‘ಕಾಲ, ಕಾಯಕ, ಕಾಸಿಗೆ ಮಹತ್ವ ಕೊಟ್ಟರೆ ನೀವೇ ನೀವೇ ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಆಗುತ್ತೀರಿ’
ಸಾಣೇಹಳ್ಳಿ :
ಸಾಣೇಹಳ್ಳಿ
ಇವನಾರವ ಎನ್ನದೆ ಇವ ನಮ್ಮವ ಎನ್ನುವ ಹೃದಯ ವೈಶ್ಯಾಲತೆ ಅಳವಡಿಸಿಕೊಳ್ಳಬೇಕಿರುವುದು ಶಿವಧ್ವಜದ ಆಶಯ ಎಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಪಟ್ಟರು.
ಇಲ್ಲಿನ ಮಠದ ಆವರಣದಲ್ಲಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಭಾನುವಾರ ನೆರವೇರಿದ ಶಿವಧ್ವಜಾರೋಹಣ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಯಾವುದೇ ಕಾರ್ಯಕ್ರಮಕ್ಕೂ ಮುನ್ನ ಶಿವಧ್ವಜಾರೋಹಣವನ್ನು ನಮ್ಮ ಮಠದ ಹಿರಿಯ ಜಗದ್ಗುರುಗಳಾದ ಶಿವಕುಮಾರ ಶ್ರೀಗಳು ನೆರವೇರಿಸುತ್ತ ಬಂದರು. ಇದಕ್ಕೆ ಶಿವಶರಣರು ಕಾರಣ. ಅಲ್ಲಮಪ್ರಭು, ಚನ್ನಬಸವಣ್ಣ ಅವರ ವಚನಗಳಲ್ಲಿ ಶಿವಾಚಾರದ ಪ್ರಸ್ತಾಪವಿದೆ. ಆಚಾರವು ಶಿವನಿಗೆ ಸಂಬಂಧಪಟ್ಟಿದೆ. ಆದರೆ ಶಿವ ಪೌರಾಣಿಕ ಕಲ್ಪನೆಯಲ್ಲ.
ಸತ್ಯಂ ಶಿವಂ ಸುಂದರ ಎಂದರೆ ಯಾವುದು ಸುಂದರವಾಗಿರುತ್ತದೋ ಅದು ಶಿವ. ಶಿವ ಎಂದರೆ ಒಳಿತು, ಲೇಸು, ಕಲ್ಯಾಣ, ಅಭ್ಯುದಯ ಎಂದು ಹೇಳಿದರು.
ಶಿವಧ್ವಜಾರೋಹಣ ನೆರವೇರಿಸಿದ ಹೊಸದುರ್ಗದ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೈ.ಕೆ. ಬೇನಾಳ ಮಾತನಾಡಿ, ಕಾನೂನನ್ನು ಎಲ್ಲರೂ ಗೌರವಿಸಬೇಕು. ಕಾನೂನನ್ನು ಗೌರವಿಸಿದರೆ ಅದು ರಕ್ಷಿಸುತ್ತದೆ. ವಿದ್ಯಾರ್ಥಿಗಳು ಕಾನೂನನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೊಸದುರ್ಗದ ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶರಾದ ಸಿ. ಪ್ರಸನ್ನಕುಮಾರ್ ಹಾಜರಿದ್ದರು.

ಕಾಲ, ಕಾಯಕ, ಕಾಸಿಗೆ ಮಹತ್ವ ಕೊಡಿ
ನಂತರ ನಾಟಕೋತ್ಸವ ಅಂಗವಾಗಿ ನಡೆದ ಚಿಂತನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಪೂಜ್ಯರು ಆಶೀರ್ವಚನ ನೀಡಿದರು.
ಕಾಲ, ಕಾಯಕ, ಕಾಸು ಇವುಗಳಿಗೆ ಬೆಲೆ ಕೊಟ್ಟರೆ ಬದುಕಿನಲ್ಲಿ ಅದ್ಭುತ ಸಾಧನೆ ಸಾಧಿಸಲು ಸಾಧ್ಯ ಎಂದು ಹೇಳಿದರು.
ಕಾಲದ ಸದ್ಬಳಕೆಯೊಂದಿಗೆ ಮಿತವಾಗಿ ಹಣವನ್ನು ಖರ್ಚು ಮಾಡಬೇಕು. ಜೊತೆಗೆ ಕಾಯಕವನ್ನು ಸರಿಯಾಗಿ ನಿರ್ವಹಿಸಬೇಕು. ಆಗ ನೀವೇ ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಆಗುತ್ತೀರಿ ಎಂದು ಸಲಹೆ ನೀಡಿದರು.

ರಾಜ್ಯೋತ್ಸವ ದಿನ ಮಾತ್ರ ಕನ್ನಡ ಬಾವುಟ ಹಾರಿಸಿ, ಕನ್ನಡದ ಬಗ್ಗೆ ಅಭಿಮಾನ ಪಟ್ಟರೆ ಸಾಲದು. ಕನ್ನಡದ ಸ್ವಾಭಿಮಾನವು ಹೃದಯ ಮತ್ತು ರಕ್ತದಲ್ಲಿರಬೇಕು. ಹಾಗೆಯೇ ಕನ್ನಡವನ್ನು ಕಡೆಗಣಿಸಿ ಇಂಗ್ಲಿಷ್ ಮೋಹಿಸಬಾರದು. ಕನ್ನಡದಲ್ಲೇ ಮಾತನಾಡಬೇಕು ಮತ್ತು ಕನ್ನಡತನ ವಾತಾವರಣ ನಿರ್ಮಿಸಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡ ಧ್ವಜಾರೋಹಣ ನೆರವೇರಿಸಿದ ಹೊಸದುರ್ಗದ ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶರಾದ ಸಿ. ಪ್ರಸನ್ನಕುಮಾರ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕಾನೂನಿನಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಕಾನೂನು ಸೇವಾ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಡೂರಿನ ಉಪನ್ಯಾಸಕಿ ಭಾಗ್ಯ ಮಲ್ಲೇಶ ಅವರು ‘ಪರೋಪಕಾರ’ ಕುರಿತು ಉಪನ್ಯಾಸ ನೀಡಿ, ಯಾರಿಂದಲೂ ಏನನ್ನೂ ನಿರೀಕ್ಷಿಸದೆ, ಯಾರಿಗೂ ಅನ್ಯಾಯ ಮಾಡದೆ ಉಪಕಾರ ಮಾಡಬೇಕು. ಇದು ಗುಪ್ತವಾಗಿ ಕಾಣಿಸುವ ಶಕ್ತಿ ಎಂದರು.
