‘ಕನ್ನಡ ನೆಲ ಜಲ ಭಾಷೆಗೆ ಅಪೂರ್ವ ಕೊಡುಗೆ ನೀಡಿದ ಶಿವಬಸವ ಸ್ವಾಮಿಗಳು’

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ಸ್ವತಂತ್ರ ಪೂರ್ವ ಮತ್ತು ಸ್ವಾತಂತ್ರ‍್ಯ ನಂತರದಲ್ಲಿ ಅಪೂರ್ವವಾದ ನಾಡ ಸೇವೆ, ಭಾಷಾ ಸೇವೆ ಮಾಡಿದವರು ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳು. ಕನ್ನಡ ನೆಲ ಜಲ ಭಾಷೆಗೆ ಶಿವಬಸವ ಮಹಾಸ್ವಾಮಿಗಳು ಕೊಡುಗೆ ಅಪಾರವಾದುದು ಎಂದು ಭೈರನಟ್ಟಿ ದೊರೆಸ್ವಾಮಿ ಮಠದ ಪೂಜ್ಯ ಶಾಂತಲಿಂಗ ಸ್ವಾಮಿಗಳು ಮಾತನಾಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೧೫ನೆಯ ಶಿವಾನುಭವದ ಸಮ್ಮುಖ ವಹಿಸಿ ಮಾತನಾಡಿದ ಶ್ರೀಗಳು, ಶಿವಬಸವ ಮಹಾಸ್ವಾಮಿಗಳು ಬೆಳಗಾವಿಗೆ ಫಜಲ್ ಅಲಿ ಆಯೋಗ ಬಂದಾಗ ಬೆಳಗಾವಿ ಕನ್ನಡಿಗರದ್ದು ಎಂದು ಪ್ರತಿಪಾದನೆ ಮಾಡಿ, ಕರ್ನಾಟಕದಲ್ಲಿ ಬೆಳಗಾವಿ ಉಳಿಯುವಂತೆ ಮಾಡಿದ ಮಹನೀಯರು. ಕನ್ನಡಿಗರು ನೆಮ್ಮದಿಯಿಂದ ಅಲ್ಲಿ ವಾಸ ಮಾಡುವಂತೆ ಮಾಡಿದ ಹಿರಿಮೆ ನಾಗನೂರು ಶ್ರೀ ರುದ್ರಾಕ್ಷಿಮಠಕ್ಕೆ ಸಲ್ಲುತ್ತದೆ ಎಂದರು.

೧೯೨೪ರಲ್ಲಿ ಬೆಳಗಾವಿಗೆ ಮಹಾತ್ಮ ಗಾಂಧೀಜಿ ಅವರು ಬಂದಾಗ ಹರ್ಡೇಕರ್ ಮಂಜಪ್ಪರಾದಿಯಾಗಿ ಅನೇಕರ ಒಡಗೂಡಿ ಕನ್ನಡ ನಾಡು ನುಡಿಯ ಸೇವೆಗಾಗಿ ಡಾ. ಶಿವಬಸವ ಮಹಾಸ್ವಾಮಿಗಳು ಹೋರಾಟ ಸ್ಮರಣೀಯ ಎಂದು ಹೇಳಿದರು.

ಬೆಳಗಾವಿ ಪರಿಸರದಲ್ಲಿ ಅನ್ನ, ಅಕ್ಷರ, ಅರಿವು ತ್ರಿವಿಧ ದಾಸೋಹ ಕೈಗೊಂಡು ಬೆಳಗಾವಿಯ ಪರಿಸರದಾದ್ಯಂತ ಕನ್ನಡ ಪರಿಸರ ಕಟ್ಟುವಲ್ಲಿ ಶಿವಬಸವ ಮಹಾಸ್ವಾಮಿಗಳ ಕೊಡುಗೆ ಅಪೂರ್ವದುವಾದದ್ದು ಎಂದರು.

ಅದೇ ತರನಾಗಿ ಈ ನಾಡು ಕಂಡ ಅಪರೂಪದ ಅಭಿಯಂತರರಾದ ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಇತಿಹಾಸದಲ್ಲಿ ಅನೇಕ ದಾಖಲಾರ್ಹ ಕಾರ್ಯಗಳನ್ನು ಮಾಡಿ ಹೋಗಿದ್ದಾರೆ. ಆ ಕಾರ್ಯಗಳು ಇಂದಿಗೂ ಕೂಡ ಅವರ ಹೆಸರನ್ನು ಸಾರಿ ಸಾರಿ ಹೇಳುತ್ತಿವೆ. ಮೈಸೂರಿನ ಕೃಷ್ಣರಾಜಸಾಗರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರಿನ ಇಂಜಿನೀಯರಿಂಗ್ ಕಾಲೇಜು ಚೀನಾ, ಲಂಡನ್ ಮೊದಲಾದ ದೇಶಗಳಲ್ಲಿ ಅನೇಕ ಅಣೆಕಟ್ಟುಗಳನ್ನು ಹಾಗೂ ದಾಖಲಾರ್ಹ ಕಾರ್ಯಗಳನ್ನು ಮಾಡುವುದರ ಜೊತೆಗೆ ಮೈಸೂರು ರಾಜ್ಯದ ದಿವಾನರಾಗಿ ವಿಶೇಷ ಕಾರ್ಯಗಳನ್ನು ವಿಶ್ವೇಶ್ವರಯ್ಯನವರು ಮಾಡಿದ್ದಾರೆ ಎಂದರು.

ಡಾ. ಬಸವರಾಜ ಪಾಟೀಲ ಅವರು ಕೃಷಿ ಇಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ರೈತರ ಸಬಲೀಕರಣ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅವರು ಒಂದು ಹನಿಯಲ್ಲಿ ಅಪಾರ ಬೆಳೆಯನ್ನು ಬೆಳೆಯುವುದು ಆಧುನಿಕ ಕೃಷಿಯಲ್ಲಿ ಕಡಿಮೆ ನೀರನ್ನು ಬಳಸಿಕೊಂಡು ಅಧಿಕ ಬೆಳೆಯನ್ನು ಬೆಳೆಯಬೇಕಾದ ಅನಿವಾರ್ಯತೆ ಇದೆ. ಕಡಿಮೆ ರಾಸಾಯನಿಕ ಬಳಕೆಯಾಗಬೇಕಾಗಿದೆ. ಅಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಬಳಸಬೇಕು ಎಂದು ೨೧ನೆಯ ಶತಮಾನದ ಕೃಷಿಯ ವಿಶೇಷತೆಗಳನ್ನು ಕುರಿತು ಮಾತನಾಡಿದರು.

ಕಾಲಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸುವುದರ ಮೂಲಕ ಮಣ್ಣಿಗೆ ಬೇಕಾದ ಜೀವ ಪೋಷಕಾಂಶಗಳು ಕುರಿತು ಅರಿತುಕೊಳ್ಳಬೇಕು ಎನ್ನುವ ಮಾತನ್ನು ಹೇಳಿದರು.

ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯ ನಿಮಿತ್ಯ ಗದುಗಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜಗದ್ಗುರು ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ. ಕಾರ್ತಿಕ ಅಜ್ಜಂಪುರಶೆಟ್ರು, ನಾಗರಾಜ ಚಾಕಲಬ್ಬಿ, ಜಗದೀಶ ಶಿವನಗುತ್ತಿ, ಲೋಹಿತ ಜವಳಿ, ಮುಕ್ತ ಪಾಟೀಲ, ಪ್ರೇಮ ಯೆಳ್ಳೂರು ಪ್ರಾಧ್ಯಾಪಕರನ್ನು ಪೂಜ್ಯರು ಗೌರವಿಸಿ ಸನ್ಮಾನಿಸಿದರು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ನೆರವೇರಿಸಿದರು. ಧರ್ಮಗ್ರಂಥ ಪಠಣ ಸೃಷ್ಟಿ ಹಬೀಬ, ವಚನ ಚಿಂತನ ಚಂದನಾ ದಂಡಿನ, ದಾಸೋಹ ಸೇವೆಯನ್ನು ಶಾಂತಾದೇವಿ ಭೀಮಪ್ಪ ಕೊನ್ನಾವರ ಮತ್ತು ಮಕ್ಕಳು, ಡಾ. ಮುರುಗೆಪ್ಪ ಎಂ. ಅವಟಿ ಪ್ರಾಚಾರ್ಯರು ಜಗದ್ಗುರು ಶ್ರೀ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜು ಇವರು ನೆರವೇರಿಸಿದರು.

ಸ್ವಾಗತವನ್ನು ಲಿಂಗಾಯತ ಪ್ರಗತಿಯ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ, ನಿರೂಪಣೆಯನ್ನು ಡಾ. ರಮೇಶ ಕಲ್ಲನಗೌಡರ ಮಾಡಿದರು.

ಶಿವಾನುಭವದಲ್ಲಿ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ. ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *