ಸಾಣೇಹಳ್ಳಿ:
ಯುವಕರು ಕುಟುಂಬಕ್ಕೆ, ಸಮಾಜಕ್ಕೆ ಮತ್ತು ದೇಶಕ್ಕೆ ಸಂಪತ್ತಾಗಬೇಕು, ವಿಪತ್ತು ಆಗಬಾರದು ಎಂದು ದಾವಣಗೆರೆಯ ನಿವೃತ್ತ ಪ್ರಾಂಶುಪಾಲರಾದ ಸುಮತಿ ಜಯಪ್ಪ ಎಚ್ಚರಿಸಿದರು.
2026ನೇ ಸಾಲಿನ ನಾಟಕೋತ್ಸವದ ಎರಡನೆಯ ದಿನವಾದ ಸೋಮವಾರ ಅವರು ‘ಯುವಪೀಳಿಗೆಯ ಭವಿಷ್ಯ’ ಕುರಿತು ಮಾತನಾಡಿದರು.

ಏಳಿ ಎದ್ದೇಳಿ ಎಂದು ವಿವೇಕಾನಂದರು ಹೇಳಿದರು. ಆದರೆ, ಇಂದಿನ ಯುವಕರು ಏಳಿ ಎದ್ದೇಳಿ ಎಂದು ಕೇಳಿಸಿಕೊಂಡು ಮಲಗುತ್ತಾರೆ ಎನ್ನುವುದು ದುರಂತ. ಇದರೊಂದಿಗೆ ಯುವ ಜನಾಂಗದ ಮುಂದಿರುವ ಸವಾಲೆಂದರೆ ತೀವ್ರವಾಗಿ ನಿರುದ್ಯೋಗ ಕಾಡುತ್ತಿದೆ. ಏಕೆಂದರೆ ಪಾರಂಪರಿಕ ಪದವಿಗಳು ಕೌಶಲವನ್ನು ಕಲಿಸುತ್ತಿಲ್ಲ. ಹೀಗಾಗಿ ಬಹುದೊಡ್ಡ ಪ್ರಮಾಣದಲ್ಲಿ ನಮ್ಮ ಯುವಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ನಲವತ್ತು ವರ್ಷ ದಾಟಿದ, ಮದುವೆಯಾಗದ ಯುವರೈತರು ಹಳ್ಳಿಹಳ್ಳಿಗಳಲ್ಲಿ ಹೆಚ್ಚು ಸಿಗುತ್ತಾರೆ. ಏಕೆಂದರೆ ನಿರುದ್ಯೋಗದ ಪರಿಣಾಮ. ಹೀಗೆಯೇ ನಗರದಲ್ಲಿರುವ ಯುವಕರಿಗೆ ಉದ್ಯೋಗ ಭದ್ರತೆ ಇಲ್ಲ. ಏಕೆಂದರೆ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಕಾರಣದಿಂದ ಅಸಂಖ್ಯ ಯುವಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಹೀಗಿದ್ದಾಗ ಉದ್ಯೋಗದಾತರಾಗಬೇಕಿದೆ ಅಂದರೆ ಉದ್ಯೋಗ ಸೃಷ್ಟಿಸಿ ಇತರರಿಗೆ ಉದ್ಯೋಗ ಕೊಡುವಂತಾಗಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಜಾಲತಾಣಗಳಿಂದ ಇಂದಿನ ಯುವಕರಿಗೆ ವರದಾನವಾಗಿದೆ. ಇದರಿಂದ ಅನೇಕರು ವರಮಾನ ಪಡೆಯುತ್ತಿದ್ದಾರೆ. ಈ ಮೂಲಕ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳನ್ನು ಕೆಟ್ಟದ್ದಕ್ಕೂ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ರಾತ್ರಿ ಹೆಚ್ಚು ಹೊತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವುದರಿಂದ ಸರಿಯಾಗಿ ತಿನ್ನುತ್ತಿಲ್ಲ, ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಇದರಿಂದ ಅವರ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಬಂಧಗಳ ಬೆಲೆ ಇಂದಿನ ಯುವಕರಿಗೆ ಗೊತ್ತಾಗುತ್ತಿಲ್ಲ. ಹಿರಿಯರನ್ನು ಗೌರವಿಸುತ್ತಿಲ್ಲ. ನಮ್ಮ ಪರಂಪರೆ, ಸಂಸ್ಕೃತಿ ಅರಿಯುತ್ತಿಲ್ಲ. ಇದರಿಂದ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರನ್ನು ಹಿರಿಯರು ಎಚ್ಚರಿಸಬೇಕಿದೆ ಎಂದು ತಿಳಿಹೇಳಿದರು.

ಮದ್ಯಸೇವನೆ, ಗುಟ್ಕಾ ಸೇವನೆಯಿಂದ ತುಂಬು ಯೌವನವನ್ನು ಕಳೆದುಕೊಳ್ಳುತ್ತಿರುವ ನಮ್ಮ ಯುವಕರನ್ನು ಸಾಂಸ್ಕೃತಿಕವಾಗಿ ಬೆಳೆಸುವ ನಿಟ್ಟಿನಲ್ಲಿ ಸಾಣೇಹಳ್ಳಿ ನಾಟಕೋತ್ಸವ ನೆರವಾಗುತ್ತಿದೆ ಎಂದು ಸುಮತಿ ಅವರು ಹೇಳಿದರು.
ನಾಟಕಗಳ ಮೂಲಕ ಸಂಸ್ಕೃತಿ, ಸಂಸ್ಕಾರ ಬೆಳೆಸುವ ಕಾರ್ಯವನ್ನು ಪಂಡಿತಾರಾಧ್ಯ ಶ್ರೀಗಳು ಕೈಗೊಂಡಿರುವುದು ಶ್ಲಾಘನೀಯ. ನನ್ನ ತುತ್ತಿನಚೀಲ ತುಂಬಿಸಿಕೊಳ್ಳಲು ಪರದಾಡುವಾಗ ಸಂಗೀತ, ನಾಟಕದಿಂದ ಸಂತೋಷದಿಂದ ಕಾಲ ಕಳೆಯುತ್ತಿದ್ದೆ ಎಂದು ದೇವೇಂದ್ರಪ್ಪ, ಶಾಸಕರು, ಜಗಳೂರು ಹೇಳಿದರು.
ಶರಣರ ಕಾಲದ ಅನುಭವ ಮಂಟಪವನ್ನು ಈ ಕಾಲಕ್ಕೆ ನಾಟಕಗಳ ಮೂಲಕ ಸಂಸ್ಕಾರ ನೀಡುತ್ತಿದೆ ಸಾಣೇಹಳ್ಳಿ ಮಠ.
ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಾಗುತ್ತಿದ್ದ ನಾಟಕಗಳು ಅಪರೂಪವಾಗುತ್ತಿವೆ. ಆದರೆ ಸಾಣೇಹಳ್ಳಿಯಲ್ಲಿ 30 ವರ್ಷಗಳಿಂದ ನಾಟಕೋತ್ಸವವನ್ನು ಪ್ರತಿ ವರ್ಷ ಪಂಡಿತಾರಾಧ್ಯ ಶ್ರೀಗಳು ಆಯೋಜಿಸುತ್ತಿದ್ದಾರೆ ಎಂದು ಕೆ.ಎಸ್.ಬಸವಂತಪ್ಪ, ಮುಜರಾಯಿ, ಮೀನುಗಾರಿಕೆ ಮತ್ತು ಬಂದರು, ಒಳನಾಡಿನ ಜಲಸಾರಿಗೆ ಸಚಿವರು ಹೇಳಿದರು.

‘ಒಳಿತು ಮಾಡು ಮನುಷ್ಯ ನೀನಿರೋದು ಮೂರು ದಿವಸ’ ಎನ್ನುವ ಹಾಡನ್ನು ಸಚಿವ ಕೆ.ಎಸ್. ಬಸವಂತಪ್ಪ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ನಂತರ ‘ಸುಖ ಎಲ್ಲಾರಿಗೆ ಎಲ್ಲೈತೆವ್ವ’ ಹಾಡನ್ನು ಶಾಸಕ ದೇವೇಂದ್ರಪ್ಪ ಹಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ಕೊನೆಗೆ ‘ಸುಖ ಎಲ್ಲೈತೆವ್ವ ಸಾಣೇಹಳ್ಳಿ ಶ್ರೀಗಳ ಸಾನಿಧ್ಯದೊಳಗ ಐತೆವ್ವ’ ಎಂದೂ ಹಾಡಿದರು.
ಮಧುರೆಯ ಭಗೀರಥ ಪೀಠದ ಪುರುಷೋತ್ತಮಾನಂದ ಸ್ವಾಮೀಜಿ ಮಾತನಾಡಿ, ನಾಟಕೋತ್ಸವದ ಮೂಲಕ ನಮ್ಮ ಜೀವನೋತ್ಸಾಹ ಹೆಚ್ಚಿಸುತ್ತದೆ ಎಂದರು.
ನಾಟಕಗಳ ಮೂಲಕ ಅಂಕುಡೊಂಕು ತಿದ್ದುತ್ತ, ಆರೋಗ್ಯಪೂರ್ಣ ಸಮಾಜಕ್ಕಾಗಿ ಸಾಣೇಹಳ್ಳಿ ಶ್ರೀಗಳು ಶ್ರಮಿಸುತ್ತಿದ್ದಾರೆ ಎಂದು ಕೊಂಡಾಡಿದರು.
ಸಾಣೇಹಳ್ಳಿಯಲ್ಲಿ ನಾಟಕೋತ್ಸವದ ಮೂಲಕ ಜೀವನದರ್ಶನ ಆಗುತ್ತಿದೆ ಎಂದು ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದ ಸ್ವಾಮೀಜಿ ಹೇಳಿದರು. ನಂತರ ‘ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆ’ ಎನ್ನುವ ಕನಕದಾಸರ ಕೀರ್ತನೆ ಹಾಡಿದರು.

ಅಣ್ಣಿಗೇರಿಯ ಯಶಸ್ವಿನಿ ಯೋಗ ಸಂಸ್ಥೆಯ ವಿದ್ಯಾರ್ಥಿಗಳ ಯೋಗ ಪ್ರದರ್ಶನವನ್ನು ಮೆಚ್ಚಿ ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅವರು 50 ಸಾವಿರ ರೂಪಾಯಿ ಕಾಣಿಕೆಯಾಗಿ ನೀಡಿದರು.
ಹೊಸದುರ್ಗದ ಕುಂಚಿಟಿಗಿ ಮಹಾಸಂಸ್ಥಾನ ಪೀಠದ ಡಾ.ಶಾಂತವೀರ ಸ್ವಾಮೀಜಿ ಮಾತನಾಡಿ, ಜನ್ಮದಿನ, ವಿವಾಹ ವಾರ್ಷಿಕೋತ್ಸವ ನೆಪದಲ್ಲಿ ತೋಟದ ಮನೆಗಳು ಈಗ ಬಾರಗಳಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಭ್ರಮಾಚರಣೆ ನೆಪದಲ್ಲಿ ಮದ್ಯ ಸೇವನೆ ನಡೆಯುತ್ತಿದೆ. ಇದರಿಂದ ಯುವಕರು ಚಟಗಳ ದಾಸರಾಗುವ ಮೂಲಕ ಬಹಳ ಬೇಗ ಸಾವನ್ನಪ್ಪುತ್ತಾರೆ. ಹೀಗಾಗಿ ತೋಟದ ಮನೆಗಳು ಸೂತಕದ ಮನೆಗಳಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿ, ನಮ್ಮ ನಡೆ- ನುಡಿ ಶುದ್ಧವಾಗದೆ ಫಲ ಸಿಗದು. ಇನ್ನೊಬ್ಬರ ಸುಖ-ದುಃಖ ನಮ್ಮದಾಗಬೇಕು ಎಂದರು.
ನಮ್ಮ ವ್ಯಕ್ತಿತ್ವದಿಂದ ಇನ್ನೊಬ್ಬರ ಬದುಕನ್ನು ಬದಲಾಯಿಸುವಂತಾಗಬೇಕು. ಇದಕ್ಕಾಗಿ ನಮ್ಮ ಅಂತರಂಗ ಶುದ್ಧವಾಗಿದ್ದರೆ ಬಾಹ್ಯ ಶುದ್ಧವಾಗಲು ಸಾಧ್ಯ ಎಂದು ಹೇಳಿದರು.

ಮನುಷ್ಯ ಮಾನಸಿಕವಾಗಿ, ದೈಹಿಕವಾಗಿ ಶಕ್ತಿವಂತರಾಗಬೇಕು. ಸತ್ಯ, ಅಹಿಂಸೆ, ತ್ಯಾಗ ಗುಣಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ಮರೆಯಬಾರದು ಎಂದು ಎಚ್ಚರಿಸಿದರು. ಸರ್ಕಾರವು ಕಲಾಸಂಘಕ್ಕೆ ಹಿಂದೆ 50 ಲಕ್ಷ ರೂಪಾಯಿ ಅನುದಾನ ಕೊಡುತ್ತಿತ್ತು. ಆದರೆ ನಾಲ್ಕೈದು ವರ್ಷಗಳ ಹಿಂದೆ ಅನುದಾನ ಕಡಿಮೆಯಾಗಿದೆ. ಸಚಿವ ಬಸವಂತಪ್ಪ, ಶಾಸಕ ಬಿ. ದೇವೇಂದ್ರಪ್ಪ ಅವರು ಮುಖ್ಯಮಂತ್ರಿಗಳಿಗೆ ಹೇಳಿ ನೆರವು ಹೆಚ್ಚಿಸಿ ಎಂದು ಒತ್ತಾಯಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
