ಕನ್ನಡ ಉಳಿಯಲು ಶರಣರ ಕೊಡುಗೆ ಅಪಾರ: ಸಂಸದ ಕಾರಜೋಳ

ಗಣೇಶ ಅಮೀನಗಡ
ಗಣೇಶ ಅಮೀನಗಡ

ಸಾಣೇಹಳ್ಳಿ ನಾಟಕೋತ್ಸವ ಉದ್ಘಾಟನೆ

ಸಾಣೇಹಳ್ಳಿ :

ಈ ನಾಡಲ್ಲಿ ಕನ್ನಡ ಉಳಿಯಲು ಶರಣರ ಕೊಡುಗೆ ಅಪಾರ ಎಂದು ಚಿತ್ರದುರ್ಗದ ಸಂಸದರಾದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.

ಇಲ್ಲಿನ ಶಿವಕುಮಾರ ಬಯಲು ರಂಗಮಂದಿರದಲ್ಲಿ ನಾಟಕೋತ್ಸವವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಮತ್ತು ಅವರ ಸಮಕಾಲೀನರು ಅನಕ್ಷರಸ್ಥರಿಗೆ ಅಕ್ಷರ ಕಲಿಸಿ, ಕಾಯಕದ ಜೊತೆಗೆ ವಚನಗಳನ್ನು ರಚಿಸಲು ಪ್ರೇರಣೆ ನೀಡಿದರು. ಅನುಭವ ಮಂಟಪದಲ್ಲಿ ಅಲ್ಲಮಪ್ರಭು ‘ನೀ ದೇವರೊಳಗೊ ದೇವರು ನಿನ್ನೊಳಗೊ’ ಎನ್ನುವ ವಚನದಲ್ಲಿ ಮನುಷ್ಯ ಮತ್ತು ದೇವರ ಅವಿನಾಭಾವ ಸಂಬಂಧ ತಿಳಿಸುತ್ತಿದೆ. ಬಹಳ ಅರ್ಥಗರ್ಭಿತ ವಚನವಿದು ಎಂದು ಹೇಳಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಹಾಕಿಕೊಂಡ ಕಾರ್ಯಕ್ರಮಗಳನ್ನು, ಅದರ ತೇರನ್ನು ಸಿರಿಗೆರೆ ಮತ್ತು ಸಾಣೇಹಳ್ಳಿ ಮಠವೂ ಸೇರಿದಂತೆ ನಾಡಿನ ಅನೇಕ ಮಠಗಳು ಎಳೆಯುತ್ತಿವೆ. ಜಾತಿ, ಧರ್ಮವೆನ್ನದೆ ಶೂದ್ರರಿಗೆ, ಅಸ್ಪೃಶ್ಯರಿಗೆ ತ್ರಿವಿಧ ದಾಸೋಹ ನೀಡುವ ಸಿರಿಗೆರೆ ಮತ್ತು ಸಾಣೇಹಳ್ಳಿ ಮಠಗಳು ಮನುಷ್ಯಕುಲಕ್ಕೆ ಬಹಳ ದೊಡ್ಡ ಕೊಡುಗೆ ನೀಡುತ್ತಿವೆ.

12ನೇ ಶತಮಾನದ ಬಸವಾದಿ ಶರಣರ ಕೊಡುಗೆಯನ್ನು 21ನೇ ಶತಮಾನದಲ್ಲೂ ಮುಂದುವರಿಸಿದ್ದು ಸಾಣೇಹಳ್ಳಿ ಮಠ ಎಂದು ಶ್ಲಾಘಿಸಿದರು.

ಶಿಕ್ಷಣ ಇಂದು ವ್ಯಾಪಾರೀಕರಣವಾಗಿದೆ. ಆದರೆ ಬಡ, ದೀನದಲಿತ, ಗ್ರಾಮೀಣ ಮಕ್ಕಳಿಗೆ ಶಿಕ್ಷಣವನ್ನು ಮಠಗಳು ನೀಡುತ್ತಿವೆ. ನನ್ನ ಜೀವನದಲ್ಲಿ ಇಲಕಲ್ಲ ಮಹಾಂತೇಶ್ವರ ಮಠ, ಗದುಗಿನ ತೋಂಟದಾರ್ಯ ಮಠ, ಚಿತ್ರದುರ್ಗದ ಮುರುಘಾ ಮಠ, ಸಿರಿಗೆರೆ ಮಠಗಳು ಪ್ರಮುಖವಾಗಿವೆ.

ಗದುಗಿನ ತೋಂಟದಾರ್ಯ ಮಠಕ್ಕಿಂತ ಸಿರಿಗೆರೆ ಹಾಗೂ ಸಾಣೇಹಳ್ಳಿ ಮಠಗಳು ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿವೆ ಎಂದು ಪ್ರಶಂಸಿಸಿದರು.

ಬಸವಣ್ಣನವರು ಯಾರನ್ನೂ ಕೀಳಾಗಿ ಕಾಣಬಾರದೆಂದು ವಚನದಲ್ಲಿ ಹೇಳುತ್ತಾರೆ. ಸಾಣೇಹಳ್ಳಿ ಶ್ರೀಗಳು ಬಡವರ ಮಕ್ಕಳಿಗೆ ಶಿಕ್ಷಣದ ಮೂಲಕ ಅನುಕೂಲ ಒದಗಿಸುತ್ತಿದ್ದಾರೆ. ಅವರೊಂದಿಗೆ ಸಮಾಜ ಇರಬೇಕು. ಮುಂದಿನ ದಿನಗಳಲ್ಲಿ ಬಸವಣ್ಣನವರು ಕಂಡ ವರ್ಗರಹಿತ ಸುಂದರ ಸಮಾಜ ನಿರ್ಮಿಸಲು ಅವರಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕೋರಿದರು.

ಸರ್ವಜ್ಞ ಕವಿ ಬಸವಣ್ಣನವರ ಆಡಳಿತ ಬರುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದ. ಸರ್ವಜ್ಞ ಕವಿಯ ಭವಿಷ್ಯ ಸುಳ್ಳಾಗದಿರಲಿ ಎಂದು ಆಶಿಸಿದರು.

ಸ್ವಾತಂತ್ರ್ಯನಂತರ ಈ ನಾಡು ಏಕೀಕರಣ ಆಗಬೇಕೆಂದು ನಮ್ಮ ಜಿಲ್ಲೆಯ ನಿಜಲಿಂಗಪ್ಪ ಶ್ರಮಿಸಿದರು. ಅವರು ಈ ನಾಡನ್ನು ಒಂದುಗೂಡಿಸಿ 1956ರ ನವೆಂಬರ್ ಒಂದರಂದು ಹರಿದು ಹಂಚಿಹೋಗಿದ್ದ ನಾಡನ್ನು ಒಂದಾಗಿಸಲು ಶ್ರಮಿಸಿದರು. ಇದರ ಪರಿಣಾಮ 1973ರ ನವೆಂಬರ್ 1ರಂದು ಕರ್ನಾಟಕ ರಾಜ್ಯವೆಂದಾಯಿತು. ಅಂದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಘೋಷಿಸಿದರು ಎಂದು ಸ್ಮರಿಸಿದರು.

ಈ ನಾಟಕೋತ್ಸವ ಉದ್ಘಾಟಿಸಲು ಕೇಂದ್ರ ಸಚಿವರಾದ ಗಜೇಂದ್ರಸಿಂಗ್ ಶೇಖಾವತ್ ಅವರು ಬೆಂಗಳೂರಿಗೆ ಬಂದಿದ್ದರು. ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ. ಅವರ ಪರವಾಗಿ ಕ್ಷಮೆ ಕೇಳುವೆ ಎಂದರು.

ಹಿರಿಯ ನಟ ಸುಂದರರಾಜ ಅವರು ಗುಡಿಸಲಿನ ಬಾಗಿಲನ್ನು ತೆರೆದಾಗ ಕಲಾವಿದರು ಹೊರಬಂದು ‘ದೇವರು ಭಯದಿಂದ ಹುಟ್ಟಿದರೆ ಅವನು ದೇವರಲ್ಲ. ಮನುಷ್ಯರಿಗೆ ಮನುಷ್ಯರು ಬೇಕು. ಅಂದು ನೀವೆಲ್ಲ ನನ್ನನ್ನ ನೋಡಿ ನಗುತ್ತಿದ್ದಿರಿ. ಅಂದೂ ರುದ್ರೇಶನೇ ಇಂದೂ ರುದ್ರೇಶನೇ. ಹಾಗಾದರೆ ಬದಲಾದುದೇನು?’ ಎಂದು ಕೂದಲಸ್ವಾಮಿ ನಾಟಕದ ಸಂಭಾಷಣೆಯನ್ನು ನಟ ಹೇಳಿದರು.

ಬರ್ಬರೀಕಾ ನಾಟಕದ ಕಲಾವಿದೆ ‘ಯಾರ ಕಣ್ಣು ಬಿತ್ತೊ ನಿನ್ನ ಹದವಾದ ಬದುಕಿಗೆ? ದೊಡ್ಡವರು ದೇವ್ರನ್ನ ಒಲಿಸಿಕೊಂಡವರು’ ಎಂದು ಅಳಲು ತೋಡಿಕೊಂಡಳು. ನಂತರ ನುಲಿಯ ಚಂದಯ್ಯ- ‘ಈ ಕುಡುಗೋಲು ಕಬ್ಬಿಣದ ಚೂರಲ್ಲ. ಈ ಹಸಿರುಹುಲ್ಲು ಹಸಿವನ್ನು ನೀಗಿಸುವ ಸಾಧನ’ ಎಂದರು.

ನಂತರ ಸುಂದರರಾಜ್ ಅವರು ಭಿತ್ತಿಪತ್ರವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ, ‘ರಂಗಭೂಮಿಯ ಮೆಕ್ಕಾ ಸಾಣೇಹಳ್ಳಿ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡಬೇಕು. ದೇವರನ್ನು ನಮ್ಮಲ್ಲಿಯೇ ಕಾಣಬೇಕು. ಮನೆಯ ಮುಂದಿನ ಕಸವನ್ನು ತೆಗೆಯುವ ಪೌರಕಾರ್ಮಿಕರನ್ನು ದೇವರನ್ನು ಕಾಣಬೇಕು ಎಂದು ಕಿವಿಮಾತು ಹೇಳಿದರು.

ಶಿವಸಂಚಾರದ ನಾಟಕಗಳನ್ನು ಉದ್ಘಾಟಿಸಲು ಖುಷಿಯಾಗುತ್ತಿದೆ. ಇದೆಲ್ಲದಕ್ಕೆ ಗೆಳೆಯ ಸಿಜಿಕೆ ಕಾರಣ ಎಂದ ಅವರು, ಇಂದಿನ ಸಿನಿಮಾಗಳಿಗೆ ಪ್ರೇಕ್ಷಕರು ಬರದ ಕಾರಣಕ್ಕೆ ಗುಣಮಟ್ಟ ಕೊರತೆ. ಆದರೆ, ಸಾಣೇಹಳ್ಳಿಯಲ್ಲಿ ಸಾವಿರಾರು ಪ್ರೇಕ್ಷಕರು ಸೇರಲು ಕಾರಣ ಪಂಡಿತಾರಾಧ್ಯ ಶ್ರಿಗಳು ಎಂದು ಮೆಚ್ಚುಗೆಯಾಡಿದರು.

ರಾಜ್ಯೋತ್ಸವ ಕೇವಲ ಆಚರಣೆಯಾಗಬೇಕಿಲ್ಲ. ಜಾಗತೀಕರಣದ ಪರಿಣಾಮ ಮಕ್ಕಳ ಕೈಗೆ ಮೊಬೈಲ್ ಫೋನ್ ಬಂದು ರೀಲ್ಸ್ ಕಾಣುತ್ತಿವೆ. ಬೇಡದ ರೀಲ್ಸ್‌ಗಳು ಬರುತ್ತಿವೆ. ವಿದೇಶದಲ್ಲಿ ಜಾಲವೇ ಇಲ್ಲ; ಮಕ್ಕಳ ಮನಸ್ಸನ್ನು ಕೆಡಿಸಲು ಪ್ರಯತ್ನಿಸಲಾಗುತ್ತಿದೆ. ಟಿವಿ ಚಾನಲ್ಲುಗಳ ಸುದ್ದಿಗಳನ್ನು ಕಿರುಚಿ, ತಿರುಚಿ ಹೇಳಲಾಗುತ್ತಿದೆ. ಇವೆಲ್ಲದರಿಂದ ತಪ್ಪಿಸಿಕೊಳ್ಳಲು ನಾಟಕೋತ್ಸವ ಹೆಚ್ಚಬೇಕು ಎಂದು ಹೇಳಿದರು.

ಬೆಂಗಳೂರಿನ ಪಂಚತಾರಾ ಹೋಟೆಲುಗಳು ಸೇರಿದಂತೆ ಅನೇಕ ಕಡೆ ಮಾದಕ ವಸ್ತುಗಳ ಮಾರಾಟ ಹೆಚ್ಚುತ್ತಿದೆ. ಇದು ಹೆಚ್ಚಾಗದಂತೆ ಮೊಬೈಲ್ ಫೋನುಗಳನ್ನು ಯುವಕರು ಬಳಸದಂತೆ ಸಾಣೇಹಳ್ಳಿ ಶ್ರೀಗಳು ನಿಲ್ಲಬೇಕು ಎಂದರು.

ವಿಶಿಷ್ಟವಾಗಿ ನಾಟಕೋತ್ಸವ ಉದ್ಘಾಟನೆ :

ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ರಂಗದ ಮೇಲೆ ಬಂದು ಮಳೆಯಿಲ್ಲ, ಬೆಳೆಯಿಲ್ಲ, ಬೆಳೆಯ ಸುಳಿಯಿಲ್ಲ ಎಂದು ಹಾಡುವ ಮೂಲಕ ಆರಂಭಿಸಿದರು. ಆಗ ರೈತನ ಹೆಂಡತಿ ‘ನನ್ನ ಗಂಡ ಸಾಲ ಮಾಡಿ ಬೆಳೆಗೆ ಹಾಕಿದ. ಆದರೆ ಬರಗಾಲ ಬಂತು’ ಎಂದು ಅಳಲು ತೋಡಿಕೊಂಡಾಗ ಆಕೆಯ ಗಂಡ ‘ಬರಗಾಲ ಬಂದು ಹೊಟ್ಟೆ ಹೊಡೆಯಿತು’ ಎಂದು ಕೊರಗುತ್ತಾನೆ.

ಬದಲಾಗು ಬದಲಾಗು ಮಾನವನಾಗಿ ಬದಲಾಗು ಇನ್ನಾದರೂ ಬದಲಾಗು ನಾಡಿನ ಒಕ್ಕಲಿಗನಿಗೆ ಜೀವಜಲ ಉಣಿಸು ಎಂದು ಹಾಡುವಾಗ ಸಂಸದರಾದ ಗೋವಿಂದ ಕಾರಜೋಳ ಅವರು ಗಿಡಗಳಿಗೆ ನೀರು ಉಣಿಸುವ ಮೂಲಕ 2026ನೇ ನಾಟಕೋತ್ಸವ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾದ ಶಾಸಕ ಸಮರ್ಥ ಮಲ್ಲಿಕಾರ್ಜುನ ಮಾತನಾಡಿ, ಸಾಹುಕಾರ್ ಮಗ ದಾವಣಗೆರೆಯಲ್ಲಿ ಓದಿದರೆ ಹಾಳಾಗುತ್ತಾನೆಂದು, ತಮಿಳುನಾಡಿನ ದಿಂಡಿಗಲ್ಲದಲ್ಲಿ ಓದಿದೆ. ಅಲ್ಲಿ ತಮಿಳು, ಇಂಗ್ಲಿಷ್, ಸ್ಪ್ಯಾನಿಷ್ ಹೀಗೆ ಐದು ಭಾಷೆಗಳನ್ನು ಕಲಿತೆ. ದಾವಣಗೆರೆಗೆ ಬಂದಾಗ ಕನ್ನಡ ಕಲಿಯುತ್ತಿದ್ದೆ ಎಂದರು.

ಮುಖ್ಯ ಅತಿಥಿಗಳಾದ ವಿಧಾನ ಪರಿಷತ್ ಸದಸ್ಯರಾದ ಕೆ‌.ಎಸ್. ನವೀಕುಮಾರ ಮಾತನಾಡಿ, ಬರಗಾಲದಲ್ಲಿ ರೈತರು ಸಮಸ್ಯೆ, ಸವಾಲು ಹಾಗೂ ಸಂಕಟಗಳನ್ನು ಎದರಿಸಲು ಈ ನಾಟಕೋತ್ಸವ ನೆರವಾಗುತ್ತದೆ ಎಂದರು.

ಸಾನಿಧ್ಯ ವಹಿಸಿದ್ದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿ, ಬಸವಾದಿ ಶಿವಶರಣರ ಕಳಬೇಡ, ಕೊಲಬೇಡ ಎನ್ನುವ 12 ಸೂತ್ರಗಳನ್ನು ಅಳವಡಿಸಿಕೊಂಡರೆ ಬದುಕು ಸಾರ್ಥಕ ಎಂದರು.

ನಮ್ಮ ನಾಡಿನಲ್ಲಿ ರೈತರು ನೆಮ್ಮದಿಯಿಂದ ಬದುಕಿದರೆ ನಾವೂ ನೆಮ್ಮದಿಯಿಂದ ಇರಲು ಸಾಧ್ಯ. ಇದಕ್ಕಾಗಿ ರೈತರ ಬವಣೆಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳಲಿ ಎಂದು ಒತ್ತಾಯಸಿದರು.

ಎಷ್ಟೋ ಭಾಷೆಗಳನ್ನು ಕಲಿಯಿರಿ. ಆದರೆ ತಾಯಿನುಡಿ ಮರೆಯದಿರಿ. ಕನ್ನಡ ಸಂಸ್ಕೃತಿ ಮೂಲಕ ಭವ್ಯ ಬದುಕಾಗಲು ಸಾಧ್ಯ. ಕನ್ನಡದ ಸೊಗಡು, ಸೊಗಸನ್ನು ಇಂಗ್ಲಿಷ್ ಮೂಲಕ ಕಟ್ಟಿಕೊಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರು. ರಂಗಭೂಮಿಯ ಮೂಲಕ ಅಜ್ಞಾನ ಅಳಿಯುತ್ತದೆ. ಮೌಢ್ಯ ಅಳಿಸುವ ಮೂಲಕ ಸಂಸ್ಕಾರ ನೀಡುತ್ತದೆ ಎಂದು ಹೇಳಿದರು.

ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಲು ರಂಗಭೂಮಿ ನೆರವಾಗುತ್ತದೆ. ಇದನ್ನು ನಮ್ಮ ಹಿರಿಯ ಜಗದ್ಗುರುಗಳಾದ ಶಿವಕುಮಾರ ಸ್ವಾಮಿಗಳು ನಾಟಕ ಚಟುವಟಿಕೆಗಳನ್ನು ನಡೆಸಿದರು ಎಂದು ಸ್ಮರಿಸಿದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು, ಕೆ.ಎಸ್

ನವೀನಕುಮಾರ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಹಾಜರಿದ್ದರು.

ಸಾಣೇಹಳ್ಳಿಯಲ್ಲಿ   ರಾಜ್ಯೋತ್ಸವ :

ಮುಖ್ಯ ಅತಿಥಿಯಾದ ಹಿರಿಯ ಲೇಖಕ  ಸಿದ್ದು ಯಾಪಲಪರವಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಧ್ಯಾತ್ಮಿಕವಾಗಿ ಬೆಳೆದ ಭಾಷೆ ಮತ್ತು ನಾಡು ಸದಾ ಸಮೃದ್ಧವಾಗಿರುತ್ತದೆ ಎಂಬುದಕ್ಕೆ ಕರ್ನಾಟಕ ಸಾಕ್ಷಿಯಾಗಿದೆ.

ಇಲ್ಲಿನ ಕಾಯಕ ಮತ್ತು ದಾಸೋಹ ಪರಂಪರೆಯನ್ನು ಸಾರುವ ಮಠಗಳು ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಕೊಡುಗೆ ನೀಡಿವೆ ಎಂದರು.

ಜಗತ್ತಿನಲ್ಲಿ ಯಾವುದೇ ಭಾಷೆ ಮರೆಯಾಗುವ ಸಾಧ್ಯತೆ ಇದ್ದರೂ ಕನ್ನಡ ಭಾಷೆ ಮರೆಯಾಗುವುದಿಲ್ಲ. ಏಕೆಂದರೆ ಕನ್ನಡಕ್ಕೆ ವಚನ ಸಾಹಿತ್ಯದಂತಹ ಅಮೂಲ್ಯ ಸಾಹಿತ್ಯ ಸಂಪತ್ತಿನ ಬಲವಿದೆ ಎಂದು ಹೇಳಿದರು.

ಒಂದರಿಂದ ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಮಕ್ಕಳು ಭಾಷಾ ಜ್ಞಾನ ಮತ್ತು ಸಂಸ್ಕೃತಿಯೊಂದಿಗೆ ಬೆಳೆಯುತ್ತಾರೆ. ಕನ್ನಡ ಕಲಿತು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಮಾತೃಭಾಷೆಯ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗುತ್ತದೆ ಎಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಸಂಕಿರಣ ಹಾಗೂ ಒಳ್ಳೆಯ ಭಾವನೆ ಇದೆ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *