ಬಸವನಬಾಗೇವಾಡಿ:
ಶ್ರಾವಣಮಾಸದಲ್ಲಿ ಆಯೋಜಿಸುವ ಪ್ರವಚನ-ಪುರಾಣಗಳನ್ನು ಆಲಿಸುವುದರಿಂದಾಗಿ ಜೀವನದಲ್ಲಿ ಹೊಸತನ ಸೃಷ್ಟಿಯಾಗುವುದಕ್ಕೆ ಪೂರಕವಾಗುತ್ತದೆ ಎಂದು ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ, ಬಸವೇಶ್ವರ ಸೇವಾ ಸಮಿತಿ ಸಹಯೋಗದಲ್ಲಿ ಶ್ರಾವಣ ಮಾಸ, ಜಾತ್ರೆಯಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಶರಣರ ಜೀವನ ಪಥ ಪ್ರವಚನವನ್ನು ಗುರುವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.

ನಮ್ಮ ಜೀವನದಲ್ಲಿ ಹೊಸತನ ಬರುವುದಕ್ಕೆ ನಮ್ಮ ಪೂರ್ವಜರು ಶ್ರಾವಣ ಮಾಸದಲ್ಲಿ ಪ್ರವಚನದಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ ಅವರು, ಇಡೀ ಜಗತ್ತಿಗೆ ಪ್ರಜಾಪ್ರಭುತ್ವ, ಮಾನವೀಯ ಸಮಾಜವನ್ನು ನೀಡಿದ ಅಣ್ಣ ಬಸವಣ್ಣನವರಿಗೆ ಜನ್ಮನೀಡಿದ ಪುಣ್ಯ ತಾಣ ಇದಾಗಿದೆ.
ಈ ಭೂಮಿಯಲ್ಲಿ ಸಮನ್ವತೆಯ ಕೊರತೆ ಕಾಣದೇ ಇರುವುದಕ್ಕೆ ಇದೊಂದು ಶಕ್ತಿಯಾಗಿದೆ. ಸಮಾಜದ ಕಣ್ಣು ತೆರೆಸುವ ಶಕ್ತಿ ಈ ನೆಲಕ್ಕಿದೆ. ಇಂತಹ ಪುಣ್ಯ ನೆಲದಲ್ಲಿ ಶ್ರಾವಣ ಮಾಸದಲ್ಲಿ ನಡೆಯಲಿರುವ ಬಸವಬೆಳವಿಯ ಶರಣಬಸವ ಸ್ವಾಮೀಜಿಯವರ ಪ್ರವಚನದ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕೆಂದರು.
ನಿಸರ್ಗ ಸದಾ ನಮ್ಮ ಜೊತೆ ಇರುತ್ತದೆ. ಈ ಸಲ ರಾಜ್ಯದಲ್ಲಿ ಬರಗಾಲ ವ್ಯಾಪಿಸಿದೆ. ಅನಾವೃಷ್ಟಿಯಾಗಲಿ, ಅತಿವೃಷ್ಟಿಯಾಗಲಿ ಇದರ ನಡುವೆ ನಮ್ಮ ಬದುಕನ್ನು ಕಟ್ಟಿಕೊಳ್ಳುವುದು ಅನಿವಾರ್ಯ. ಮಳೆ ಕೊರತೆಯಿಂದಾಗಿ ರೈತರು ಭವಣೆ ಪಡುವಂತಾಗಿದೆ.
ನೊಂದ ರೈತ ಬಾಂಧವರ ನೋವನ್ನು ನಿವಾರಿಸುವ ಶಕ್ತಿ ಭಗವಂತ ನೀಡುವಂತಾಗಲಿ. ಮುಂಬರುವ ದಿನಗಳಲ್ಲಿ ಉತ್ತಮ ಮಳೆ-ಬೆಳೆಯನ್ನು ಭಗವಂತ ನೀಡುವಂತಾಗಲೆಂದು ಪ್ರಾರ್ಥಿಸುವುದಾಗಿ ಹೇಳಿದರು.
ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗುರುನಾಥ ದಡ್ಡೆ ಮಾತನಾಡಿ, 12 ನೇ ಶತಮಾನದಲ್ಲಿ ಇಡೀ ಜಗತ್ತಿಗೆ ಸಮಾನತೆಯ ಸಂದೇಶವನ್ನು ಬಸವೇಶ್ವರರು ನೀಡಿದ್ದು ಇಂದಿಗೂ ಪ್ರಸ್ತುತವಾಗಿದೆ. ಅವರು ಮಹಿಳೆಯರಿಗೂ ಸ್ಥಾನಮಾನ ನೀಡಿದ್ದರು. ಬಸವಾದಿ ಶರಣರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಶ್ರಾವಣ ಮಾಸದಲ್ಲಿ ನಡೆಯುವ ಪ್ರವಚನ, ಬಸವೇಶ್ವರ ಜಾತ್ರೆಯನ್ನು ಎಲ್ಲರೂ ಸಹಕಾರ ನೀಡುವ ಮೂಲಕ ವೈಭವಯುತವಾಗಿ ಆಚರಣೆ ಮಾಡುವಂತಾಗಬೇಕು.
ಬಸವೇಶ್ವರ ದೇವಸ್ಥಾನದ ಆಡಳಿತ ಸರ್ಕಾರ ನೋಡುತ್ತಿದ್ದರೂ ಸಹ ಜಾತ್ರೆಗೆ ಸಹಕಾರ ನೀಡುತ್ತಾ ಬರಲಾಗುತ್ತಿದೆ.
ಪ್ರವಚನದಲ್ಲಿ ನಿತ್ಯ ನಡೆಯುವ ದಾಸೋಹವನ್ನು ಅಚ್ಚುಕಟ್ಟಾಗಿ ಮಾಡಬೇಕಿದೆ. ದಾಸೋಹ ಸೇವಾರ್ಥಿಗಳು ಸಮಿತಿಗೆ ಸಂಪರ್ಕಿಸಿ ತಮ್ಮ ಸೇವೆ ಸಲ್ಲಿಸಬೇಕು. ಯಾರೂ ಮನಸ್ಸು ಕೆಡಿಸಿಕೊಳ್ಳದೇ ಎಲ್ಲರೂ ಒಗ್ಗಟ್ಟಾಗಿ ಜಾತ್ರೆ, ಪ್ರವಚನದ ಕಾರ್ಯಕ್ರಮವನ್ನು ತುಂಬಾ ಯಶಸ್ವಿಯಾಗಿ ಮಾಡಬೇಕೆಂದು ಮನವಿ ಮಾಡಿದರು.
ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಶರಣರ ಜೀವನ ಪಥ ಪ್ರವಚನ ಕೇವಲ ಕಾರ್ಯಕ್ರಮವಾಗದೇ ಶರಣರು ತೋರಿದ ಕಾಯಕ, ದಾಸೋಹ, ಸಮಾನತೆ, ಸತ್ಯ, ಮಾನವೀಯ ಮಾರ್ಗವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆಯಾಗಬೇಕು.
ಇಂದಿನ ಯುವಜನಾಂಗಕ್ಕೆ ಬಸವಾದಿ ಶರಣರ ವಿಚಾರಗಳನ್ನು ತಿಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಆದರ್ಶ ಸಮಾಜ ನಿರ್ಮಾಣ ಸಾಧ್ಯ. ಒಂದು ತಿಂಗಳ ಕಾಲ ನಡೆಯುವ ಪ್ರವಚನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವಂತಾಗಬೇಕೆಂದರು.

ಪ್ರವಚನಕಾರ ಬಸವಬೆಳವಿಯ ಪೂಜ್ಯ ಶರಣಬಸವ ಸ್ವಾಮೀಜಿ ಮಾತನಾಡಿ, ಇಡೀ ಜಗತ್ತಿಗೆ ಹೊಸ ದಿಕ್ಕು, ಕಾಯಕ-ದಾಸೋಹ ತೋರಿಸಿದ ದಾರ್ಶನಿಕ ಬಸವಣ್ಣ ಜನಿಸಿದ ನಾಡು ಬಸವನಬಾಗೇವಾಡಿ. ನಮಗೆ ಹೇಗೆ ಬದುಕಬೇಕು. ಹೇಗೆ ಬದುಕನ್ನು ಕಟ್ಟಿಕೊಳ್ಳಬೇಕೆಂಬುವದನ್ನು ಬಸವಣ್ಣನವರು ಕಲಿಸಿಕೊಟ್ಟಿದ್ದಾರೆ. ಇಂತಹ ನೆಲದಲ್ಲಿ ಈ ವರ್ಷ ಪ್ರವಚನ ಹೇಳುವ ಸೌಭಾಗ್ಯ ನನ್ನದಾಗಿದೆ.
ಕನ್ನಡ ಧರ್ಮವನ್ನು ಶರಣರು ನೀಡಿದ್ದಾರೆ. ಬಸವನಬಾಗೇವಾಡಿ, ಬಸವಕಲ್ಯಾಣ, ಕೂಡಲಸಂಗಮ ಈ ಮೂರು ಪುಣ್ಯ ನೆಲಗಳಾಗಿವೆ. ಜ್ಞಾನ ಮತ್ತು ದಾಸೋಹವನ್ನು ಲಿಂಗಾಯತ ಧರ್ಮ ಜಗತ್ತಿಗೆ ನೀಡಿದೆ. ಶರಣರ ಹೆಜ್ಜೆಗುರುತುಗಳು ಪ್ರತಿಯೊಬ್ಬರಿಗೂ ಗೊತ್ತಾಗಬೇಕಿದೆ. ಶ್ರಾವಣ ಮಾಸದಲ್ಲಿ ನಡೆಯುವ ಪ್ರವಚನದಲ್ಲಿ ಭಾಗವಹಿಸಿ ಶರಣರ ಹೆಜ್ಜೆ ಗುರುತುಗಳನ್ನು ಆಲಿಸಿ ಜೀವನ ಪಾವನ ಗೊಳಿಸಿಕೊಳ್ಳಬೇಕೆಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವ ಎಂದರೆ ಎಲ್ಲರಲ್ಲೂ ಭಕ್ತಿ-ಗೌರವ ಬರುತ್ತದೆ. ಇಂತಹ ಪುಣ್ಯ ನೆಲದಲ್ಲಿ ನಡೆಯುವ ಪ್ರವಚನದಲ್ಲಿ ಜನತೆ ಭಾಗವಹಿಸಿ ಪಾವನರಾಗಬೇಕು. ನಿತ್ಯವೂ ನಡೆಯುವ ದಾಸೋಹ ಸ್ವೀಕರಿಸಿ ತಾವು ದಾಸೋಹಿಗಳಾಗುವಂತಾಬೇಕೆಂದರು.
ನೇತೃತ್ವವನ್ನು ಶಿವಾನಂದ ಈರಕಾರಮುತ್ಯಾ ವಹಿಸಿದ್ದರು. ವೇದಿಕೆಯಲ್ಲಿ ಮುಖಂಡರಾದ ಎಲ್.ಎನ್. ಅಗರವಾಲ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಅಶೋಕ ಕಲ್ಲೂರ, ಮುತ್ತು ಕಿಣಗಿ, ಜಗದೇವಿ ಗುಂಡಳ್ಳಿ, ಶ್ರೀಕಾಂತ ಕೊಟ್ರಶೆಟ್ಟಿ, ಜಾತ್ರಾ ಸಮಿತಿಯ ಉಳಿದ ಪದಾಧಿಕಾರಿಗಳಾದ ಅಮರ ಗಾಯಕವಾಡ, ಭದ್ರು ಮಣೂರ, ಅರವಿಂದ ಗೊಳಸಂಗಿ, ರಮೇಶ ಬನಾಶಿ, ಡಾ. ಜಗದೀಶ ನಿಡಗುಂದಿ, ರವಿ ನಾಯ್ಕೋಡಿ ಇದ್ದರು.
ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ ಕೊಟ್ರಶೆಟ್ಟಿ ಸ್ವಾಗತಿಸಿದರು. ರವಿ ರಾಠೋಡ ನಿರೂಪಿಸಿದರು.
