ಸಾಣೇಹಳ್ಳಿ :
ದೇವಾಲಯ ಸಂಸ್ಕೃತಿ ಬದಲು ದೇಹಾಲಯ ಸಂಸ್ಕೃತಿಯನ್ನು ಬಸವಣ್ಣನವರು ಜಾರಿಗೆ ತಂದರು. ನಮ್ಮ ದೇಹವೇ ದೇವಾಲಯ ಆಗಬೇಕು. ಇದಕ್ಕಾಗಿ ಕಾಯಶುದ್ಧಿ ಹಾಗೂ ಕಾಯಕಶುದ್ಧಿ ಆಗಬೇಕು ಎಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಲಹೆ ನೀಡಿದರು.
ನಾಟಕೋತ್ಸವ ಅಂಗವಾಗಿ ಸೋಮವಾರ ಇಲ್ಲಿನ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜಿಸಿದ್ದ ಚಿಂತನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಎನ್ನ ದೇಹವೇ ದೇಗುಲ ಎನ್ನುವುದು ಬಸವಣ್ಣನವರ ಪ್ರತಿಪಾದನೆ. ಹೀಗಾಗಿ ಕಾಯಕವೇ ಕೈಲಾಸ, ಕಾಯಕವೇ ಕೈಲಾಸ ಆಗಬೇಕು. ಇದರೊಂದಿಗೆ ಕಾಯಕ ಮತ್ತು ದಾಸೋಹಗಳ ಮೂಲಕ ಸಮಾನತೆಯನ್ನು ಬಸವಾದಿ ಶಿವಶರಣರು ಪ್ರತಿಪಾದಿಸಿದರು. ಅವರ ಕಾಲದಲ್ಲಿ ಜಾತಿಯನ್ನು ಕಾಯಕದ ಮೂಲಕ ಗುರುತಿಸುವುದಿದ್ದರೂ ಜಾತಿಭೇದ ಮಾಡಲಿಲ್ಲ ಎಂದು ಹೇಳಿದರು.
ಎಲ್ಲ ಕಾಯಕಗಳಿಗೆ ಸಮಾನ ವೇತನ ಸಿಕ್ಕಾಗ ಆರ್ಥಿಕ ಸಮಾನತೆ ಬರುತ್ತದೆ. ಇದಕ್ಕಾಗಿ ದಾಸೋಹ ತತ್ವವನ್ನು ಶರಣರು ಜಾರಿಗೆ ತಂದರು. ಕಾಯಕದಿಂದ ಬಂದುದು ನನಗೊಬ್ಬನಿಗೆ ಎನ್ನದೆ ಸಮಾಜದ ಒಳಿತಿಗೆ ಕೊಡುವುದು ದಾಸೋಹಪ್ರಜ್ಞೆ. ಇದರಿಂದ ಕೂಡಿಡುವ ಪದ್ಧತಿ ಶರಣರಲ್ಲಿ ಇರಲಿಲ್ಲ. ಹಾಗೆಯೇ ಅನುಭವ ಮಂಟಪದಲ್ಲಿ ಎಲ್ಲ ಜಾತಿ, ವರ್ಗದ ಜನರು ಭೇದವಿಲ್ಲದೆ ಸೇರುತ್ತಿದ್ದರು ಎಂದು ತಿಳಿಸಿದರು.
ಸಮಾನತೆ ಎನ್ನುವುದು ನಮ್ಮ ಅಂತರಂಗದಲ್ಲಿರುವ ಪ್ರಜ್ಞೆ. ಆದರೆ ಅಸಮಾನತೆ ಇದ್ದಾಗ ಸಮಾನತೆಯ ಚಿಂತನೆ ಹೆಚ್ಚುತ್ತದೆ. ಈಗಲೂ ಲಿಂಗ, ಜಾತಿ, ಸ್ಥಾನಮಾನಗಳ ಭೇದವಿದೆ. ಹೀಗಾಗಿ ಡಾ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಕಲ್ಪಿಸಿದರು. ಬಸವಾದಿ ಶರಣರು ಹಾಗೂ ಅಂಬೇಡ್ಕರ್ ಅವರು ಸಮಾನತೆ ತತ್ವ ಸಾರುವುದರ ಜೊತೆಗೆ ನಾವು ಕಟ್ಟಿಕೊಂಡ ಬೇಲಿಗಳನ್ನು, ಗೋಡೆಗಳನ್ನು ಕೆಡವಿದಾಗ ಸಮಾನತೆ ಬರಲು ಸಾಧ್ಯ ಎಂಬುದರ ಮಹತ್ವ ಸಾರಿದ್ದರು ಎಂದು ವಿವರಿಸಿದರು.
ಹೊಸದುರ್ಗದ ಸಹಾಯಕ ಪ್ರಾಧ್ಯಾಪಕಿ ಎಸ್.ಎಂ. ಭ್ರಮರಾಂಬ ಅವರು ‘ಸಮಾನತೆ’ ಕುರಿತು ಮಾತನಾಡಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಇತರರಿಗೂ ಬದಕುವ ಅವಕಾಶವನ್ನು ಕೊಡುವುದು ಸಮಾನತೆ ಎಂದರು.
ಕೇವಲ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸೀಮಿತವಾಗದ ಸಾಣೇಹಳ್ಳಿ ಮಠವು ಎಲ್ಲ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಸಮಾನತೆ ಸಾಧಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆ. ಜ್ಯೋತಿ ಹಾಗೂ ಎಚ್.ಎಸ್. ನಾಗರಾಜ ವಚನಗಳನ್ನು ಹಾಡಿದರು. ಗುರುಪಾದೇಶ್ವರ ಪ್ರೌಢಶಾಲೆಯ ಶಿಕ್ಷಕ ಬಸನಗೌಡ ಪೊಲೀಸಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
