ಜಿಲ್ಲೆಗಳಲ್ಲಿ ವಚನ ಸಂಗೀತ ಉತ್ಸವ ನಡೆಸುವ ಯೋಜನೆ: ಶಿವರಾಜ ತಂಗಡಗಿ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರಿನಲ್ಲಿ ಎರಡು ದಿನಗಳ ವಚನ ಸಂಗೀತೋತ್ಸವ

ಮೈಸೂರು

ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಇರುವ ಸುತ್ತೂರು ಮಠದ ಆವರಣದಲ್ಲಿ ಎರಡು ದಿನಗಳ ವಚನ ಸಂಗೀತೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್‌.ತಂಗಡಗಿ ಬುಧವಾರ ಉದ್ಘಾಟಿಸಿದರು.

“ವಚನಗಳಿಗೆ ಸಂಗೀತವನ್ನು ಬೆಸೆಯುವುದರಿಂದ ಅವುಗಳ ಸಂದೇಶ ಇನ್ನಷ್ಟು ಜನರನ್ನು ತಲುಪಲು ಸಾಧ್ಯವಾಗುತ್ತದೆ. ಇದೇ ಉದ್ದೇಶದಿಂದ ವಚನ ಸಂಗೀತೋತ್ಸವವನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ವಚನ ಸಂಗೀತೋತ್ಸವವನ್ನು ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನಷ್ಟು ವ್ಯಾಪಕವಾಗಿ ಆಯೋಜಿಸುವ ಉದ್ದೇಶವಿದೆ,” ಎಂದರು.

ಇದು ವಚನಗಳ ಸಾರ ಮತ್ತು ಬಸವಣ್ಣನವರ ಸಾಮಾಜಿಕ ಚಿಂತನೆಗಳನ್ನು ಜನರ ಮನಸ್ಸಿಗೆ ತಲುಪಿಸುವ ಸಾಂಸ್ಕೃತಿಕ ಹಾಗೂ ಸಾಮಾಜಿಕ ಜಾಗೃತಿಯ ಪ್ರಯತ್ನವಾಗಿದೆ. ವಿಶೇಷವಾಗಿ ಯುವಕರು ವಚನಗಳನ್ನು ಓದಿ, ಅವುಗಳ ಅರ್ಥವನ್ನು ತಿಳಿದುಕೊಂಡು ಬಸವಣ್ಣನವರ ವಿಚಾರಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ವಚನಗಳ ಮೂಲಕ ಬಸವಣ್ಣ ನವರು ಜಾತಿ, ವರ್ಗ, ಲಿಂಗ ಹಾಗೂ ಮೇಲು-ಕೀಳು ಭೇದಗಳನ್ನು ಮೀರಿ ಸಮಾನತೆಯ ಸಮಾಜದ ಪರಿಕಲ್ಪನೆಯನ್ನು ಸಾರಿದರು. ಅವರ ಕಾಯಕ, ದಾಸೋಹ, ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಈ ವಿಚಾರಗಳನ್ನು ಇಂದಿನ ಯುವಜನತೆಗೆ ತಲುಪಿಸುವ ಅಗತ್ಯವಿದೆ ಎಂದರು.

ವಚನ ಕುರಿತು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸುಗಮ ಸಂಗೀತ ಶೈಲಿಯಲ್ಲಿ, ರಂಗ ಗೀತೆ ಶೈಲಿಯಲ್ಲಿ ವಚನ ಗಾಯನ ನಡೆಯಿತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎಸ್‌.ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಮೈಲ್ಯಾಕ್‌ ಅಧ್ಯಕ್ಷ ಎಚ್‌.ಡಿ.ಗಣೇಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್‌.ಮಂಜುಶ್ರೀ, ನಿರ್ದೇಶಕಿ ಡಾ.ಕೆ.ಎನ್‌.ವಸುಂಧರ, ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ, ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್‌ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಗದ್ಗುರು ವೀರ ಸಿಂಹಾಸನ ಮಹಾಸಂಸ್ಥಾನ ಸುತ್ತೂರು ಹಾಗೂ ಬಸವ ಬಳಗಗಳ ಒಕ್ಕೂಟದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *