‘ಸಿದ್ದರಾಮ ಸ್ವಾಮೀಜಿ ಸಮಾಜಮುಖಿ, ವೈಚಾರಿಕ ಚಿಂತನೆ ಸಮಾಜಕ್ಕೆ ದಾರಿದೀಪ’

ಬಸವ ಮೀಡಿಯಾ
ಬಸವ ಮೀಡಿಯಾ

ವಿಚಾರ ಸಂಕಿರಣ: ಡಾ. ಸಿದ್ದರಾಮ ಮಹಾಸ್ವಾಮಿಗಳವರ ಸಾಹಿತ್ಯಾವಲೋಕನ

ಗದಗ :

ಕೆ.ಎಲ್.ಇ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಕಾಲೇಜು ಆಂತರಿಕ ಗುಣಮಟ್ಟ ಭರವಸೆ ಕೋಶ, ಕನ್ನಡ ವಿಭಾಗ ಹಾಗೂ ಡಾ. ಎಂ.ಎಂ. ಕಲಬುರ್ಗಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ‘ಶ್ರೀ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳವರ ಸಾಹಿತ್ಯಾವಲೋಕನ’ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ‘ಬೆಳಕಾದ ನುಡಿ ಬದುಕಾದ ಅರಿವು’ ಕೃತಿ ಬಿಡುಗಡೆ ಸಮಾರಂಭವು ಕಾಲೇಜಿನ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಧಾರವಾಡದ ಖ್ಯಾತ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿಯವರು, “ಪೂಜ್ಯ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಆಧುನಿಕ ಶರಣ ಪರಂಪರೆಯ ಪ್ರಗತಿಪರ ಚಿಂತಕರಾಗಿದ್ದು, ಬಸವಾದಿ ಶರಣರ ಕಾಯಕ-ದಾಸೋಹ ಮತ್ತು ಸಮಾನತೆಯ ಸಿದ್ಧಾಂತಗಳನ್ನು ಕೇವಲ ಮಠದ ಚೌಕಟ್ಟಿಗೆ ಸೀಮಿತಗೊಳಿಸದೆ, ತಮ್ಮ ಸಾಹಿತ್ಯ, ಚಿಂತನೆ ಹಾಗೂ ಜನಪರ ಹೋರಾಟಗಳ ಮೂಲಕ ಸಮಾಜದಲ್ಲಿ ಸದಾ ಜೀವಂತವಾಗಿರಿಸಿದ ದಾರ್ಶನಿಕರು. ಶೋಷಿತರ, ರೈತರ ಮತ್ತು ನಾಡು-ನುಡಿಯ ಸಂಕಷ್ಟಗಳಿಗೆ ಸದಾ ಮಿಡಿದ ಅವರ ಬದುಕು ನಮಗೆ ಆದರ್ಶ,” ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಅವರು ‘ಬೆಳಕಾದ ನುಡಿ ಬದುಕಾದ ಅರಿವು’ ಕೃತಿಯನ್ನು ಲೋಕಾರ್ಪಣೆಗೊಳಿಸಿ, ಶ್ರೀಗಳವರ ವಚನ ಚಿಂತನೆಗಳು ಹಾಗೂ ಸಾಹಿತ್ಯಿಕ ಕೊಡುಗೆಗಳು ಸಮಾಜವನ್ನು ಜಾಗೃತಗೊಳಿಸುವ ಶಕ್ತಿಯನ್ನು ಹೊಂದಿವೆ ಎಂದು ನುಡಿದರು.

ಸಾನಿಧ್ಯ ವಹಿಸಿದ್ದ ಶಿರೋಳ-ತೋಂಟದಾರ್ಯ ಶಾಖಾಮಠ ಹಾಗೂ ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳವರು ಆಶೀರ್ವಚನ ನೀಡಿ, “ಜ್ಞಾನ ಮತ್ತು ಅನ್ನದಾಸೋಹದ ಜತೆಗೆ ಸಮಾಜಮುಖಿ ಕಳಕಳಿಯನ್ನು ಬೆಳೆಸಿದ ಸಿದ್ದರಾಮ ಶ್ರೀಗಳ ತತ್ವಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು,” ಎಂದು ಕರೆನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಧಾರವಾಡದ ಶಶಿ ಸಾಲಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ ವೀ. ಬಳಿಗೇರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಎಂ.ಎಂ. ಕಲಬುರ್ಗಿ ಸಂಶೋಧನ ಕೇಂದ್ರದ ಸಂಚಾಲಕರಾದ ಡಾ. ಅರ್ಜುನ ಗೊಳಸಂಗಿ ಅವರು ಆಶಯ ನುಡಿಗಳನ್ನು ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಜೆ.ಟಿ. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ಎಸ್.ಪಿ. ಸಂಶಿಮಠ ಅವರು ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಶ ನಾಯರಿ ಅವರು ಸರ್ವರನ್ನು ಸ್ವಾಗತಿಸಿ ಮಾತನಾಡಿ “ಪೂಜ್ಯ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳವರ ಸಾಹಿತ್ಯ, ಸಮಾಜಮುಖಿ ಚಿಂತನೆ ಹಾಗೂ ವೈಚಾರಿಕ ನಿಲುವುಗಳು ಸಮಾಜಕ್ಕೆ ಸದಾ ದಾರಿದೀಪ. ಇಂತಹ ಮೌಲಿಕ ಕೃತಿ ಬಿಡುಗಡೆ ಹಾಗೂ ವಿಚಾರ ಸಂಕಿರಣ ಆಯೋಜಿಸಿರುವುದು ಮಹಾವಿದ್ಯಾಲಯದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು,” ಎಂದು ಪ್ರತಿಪಾದಿಸಿದರು.

ಗೋಷ್ಠಿಗಳ ವಿವರ :

ವಿಚಾರ ಸಂಕಿರಣದ ಅಂಗವಾಗಿ ಎರಡು ಮಹತ್ವದ ಗೋಷ್ಠಿಗಳು ಯಶಸ್ವಿಯಾಗಿ ನೆರವೇರಿದವು. ಪ್ರಥಮ ಗೋಷ್ಠಿಯಲ್ಲಿ ಡಾ. ರಮೇಶ ಮ. ಕಲ್ಲನಗೌಡರ ಅವರು ‘ವಚನಾನುಭವ ಚಿಂತನ’ ಹಾಗೂ ಪ್ರಕಾಶ ಗಿರಿಮಲ್ಲನವರ ಅವರು ‘ದಾರ್ಶನಿಕ ಚಿಂತನ’ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು.

ದ್ವಿತೀಯ ಗೋಷ್ಠಿಯಲ್ಲಿ ಪ್ರೊ. ಶಕುಂತಲಾ ಸಿಂಧೂರ ಅವರು ‘ಚಿಂತನ ಸಾಹಿತ್ಯ’ ಹಾಗೂ ಪ್ರೊ. ವಿಶ್ವನಾಥ ಜಿ. ಅವರು ‘ವಿನೋಬಾ ಕೃತಿ ಸಂಚಯ’ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಪ್ರೊ. ಎಸ್. ಎಸ್. ಹರ್ಲಾಪುರ ಅವರು ಸಮಾರೋಪ ಭಾಷಣ ಮಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ತೇಜಸ್ವಿನಿ ಮಾಗಡಿ ಪ್ರಾರ್ಥಿಸಿದರು. ಕನ್ನಡ ವಿಭಾಗದ ಅಧ್ಯಾಪಕಿ ಸಂಗೀತಾ ವಣಗೇರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *