ಬಸವಕೇಂದ್ರದಿಂದ ಬಸವ ಪಂಚಮಿ
ಅಣ್ಣಿಗೇರಿ :
ಅದರ ಹೆಸರೇ ಬಸವೇಶ್ವರನಗರ. ಶ್ರಮಿಕ ವರ್ಗದ ಬಡ ಕುಟುಂಬಗಳ ವಾಸಸ್ಥಾನ. ಅಲ್ಲಿಯೇ ಒಂದು ಸರಕಾರಿ ಶಾಲೆ. ಈ ಶಾಲೆಯಲ್ಲಿ ಕಳೆದ 31 ವರ್ಷಗಳಿಂದ ಪ್ರತಿವರ್ಷ ನಾಗರ ಪಂಚಮಿಯ ಬದಲಾಗಿ ಬಸವ ಪಂಚಮಿ ಆಚರಿಸುತ್ತಿರುವ ಪಟ್ಟಣದ ಪ್ರೊ. ಎಸ್. ಎಸ್. ಹರ್ಲಾಪೂರ ನೇತೃತ್ವದ ಬಸವ ಕೇಂದ್ರ. ಈ ಸಲವೂ ಸಹ ಕಲ್ಲಿನ ನಾಗಪ್ಪನಿಗೆ, ಮಣ್ಣಿನ ನಾಗಪ್ಪನಿಗೆ ಆಗಲಿ ಹಾಲನೆರೆಯದೆ ಬಡ ಮಕ್ಕಳ ಹಸಿದ ಹೊಟ್ಟೆಗೆ ಹಾಲು ಕೊಡುವ ಮೂಲಕ ಬಸವ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಿತು.
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು,
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ.
ಉಂಬ ಜಂಗಮ ಬಂದಡೆ ನಡೆಯೆಂಬರು.
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದಡೆ
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ
ಎನ್ನುವ ಬಸವಣ್ಣನವರ ವಚನವನ್ನು ಪಠಿಸಿ ಅದರ ಅರ್ಥವನ್ನು ಅಲ್ಲಿ ನೆರೆದ ಮಕ್ಕಳಿಗೆ ಹೇಳಿ ದೇವರು ಹಾಲು ಕುಡಿದರೆ ಊಟ ಮಾಡಿದರೆ ಜನರು ದೇವರನ್ನೂ ಸಹ ಓಡಿಸುತ್ತಿದ್ದರು ಎಂದರು.
ಮೂಲತಃ ಎಲ್ಲಾ ಹಾವುಗಳು ಮಾಂಸಾಹಾರಿಗಳು. ಇಲಿಗಳು, ಕಪ್ಪೆಗಳು, ಹಲ್ಲಿಗಳು, ಪಕ್ಷಿಗಳು, ಮೀನುಗಳು ಮತ್ತು ದೊಡ್ಡ ಹಾವುಗಳು ಇತರ ಪ್ರಾಣಿಗಳನ್ನು ತಮ್ಮ ಆಹಾರವಾಗಿ ಸೇವಿಸುತ್ತವೆ. ಇವು ಆಹಾರವನ್ನು ಅಗಿಯದೆ ಸಂಪೂರ್ಣವಾಗಿ ನುಂಗುತ್ತವೆ. ಹೀಗಿರುವಾಗ ನಾಗರ ಪಂಚಮಿಯನ್ನು ಹೆಸರಲ್ಲಿ ನಾಗಪ್ಪನಿಗೆ ಹಾಲನೆರೆಯುವುದು ಮೌಢ್ಯ, ಅಂಧಶ್ರದ್ಧೆಯನ್ನು ಬೆಳೆಸುವುದಾಗಿದೆ. ಹಾವುಗಳು ಹಾಲು ಕುಡಿಯುತ್ತವೆ ಎಂಬುದು ಕೇವಲ ಮೂಢನಂಬಿಕೆಯಾಗಿದೆ. ಹಾವುಗಳು ಎಂದೂ ಹಾಲು ಕುಡಿಯುವುದಿಲ್ಲ ಎನ್ನುವುದು ಸ್ಪಷ್ಟ ಎಂದು ಮಕ್ಕಳಿಗೆ ಮನದಟ್ಟು ಮಾಡಿದರು.
ಜನರನ್ನು ಮೌಢ್ಯ, ಅಂಧಶ್ರದ್ಧೆಗಳ ಮೂಲಕ ಶೋಷಣೆ ಮಾಡುವುದನ್ನು ಕಂಡೇ 12ನೇ ಶತಮಾನದಲ್ಲಿ ಬಸವಾದಿ ಶರಣರು ಜನರನ್ನು ಅದರಿಂದ ಹೊರತಂದು ಭಕ್ತಿ, ಕಾಯಕ, ದಾಸೋಹ ಪ್ರಜ್ಞೆಯನ್ನು ಬೆಳೆಸಿದರು. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಇನ್ನೂ ಸಹ ತಮ್ಮ ಕೆಟ್ಟತನವನ್ನು ಬಿಟ್ಟಿಲ್ಲ. ಇದರ ವಿರುದ್ಧ ನಾಡಿನಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹರ್ಲಾಪುರ ಅವರು ಹೇಳಿದರು.
ಮಕ್ಕಳಿಗೆ ಹಾಲು ಕೊಡುವ ಈ ಕಾರ್ಯದಲ್ಲಿ ಚಂದ್ರಶೇಖರ ಸುರಕೋಡ, ಹನುಮಂತಪ್ಪ ಡಬರಿ, ಬಿ.ಆರ್. ದಿವಟರ, ಪಾಂಡುರಂಗ ಬಿರಸಲ, ರಾಜು ಕಲ್ಲೊಡ್ಡರ, ಡಾ. ಭಾರ್ಗವಿ ನಾಯ್ಕರ, ಸಾಕ್ಷಿ ಹರ್ಲಾಪೂರ, ಅಮೃತಾ ಡಬರಿ, ಪ್ರಗತಿ ಗುದ್ದಿನ ಸೇರಿದಂತೆ ವಿದ್ಯಾರ್ಥಿನಿಯರು ಹಾಗೂ ಬಸವೇಶ್ವರ ನಗರದ ಯುವಕರು ಜೊತೆಯಾಗಿದ್ದರು.
