ಸಡಗರ, ಸಂಭ್ರಮದಿಂದ ‘ಬಸವ ಸಮುದಾಯ ಭವನ’ ಲೋಕಾರ್ಪಣೆ

ಶರಣು ಶಿಣ್ಣೂರ್
ಶರಣು ಶಿಣ್ಣೂರ್

ಮಾನವೀಯ ಬಸವತತ್ವ ಮೌಲ್ಯಗಳ ಪ್ರಸಾರಕ್ಕೆ ಬಸವ ಭವನ ವೇದಿಕೆಯಾಗಲಿ: ಡಾ. ಸಿದ್ಧರಾಮ ಸ್ವಾಮೀಜಿ

ಗದಗ:

ಗದಗ-ಬೆಟಗೇರಿ ನಗರದ ಶಿವಾನಂದ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಬಸವ ಸಮುದಾಯ ಭವನವನ್ನು ಭಾನುವಾರ ಲೋಕಾರ್ಪಣೆಗೊಂಡಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಪೂಜ್ಯ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಬಹುದಿನಗಳ ಕನಸಾಗಿದ್ದ ಬಸವ ಸಮುದಾಯ ಭವನ ಲೋಕಾರ್ಪಣೆಗೊಂಡಿರುವುದು ಸಂತಸದ ಸಂಗತಿ ಎಂದರು.

ಈ ಭವನದ ನಿರ್ಮಾಣದ ಹಿಂದೆ ಪ್ರತಿಯೊಬ್ಬರ ಕಾಯಕ ಮತ್ತು ದಾಸೋಹದ ತತ್ವ ಅಡಕವಾಗಿದೆ. ಬಸವಣ್ಣನವರ ಆಶಯದಂತೆ ಲೋಕೋತ್ತರ ಕಾರ್ಯಗಳಿಗೆ ಈ ಭವನ ಬಳಕೆಯಾಗಬೇಕು. ಇಂತಹ ಎಲ್ಲಾ ಭವನಗಳಿಗೂ ಅನುಭವ ಮಂಟಪವೇ ಮೂಲವಾಗಿದ್ದು, ಅನುಭವ ಮಂಟಪದಲ್ಲಿ ಎಲ್ಲಾ ವಿಷಯಗಳ ಕುರಿತು ಚಿಂತನೆ ನಡೆದ ರೀತಿಯಲ್ಲಿ ಈ ಭವನವೂ ಬಸವ ತತ್ವ, ಶರಣರ ಚಿಂತನೆ ಹಾಗೂ ಸಾಮಾಜಿಕ ವಿಚಾರಗಳ ಚರ್ಚೆ ಮತ್ತು ಪ್ರಸಾರಕ್ಕೆ ಕೇಂದ್ರವಾಗಬೇಕು ಎಂದು ಆಶಿಸಿದರು.

ಸರ್ವಕ್ರಾಂತಿಗೂ ಮೂಲಪುರುಷರಾದ ಬಸವಣ್ಣನವರ ವ್ಯಕ್ತಿತ್ವವನ್ನು ಸ್ಮರಿಸಿದ ಅವರು, ಅಹಂಕಾರರಹಿತ ಮನುಷ್ಯತ್ವವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು. ಬಸವಣ್ಣನವರ ವ್ಯಕ್ತಿತ್ವದ ಮಹತ್ವವನ್ನು ವಿವರಿಸುತ್ತಾ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ತಿಳಿಸಿದರು. ಅಲ್ಲಮಪ್ರಭುಗಳ ವಚನದ ಆಶಯವನ್ನು ಉಲ್ಲೇಖಿಸಿ, ಬಸವಾದಿ ಶರಣರ ಚಿಂತನೆಗಳನ್ನು ನಿರಂತರವಾಗಿ ಮುಂದುವರಿಸುವ ಕೇಂದ್ರವಾಗಿ ಈ ಭವನ ರೂಪುಗೊಳ್ಳಲಿ ಎಂದು ಆಶಿಸಿದರು.

ಭವನ ನಿರ್ಮಾಣಕ್ಕೆ ತನು-ಮನ-ಧನದಿಂದ ಸಹಕರಿಸಿದ ನೂರಾರು ದಾಸೋಹಿಗಳನ್ನು ವೇದಿಕೆಗೆ ಆಹ್ವಾನಿಸಿ ಸನ್ಮಾನಿಸಿರುವುದು ಶ್ಲಾಘನೀಯ. ಜನರಿಗೆ ಸಂತೋಷವನ್ನುಂಟು ಮಾಡುವ ಕಾರ್ಯವೇ ಭಗವಂತನ ಸೇವೆ ಎಂದು ತಿಳಿಸಿದರು.

ಭವನದ ಎರಡನೇ ಮಹಡಿಯಲ್ಲಿ ಶೀಘ್ರವೇ ವಚನ ಪಠಣಕ್ಕೆ ಅನುಕೂಲವಾಗುವ ಗ್ರಂಥಾಲಯ ನಿರ್ಮಾಣವಾಗಬೇಕು. ಗ್ರಂಥಾಲಯವು ದೇಹಕ್ಕೆ ಆತ್ಮವಿದ್ದಂತೆ. ಅದರ ನಿರ್ಮಾಣಕ್ಕೂ ಬಸವಭಕ್ತರು ತನು-ಮನ-ಧನದಿಂದ ದಾಸೋಹ ನೀಡಬೇಕು ಎಂದು ಕರೆ ನೀಡಿದರು.

ಬಸವತತ್ವ ಮತ್ತು ಸಂವಿಧಾನದ ಮೌಲ್ಯಗಳು ಸಮಾನತೆಯ ಸಮಾಜ ನಿರ್ಮಾಣಕ್ಕೆ ಪೂರಕ: ಎಚ್.ಕೆ. ಪಾಟೀಲ

ಬಸವ ಸಮುದಾಯ ಭವನ ನಿರ್ಮಾಣಕ್ಕೆ ₹9 ಲಕ್ಷ ಧನಸಹಾಯ ನೀಡಿದ ಗದಗ ಶಾಸಕರು ಹಾಗೂ ಮಾಜಿ ಸಚಿವರಾದ ಎಚ್.ಕೆ. ಪಾಟೀಲ ಅವರು ಮಾತನಾಡಿ, ಬಸವ ದಳವು ಆಧ್ಯಾತ್ಮಿಕ, ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳನ್ನು ಆಧರಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯಾಗಿದೆ ಎಂದರು.

ಕಳೆದ 30-40 ವರ್ಷಗಳಿಂದ ಈ ಭವನದ ನಿರ್ಮಾಣಕ್ಕಾಗಿ ಬಸವ ದಳದವರು ನಿರಂತರವಾಗಿ ಶ್ರಮಿಸಿರುವುದು ಶ್ಲಾಘನೀಯ. ಕಟ್ಟಡ ನಿರ್ಮಾಣ ಹಾಗೂ ಆಸ್ತಿ ಹಸ್ತಾಂತರಕ್ಕೆ ಕಾರಣರಾದ ಕಣವಿ, ಬಿ.ಬಿ. ಆಸೂಟಿ ಸೇರಿದಂತೆ ಎಲ್ಲ ಪದಾಧಿಕಾರಿಗಳು ಹಾಗೂ ಸಹಕರಿಸಿದವರನ್ನು ಸ್ಮರಿಸಿದರು.

ಜಗತ್ತಿನ ಪ್ರಥಮ ಸಾಮಾಜಿಕ-ರಾಜಕೀಯ ಚಿಂತನಾ ವೇದಿಕೆಯಾಗಿ ಪರಿಗಣಿಸಲ್ಪಡುವ ಅನುಭವ ಮಂಟಪದ ಮಾದರಿಯಲ್ಲಿ ಈ ಸಮುದಾಯ ಭವನವು ಚಿಂತನೆ, ಚರ್ಚೆ ಹಾಗೂ ಸಾಮಾಜಿಕ ಜಾಗೃತಿಗೆ ವೇದಿಕೆಯಾಗಬೇಕು ಎಂದರು.

ವಚನಗಳಲ್ಲಿರುವ ಮೌಲ್ಯಯುತ ಚಿಂತನೆಗಳೇ ಸಂವಿಧಾನದ ಆಶಯಗಳಲ್ಲಿಯೂ ಅಡಕವಾಗಿವೆ. ವಚನಗಳನ್ನು ಒಪ್ಪಿಕೊಳ್ಳುವುದು ಸಂವಿಧಾನದ ಮೌಲ್ಯಗಳನ್ನು ಒಪ್ಪಿಕೊಂಡಂತೆಯೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಬಸವ ಸಿದ್ಧಾಂತ ಮತ್ತು ಮನುಸ್ಮೃತಿ ಸಿದ್ಧಾಂತಗಳ ನಡುವಿನ ವ್ಯತ್ಯಾಸವನ್ನು ಉಲ್ಲೇಖಿಸಿ, ದೇಶ ನಿರ್ಮಾಣದಲ್ಲಿ ಸಮಾನತೆ ಹಾಗೂ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವ ಚಿಂತನೆಗಳ ಅಗತ್ಯವಿದೆ ಎಂದರು.

ವಚನಗಳು ಕೇವಲ ಭಾಷಣಕ್ಕೆ ಸೀಮಿತವಾಗದೆ, ಅವುಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ದೃಢಸಂಕಲ್ಪ ಮಾಡಬೇಕು. ವಚನ ಚಿಂತನೆಗಳಿಗೆ ಕಾನೂನುಬದ್ಧ ಬಲ ತುಂಬುವ ಕೆಲಸವೂ ನಡೆಯಬೇಕು ಎಂದರು.

ಭವನದ ಮುಂದಿನ ಹಂತದ ನಿರ್ಮಾಣ ಕಾರ್ಯಕ್ಕಾಗಿ ಶಾಸಕರ ಅನುದಾನದಡಿ ಇನ್ನೂ ₹20 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ಭವನ ಲೋಕಾರ್ಪಣೆಗೊಳಿಸಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಈ ಭವನದ ನಿರ್ಮಾಣದಲ್ಲಿ ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಕೊಡುಗೆಯನ್ನು ಸ್ಮರಿಸಿದರು. ಸುಂದರವಾಗಿ ನಿರ್ಮಾಣಗೊಂಡಿರುವ ಭವನಕ್ಕಾಗಿ ಬಸವ ದಳದ ಪದಾಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ಕಟ್ಟಡ ಕಾರ್ಮಿಕರನ್ನು ಅಭಿನಂದಿಸಿದರು.

ಸಮಾಜ ಸುಧಾರಣೆ ಹಾಗೂ ಜೀವನ ಸಾರ್ಥಕತೆಗೆ ಬಸವ ತತ್ವಗಳನ್ನು ಅನುಸರಿಸುವುದು ಅಗತ್ಯ. ಶರಣರ ಚಿಂತನೆಗಳಲ್ಲಿ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಪೂರಕವಾದ ಅಂಶಗಳು ಮೊದಲಿನಿಂದಲೂ ಕಂಡುಬರುತ್ತವೆ. ಜಾತೀಯತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಶರಣರ ಸಮಾನತೆಯ ಚಿಂತನೆಗಳು ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬಲ್ಲವು ಎಂದರು.

ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಸಮಾನತೆ ಮತ್ತು ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ಕರೆ ನೀಡಿದರು.

ಪ್ರಾಚಾರ್ಯ ಅಣ್ಣಿಗೇರಿಯ ಪ್ರೊ. ಎಸ್.ಎಸ್. ಹರ್ಲಾಪುರ ಉಪನ್ಯಾಸ ನೀಡಿ, ಬಸವ ತತ್ವದ ಪ್ರಸಾರಕ್ಕಾಗಿ ನಿರಂತರವಾಗಿ ಶ್ರಮಿಸಿದ ಲಿಂಗೈಕ್ಯ ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿಗಳ ಕಾರ್ಯವನ್ನು ಸ್ಮರಿಸಿದರು. ಈ ಭವನದ ನಿರ್ಮಾಣಕ್ಕೆ ಕಾರಣರಾದ ಹೆರಕಲ್, ನರೇಗಲ್ ಸೇರಿದಂತೆ ವಿವಿಧ ಶರಣರು ಹಾಗೂ ಸಹಕರಿಸಿದವರ ಕೊಡುಗೆಯನ್ನು ನೆನೆದರು.

ಪ್ರತಿಯೊಬ್ಬರ ಶ್ರಮದಿಂದ ನಿರ್ಮಾಣಗೊಂಡಿರುವ ಈ ಭವನವು ಬಸವ ದಳ ಹಾಗೂ ಬಸವಪರ ಸಂಘಟನೆಗಳಿಗೆ ಮಾದರಿಯಾಗಬೇಕು ಎಂದರು.

ಎಲ್ಲ ಧರ್ಮಗಳ ಮೂಲ ಆಶಯವೂ ಮನುಷ್ಯನನ್ನು ನಿಸ್ವಾರ್ಥಿಯನ್ನಾಗಿ ಮಾಡುವುದು. ಕಾಯಕದ ಮೂಲಕ ಪ್ರಾಮಾಣಿಕವಾಗಿ ಬದುಕುವುದು ಶರಣರ ಚಿಂತನೆಯ ಪ್ರಮುಖ ಸಂದೇಶವಾಗಿದೆ. ಗಳಿಸಿದ್ದನ್ನು ಮಾತ್ರ ಅನುಭವಿಸಿ, ಧೈರ್ಯದಿಂದ, ಪ್ರಾಮಾಣಿಕವಾಗಿ ಬದುಕುವ ಮನುಷ್ಯತ್ವ ಇಂದಿನ ಸಮಾಜಕ್ಕೆ ಅಗತ್ಯವಾಗಿದೆ ಎಂದು ಹೇಳಿದರು.

ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಾಮಾಣಿಕವಾಗಿ ಬದುಕಬೇಕು. ಶರಣ ತತ್ವದ ಬೆಳಕನ್ನು ಸಮಾಜಕ್ಕೆ ನಿರಂತರವಾಗಿ ಹಂಚುವ ಕಾರ್ಯ ನಡೆಯಬೇಕು ಎಂದರು.

ಬಸವ ಆಶ್ರಮ, ಗದಗದ ನೀಲಮ್ಮ ತಾಯಿ ಆಸುಂಡಿ ಮಾತನಾಡಿ, ಬಸವ ದಳದ ಸದ್ಭಕ್ತರಿಂದ ನಿರ್ಮಾಣಗೊಂಡಿರುವ ಬಸವ ಭವನದ ಕುರಿತು ಸಂತಸ ವ್ಯಕ್ತಪಡಿಸಿದರು.

ಅರಿವು, ಆಚರಣೆ ಮತ್ತು ಅನುಭಾವದ ಮಹತ್ವವನ್ನು ವಿವರಿಸಿದ ಅವರು, ಈ ಭವನವು ಅದಕ್ಕೆ ಸಾಕ್ಷಿಯಾಗಿದೆ ಎಂದರು. ಆರ್ಥಿಕ ಸ್ವಾವಲಂಬನೆ, ಅಸಮಾನತೆ ನಿವಾರಣೆ ಹಾಗೂ ಸ್ತ್ರೀಯರ ಉನ್ನತಿಗಾಗಿ ಶರಣರು ಕೈಗೊಂಡ ಕಾರ್ಯಗಳನ್ನು ಸ್ಮರಿಸಿದರು.

ಬಸವಾದಿ ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರ ಚಿಂತನೆಗಳು ಸಮಾಜದಲ್ಲಿ ಸಹೋದರತ್ವ ಮತ್ತು ಸಮಾನತೆಯ ಭಾವನೆ ಬೆಳೆಸುವಂತಿವೆ ಎಂದರು. ಗದಗಿನ ಶಿವಾನಂದ ಮಠದ ಬಸವ ತತ್ವದ ಪರಂಪರೆಯನ್ನು ಸ್ಮರಿಸಿ, ಬಸವಣ್ಣನ ನೆನಪು ಸದಾ ರಕ್ತಗತವಾಗಿ ಉಳಿಯಬೇಕು ಎಂದು ಆಶಿಸಿದರು. ಬಸವ ಸಮುದಾಯ ಭವನ ನಿರ್ಮಾಣಕ್ಕೆ ದಾಸೋಹಿಗಳ ಕೊಡುಗೆ ಶ್ಲಾಘನೀಯ ಎಂದರು.

ಬಸವದಳ ಅಧ್ಯಕ್ಷ ವಿ.ಕೆ. ಕರೇಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಶರಣರು, ದಾಸೋಹಿಗಳು, ಕಾರ್ಮಿಕರು, ಇಂಜಿನಿಯರ್‌ಗಳು ಹಾಗೂ ವಿವಿಧ ಹಂತಗಳಲ್ಲಿ ಸಹಕರಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳಲ್ಲಿ ಎಸ್. ಎ. ಮುಗದ ಅವರು, 12ನೇ ಶತಮಾನದಿಂದ ನಡೆದು ಬಂದ ಶರಣ ಪರಂಪರೆ, ಬಸವದಳದ ಸ್ಥಾಪನೆ, ಅದರ ಕಾರ್ಯಚಟುವಟಿಕೆಗಳು ಹಾಗೂ ಶರಣ ಸಂಸ್ಕೃತಿಯ ಪ್ರಸಾರದ ಕುರಿತು ವಿವರಿಸಿದರು. ಲಿಂಗಾನಂದ ಸ್ವಾಮೀಜಿಗಳಿಂದ ಸ್ಥಾಪಿತವಾದ ಬಸವ ದಳವು ಇಂದಿನವರೆಗೂ ಶರಣರ ಚಿಂತನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದರು.

ಬಸವ ಸಮುದಾಯ ಭವನ ನಿರ್ಮಾಣಕ್ಕೆ ಎಚ್.ಕೆ. ಪಾಟೀಲ ಹಾಗೂ ಎಸ್.ವಿ. ಸಂಕನೂರ ಅವರ ಮುತುವರ್ಜಿಯಿಂದ ದೊರೆತ ಅನುದಾನ ಸೇರಿದಂತೆ ವಿವಿಧ ಹಂತಗಳಲ್ಲಿ ದೊರೆತ ಸಹಕಾರವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ರಾಜಕಾರಣಿ ಉದಾಸಿ ಅವರಿಂದ ₹24 ಲಕ್ಷ ಅನುದಾನ ಮಂಜೂರಾದ ವಿಷಯವನ್ನೂ ಸ್ಮರಿಸಿದರು. ದಾಸೋಹ ನೀಡಿದ ಬಸವ ದಳದ ಸದಸ್ಯರು ಹಾಗೂ ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ನಗರಸಭೆ ಸದಸ್ಯ ಹಾಗೂ ದಾಸೋಹಿ ಚಂದ್ರಣ್ಣ ತಡಸದ ಮಾತನಾಡಿ, ಈ ಭವನ ತಮ್ಮದೇ ಎಂಬ ಆತ್ಮೀಯ ಭಾವನೆ ಮೂಡುತ್ತಿದೆ ಎಂದರು. ಕಟ್ಟಡ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸಿದ ಬಸವ ದಳದ ಸದಸ್ಯರನ್ನು ಅಭಿನಂದಿಸಿದರು. 2018ರ ಅವಧಿಯಲ್ಲಿ ನಗರಸಭೆಯಿಂದ ಜಾಗ ಪಡೆಯಲು ಬಸವ ದಳದವರು ಕೈಗೊಂಡ ಪ್ರಯತ್ನವನ್ನು ಶ್ಲಾಘಿಸಿದರು.

ಬಸವ ಕೇಂದ್ರ, ಹುಬ್ಬಳ್ಳಿ ಅಧ್ಯಕ್ಷ ಜಿ.ಬಿ. ಹಳ್ಯಾಳ ಅವರು ಬಸವ ದಳದ ಚಟುವಟಿಕೆಗಳ ಐತಿಹಾಸಿಕ ಹಿನ್ನೆಲೆಯನ್ನು ಸ್ಮರಿಸಿ, ಗದಗದಲ್ಲಿ ಶರಣರ ಕಾರ್ಯಕ್ರಮಗಳಿಗೆ ದೊರೆತ ಪ್ರೋತ್ಸಾಹವನ್ನು ವಿವರಿಸಿದರು. ಹುಬ್ಬಳ್ಳಿಯಲ್ಲಿಯೂ ಇದೇ ರೀತಿಯ ಬಸವ ಸಮುದಾಯ ಭವನ ನಿರ್ಮಿಸುವ ಯೋಜನೆಯ ಕುರಿತು ತಿಳಿಸಿದರು.

ಕಾರ್ಯಕ್ರಮದಲ್ಲಿ 9 ವರ್ಷದ ವಿದ್ಯಾರ್ಥಿನಿ ಸಂಜನಾ ಬಸವರಾಜ್ ಗಾಜಿ ಬಸವಣ್ಣನವರ ಜೀವನ ಚರಿತ್ರೆ ಕುರಿತು ಮಾತನಾಡಿ, ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಶರಣರ ಚಿಂತನೆಗಳನ್ನು ಹಂಚಿಕೊಂಡರು.

ಸರಸ್ವತಿ ಹೂಗಾರ ಅವರ ಪುತ್ರ ಮೂರು ವರ್ಷದ ಪ್ರಥಮ ಹೂಗಾರ ಬಸವಣ್ಣನವರ ವೇಷಧಾರಿಯಾಗಿ ಆಗಮಿಸಿ ವಚನ ಹೇಳುವ ಮೂಲಕ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾದರು.

ಮಕ್ಕಳನ್ನು ಶರಣ ಸಂಸ್ಕೃತಿಯ ಪಥದಲ್ಲಿ ಬೆಳೆಸುವಂತೆ ಕಾರ್ಯಕ್ರಮದಲ್ಲಿ ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ಎಸ್.ಎಸ್. ಹರ್ಲಾಪುರ ದಂಪತಿ ಹಾಗೂ ಕಲಬುರಗಿಯ ಆಕಾಶವಾಣಿ ಸಂಗೀತ ಗಾಯಕರಾದ ಕುಮಾರ್ ಕಣವಿ ಮತ್ತು ಪಂಚಾಕ್ಷರಿ ಕಣವಿ ಅವರನ್ನು ಗೌರವಿಸಲಾಯಿತು.

ಭವನ ನಿರ್ಮಾಣಕ್ಕೆ ಧನ ದಾಸೋಹ ಮಾಡಿದ ಶರಣ ದಂಪತಿಗಳು, ಮಾರ್ಗದರ್ಶಕರು, ಇಂಜಿನಿಯರ್‌ಗಳು ಹಾಗೂ ಕಟ್ಟಡ ನಿರ್ಮಾಣದಲ್ಲಿ ಶ್ರಮಿಸಿದ ಕಾರ್ಮಿಕರನ್ನು ಪೂಜ್ಯರಿಂದ ಸನ್ಮಾನಿಸಲಾಯಿತು. ಇತರ ದಾಸೋಹಿಗಳನ್ನೂ ಗೌರವಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಆಹ್ವಾನಿತ ದಂಪತಿಗಳು ಹಾಗೂ ಶಿವಾನಂದ ನಗರದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಗೌರಕ್ಕ ಬಡಿಗಣ್ಣವರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಶರಣು ಸಮರ್ಪಿಸಿದರು.

ಪೂಜ್ಯ ಡಾ. ಸಿದ್ದರಾಮ ಮಹಾಸ್ವಾಮಿಗಳು, ಗಣ್ಯರು ಬಸವಣ್ಣನವರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಬಸವ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಾನತೆ, ತಾರತಮ್ಯ ನಿವಾರಣೆ ಮತ್ತು ಸಂವಿಧಾನದ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಲಾಯಿತು.

ಷಣ್ಮುಖ ಶಿವಯೋಗಿಗಳ ರಚಿತ ವಚನದ ಗಾಯನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪ್ರಕಾಶ ಅಸುಂಡಿ ಅವರು ಕಾರ್ಯಕ್ರಮ ನಿರೂಪಿಸಿ ಆಹ್ವಾನಿತರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಬೇಲೂರು ಗುರುಬಸವೇಶ್ವರ ಮಠದ ಡಾ. ಪ್ರಭುಮಹಾಂತ ಸ್ವಾಮೀಜಿ, ಬಸವರಾಜಪ್ಪ ವೆಂಕಟಾಪುರ ಶರಣರು, ಚಂದ್ರಶೇಖರ ತಡಸದ, ವಿದ್ಯಾವತಿ ಗಡಗಿ, ಬಿ.ಬಿ. ಅಸೂಟಿ, ಕೆ.ಎಸ್. ಚಟ್ಟಿ, ಉಮೇಶ ಪುರದ, ಶೇಖಣ್ಣ ಕವಳಿಕಾಯಿ, ಎಸ್. ಎ. ಮುಗದ, ಬಸವರಾಜ ಹೆರಕಲ್, ಎಂ.ಸಿ. ಐಲಿ, ಎಸ್.ಎಂ. ಅಂಗಡಿ ಸೇರಿದಂತೆ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು ಸಂಘಟನೆಗಳ ಮುಖಂಡರುಗಳು, ಸದಸ್ಯರು ಉಪಸ್ಥಿತರಿದ್ದರು.

ಒಟ್ಟಾರೆ ಬಸವತತ್ವ, ಸಮಾನತೆ, ಸಾಮಾಜಿಕ ಜಾಗೃತಿ, ಕಾಯಕ-ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಜನಸಾಮಾನ್ಯರಲ್ಲಿ ಬೆಳೆಸುವ ನಿಟ್ಟಿನಲ್ಲಿ ನೂತನ ಬಸವ ಸಮುದಾಯ ಭವನವು ಮಹತ್ವದ ವೇದಿಕೆಯಾಗಲಿ ಎಂಬ ಆಶಯ ಕಾರ್ಯಕ್ರಮದಲ್ಲಿ ಎಲ್ಲರಿಂದ ವ್ಯಕ್ತವಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ. ಬಸವ ತತ್ವ ಜನಮಾನಸಕ್ಕೆ ಮುಟ್ಟಲಿ. ಬಸವ ಸಂಘಟನೆ ಆಗಲಿ. ಜೈ ಬಸವ

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.