ವಚನ ಸಾಹಿತ್ಯ ವ್ಯಕ್ತಿತ್ವ ವಿಕಾಸಕ್ಕೆ ಅಗತ್ಯ: ಬಿ.ಎಂ. ವಿಶ್ವೇಶ್ವರಯ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ:

ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುವದು, ಮಾತನಾಡುವುದು, ನಿಂದಿಸಿದವರನ್ನೂ ಸಹ ಗೌರವಿಸುವ ಮನೋಭಾವವನ್ನು ವಚನ ಸಾಹಿತ್ಯ ನಮಗೆ ಕಲಿಸುತ್ತದೆ ಎಂದು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನಕಾರ್ಯದರ್ಶಿ ಹೆಮ್ಮನಬೇತೂರು ವಿಶ್ವೇಶ್ವರಯ್ಯ ಅವರು ಅಭಿಪ್ರಾಯಪಟ್ಟರು.

ಅವರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಹೆಮ್ಮನಬೇತೂರು ಗ್ರಾಮದ ಶ್ರೀ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಚನ ಸಂರಕ್ಷಣಾ ದಿನಾಚರಣೆ ಹಾಗೂ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು, ವಚನ ಸಾಹಿತ್ಯ ನಮಗೆ ದೇವರು, ಧರ್ಮದ ಬಗ್ಗೆ ಸ್ಪಷ್ಟತೆ ಕೊಡುತ್ತದೆ. ಕಾಡಿನಲ್ಲಿ ಗುಹೆಗಳಲ್ಲಿ ಮಾತ್ರ ಆಧ್ಯಾತ್ಮಿಕ ಸಾಧನೆ ಮಾಡಬಹುದು ಎಂಬುದನ್ನು ಅಲ್ಲಗಳೆದು, ನಾವು ಮಾಡುವ ಪ್ರತಿಯೊಂದು ಕಾಯಕದ ಮೂಲಕವೇ ಆಧ್ಯಾತ್ಮಿಕ ಸಾಧನೆ ಮಾಡಬಹುದು ಎಂಬುದನ್ನು ಶರಣರು ತೋರಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಲಾಮಕ್ಕಳಿಗೆ ಕ್ರೀಡಾ ಸಾಮಗ್ರಿ ವಿತರಣೆ ಮಾಡಿ ಮಾತನಾಡಿದ ಶಾಲಾ ಸಲಹಾ ಸಮಿತಿ ಅಧ್ಯಕ್ಷರಾದ ಯು.ಜಿ. ಶಿವಕುಮಾರ ಅವರು, ಶರಣರಾಗಿದ್ದ ಹಡಪದ ಅಪ್ಪಣ್ಣ ಅವರು ಎಲ್ಲರಿಗೂ ಆದರ್ಶಪ್ರಾಯರು ಎಂದು ತಿಳಿಸಿದರು.

ವಚನ ಸಂರಕ್ಷಣೆಗೆ ಫ. ಗು. ಹಳಕಟ್ಟಿ ಅವರ ಶ್ರಮವನ್ನು ಮಕ್ಕಳಿಗೆ ತಿಳಿಸಿಕೊಟ್ಟ ಭರಮಣ್ಣ ಮೈಸೂರು ಅವರು, ನಡೆ ನುಡಿ ಒಂದಾಗಿದ್ದರೆ ಜಗತ್ತಿನಲ್ಲಿ ಯುದ್ಧಗಳು ಆಗುತ್ತಿರಲಿಲ್ಲ ಎಂದು ಹೇಳಿದರು.

ಹಡಪದ ಅಪ್ಪಣ್ಣ ಅವರ ಕುರಿತು ಅನುಭವ ನೀಡಿದ ಶಿವಪ್ರಸಾದ ಕರ್ಜಗಿ ಅವರು, ಈ ಭೂಮಿಯ ಮೇಲೆ ಪ್ರತಿ ಜೀವಿಗಳಿಗೂ ಸಮಾನತೆಯಿಂದ ಜೀವಿಸುವ ಸ್ವಾತಂತ್ರ್ಯ ಇದೆ. ಬೇರೆ ಜೀವಿಗಳಿಗಿಂತ ನಾವೇ ಶ್ರೇಷ್ಠ ಎಂದು ನಮಗೆ ನಾವೇ ಅಂದುಕೊಂಡಿದ್ದೇವೆ. ಆದರೆ ವಾಸ್ತವವಾಗಿ ಮನುಷ್ಯ ಎಲ್ಲಾ ಜೀವಿಗಳಿಗಿಂತ ಗುಣದಲ್ಲಿ ಕೀಳಾಗಿದ್ದಾನೆ ಎಂದು ವಿವರಿಸಿದರು.

ಶಾಲೆಯ ಮಕ್ಕಳಿಗೆ ಸಮವಸ್ತ್ರ ಹಾಗೂ ಶಾಲೆಯ ಇತರೆ ಖರ್ಚಿಗೆ ದಾಸೋಹ ಮಾಡಿ ಶಾಲೆಯ ವತಿಯಿಂದ ಸನ್ಮಾನ ಸ್ವೀಕರಿಸಿದ ಮಂಜುನಾಥ ಪಾಟೇಲ ಅವರು, ಈಗ ನೀವು ಶಿಕ್ಷಣ ಕಲಿಯದೇ ಇದ್ದರೆ ಮುಂದೆ ನಿಮ್ಮ ಜೀವನ ಕಷ್ಟಕ್ಕೆ ಗುರಿಯಾಗುತ್ತದೆ ಎಂದು ಹೇಳಿದರು.

ವಚನ ಸಾಹಿತ್ಯ ನಮ್ಮ ಬದುಕಿಗೆ ದಾರಿದೀಪ. ಹಾಗಾಗಿ ನಿತ್ಯವೂ ವಚನಗಳನ್ನು ಓದಿ ಎಂದು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಶಾಮನೂರು ಲಿಂಗರಾಜ ಮಕ್ಕಳಿಗೆ ಕಿವಿ ಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ರುದ್ರೇಗೌಡ ಗೋಪನಾಳ ಅವರು ವಹಿಸಿದ್ದರು.

ನಾಗರಾಜ ಕಕ್ಕರಗೊಳ್ಳ ಅವರು ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು.

ದತ್ತಿ ದಾನಿಗಳ ಪರಿಚಯವನ್ನು ಟಿ. ಎಂ. ಶಿವಮೂರ್ತಯ್ಯ ಹಿರೆಮೆಗಳಗೆರೆ ಮಾಡಿದರು.

ಮಕ್ಕಳಿಂದ ವಚನ ಪ್ರಾರ್ಥನೆ ನಡೆಯಿತು.

ಆರಂಭದಲ್ಲಿ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಹತ್ಯೆಯಾದ ಶರಣರಿಗೆ ಗೌರವ ಸಲ್ಲಿಸಲು ಮೌನಾಚರಣೆ ಮಾಡಲಾಯಿತು.

ಕರೂರು ಹನುಮಂತಪ್ಪ ಅವರು ಮಾನವ ಬಂಧುತ್ವ ವೇದಿಕೆಯಿಂದ ಮಕ್ಕಳಿಗೆ ಯಾವ ರೀತಿಯಲ್ಲಿ ಸಹಾಯ ಆಗುತ್ತದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷರಾದ ಗೌಡ್ರ ಬಸವರಾಜ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಕಡ್ಲೆಬಾಳು ಪ್ರಕಾಶ ಹಾಗೂ ಶಾಲೆಯ ಸಿಬ್ಬಂದಿವರ್ಗ ಮತ್ತು ಶಾಲೆಯ ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಶಿಕ್ಷಕರಾದ ದೇವರಾಜ ಬಿ. ಪಟೇಲ ಎಲ್ಲರಿಗೂ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *