ಮಹಾಸಭಾದ ವೆಬ್ಸೈಟ್ ಗೆ ಚಾಲನೆ
ಬೆಂಗಳೂರು :
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯರ ಸಂಖ್ಯೆಯನ್ನು 10 ಲಕ್ಷಕ್ಕೆ ಹೆಚ್ಚಿಸುವ ಸಂಕಲ್ಪ ಮಾಡಲಾಗಿದೆ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದ್ದಾರೆ.
ಶುಕ್ರವಾರ ಮಹಾಸಭಾದ ಕಚೇರಿಯಲ್ಲಿ ಅಧಿಕೃತ ಜಾಲತಾಣ www.aivlm, orgಗೆ ಚಾಲನೆ ನೀಡಿ ಮಾತನಾಡಿದ ಅವರು, 1904ರಲ್ಲಿ ಶ್ರೀ ಹಾನಗಲ್ ಕುಮಾರಸ್ವಾಮಿ ಸ್ಥಾಪಿಸಿದ ಮಹಾಸಭಾದಲ್ಲಿ ಕೇವಲ ಸಾವಿರದ ಸಂಖ್ಯೆಯಲ್ಲಿ ಸದಸ್ಯರಿದ್ದರು, ತಮ್ಮ ತಂದೆ ಡಾ. ಭೀಮಣ್ಣ ಖಂಡ್ರೆ ಸದಸ್ಯರ ಸಂಖ್ಯೆಯನ್ನು ಲಕ್ಷ ದಾಟಿಸಿದರು ಎಂದು ಸ್ಮರಿಸಿದರು.
ಮಹಾಸಭಾ ಸದಸ್ಯತ್ವವನ್ನು 10 ಲಕ್ಷದಷ್ಟು ಮಾಡಲು ನಿರ್ಣಯಿಸಲಾಗಿದ್ದು, ಇಂದಿನ ಯುಗಮಾನದ ಅಗತ್ಯಕ್ಕೆ ಅನುಗುಣವಾಗಿ ಅಂತರ್ಜಾಲ ತಾಣ ಅಭಿವೃದ್ಧಿಪಡಿಸಲಾಗಿದೆ. ಸಮುದಾಯದ ಯುವಜನರು ಹೆಚ್ಚು ಹೆಚ್ಚಾಗಿ ಸದಸ್ಯರಾಗುವಂತೆ ಪೋತ್ಸಾಹಿಸಲು, ಆನ್‌ಲೈನ್ ಮೂಲಕವೂ ಸದಸ್ಯತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ವಚನಗಳ ಸಂಗ್ರಹವನ್ನು ಯಜ್ಞದಂತೆ ಮಾಡಿದ ಫ.ಗು. ಹಳಕಟ್ಟಿಯವರು, ನಡೆದಾಡುವ ದೇವರು ಸಿದ್ಧಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ ಅವರಂತಹ ಮಹಾಮಹಿಮರು ಅಧ್ಯಕ್ಷರಾಗಿ ಮುನ್ನಡೆಸಿದ ಮಹಾಸಭಾದ ಸದಸ್ಯತ್ವ ಸಂಖ್ಯೆಯನ್ನು 10ಲಕ್ಷ ಮಾಡಲು ಪ್ರತಿಯೊಬ್ಬ ಸದಸ್ಯರೂ, ಸಮಾಜದ ಮುಖಂಡರು ಸಂಕಲ್ಪ ಮಾಡಬೇಕು ಎಂದು ಅವರು ಕರೆ ನೀಡಿದರು.
ಶ್ರದ್ಧಾಂಜಲಿ :
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರಿಗೆ ಮಹಾಸಭಾ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಗಣೇಶ ಹುಕ್ಕೇರಿ, ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ, ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ, ಯುವ ಘಟಕದ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ, ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಕೃಪೆ: ವಾರ್ತಾ ಭಾರತಿ
