ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಿಸಲು ಪ್ರಹ್ಲಾದ ಜೋಶಿಗೆ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ ಬಿಜೆಪಿ ನಿಯೋಗದಿಂದ ಕೇಂದ್ರ ಸಚಿವರಿಗೆ ಮನವಿ ಸಲ್ಲಿಕೆ

ಬೀದರ:

ವಿಶ್ವಗುರು ಬಸವಣ್ಣನವರ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಅಧಿಕೃತವಾಗಿ ಆಚರಿಸಬೇಕೆಂದು ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿ, ಬೀದರ ಬಿಜೆಪಿ ನಿಯೋಗ ಮನವಿ ಸಲ್ಲಿಸಿದೆ.

ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾತಿ, ವರ್ಣ, ವರ್ಗ ಮತ್ತು ಲಿಂಗತಾರತಮ್ಯವನ್ನು ವಿರೋಧಿಸಿ ಪ್ರತಿಯೊಬ್ಬರಿಗೂ ಸಮಾನ ಗೌರವ ಹಾಗೂ ಬದುಕುವ ಹಕ್ಕು ಇರಬೇಕು ಎಂಬ ವಿಚಾರಗಳನ್ನು ಸಾರಿದ್ದಾರೆ.

ಸಮಾನತೆ, ಸಾಮಾಜಿಕನ್ಯಾಯ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಬಸವಣ್ಣನವರು ಸಮಾಜ ಸುಧಾರಣೆಯ ಮೂಲಕ ದೇಶಕ್ಕೆ ಮಹತ್ವದ ಸಂದೇಶ ನೀಡಿದವರು.

‘ಕಾಯಕವೇ ಕೈಲಾಸ’ ಎಂಬ ತತ್ವದ ಮೂಲಕ ದುಡಿಮೆಯ ಗೌರವವನ್ನು ಹಾಗೂ ‘ದಾಸೋಹ’ದ ಮೂಲಕ ಹಂಚಿಕೊಂಡು ಬದುಕುವ ಮಾನವೀಯ ಮೌಲ್ಯ ಜಗತ್ತಿಗೆ ಸಾರಿದ್ದಾರೆ ಎಂದು ನಿಯೋಗ ಮನವಿಪತ್ರದಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಮುಂಬರುವ ಪ್ರತಿವರ್ಷಗಳಲ್ಲಿ ಬಸವ ಜಯಂತಿಯನ್ನು ಕೇಂದ್ರ ಸರ್ಕಾರದಿಂದ ರಾಷ್ಟ್ರಮಟ್ಟದಲ್ಲಿ ಅಧಿಕೃತವಾಗಿ ಆಚರಿಸುವುದು, ದೇಶದ ವಿವಿಧ ರಾಜ್ಯಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಬಸವಣ್ಣನವರ ಜೀವನ ಮತ್ತು ವಿಚಾರಧಾರೆ ಕುರಿತು ರಾಷ್ಟ್ರೀಯ ಮಟ್ಟದ ಜಾಗೃತಿ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ನಿಯೋಗವು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಲ್ಲಿ ಮನವಿ ಮಾಡಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಪ್ರಭು ಬಿ. ಚವ್ಹಾಣ, ಶರಣು ಸಲಗರ, ಡಾ. ಸಿದ್ದು ಪಾಟೀಲ, ಮಾಜಿ ಸಭಾಪತಿ ರಘುನಾಥರಾವ ಮಲ್ಕಾಪುರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪೀರಪ್ಪ ಯರನಳ್ಳಿ, ಕಿರಣ ಪಾಟೀಲ ಹಾಗೂ ಪಕ್ಷದ ಮುಖಂಡರಾದ ಬಾಬು ವಾಲಿ, ಬಾಬುರಾವ ಕಾರಬಾರಿ, ಬಸವರಾಜ ಆರ್ಯ, ಈಶ್ವರಸಿಂಗ್ ಠಾಕೂರ್ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
3 Comments
    • ಒಳ್ಳೆಯ ಪ್ರಯತ್ನ ಆದರೆ ಬೀದರ ನಂತೆ ಕರ್ನಾಟಕದ ಇತರ ಎಲ್ಲ ಸಂಸದರು ಕೈ ಜೋಡಿಸಿದರೆ ಖಂಡಿತ ಆಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ರಾಜ್ಯದ ಸಂಸದರು ಪ್ರಯತ್ನಿಸುವರೆಂದು ಆಶಿಸುತ್ತೇನೆ.

  • ಕೇಂದ್ರದಲ್ಲಿ ಲಿಂಗಾಯತ ಮಂತ್ರಿಗಳಿದ್ದಾಗ ಆಗದ ಕೆಲಸ ಈಗ ಬ್ರಾಹ್ಮಣ ಮಂತ್ರಿಯಿಂದ ಆಗುತ್ತೆ ಅಂದರೆ ತುಂಬಾ ತುಂಬಾ ಖುಷಿ ಪಡುವ ವಿಷಯ. 😄

Leave a Reply

Your email address will not be published. Required fields are marked *