಒಂದು ಹೊಸ ಗಟ್ಟಿ ಧ್ವನಿ ಸಿಕ್ಕಿದೆ , ಇವರ ಮೂಲಕ ಬಸವತತ್ವದ ಹೆಚ್ಚು ಪ್ರಚಾರ ನಡೆಯಲಿ, ಎಲ್ಲ ಶರಣ ಬಂಧುಗಳು ಸಹಕರಿಸಲಿ.