ಪ್ರಭುಲಿಂಗಲೀಲೆ: ಸಮಗ್ರ ಚಿಂತನೆ 1
ಪ್ರಭುಲಿಂಗಲೀಲೆಯ ಮಹತ್ವ
ಶ್ರೀಮದಮಲಜ್ಞಾನ ಭಕ್ತಿ
ಪ್ರೇಮವೇದ ಪುರಾಣ ಶಾಸ್ತ್ರ
ಸ್ತೋಮನುತ ನತಚಾರು ಚರಣಾಂಭೋಜ ಘನಮಹಿಮ |
ನಾಮರೂಪು ಕ್ರಿಯಾಕಳಾಪವಿ
ರಾಮನನುಪಮ ದಿವ್ಯತೇಜೋ
ವ್ಯೋಮಮೂರುತಿ ಗುರುಗುಹೇಶ್ವರಲಿಂಗ ಶರಣಾರ್ಥಿ
ಶ್ರಾವಣ ಮಾಸದ ಚಿಂತನೆ ಎಂದರೆ ಅದು ನಮ್ಮ ಮನಸ್ಸನ್ನು ಧರ್ಮದತ್ತ, ಭಕ್ತಿಯತ್ತ, ಜ್ಞಾನದತ್ತ ಮತ್ತು ಆತ್ಮಾನುಭವದತ್ತ ಕರೆದೊಯ್ಯುವ ಒಂದು ಪವಿತ್ರ ಪಯಣ. ಇಂತಹ ಪವಿತ್ರ ಸಂದರ್ಭದಲ್ಲಿ ಚಾಮರಸ ಕವಿಯ ‘ಪ್ರಭುಲಿಂಗಲೀಲೆ’ಯನ್ನು ಅನುಸಂಧಾನ ಮಾಡುವುದು ಅತ್ಯಂತ ಅರ್ಥಪೂರ್ಣ. ‘ಪ್ರಭುಲಿಂಗಲೀಲೆ’ಯು ಹನ್ನೆರಡನೆಯ ಶತಮಾನದ ಮಹಾನುಭಾವರಾದ ಅಲ್ಲಮಪ್ರಭು ದೇವರ ಜೀವನಕಥೆಯನ್ನು ಸಾರುವ ಮಹತ್ವದ ಆಧ್ಯಾತ್ಮಿಕ ಕೃತಿ. ಅಲ್ಲಮಪ್ರಭುಗಳ ಜೀವನವೆಂದರೆ ಕೇವಲ ಒಬ್ಬ ಮಹಾತ್ಮರ ಚರಿತ್ರೆಯಲ್ಲ; ಅದು ಅನುಭವದ ಆಳವನ್ನು ಅರಿಯುವ ಪಯಣ, ಆತ್ಮತತ್ತ್ವವನ್ನು ಕಂಡುಕೊಳ್ಳುವ ಪಯಣ, ಭೌತಿಕ ಬದುಕಿನ ಮಿತಿಗಳನ್ನು ಮೀರಿ ಪರಮಸತ್ಯದ ಕಡೆಗೆ ಸಾಗುವ ಪಯಣ.
ಅಲ್ಲಮಪ್ರಭು ದೇವರ ಮಹಿಮೆಯನ್ನು ಸಾರುವ ಅನೇಕ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ರಚನೆಯಾಗಿವೆ. ಹರಿಹರನು ‘ಅಲ್ಲಮಪ್ರಭುದೇವರ ರಗಳೆ’ಯನ್ನು ರಚಿಸಿದನು. ಅದರ ನಂತರ ಚಾಮರಸನು ‘ಪ್ರಭುಲಿಂಗಲೀಲೆ’ಯನ್ನು ರಚಿಸಿದನು. ಎಳಂದೂರು ಹರೀಶ್ವರ ಕವಿಯು ‘ಪ್ರಭುದೇವರ ಪುರಾಣ’ವನ್ನು ರಚಿಸಿದನು. ಇಮ್ಮಡಿ ಮುರಿಗಾ ಗುರುಸಿದ್ಧರು ಸಂಸ್ಕೃತ ಭಾಷೆಯಲ್ಲಿ ‘ಪ್ರಭುಲೀಲಾ’ಎಂಬ ಮಹಾಕಾವ್ಯವನ್ನು ರಚಿಸಿದರು. ಕನ್ನಡದ ‘ಪ್ರಭುಲಿಂಗಲೀಲೆ’ಮರಾಠಿ ಭಾಷೆಯಲ್ಲಿ ‘ಲೀಲಾವಿಶ್ವಂಭರ’ ಎಂಬ ಹೆಸರಿನಲ್ಲಿ ಅನುವಾದಗೊಂಡಿತು; ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಇದರ ಅನುವಾದಗಳು ನಡೆದಿವೆ. ಒಂದು ಕೃತಿಯು ಭಾಷೆಯ ಗಡಿಯನ್ನು ದಾಟಿ ಬೇರೆ ಬೇರೆ ಜನಮನಗಳನ್ನು ತಲುಪಿದಾಗ ಅದರೊಳಗಿನ ತತ್ತ್ವದ ಶಕ್ತಿ ಎಷ್ಟೊಂದು ವಿಶಾಲವಾಗಿದೆ ಎಂಬುದು ನಮಗೆ ಅರಿವಾಗುತ್ತದೆ.
ಚಾಮರಸ ಕವಿಯ ‘ಪ್ರಭುಲಿಂಗಲೀಲೆ’ಯು ಭಕ್ತಿಕಾವ್ಯ. ಆದರೆ ಭಕ್ತಿ ಎಂದರೆ ಕೇವಲ ದೇವರನ್ನು ಸ್ತುತಿಸುವುದಲ್ಲ. ಭಕ್ತಿ ಎಂದರೆ ತನ್ನ ಅಹಂಕಾರವನ್ನು ಕರಗಿಸಿಕೊಂಡು ಪರಮತತ್ತ್ವದ ಮುಂದೆ ಶರಣಾಗುವುದು. ಭಕ್ತಿ ಎಂದರೆ ದೇವರನ್ನು ಹೊರಗೆ ಹುಡುಕುವುದರ ಜೊತೆಗೆ ತನ್ನೊಳಗಿನ ದೇವತ್ವವನ್ನು ಅರಿಯುವ ಪ್ರಯತ್ನ. ಆದ್ದರಿಂದ ‘ಪ್ರಭುಲಿಂಗಲೀಲೆ’ಯನ್ನು ಓದುವುದು ಎಂದರೆ ಅದು ನಮ್ಮ ಅಂತರಂಗದೊಂದಿಗೆ ನಾವು ನಡೆಸುವ ಸಂವಾದ.
ಈ ಮಹಾಕಾವ್ಯವು ನೂರಾರು ವರ್ಷಗಳಿಂದ ಕನ್ನಡನಾಡಿನ ಮೂಲೆಮೂಲೆಗಳಲ್ಲಿ ಶ್ರಾವಣ ಮಾಸದ ಸಂದರ್ಭದಲ್ಲಿ ಪ್ರವಚನ, ಪಾರಾಯಣ ಮತ್ತು ಚಿಂತನೆಯ ಮೂಲಕ ಜನಮನವನ್ನು ತಲುಪುತ್ತಲೇ ಬಂದಿದೆ. ಶ್ರಾವಣದ ಪವಿತ್ರ ವಾತಾವರಣದಲ್ಲಿ ಶಿವನಾಮ ಸ್ಮರಣೆ ಮಾಡುವಾಗ, ಶರಣರ ವಚನಗಳನ್ನು ಆಲಿಸುವಾಗ, ಅವರ ಬದುಕಿನ ಅನುಭವಗಳನ್ನು ಮನನ ಮಾಡುವಾಗ ನಮ್ಮೊಳಗಿನ ಅನೇಕ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಜೀವನವೆಂದರೇನು? ಧರ್ಮವೆಂದರೇನು? ಭಕ್ತಿ ಎಂದರೇನು? ದೇವರನ್ನು ಕಾಣುವ ದಾರಿ ಯಾವುದು? ಮನುಷ್ಯನ ನಿಜವಾದ ಗುರಿ ಯಾವುದು? ಇಂತಹ ಪ್ರಶ್ನೆಗಳಿಗೆ ಶರಣರ ಅನುಭಾವವು ದಾರಿದೀಪವಾಗುತ್ತದೆ.
ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದ ನೆಲದಲ್ಲಿ ನಡೆದ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯ ಫಲವಾಗಿ ವಚನ ಸಾಹಿತ್ಯವು ಅಸ್ತಿತ್ವಕ್ಕೆ ಬಂದಿತು. ಅದು ಕೇವಲ ಸಾಹಿತ್ಯದ ಕ್ರಾಂತಿಯಲ್ಲ; ಅದು ಮನುಷ್ಯನ ಅಂತರಂಗವನ್ನು ಎಚ್ಚರಿಸಿದ ಆಧ್ಯಾತ್ಮಿಕ ಕ್ರಾಂತಿ. ನಂತರ ಹರಿಹರ, ರಾಘವಾಂಕ ಮೊದಲಾದ ಮಹಾಕವಿಗಳು ಶಿವಶರಣರ ಚರಿತ್ರೆಯನ್ನು ಕಾವ್ಯಾತ್ಮಕವಾಗಿ ಹಾಡಿದರು, ಬರೆದರು. ಈ ಪರಂಪರೆಯು ಮುಂದುವರಿದು ಹದಿನೈದನೆಯ ಶತಮಾನದಲ್ಲಿ ಚಾಮರಸ ಕವಿಯ ‘ಪ್ರಭುಲಿಂಗಲೀಲೆ’ಕನ್ನಡದ ಸರ್ವಶ್ರೇಷ್ಠ ಕಾವ್ಯಗಳಲ್ಲಿ ಒಂದಾಗಿ ರೂಪುಗೊಂಡಿತು.
ಈ ಶರಣ ಪರಂಪರೆಯ ಕೇಂದ್ರದಲ್ಲಿ ವಿಶ್ವಗುರು ಬಸವಣ್ಣನವರ ಮಹತ್ವದ ಕಾರ್ಯವನ್ನು ನಾವು ಮರೆಯಲು ಸಾಧ್ಯವಿಲ್ಲ. ಕಲ್ಯಾಣನಗರಿಯಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿದರು. ಅದರೊಂದಿಗೆ ಶೂನ್ಯಪೀಠದ ಪರಂಪರೆಯನ್ನೂ ರೂಪಿಸಿದರು. ಆ ಶೂನ್ಯಪೀಠಕ್ಕೆ ವ್ಯೋಮಮೂರ್ತಿ ಅಲ್ಲಮಪ್ರಭು ದೇವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಇದು ಸಾಮಾನ್ಯವಾದ ಒಂದು ಸಭೆಯ ಸ್ಥಾಪನೆಯಲ್ಲ. ಜಗತ್ತಿನ ಆಧ್ಯಾತ್ಮಿಕ ಇತಿಹಾಸದಲ್ಲಿ ಅಪೂರ್ವವಾದ ಚಿಂತನಾ ಪರಂಪರೆಗೆ ಇದು ನಾಂದಿ. ಅಲ್ಲಿ ಜ್ಞಾನಕ್ಕೆ ಜಾತಿಯ ಮಿತಿ ಇರಲಿಲ್ಲ, ಅನುಭವಕ್ಕೆ ಸ್ಥಾನಮಾನಗಳ ಅಡ್ಡಿ ಇರಲಿಲ್ಲ, ಸತ್ಯವನ್ನು ಅರಿಯುವ ಹಂಬಲವಿದ್ದ ಪ್ರತಿಯೊಬ್ಬರಿಗೂ ಚಿಂತನೆಯ ಬಾಗಿಲು ತೆರೆದಿತ್ತು.
ಬಸವಣ್ಣನವರ ಕೀರ್ತಿ ಸುಮಾರು ಒಂಬತ್ತು ಶತಮಾನಗಳನ್ನು ದಾಟಿಯೂ ಇಂದಿಗೂ ಪ್ರಕಾಶಿಸುತ್ತಿದೆ. ಅವರ ಚಿಂತನೆ ಕಾಲದ ಹೊಡೆತಕ್ಕೆ ಸಿಲುಕಿ ಮಸುಕಾಗಲಿಲ್ಲ. ಬದಲಾಗಿ ಕಾಲ ಕಳೆದಂತೆ ಅದರ ಮಹತ್ವ ಇನ್ನಷ್ಟು ಬೆಳಗುತ್ತಿದೆ. ಇಂಗ್ಲೆಂಡಿನ ಲ್ಯಾಂಬೆತ್ ನಗರದಲ್ಲಿ ಥೇಮ್ಸ್ ನದಿಯ ದಡದ ಮೇಲೆ ಲಿಂಗಾಯತ ಧರ್ಮಗುರು ಬಸವಣ್ಣನವರ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ಅವರ ಚಿಂತನೆ ಕರ್ನಾಟಕದ ಗಡಿಯನ್ನು ಮೀರಿ ವಿಶ್ವದ ಗಮನ ಸೆಳೆದಿರುವುದಕ್ಕೆ ಒಂದು ಉದಾಹರಣೆ.
ಆ ಪ್ರತಿಮೆಯ ಅನಾವರಣ ಸಮಾರಂಭದಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾಗವಹಿಸಿ, ಕಲ್ಯಾಣದ ಶಿವಶರಣರ ಕ್ರಾಂತಿಯ ಕುರಿತು ಮನೋಜ್ಞವಾಗಿ ಮಾತನಾಡಿ ವಿಶ್ವದ ಗಮನವನ್ನು ಸೆಳೆದರು. ಇಂಗ್ಲೆಂಡಿನ ಒಬ್ಬ ಮೇಯರ್ ಮಾತನಾಡುತ್ತಾ, ಇಂದಿನವರೆಗೆ ಭಾರತವು ಮ್ಯಾಗ್ನಾಕಾರ್ಟಾವನ್ನು ಪ್ರಜಾಪ್ರಭುತ್ವದ ತಾಯಿಯೆಂದು ಗೌರವಿಸುತ್ತಿತ್ತು; ಆದರೆ ಅದಕ್ಕೂ ಬಹಳ ಹಿಂದೆಯೇ, ಹನ್ನೆರಡನೆಯ ಶತಮಾನದಲ್ಲಿಯೇ ಕರ್ನಾಟಕದ ನೆಲದಲ್ಲಿ ಬಸವಣ್ಣನವರು ಪ್ರಜಾಪ್ರಭುತ್ವದ ಮಾದರಿಯನ್ನು ಜಗತ್ತಿಗೆ ತೋರಿಸಿದ್ದರು ಎಂಬ ಅರ್ಥದ ಮಾತುಗಳನ್ನು ಹೆಮ್ಮೆಯಿಂದ ವ್ಯಕ್ತಪಡಿಸಿದರು. ಇಂಗ್ಲೆಂಡಿನ ಮ್ಯಾಗ್ನಾಕಾರ್ಟಾ ಪ್ರಜಾಪ್ರಭುತ್ವದ ತಾಯಿ ಎಂದಾದರೆ, ಬಸವಣ್ಣನವರು ಪ್ರಜಾಪ್ರಭುತ್ವದ ತಂದೆ ಎಂಬ ಅಭಿಮಾನದ ಮಾತುಗಳು ಕನ್ನಡಿಗರ ಹೃದಯದಲ್ಲಿ ಹೆಮ್ಮೆಯನ್ನು ಮೂಡಿಸುವಂತಿವೆ.
ಆದರೆ ಬಸವಣ್ಣನವರ ಮಹತ್ವವನ್ನು ಕೇವಲ ರಾಜಕೀಯ ಅಥವಾ ಸಾಮಾಜಿಕ ದೃಷ್ಟಿಯಿಂದ ನೋಡುವುದು ಅವರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಲ್ಲ. ಅವರು ಮನುಷ್ಯನ ಹೊರಗಿನ ಬದುಕನ್ನು ಮಾತ್ರ ಬದಲಿಸಲು ಬಯಸಲಿಲ್ಲ; ಮನುಷ್ಯನ ಅಂತರಂಗವನ್ನು ಬದಲಿಸಲು ಬಯಸಿದರು. ಅದಕ್ಕಾಗಿಯೇ ಅವರು ಸ್ಥಾಪಿಸಿದ ಲಿಂಗಾಯತ ಧರ್ಮದ ಚಿಂತನೆಯೊಳಗೆ ಅರ್ಚನೆ, ಅರ್ಪಣೆ ಮತ್ತು ಅನುಭಾವ ಎಂಬ ಮೂರು ಮಹತ್ವದ ಪದಗಳು ನಮ್ಮ ಮುಂದೆ ಬರುತ್ತವೆ.
ಅರ್ಚನೆ ಎಂದರೆ ಲಿಂಗಾರ್ಚನೆ. ಎಡಗೈಯಲ್ಲಿ ಇಷ್ಟಲಿಂಗವನ್ನು ಧರಿಸಿಕೊಂಡು, ಅದನ್ನು ಭಕ್ತಿಯಿಂದ ಧ್ಯಾನಿಸುವುದು ಕೇವಲ ಒಂದು ಆಚರಣೆಯಲ್ಲ. ಅದು ತನ್ನನ್ನೇ ತಾನು ನೋಡಿಕೊಳ್ಳುವ ಒಂದು ಅದ್ಭುತ ಪ್ರಕ್ರಿಯೆ. ನಾವು ಕನ್ನಡಿಯ ಮುಂದೆ ನಿಂತಾಗ ನಮ್ಮ ಮುಖವನ್ನು ನಾವು ನೋಡಿಕೊಳ್ಳುತ್ತೇವೆ. ಆದರೆ ಇಷ್ಟಲಿಂಗದ ಮುಂದೆ ನಿಂತಾಗ ನಮ್ಮ ಹೊರಗಿನ ಮುಖವಲ್ಲ, ನಮ್ಮ ಅಂತರಂಗವನ್ನು ನೋಡಿಕೊಳ್ಳಬೇಕು. ಕನ್ನಡಿಯು ದೇಹದ ರೂಪವನ್ನು ತೋರಿಸುತ್ತದೆ; ಇಷ್ಟಲಿಂಗವು ನಮ್ಮ ಅಂತರಂಗದ ರೂಪವನ್ನು ಪ್ರಶ್ನಿಸುತ್ತದೆ. ‘ನನ್ನೊಳಗೆ ಶುದ್ಧತೆ ಇದೆಯೇ? ನನ್ನ ಮನಸ್ಸಿನಲ್ಲಿ ದ್ವೇಷವಿದೆಯೇ? ಅಹಂಕಾರವಿದೆಯೇ? ನಾನು ನಡೆಯುತ್ತಿರುವ ದಾರಿ ಸತ್ಯದ ದಾರಿಯೇ?’ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುವ ಆಂತರಿಕ ಸಾಧನೆಯೇ ಲಿಂಗಾರ್ಚನೆಯ ಮಹತ್ವ.
ಅರ್ಚನೆಯ ನಂತರ ಬರುವುದೇ ಅರ್ಪಣೆ. ತನ್ನನ್ನು ತಾನೇ ಅರ್ಪಿಸಿಕೊಳ್ಳುವುದು, ತನ್ನ ಬದುಕನ್ನು ಸಮಾಜಕ್ಕೆ ಅರ್ಪಿಸಿಕೊಳ್ಳುವುದು, ತನ್ನ ಕಾಯಕವನ್ನು ಸತ್ಯಶುದ್ಧವಾಗಿ ನಡೆಸಿ ಅದರ ಫಲವನ್ನು ದಾಸೋಹದ ಮೂಲಕ ಸಮಾಜಕ್ಕೆ ಅರ್ಪಿಸುವುದು ಅರ್ಪಣೆಯ ನಿಜವಾದ ಅರ್ಥ. ಸಮಾಜದ ಕಲ್ಯಾಣದೊಂದಿಗೆ ತನ್ನ ಆತ್ಮಕಲ್ಯಾಣವನ್ನೂ ಸಾಧಿಸುವುದೇ ಇದರ ಉದ್ದೇಶ. ಸತ್ಯಶುದ್ಧವಾದ ಕಾಯಕವನ್ನು ಮಾಡಬೇಕು. ಆ ಕಾಯಕದಿಂದ ಬಂದ ಫಲವನ್ನು ಕೇವಲ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ, ದಾಸೋಹದ ಮೂಲಕ ಸಮಾಜಕ್ಕೆ ಹಂಚಬೇಕು. ‘ನನ್ನದು’ಎಂಬ ಭಾವವನ್ನು ನಿಧಾನವಾಗಿ ಕರಗಿಸಿ ‘ನಮ್ಮದು’ಎಂಬ ಭಾವವನ್ನು ಬೆಳೆಸುವುದೇ ಅರ್ಪಣೆಯ ಸಾಧನೆ.
ಇನ್ನು ಮುಂದೆ ಬರುವ ಮೂರನೆಯ ಹಂತವೇ ಅನುಭಾವ. ಧಾರ್ಮಿಕ ಪ್ರಪಂಚದಲ್ಲಿ ‘ಅನುಭಾವ’ಎಂಬ ಪರಿಕಲ್ಪನೆಗೆ ನೀಡಿದ ಮಹತ್ವವು ಬಸವಾದಿ ಶಿವಶರಣರ ವೈಶಿಷ್ಟ್ಯ. ಶರಣರು ಕೇವಲ ಕರ್ಮಕಾಂಡಕ್ಕೆ ಒತ್ತು ನೀಡಲಿಲ್ಲ; ಕೇವಲ ಗ್ರಂಥಜ್ಞಾನಕ್ಕೂ ಸೀಮಿತವಾಗಲಿಲ್ಲ. ಕರ್ಮಕಾಂಡ ಮತ್ತು ಜ್ಞಾನಕಾಂಡಗಳ ಮಿತಿಗಳನ್ನು ಮೀರಿ ಸ್ವತಃ ಅನುಭವಿಸುವ ಮಾರ್ಗವನ್ನು ಅವರು ತೋರಿಸಿದರು. ಅನುಭವದಿಂದ ಬಂದ ಜ್ಞಾನವೇ ಜೀವಂತ ಜ್ಞಾನ. ಪುಸ್ತಕದಲ್ಲಿ ಓದಿದ ಸತ್ಯ ಒಂದು ವಿಷಯ; ಅದನ್ನು ಬದುಕಿನಲ್ಲಿ ಅನುಭವಿಸಿದ ಸತ್ಯ ಮತ್ತೊಂದು ವಿಷಯ. ಶರಣರ ದೃಷ್ಟಿಯಲ್ಲಿ ಅನುಭಾವವೇ ಆಧ್ಯಾತ್ಮಿಕ ಬದುಕಿನ ಶ್ರೇಷ್ಠ ಮಾರ್ಗ.
ಅಲ್ಲಮಪ್ರಭುಗಳ ವಚನಗಳಲ್ಲಿ ಈ ಅನುಭಾವದ ಆಳವನ್ನು ಕಾಣಬಹುದು. ಅವರು ಮನುಷ್ಯನ ಕ್ಷಣಿಕ ಸುಖ ಮತ್ತು ಶಾಶ್ವತ ಪರಮಾನಂದದ ನಡುವಿನ ವ್ಯತ್ಯಾಸವನ್ನು ಅತ್ಯಂತ ಗಂಭೀರವಾಗಿ ಪ್ರಶ್ನಿಸುತ್ತಾರೆ. ಅವರ ಒಂದು ವಚನದ ಭಾವ ಹೀಗಿದೆ: ತಲೆಯ ಮೇಲಿನ ಒಲೆ ಮತ್ತು ಒಲೆಯ ಮೇಲಿನ ಅನ್ನ ಎಂಬ ರೂಪಕದ ಮೂಲಕ ಮನುಷ್ಯನು ಯಾವ ಸುಖವನ್ನು ಆರಿಸಿಕೊಳ್ಳಬೇಕು ಎಂಬುದನ್ನು ಚಿಂತಿಸುವಂತೆ ಮಾಡುತ್ತಾರೆ. ಒಲೆಯ ಮೇಲಿನ ಅಡುಗೆಯನ್ನು ಸೇವಿಸಿದರೆ ಕ್ಷಣಿಕವಾದ ಆನಂದ ಸಿಗಬಹುದು; ಆದರೆ ಶಾಶ್ವತವಾದ ಪರಮಸುಖವನ್ನು ಪಡೆಯಬೇಕೆಂದರೆ ತಲೆಯ ಮೇಲಿನ ಅಡುಗೆಯನ್ನೇ ಮಾಡಬೇಕೆಂಬ ಗಾಢವಾದ ರೂಪಕದ ಮೂಲಕ ಅವರು ಭೌತಿಕ ಸುಖದ ಮಿತಿಯನ್ನು ಮತ್ತು ಆತ್ಮಾನುಭವದ ಮಹತ್ವವನ್ನು ಸೂಚಿಸುತ್ತಾರೆ.
ನಾವು ಜೀವನದಲ್ಲಿ ಅನೇಕ ಕ್ಷಣಿಕ ಸುಖಗಳ ಹಿಂದೆ ಓಡುತ್ತೇವೆ. ಹಣ ಸಿಕ್ಕರೆ ಸುಖ, ಅಧಿಕಾರ ಸಿಕ್ಕರೆ ಸುಖ, ಹೆಸರು ಬಂದರೆ ಸುಖ, ಸಂಪತ್ತು ಹೆಚ್ಚಾದರೆ ಸುಖ ಎಂದು ಭಾವಿಸುತ್ತೇವೆ. ಆದರೆ ಈ ಎಲ್ಲವೂ ಕಾಲದೊಂದಿಗೆ ಬದಲಾಗುವವು. ಇಂದು ನಮ್ಮದಾಗಿರುವುದು ನಾಳೆ ಮತ್ತೊಬ್ಬರದಾಗಬಹುದು. ದೇಹವೂ ಶಾಶ್ವತವಲ್ಲ, ಸಂಪತ್ತೂ ಶಾಶ್ವತವಲ್ಲ, ಅಧಿಕಾರವೂ ಶಾಶ್ವತವಲ್ಲ. ಆದರೆ ಮನುಷ್ಯನು ಹುಡುಕಬೇಕಾದುದು ಕ್ಷಣಿಕ ಸುಖವಲ್ಲ; ತನ್ನ ಅಂತರಂಗವನ್ನು ಶಾಶ್ವತ ಶಾಂತಿಯ ಕಡೆಗೆ ಕೊಂಡೊಯ್ಯುವ ಪರಮಾನಂದ.
ಅವಿರಳ ಜ್ಞಾನಿ ಚನ್ನಬಸವಣ್ಣನವರು ಲಿಂಗಾಯತ ಧರ್ಮದ ಸಂಹಿತೆಯನ್ನು ರೂಪಿಸಿದ ಮಹಾನುಭಾವರು. ಬಸವಣ್ಣನವರು ನಿರ್ಮಿಸಿದ ಅನುಭಾವಪಥದ ಒಂದು ಅಮೂಲ್ಯ ಪ್ರತಿರೂಪವೇ ಚನ್ನಬಸವಣ್ಣನವರ ಜೀವನ. ಅಪರೂಪದ ಯತಿವರೇಣ್ಯರಾದ ಅವರು ತಮ್ಮ ವಚನಗಳಲ್ಲಿ ಅಂತರಂಗದ ಶುದ್ಧತೆಯ ಮಹತ್ವವನ್ನು ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ. ತಲೆಯ ಮೇಲಿನ ಹೊಲಸನ್ನು ತೊಳೆದುಕೊಳ್ಳಲು ನಾವು ಶಾಂಪೂ ಮತ್ತು ಸೋಪನ್ನು ಬಳಸುತ್ತೇವೆ. ಬಟ್ಟೆ ಮಲಿನವಾದರೆ ಅದನ್ನು ಮಡಿವಾಳರಿಗೆ ಕೊಟ್ಟು ಸ್ವಚ್ಛ ಮಾಡಿಸಿಕೊಳ್ಳುತ್ತೇವೆ. ಆದರೆ ನಮ್ಮ ಮನಸ್ಸೇ ಮಲಿನವಾದರೆ ಅದನ್ನು ಶುದ್ಧಗೊಳಿಸಲು ಯಾವ ಸೋಪು? ಯಾವ ಶಾಂಪೂ? ಯಾವ ಹೊರಗಿನ ಸಾಧನ?
ಇಲ್ಲಿಯೇ ಶರಣರ ಅನುಭಾವದ ಮಹತ್ವ ನಮ್ಮ ಮುಂದೆ ಬರುತ್ತದೆ. ಮನಸ್ಸಿನ ಮಲಿನತೆಯನ್ನು ತೊಳೆದುಹಾಕಲು ಶರಣರ ಅನುಭವವನ್ನು ಅನುಸರಿಸುವುದೇ ಮಾರ್ಗವೆಂದು ಚನ್ನಬಸವಣ್ಣನವರು ಸಾರುತ್ತಾರೆ. ಹೊರಗಿನ ಕೊಳೆಯನ್ನು ನೀರಿನಿಂದ ತೊಳೆದುಕೊಳ್ಳಬಹುದು; ಆದರೆ ಅಂತರಂಗದ ಕೊಳೆಯನ್ನು ಜ್ಞಾನ, ಭಕ್ತಿ, ಸತ್ಸಂಗ, ಅನುಭಾವ ಮತ್ತು ಶರಣರ ನುಡಿಯ ಮೂಲಕವೇ ತೊಳೆದುಕೊಳ್ಳಬಹುದು.
ಶರಣರ ನುಡಿಗಳಿಗೆ ಅಪಾರವಾದ ಶಕ್ತಿಯಿದೆ. ಅವರ ಒಂದು ನುಡಿಯನ್ನು ನಾವು ಕೇವಲ ಕೇಳುವುದರಿಂದ ಸಾಲದು; ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಒಂದು ವಚನದ ಒಂದೇ ಒಂದು ಮಾತನ್ನು ನಮ್ಮ ಜೀವನದ ಅನುಷ್ಠಾನಕ್ಕೆ ತಂದರೂ, ಅದು ನಮ್ಮ ಬದುಕಿನ ದಿಕ್ಕನ್ನೇ ಬದಲಿಸಬಲ್ಲದು. ಶರಣರ ವಚನಗಳು ಕೇವಲ ಓದಲು ಇರುವ ಸಾಹಿತ್ಯವಲ್ಲ; ಅವು ಬದುಕಲು ಇರುವ ಮಾರ್ಗದರ್ಶನ.
ಇದೇ ಭಾವವನ್ನು ಜೇಡರ ದಾಸಿಮಯ್ಯನವರ ವಚನದಲ್ಲಿಯೂ ಕಾಣಬಹುದು. ಆನೆಯಂತಹ ದೊಡ್ಡ ಸಂಪತ್ತನ್ನು ಕೊಟ್ಟರೂ ಬೇಡ, ಅಂಬಾರಿಯನ್ನು ಕೊಟ್ಟರೂ ಬೇಡ, ಸಂಪತ್ತನ್ನು ಕೊಟ್ಟರೂ ಬೇಡ, ರಾಜ್ಯವನ್ನೇ ಕೊಟ್ಟರೂ ಬೇಡ; ಭೌತಿಕ ವಸ್ತುಗಳೆಲ್ಲವೂ ಬೇಡ. ಬಸವಾದಿ ಶಿವಶರಣರ ವಚನಗಳಲ್ಲಿ ಒಂದೇ ಒಂದು ನುಡಿಯನ್ನು ಒಂದು ಅರುಗಳಿಗೆಯಾದರೂ ನೀಡಿದರೆ ಸಾಕು; ಆ ಒಂದು ನುಡಿಯೇ ಭಗವಂತನ ಸಾನ್ನಿಧ್ಯದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ ಎಂಬ ಆಳವಾದ ಭಾವವನ್ನು ದಾಸಿಮಯ್ಯನವರು ವ್ಯಕ್ತಪಡಿಸುತ್ತಾರೆ.
ಇದು ಎಂತಹ ಅದ್ಭುತವಾದ ಆಧ್ಯಾತ್ಮಿಕ ದೃಷ್ಟಿ! ಲೋಕದ ದೃಷ್ಟಿಯಲ್ಲಿ ಅತಿ ದೊಡ್ಡ ಸಂಪತ್ತು ಹಣ, ಅಧಿಕಾರ, ರಾಜ್ಯ, ವೈಭವ. ಆದರೆ ಶರಣರ ದೃಷ್ಟಿಯಲ್ಲಿ ಇವೆಲ್ಲವೂ ಕ್ಷಣಿಕ. ನಿಜವಾದ ಸಂಪತ್ತು ಎಂದರೆ ಆತ್ಮವನ್ನು ಬೆಳಗಿಸುವ ಜ್ಞಾನ. ನಿಜವಾದ ಐಶ್ವರ್ಯ ಎಂದರೆ ಮನಸ್ಸನ್ನು ಶುದ್ಧಗೊಳಿಸುವ ಅನುಭಾವ. ನಿಜವಾದ ದಾಸೋಹ ಎಂದರೆ ತನ್ನ ಬದುಕನ್ನೇ ಸತ್ಯದ ಸೇವೆಗೆ ಅರ್ಪಿಸುವುದು.
ಶರಣರ ವಚನಗಳು ಕನ್ನಡ ಭಾಷೆಗೆ ನೀಡಿದ ಕೊಡುಗೆ ಅಪಾರ. ಕನ್ನಡಕ್ಕೆ ಜ್ಞಾನಪೀಠ ಗೌರವ ತಂದುಕೊಟ್ಟ ಮಹಾನ್ ಸಾಹಿತಿ ಡಾ. ಚಂದ್ರಶೇಖರ ಕಂಬಾರರು ಇತ್ತೀಚೆಗೆ ಒಂದು ಮಹತ್ವದ ವಿಚಾರವನ್ನು ಹೇಳಿದ್ದಾರೆ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿದ್ದರೂ ಜಾಗತೀಕರಣದ ಸುಳಿಗಾಳಿಗೆ ಸಿಲುಕಿ ಮುಂದಿನ ದಶಕಗಳಲ್ಲಿ ಅನೇಕ ಭಾಷೆಗಳು ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ; ಉಳಿಯುವ ಭಾಷೆಗಳ ಪೈಕಿ ಕನ್ನಡವೂ ಒಂದು. ಕನ್ನಡವು ಉಳಿಯುವುದಕ್ಕೆ ಕಾರಣ ಬಸವಾದಿ ಶಿವಶರಣರ ಅಮೂಲ್ಯ ವಚನಸಾಹಿತ್ಯವೂ ಪ್ರಮುಖವಾದುದು ಎಂಬ ಅರ್ಥದ ಮಾತನ್ನು ಅವರು ಹೇಳಿದ್ದಾರೆ.
ಈ ಮಾತನ್ನು ಮನನ ಮಾಡಿದಾಗ ವಚನ ಸಾಹಿತ್ಯದ ಮಹತ್ವ ಇನ್ನಷ್ಟು ಸ್ಪಷ್ಟವಾಗುತ್ತದೆ. ವಚನಗಳು ಕೇವಲ ಹಳೆಯ ಕಾಲದ ಬರಹಗಳಲ್ಲ. ಅವು ಕನ್ನಡದ ಆತ್ಮವನ್ನು ಉಳಿಸಿಕೊಂಡಿರುವ ಜೀವಂತ ನುಡಿಗಳು. ಅವುಗಳಲ್ಲಿ ಜ್ಞಾನವಿದೆ, ಭಕ್ತಿಯಿದೆ, ಸಾಮಾಜಿಕ ಕಾಳಜಿಯಿದೆ, ಸಮಾನತೆಯ ಸಂದೇಶವಿದೆ, ಮಾನವೀಯತೆಯ ಉಸಿರಿದೆ ಮತ್ತು ಮುಖ್ಯವಾಗಿ ಅಂತರಂಗವನ್ನು ಎಚ್ಚರಿಸುವ ಅನುಭಾವವಿದೆ.
ಆದ್ದರಿಂದ ನಮ್ಮ ಮನಸ್ಸು ಸದಾಕಾಲ ಧರ್ಮತತ್ತ್ವದ ಚಿಂತನೆಯಲ್ಲಿ ನಿರತವಾಗಿರಬೇಕಾದರೆ ‘ಪ್ರಭುಲಿಂಗಲೀಲೆ’ಯಂತಹ ಮಹತ್ವದ ಕೃತಿಗಳನ್ನು ಅನುಸಂಧಾನ ಮಾಡಬೇಕು. ಶ್ರಾವಣ ಮಾಸವು ನಮಗೆ ನೀಡುವ ಅವಕಾಶವನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ, ಶರಣರ ಜೀವನವನ್ನು ಓದಿ, ಅವರ ವಚನಗಳನ್ನು ಕೇಳಿ, ಅವುಗಳ ಅರ್ಥವನ್ನು ಮನನ ಮಾಡಿ, ಸಾಧ್ಯವಾದಷ್ಟು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.
ಪ್ರಭುಲಿಂಗಲೀಲೆಯ ಚಿಂತನೆ ನಮ್ಮನ್ನು ಅಲ್ಲಮಪ್ರಭುಗಳ ಜೀವನದ ಕಡೆಗೆ ಕರೆದೊಯ್ಯುತ್ತದೆ; ಅಲ್ಲಮಪ್ರಭುಗಳ ಜೀವನ ನಮ್ಮನ್ನು ಅನುಭಾವದ ಕಡೆಗೆ ಕರೆದೊಯ್ಯುತ್ತದೆ; ಅನುಭಾವ ನಮ್ಮನ್ನು ಆತ್ಮಚಿಂತನೆಯ ಕಡೆಗೆ ಕರೆದೊಯ್ಯುತ್ತದೆ; ಆತ್ಮಚಿಂತನೆ ಅಂತಿಮವಾಗಿ ನಮ್ಮೊಳಗಿನ ಪರಮತತ್ತ್ವವನ್ನು ಅರಿಯುವ ದಾರಿಯನ್ನು ತೆರೆದಿಡುತ್ತದೆ. ಇದೇ ಶರಣರ ಸಂದೇಶದ ಮಹಿಮೆ. ಇದೇ ಶ್ರಾವಣ ಮಾಸದ ಚಿಂತನೆಯ ಸಾರ್ಥಕತೆ. ನಮ್ಮ ಜೀವನದಲ್ಲಿ ಎಷ್ಟೇ ಭೌತಿಕ ಸಂಪತ್ತು ಬಂದರೂ, ಅಂತರಂಗದಲ್ಲಿ ಶಾಂತಿ ಇಲ್ಲದಿದ್ದರೆ ಆ ಸಂಪತ್ತಿಗೆ ಅರ್ಥವಿಲ್ಲ. ಆದರೆ ಶರಣರ ಒಂದು ನುಡಿ ನಮ್ಮ ಹೃದಯದಲ್ಲಿ ನೆಲೆಸಿ, ನಮ್ಮ ನಡೆ-ನುಡಿಗಳನ್ನು ಬದಲಿಸಿ, ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸಿದರೆ ಅದಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ.
ಹೀಗಾಗಿ ‘ಪ್ರಭುಲಿಂಗಲೀಲೆ’ಯನ್ನು ನಾವು ಕೇವಲ ಒಂದು ಕಾವ್ಯವಾಗಿ ನೋಡದೆ, ಒಂದು ಆಧ್ಯಾತ್ಮಿಕ ಕನ್ನಡಿಯಾಗಿ ನೋಡಬೇಕು. ಅದರ ಮುಂದೆ ನಿಂತಾಗ ನಮ್ಮ ಮುಖವನ್ನು ಅಲ್ಲ, ನಮ್ಮ ಮನಸ್ಸನ್ನು ನೋಡಿಕೊಳ್ಳಬೇಕು. ನಮ್ಮ ಜೀವನದಲ್ಲಿ ಅರ್ಚನೆ ಇದೆಯೇ, ಅರ್ಪಣೆ ಇದೆಯೇ, ಅನುಭಾವ ಇದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ನಮ್ಮ ಕಾಯಕ ಸತ್ಯಶುದ್ಧವಾಗಿದೆಯೇ, ನಮ್ಮ ಸಂಪತ್ತು ದಾಸೋಹದ ದಾರಿಯಲ್ಲಿ ಹರಿಯುತ್ತಿದೆಯೇ, ನಮ್ಮ ನುಡಿ ಮತ್ತೊಬ್ಬರ ಹೃದಯಕ್ಕೆ ಬೆಳಕಾಗುತ್ತಿದೆಯೇ, ನಮ್ಮ ಮನಸ್ಸು ಶರಣರ ಅನುಭಾವದಿಂದ ಶುದ್ಧವಾಗುತ್ತಿದೆಯೇ ಎಂಬ ಆತ್ಮಪರಿಶೀಲನೆಯೇ ಈ ಚಿಂತನೆಯ ನಿಜವಾದ ಫಲ.
ಶ್ರಾವಣ ಮಾಸದ ಈ ಪವಿತ್ರ ಸಂದರ್ಭದಲ್ಲಿ ನಮ್ಮ ಮನಸ್ಸುಗಳು ಶರಣರ ವಚನಗಳ ಸ್ಮರಣೆಯಲ್ಲಿ ನೆನೆಯಲಿ, ನಮ್ಮ ಬದುಕು ಕಾಯಕ ಮತ್ತು ದಾಸೋಹದಿಂದ ಪಾವನವಾಗಲಿ, ನಮ್ಮ ಅಂತರಂಗ ಅನುಭಾವದ ಬೆಳಕಿನಿಂದ ಪ್ರಕಾಶಿಸಲಿ. ‘ಪ್ರಭುಲಿಂಗಲೀಲೆ’ಯ ಚಿಂತನೆ ಕೇವಲ ನಮ್ಮ ಕಿವಿಗೆ ಕೇಳಿಸುವ ಪ್ರವಚನವಾಗದೆ, ನಮ್ಮ ಹೃದಯಕ್ಕೆ ತಲುಪಿ, ನಮ್ಮ ಬದುಕಿನ ನಡೆಗೆ ರೂಪವಾಗಲಿ. ಆಗ ಮಾತ್ರ ಶರಣರ ನುಡಿಯನ್ನು ಕೇಳಿದ ಸಾರ್ಥಕತೆ, ಶ್ರಾವಣ ಮಾಸವನ್ನು ಆಚರಿಸಿದ ಸಾರ್ಥಕತೆ ಮತ್ತು ಮಾನವಜನ್ಮವನ್ನು ಪಡೆದ ಸಾರ್ಥಕತೆ ನಮ್ಮದಾಗುತ್ತದೆ.
ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: 9902130041
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
