ಬೀದರ ಗ್ರಾಮದಲ್ಲಿ 11 ದಿನಗಳ ಶಿವಯೋಗ ಅನುಷ್ಠಾನದ ಸಮಾರೋಪ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ಸದೃಢ ಸಮಾಜ ನಿರ್ಮಾಣ ಮಾಡಬೇಕಾದರೆ ಪ್ರವಚನ ಅತ್ಯಂತ ಅವಶ್ಯಕ. ಆದರೆ ಪ್ರವಚನಕಾರರು ಬರಿ ಶಬ್ದಜ್ಞಾನಿಗಳಾಗಿರದೆ, ಅನುಭಾವಿಗಳಾಗಿರಬೇಕು. ಸಾಧನೆ ಇಲ್ಲದೆ ಮಾಡಿದ ಪ್ರವಚನ ಪ್ರಭಾವ ಬೀರಬಹುದಲ್ಲದೆ, ಪರಿಣಾಮ ಬೀರದು. ಸಾಧನೆ ಮಾಡಿ ತಮ್ಮ ಅನುಭವವನ್ನು ಸಮಾಜದಲ್ಲಿ ಬಿತ್ತರಿಸುತ್ತ ಹೋದರೆ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಶರಣ ಸಾಹಿತಿಗಳಾದ ರಮೇಶಸ್ವಾಮಿ ಕನಕಟ್ಟಾ ತಿಳಿಸಿದರು.

ಸಿದ್ದಾಪುರವಾಡಿ ಗ್ರಾಮದಲ್ಲಿ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿಯವರ 11 ದಿನಗಳ ಶಿವಯೋಗ ಅನುಷ್ಠಾನ ಹಾಗೂ ಯೋಗಿನಾಥ ತ್ರಿವಿಧಿಯ ಪಾರಾಯಣದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಶರಣರು ಅಂತರಂಗ- ಬಹಿರಂಗ ಶುದ್ಧತೆಗೆ ಆಧ್ಯತೆ ನೀಡಿದವರು. ಅಂತರಂಗದ ಅನುಭವ ಇಲ್ಲದೆ ಮಾಡಿದ ಪ್ರವಚನ ಪರಿಣಾಮ ಬೀರದೆಂದು ಅರಿತ ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು

ಶಿವಯೋಗ ಸಾಧನೆಗೆ ಆಧ್ಯತೆ ನೀಡಿ, ಪ್ರತಿವರ್ಷ ಲಿಂಗಾಯತ ಮಹಾಮಠ ಬಸವಗಿರಿಯಲ್ಲಿ 21 ದಿನಗಳ ಕಾಲ ಅನುಷ್ಠಾನ ಮಾಡುತ್ತಿದ್ದಾರೆ. ಅದರೊಂದಿಗೆ ಬಸವಕಲ್ಯಾಣದ ಶರಣರ ಗವಿಗಳಲ್ಲಿ ಐದೈದು ದಿನ ಶಿವಯೋಗ ಸಾಧನೆ ಮಾಡಿದ್ದಾರೆ.

ಮುಂದುವರೆದು ಸಿದ್ದಾಪುರವಾಡಿ ಗ್ರಾಮದಲ್ಲಿ ಪ್ರತಿವರ್ಷ ಸಂಕ್ರಾಂತಿಯ ಸಂದರ್ಭದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ 11 ವರ್ಷಗಳ ಕಾಲ ಪ್ರವಚನವನ್ನು ನೀಡಿದ ಪೂಜ್ಯರು ಅದೇ ಗ್ರಾಮದಲ್ಲಿ ಇಂದು 11 ದಿನಗಳ ಕಾಲ ಶಿವಯೋಗ ಅನುಷ್ಠಾನವನ್ನು ಮಾಡಿ ಮಾದರಿಯಾಗಿದ್ದಾರೆ.

ಪೂಜ್ಯ ಅಕ್ಕ ಅನ್ನಪೂರ್ಣತಾಯಿಯವರು ಸಂಕಲ್ಪದಂತೆ 770 ಪ್ರವಚನಗಳ ಅಭಿಯಾನ ಹಳ್ಳಿಹಳ್ಳಿಗಳಲ್ಲಿ ಮಾಡುತ್ತಾ ಸದೃಢ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಕಂಕಣಬದ್ಧರಾಗಿದ್ದಾರೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿ ಮಾತನಾಡಿದ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿಯವರು, ಶಿವಯೋಗಿ ಸಿದ್ದರಾಮೇಶ್ವರರು ಸಿದ್ಧಯೋಗಿಗಳು ಬಾಲ್ಯದಲ್ಲಿಯೇ ಶಿವನಿಂದ ಉರಿಗಣ್ಣು ಪಡೆದವರು. ಸೊನ್ನಲಾಪುರವನ್ನೇ ಎರಡನೇ ಶ್ರೀಶೈಲ ಮಾಡಬೇಕೆಂಬ ಪಣತೊಟ್ಟವರು. ಆದರೆ ಅಲ್ಲಮಪ್ರಭುಗಳಿಂದ ಸತ್ಯವನ್ನು ಅರಿತು ಕಲ್ಯಾಣಕ್ಕೆ ಬಂದು ಬಸವಣ್ಣನವರ ಅನುಭವ ಮಂಟಪದಲ್ಲಿ ಚಿಂತನ- ಮಂಥನಗೈದು ಇಷ್ಟಲಿಂಗ ಧರಿಸಿ, ಶಿವಯೋಗಿ ಸಿದ್ದರಾಮೇಶ್ವರರಾದರು.

ಬಸವಣ್ಣನವರ ಕುರಿತು ಅಪಾರ ಭಕ್ತಿಯನ್ನು ಹೊಂದಿದ್ದ ಸಿದ್ದರಾಮೇಶ್ವರರು ಬಸವಸ್ತುತಿಯ ಯೋಗಿನಾಥ ತ್ರಿವಿಧಿಯನ್ನು ಬರೆದರು. ಯೋಗಿನಾಥ ತ್ರಿವಿಧಿ ಪಾರಾಯಣ ಮಾಡುತ್ತಾ ಹೋದಂತೆಲ್ಲ ಬಸವಣ್ಣನವರ ಬಗ್ಗೆ ಅಪಾರ ಭಕ್ತಿ- ಶಕ್ತಿ ಮೂಡುತ್ತದೆ ಎಂದು ತಿಳಿಸಿದರು.

ಅಕ್ಕ ಅನ್ನಪೂರ್ಣತಾಯಿಯವರು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರಿಯಂತರ ಶಿವಯೋಗ ಸಾಧನೆಯನ್ನು ಮಾಡಿ ಪ್ರವಚನ ನೀಡುತ್ತಿದ್ದರು. ಅಂತೆಯೇ ಅಕ್ಕನವರ ಪ್ರವಚನ  ಕೇಳುತ್ತಾ ಹೋದಂತೆಲ್ಲ ಮನ ಪರಿವರ್ತನೆ ಆಗುತ್ತಿತ್ತು. ಅಕ್ಕನವರ ಸಂಕಲ್ಪದಂತೆ ಇಂದು ಶಿವಯೋಗ ಸಾಧನೆ ಮತ್ತು ಪ್ರವಚನವೇ ಜೀವಾಳವಾಗಿಸಿಕೊಂಡು ಮುನ್ನಡೆಯಲಾಗುತ್ತಿದೆ ಎಂದು ತಿಳಿಸಿದರು.

ಮುಖ್ಯಅತಿಥಿಗಳಾಗಿ ಬಾಬುರಾವ ರಾಜೋಳೆ  ಸಿದ್ದರಾಮಪ್ಪ ಪಾಟೀಲ ಭಾಗವಹಿಸಿದರು.

ನೀಲಮ್ಮನ ಬಳಗದ ಸದಸ್ಯರು ಪೂಜ್ಯರಿಗೆ ಸನ್ಮಾನಿಸಿದರು.

ಸೋಮನಾಥಪ್ಪ ರಾಜೇಶ್ವರೆ,  ವಿರಶೆಟ್ಟ ಯರನಾಳೆ, ಸಿ. ಎಸ್. ಗಣಾಚಾರಿ, ಗಣಪತಿ ಗೋರನಾಳೆ, ಶಾಲಿವಾನ ಡಾವಣಗಾವೆ, ಪ್ರಕಾಶ ಡಾವಣಗಾವೆ ಮುಂತಾದವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಣಿಕಪ್ಪ ಗೋರನಾಳೆ ಸ್ವಾಗತ ಕೋರಿದರು. ಸಂಗಮೇಶ ಪಾಟೀಲ ನಿರೂಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *