ಮೌಲ್ಯಾಧಾರಿತ ರಾಜಕಾರಣಿ ಬಿ.ಡಿ.ಜತ್ತಿ
ಕಲಬುರಗಿ:
ಗ್ರಾಪಂ ಸದಸ್ಯರ ಹಂತದಿಂದ ದೇಶದ ಹಂಗಾಮಿ ರಾಷ್ಟ್ರಪತಿ ಹುದ್ದೆಯವರೆಗೆ ಏರಿದ ಬಸಪ್ಪ ದಾನಪ್ಪ ಜತ್ತಿ (ಬಿ.ಡಿ. ಜತ್ತಿ) ಅವರು ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು ಎಂದು ಕಲಬುರಗಿ ಬಸವ ಸಮಿತಿ ಉಪಾಧ್ಯಕ್ಷೆ ಡಾ. ಜಯಶ್ರೀ ದಂಡೆ ಅಭಿಪ್ರಾಯಪಟ್ಟರು.
ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಭಾನುವಾರ ನಡೆದ ಬಸವ ಸಮಿತಿ ಸಂಸ್ಥಾಪಕ ಅಧ್ಯಕ್ಷರ ದಿನಾಚರಣೆ ಹಾಗೂ ಸೌಂಡ್ಸ್ ಆಫ್ ಬಸವ ಡಾಟ್ ಇನ್ ಜಾಲತಾಣ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜತ್ತಿಯವರ ನುಡಿ ಸ್ಮರಣೆ ಮಾಡಿ ಮಾತನಾಡುತ್ತ, ಕನ್ನಡಕ್ಕಾಗಿಯೇ ತಮ್ಮ ರಾಜಕೀಯ ಹುದ್ದೆ ತ್ಯಜಿಸಿ ಶರಣ ಸಾಹಿತ್ಯ ಪ್ರಸಾರ ಮಾಡಿದ ಒಬ್ಬ ಆದರ್ಶ ಪುರುಷ ಎಂದರು.

ಬಾಲ್ಯದಲ್ಲಿ ತಂದೆ-ತಾಯಿ ಮತ್ತು ಯೌವನದಲ್ಲಿ ಅಥಣಿ ಸ್ವಾಮಿಗಳ ಸಂಸ್ಕಾರ, ಫ.ಗು. ಹಳಕಟ್ಟಿ ಮುಂತಾದವರ ಒಡನಾಟ-ಸಂಪರ್ಕ ದೊರೆತು 90 ವರ್ಷಗಳ ಸಾರ್ಥಕ ಬದುಕು ನಡೆಸಿದರು. ಸರಳತೆ ಹಾಗೂ ಜನಪರ ಕಾಳಜಿಯ ಅಸಾಧಾರಣ ವ್ಯಕ್ತಿತ್ವದ ಮಹಾನ್ ನಾಯಕರಾಗಿದ್ದರು. ಅಧಿಕಾರದಲ್ಲಿದ್ದಾಗ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ, ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಆಡಳಿತ ನಡೆಸಿ ಮಾದರಿಯಾದವರು ಎಂದು ತಿಳಿಸಿದರು.

ಸಂಶೋಧಕ ಅಶೋಕ ದೊಮ್ಮಲೂರು ಅವರಿಗೆ ಡಾ. ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಶರಣರ ವಚನಗಳ ನಿಖರ ಪರಿಷ್ಕರಣೆ ಇನ್ನೂ ಆಗಬೇಕಿದೆ ಎಂದರು.
ಈವರೆಗೆ ಒಟ್ಟು 60ಲಕ್ಷ ತಾಡೋಲೆಗಳ ಪರಿಷ್ಕರಣ, ಸಂಗ್ರಹ ಹಾಗೂ ಅವುಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಶರಣರ ಕ್ಷೇತ್ರಗಳ ಕುರಿತು ದಂಡೆ ದಂಪತಿ ದಾಖಲಿಸಿದ್ದಾರೆ. ಅದರಂತೆ ಶಾಸನ ತಜ್ಞರ ಸಹಾಯದಿಂದ ಶರಣರ ಕಾಲಾವಧಿಯನ್ನು ನಿಖರವಾಗಿ ಗುರುತಿಸಬಹುದಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜೇಂದ್ರ ಖೂಬಾ ಅವರು ರಚಿಸಿದ soundsofbasava.in ವೆಬ್ ಸೈಟ್ ಅನ್ನು ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅನಾವರಣಗೊಳಿಸಿದರು.

ಜಾಲತಾಣದ ರೂವಾರಿ ಖೂಬಾ ಮಾತನಾಡಿ, ಬಸವಣ್ಣನವರ ಷಟಸ್ಥಲದ 1,417 ವಚನಗಳನ್ನು ಅಳವಡಿಸಲಾಗಿದೆ. ಇವುಗಳನ್ನು 180 ಭಾಷೆಗಳಲ್ಲಿ ಬಹು ಆಯಾಮಗಳಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ. 12ನೇ ಶತಮಾನದ ಬಸವಣ್ಣನವರು ಕಾಲಾತೀತ ಧ್ವನಿ, ಜಗತ್ತಿನ ಬೆಳಕು. ಅವರು ವ್ಯಕ್ತಿಯಿಂದಲೇ ಸಮಷ್ಠಿ ಬದಲಾವಣೆ ಮಾಡಿದರು ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಅಧ್ಯಯನ ಕೇಂದ್ರದಿಂದ ಪಿಎಚ್.ಡಿ. ಪದವಿ ಪಡೆದ ಸಂಗಣ್ಣ ತಿಬಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಜಾಲತಾಣ ನಿರ್ಮಾಣಕ್ಕೆ ನೆರವಾದ ಮಲ್ಲಿಕಾರ್ಜುನ ಎಚ್.ರಾವ್, ಮಮಿತಾ ಎಸ್. ಎನ್. ಅವರನ್ನು ಗೌರವಿಸಲಾಯಿತು.
ಬೆಂಗಳೂರು ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಕೆ.ಎಸ್. ವಾಲಿ ಸ್ವಾಗತಿಸಿದರು. ಡಾ. ವೀರಣ್ಣ ದಂಡೆ ಸ್ವಾಗತಿಸಿದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6
