ತುಳಿಯುವ ಕೆಲಸ ನಡೆಯುತ್ತಿದೆ: ಎಂ ಬಿ ಪಾಟೀಲ್/ಇತಿಹಾಸ ಅಳಿಸುವ ಪ್ರಯತ್ನ ನಡೆಯುತ್ತಿದೆ: ಜಾರಕಿಹೊಳಿ
ಬಸವ ಕಲ್ಯಾಣ
ಲಿಂಗಾಯತ ಧರ್ಮ ಭಾರಿ ವಿರೋಧ ಎದುರಿಸುತ್ತಿದೆ ಎಂದು ರಾಜ್ಯದ ಇಬ್ಬರು ಪ್ರಭಾವಿ ಸಚಿವರು ಸಮುದಾಯವನ್ನು ಎಚ್ಚರಿಸಿದ್ದಾರೆ.
ಲಿಂಗಾಯತ ಧರ್ಮವನ್ನು ತುಳಿಯುವ ಕೆಲಸ ನಡೆಯುತ್ತಿದೆ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದರೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಾಣದ ಕೈಗಳು ಲಿಂಗಾಯತ ಧರ್ಮಕ್ಕೆ ಅಡ್ಡಿಯಾಗುತ್ತಿವೆ, ಎಂದಿದ್ದಾರೆ.

ಇಬ್ಬರೂ ಸಚಿವರೂ ನಗರದ ಬಸವಧರ್ಮ ಪೀಠದ ಬಸವ ಮಹಾಮನೆ ಆವರಣದಲ್ಲಿ 25ನೇ ವರ್ಷದ ಕಲ್ಯಾಣದ ಪರ್ವ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಮಾಜ ಚಿಂತನಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಶೂದ್ರರಂತೆ ನೋಡಲಾಗುತ್ತಿದೆ
ಲಿಂಗಾಯತರನ್ನು ಈಗಲೂ ಶೂದ್ರರಂತೆ ನೋಡಲಾಗುತ್ತಿದೆ. ಒಳಗೊಳಗೇ ಲಿಂಗಾಯತ ಧರ್ಮವನ್ನು ತುಳಿಯುವ ಕೆಲಸ ನಡೆಯುತ್ತಿದೆ, ಎಂದು ಎಂ ಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಬಸವಣ್ಣನವರು ಅನುಭವ ಮಂಟಪದ ಮುಖಾಂತರ 770 ಅಮರಗಣಂಗಳು ಸೇರಿ ಲಿಂಗಾಯತ ಧರ್ಮ ಸ್ಥಾಪಿಸಿದರು. ಇದರಿಂದಲೇ 1871, 1881, ಬ್ರಿಟೀಷರ ಕಾಲದ ಜನಗಣತಿಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ನಮೂದಾಗಿದೆ.

12ನೇ ಶತಮಾನದಲ್ಲೇ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳು ಮತ್ತು ಶೋಷಣೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಆದರೂ ಇದುವರೆಗೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಿಲ್ಲ.
1964ರಲ್ಲಿ ಸಿಖ್ ಧರ್ಮ ಮತ್ತು 2014ರಲ್ಲಿ ಜೈನ ಧರ್ಮಕ್ಕೆ ಮಾನ್ಯತೆ ಕೊಟ್ಟಂತೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕೇ ಸಿಗುತ್ತದೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರೆತರೆ ಮುಂದಿನ ಪೀಳಿಗೆಗೆ ಒಳಿತಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ರಜತ ಮಹೋತ್ಸವ
ಲಿಂಗೈಕ್ಯ ಡಾ. ಮಾತೆ ಮಹಾದೇವಿಯವರ ನೇತೃತ್ವದಲ್ಲಿ 2001ರಲ್ಲಿ ಆರಂಭವಾದ ಈ ಕಲ್ಯಾಣ ಪರ್ವವು ಇಂದು 25ನೇ ವರ್ಷಕ್ಕೆ ಕಾಲಿಟ್ಟು ರಜತ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ.

ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳನ್ನು ಸಾರುವ ಈ ಕಲ್ಯಾಣ ಪರ್ವವು ಲಿಂಗೈಕ್ಯ ಮಾತೆಯವರ ಕನಸಾಗಿತ್ತು, ಆ ಕನಸು ಇಂದು ನನಸಾಗಿದೆ ಎಂದರು.
ಇತಿಹಾಸ ಅಳಿಸುವ ಪ್ರಯತ್ನ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರಕಿಸಲು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಕಾಣದ ಕೈಗಳು ಇದಕ್ಕೆ ಅಡ್ಡಿಯಾಗುತ್ತಿವೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಬಸವಣ್ಣನವರನ್ನು ಆದರ್ಶವಾಗಿಟ್ಟುಕೊಂಡು ಹೋರಾಟ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಬಸವಣ್ಣನವರ ಇತಿಹಾಸವನ್ನು ಅಳಿಸುವ ಪ್ರಯತ್ನಗಳು ಈಗ ನಡೆಯುತ್ತಿವೆ. ಬಸವಣ್ಣನವರ ಈ ಕ್ರಾಂತಿ ಇಡೀ ವಿಶ್ವಕ್ಕೆ ಯಾಕೆ ತಲುಪಿಲ್ಲ ಎನ್ನುವುದು ದೊಡ್ಡ ಪ್ರಶ್ನೆ. ಬಸವಣ್ಣನವರ ವಿಚಾರ ಇಡೀ ವಿಶ್ವಕ್ಕೆ ಹೋಗಬೇಕಿತ್ತು. ಯಾವ ಶಕ್ತಿ ನಮ್ಮನ್ನು ನಿಯಂತ್ರಣ ಮಾಡುತ್ತಿದೆ? ಬಸವಣ್ಣನವರು ಕೇವಲ ಲಿಂಗಾಯತರಿಗೆ ಮಾತ್ರವಲ್ಲ ಶೋಷಿತ ಸಮುದಾಯದವರಿಗೂ ಆದರ್ಶವಾಗಿದ್ದಾರೆ ಎಂದು ತಿಳಿಸಿದರು.
ಬಸವಕಲ್ಯಾಣದಿಂದ ಮತ್ತೇ ಕ್ರಾಂತಿ
ಬಸವಣ್ಣನವರ ವಿಚಾರ, ಹೋರಾಟ ಹಾಗೂ ಸಮಾನತೆಯನ್ನು ಇಡೀ ನಾಡಿಗೆ ಪರಿಚಯಿಸುವ ಕೆಲಸ ಕಲ್ಯಾಣ ಪರ್ವ ಮಾಡುತ್ತಿದೆ, ಹೀಗೆಯೇ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳು ಮನೆ ಮನೆಗೆ ತಲುಪಬೇಕು, 12ನೇ ಶತಮಾನದ ಕ್ರಾಂತಿ ಮತ್ತೆ ಬಸವಕಲ್ಯಾಣದಿಂದ ಆರಂಭವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದಲ್ಲಿ ಸುಮಾರು 8 ರಾಜ್ಯಗಳಲ್ಲಿ 1200 ಬಸವದಳ ಶಾಖೆಗಳನ್ನು ಸ್ಥಾಪಿಸಿ, ರಾಷ್ಟ್ರೀಯ ಬಸವ ದಳವು ಬಸವ ಧರ್ಮದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಮಾನವ ಬಂಧುತ್ವ ವೇದಿಕೆಯ ಮೂಲಕ ಬುದ್ಧ ಮತ್ತು ಬಸವಣ್ಣನವರ ತತ್ವಾದರ್ಶಗಳನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಕೇವಲ ಬಸವಣ್ಣನವರ ಹೆಸರು ತೆಗೆದುಕೊಂಡರೆ ಸಾಲದು, ಅವರ ತತ್ವ, ಆದರ್ಶಗಳನ್ನು ನೆನಪಿಸಿಕೊಳ್ಳಬೇಕು. 12ನೇ ಶತಮಾನದಲ್ಲಿ ಕಲ್ಯಾಣದ ಕ್ರಾಂತಿಯಂತೇ ಈಗ ಮತ್ತೆ ಬಸವಕಲ್ಯಾಣದಿಂದ ಅಂತಹ ಕ್ರಾಂತಿ ಪ್ರಾರಂಭವಾಗಬೇಕು.
ಬಸವ ಪ್ರತಿಮೆಗೆ 3 ಕೋಟಿ
ಕಾರ್ಯಕ್ರಮದಲ್ಲಿ ಡಾ. ಗಂಗಾಮಾತೆ ಅವರು ಮಾತನಾಡಿ, ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸ್ಥಾಪಿತವಾಗುತ್ತಿರುವ 112 ಅಡಿ ಬಸವ ಪ್ರತಿಮೆ ಕಾರ್ಯಕ್ಕೆ ಬೇಕಾಗಿರುವ 3ಕೋಟಿ ರು.ಗಳ ಸಂಗ್ರಹ ಮಾಡಿಕೊಡುವದಾಗಿ ಸಚಿವರು ಸಂಕಲ್ಪ ಮಾಡಿದ್ದಾರೆ ಎಂದರು.

ಡಾ. ಶಿವಾನಂದ ಮಹಾಸ್ವಾಮಿಗಳು, ವಿಧಾನಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್, ಭೀಮರಾವ್ ಪಾಟೀಲ್, ಮಾಜಿ ಸಚಿವ ಆಂಜನೇಯ ಸೇರಿದಂತೆ ಹಾಲಿ ಹಾಗೂ ಮಾಜಿ ಶಾಸಕರು, ಸ್ಥಳೀಯ ಮುಖಂಡರು, ಸಹಸ್ರಾರು ಬಸವ ಭಕ್ತರು ಉಪಸ್ಥಿತರಿದ್ದರು.

ಬಹಳ ಒಳ್ಳೆಯ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಕಲ್ಯಾಣ ಪೂರ್ವ ಅವಕಾಶ ಕಲ್ಪಿಸಲಾಗಿದೆ ಜೈ ಬಸವ ಶರಣು ಶರಣಾರ್ಥಿ