‘ಬಸವಣ್ಣನವರ ಸಪ್ತಸೂತ್ರದ ವಚನದಿಂದ ಅಂತರಂಗ ಶುದ್ಧಿ’

‘ಆರೋಗ್ಯ ಮತ್ತು ಸ್ವಚ್ಛತೆ’ ಕುರಿತು ದಂದಣ ದತ್ತಣ ಗೋಷ್ಠಿ

ಸಾಣೇಹಳ್ಳಿ:

ಇಲ್ಲಿನ ಎಸ್ಸೆಸ್ ರಂಗಮಂದಿರದಲ್ಲಿ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ಆರೋಗ್ಯ ಮತ್ತು ಸ್ವಚ್ಛತೆ’ ಕುರಿತ ದಂದಣ ದತ್ತಣ ಗೋಷ್ಠಿ ನಡೆಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು; ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ಶಿಸ್ತು, ನೈರ್ಮಲ್ಯ ಹಾಗೂ ಅಂತರಂಗ-ಬಹಿರಂಗ ಶುದ್ಧಿಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ.

 “ಸುಚಿತ್ವದಲ್ಲಿ ಆರೋಗ್ಯವಿದೆ, ಆರೋಗ್ಯದಲ್ಲಿ ಸುಚಿತ್ವವಿದೆ”.  ‘ಮಿತ ಭೋಜನ, ಮಿತ ವಾಕ್ ಹಾಗೂ ಮಿತ ನಿದ್ರೆ’ ಯೋಗಾಸಕ್ತಿಗೆ ಮತ್ತು ದೇಹದ ಸದ್ಬಳಕೆಗೆ ಅತ್ಯಂತ ಪೂರಕ. ಆಹಾರವ ಕಿರಿದು ಮಾಡಿರಯ್ಯ” ಎಂಬ ತತ್ವವನ್ನು ಪಾಲಿಸಿದರೆ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು ಎಂದರು.

ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಸಪ್ತ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅಂತರಂಗದ ಶುದ್ಧಿ ಸಾಧ್ಯ. ಮನಸ್ಸು ಶುದ್ಧವಾಗಿದ್ದಾಗ ಮಾತ್ರ ಹೊರಗಿನ ವಾತಾವರಣವನ್ನು ಸ್ವಚ್ಛವಾಗಿಡಲು ಮನಸ್ಸಾಗುತ್ತದೆ ಎಂದರು.

ವಿದ್ಯಾರ್ಥಿಗಳು ತಾವು ವಾಸಿಸುವ ಕೊಠಡಿಗಳು, ಶೌಚಾಲಯಗಳು ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶೌಚಾಲಯ ಬಳಕೆಯ ನಂತರ ಸರಿಯಾಗಿ ನೀರು ಬಳಸುವುದು ಹಾಗೂ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ಬುಟ್ಟಿಗೆ ಹಾಕುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು.

ಇಂದಿನ ಯುವ ಪೀಳಿಗೆ ಹಾಗೂ ಸಣ್ಣ ಮಕ್ಕಳು ಜಂಕ್ ಫುಡ್, ಗುಟ್ಕಾ ಹಾಗೂ ಅನಾರೋಗ್ಯಕರ ಅಭ್ಯಾಸಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ. ಇಂತಹ ಕೆಟ್ಟ ಅಭ್ಯಾಸಗಳು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಹಾಗೂ ಪಾಕೇಟ್ ಆಹಾರಗಳಿಂದ ದೂರವಿರಬೇಕು.

ನೀರು ಬಂಗಾರದಷ್ಟೇ ಅಮೂಲ್ಯವಾದದ್ದು. ವಸತಿ ನಿಲಯಗಳಲ್ಲಿ ಹಾಗೂ ಮನೆಯಲ್ಲಿ ನಲ್ಲಿಗಳಲ್ಲಿ ನೀರು ಸುಮ್ಮನೆ ಪೋಲಾಗದಂತೆ ತಕ್ಷಣ ಬಂದ್ ಮಾಡಬೇಕು. ಜಲ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ, ವಿದ್ಯಾರ್ಥಿಗಳು ಬರಿ ಭಾಷಣಗಳನ್ನು ಕೇಳಿ ಮರೆಯದೆ, ವಿಚಾರಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ಗೋಷ್ಠಿಗಳಲ್ಲಿ ವಿದ್ಯಾರ್ಥಿಗಳಿಗೆ ಪರಸ್ಪರ ಚರ್ಚಿಸಲು ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಸದುರ್ಗದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ವೀರೇಂದ್ರ ಪಾಟೀಲ್ ಮಾತನಾಡಿ; ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ.

ಜಂಕ್ ಫುಡ್, ಬೇಕರಿ ಖಾದ್ಯಗಳು, ಪಾನಿಪುರಿ ಹಾಗೂ ಸಂಸ್ಕರಿಸಿದ ಆಹಾರಗಳು ಆರೋಗ್ಯಕ್ಕೆ ಮಾರಕ. ಇದರ ಬದಲಿಗೆ ದಿನನಿತ್ಯದ ಆಹಾರದಲ್ಲಿ ಹಸಿರು ಸೊಪ್ಪು, ತರಕಾರಿ ಹಾಗೂ ಹಣ್ಣುಗಳನ್ನು ಕಡ್ಡಾಯವಾಗಿ ಸೇವಿಸಬೇಕು. ಅಲ್ಲದೆ ಕನಿಷ್ಠ 2.5 ರಿಂದ 3 ಲೀಟರ್ ಶುದ್ಧ ನೀರನ್ನು ಕುಡಿಯುವುದು ದೈಹಿಕ ಆರೋಗ್ಯಕ್ಕೆ ಅಗತ್ಯ.

ಹದಿಹರೆಯದ ಮಕ್ಕಳಿಗೆ ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ನಿದ್ರೆ ಅಗತ್ಯ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ನಿದ್ರಾಹೀನತೆ ಹಾಗೂ ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದು, ಇದನ್ನು ವಿದ್ಯಾರ್ಥಿಗಳು ನಿಯಂತ್ರಣದಲ್ಲಿಡಬೇಕು.

ತಂಬಾಕು, ಸಿಗರೇಟ್, ಗುಟ್ಕಾ ಹಾಗೂ ಮದ್ಯಪಾನಗಳಂತಹ ದುಶ್ಚಟಗಳು ಮನುಷ್ಯನ ಜೀವನವನ್ನೇ ನಾಶಮಾಡುತ್ತವೆ. ಕ್ಷಣಿಕ ಸುಖ ನೀಡುವ ಈ ವ್ಯಸನಗಳು ಕ್ಯಾನ್ಸರ್‌ನಂತಹ ಭೀಕರ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ. ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು.

ಕೆಮ್ಮುವಾಗ ಮತ್ತು ಸೀನುವಾಗ ಮುನ್ನೆಚ್ಚರಿಕೆ ವಹಿಸುವುದು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವುದು ಅತ್ಯಗತ್ಯ. ಕ್ಷಯರೋಗ (TB) ಮತ್ತು ಇತರ ಗಾಳಿಯಿಂದ ಹರಡುವ ರೋಗಗಳ ತಡೆಗೆ ಸಾರ್ವಜನಿಕ ನೈರ್ಮಲ್ಯ ಕಾಪಾಡುವುದು ಮುಖ್ಯ. ವಿದ್ಯಾರ್ಥಿಗಳು ತಮ್ಮ ಉಡುಪು, ಟವೆಲ್ ಹಾಗೂ ವೈಯಕ್ತಿಕ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು.

ತಾಲೂಕಿನಲ್ಲಿ ಇಂದಿಗೂ ಬಾಲ್ಯವಿವಾಹ ಹಾಗೂ ಹದಿಹರೆಯದ ಗರ್ಭಧಾರಣೆ ಪ್ರಮುಖ ಸಮಸ್ಯೆಯಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಗರ್ಭಧರಿಸುವುದು ಹೆಣ್ಣುಮಗಳ ಪ್ರಾಣಕ್ಕೇ ಆಪತ್ತು ತರಬಹುದು. ಶಿಕ್ಷಣಕ್ಕೆ ಆದ್ಯತೆ ನೀಡಿ, ಸೂಕ್ತ ವಯಸ್ಸಿನಲ್ಲಿ ಮಾತ್ರ ಮದುವೆಯಾಗುವುದು ಕಾನೂನುಬದ್ಧ ಹಾಗೂ ಆರೋಗ್ಯಕರ ಎಂದರು.

ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಲೋಕೇಶ್ ಎ, ಗಗನಕುಮಾರ, ವಿನಯಕುಮಾರ ಎ.ಎಸ್. ಮಾತನಾಡಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆರಂಭದಲ್ಲಿ ಶಿವಸಂಚಾರದ ಕಲಾವಿದ ನಾಗರಾಜ ಹೆಚ್. ಎಸ್., ತಬಲಸಾಥಿ ಶರಣ್ ಹಾಗೂ ವಿದ್ಯಾರ್ಥಿಗಳು ವಚನ ಗೀತೆಗಳನ್ನು ಹಾಡಿದರು. ವಿದ್ಯಾರ್ಥಿಗಳು ಆರೋಗ್ಯವೇ ಭಾಗ್ಯ ಎನ್ನುವ ನಾಟಕ ಪ್ರದರ್ಶಿಸಿದರು. ಟಿ ಎಂ. ಮರುಳಸಿದ್ಧಯ್ಯ ಸಂಪಾದಿತ ‘ವ್ಯಕ್ತಿತ್ವ ವಿಕಸನ’ ಎನ್ನುವ ಕೃತಿ ಲೋಕಾರ್ಪಣೆಗೊಳಿಸಲಾಯಿತು. ರಕ್ಷಿತಾ ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *