ಬೆಳಗ ಮಹಾಬೆಳಗು: ಅಲ್ಲಮಪ್ರಭುದೇವರ ಕುರಿತ ಮಹತ್ವದ ಮಹಾಕಾವ್ಯ


ಬೆಳಗಾವಿ

ಪುಸ್ತಕದ ಹೆಸರು :
ಬೆಳಗ ಮಹಾಬೆಳಗು (ಅಲ್ಲಮಪ್ರಭುದೇವರ ಬದುಕು ದರ್ಶನ ಮುಕ್ತ ಚೌಪದಿಯ ಮಹಾಕಾವ್ಯ)

ಲೇಖಕರು :
ಡಾ. ಪ್ರದೀಪಕುಮಾರ ಹೆಬ್ರಿ

ಪ್ರಕಾಶಕರು :
ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ-೨೦೨೬

೧೨ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಒಂದು ಅಸ್ತಿತ್ವವನ್ನು ಒದಗಿಸಿದ್ದು ಶೂನ್ಯಪೀಠ. ಯಾವುದೇ ಒಂದು ಧರ್ಮ ಪ್ರಸಾರ, ಪ್ರಚಾರವಾಗಬೇಕಾದರೆ ಅದು ಸಾಂಸ್ಥೀಕರಣ ರೂಪ ಪಡೆಯಬೇಕೆಂಬುದು ಬಸವಣ್ಣನವರ ಆಶಯವಾಗಿತ್ತು. ಹೀಗಾಗಿ ಅನುಭವ ಮಂಟಪ ಎಂಬ ವಿನೂತನ ಪ್ರಜಾಸತ್ತಾತ್ಮಕ ಸಂಸತ್ತಿನ ಒಳಗೆ ಶೂನ್ಯಸಿಂಹಾಸನ ಎಂಬ ನೂತನ ಪೀಠದ ಪರಿಕಲ್ಪನೆಯನ್ನು ಬಸವಣ್ಣನವರು ರೂಪಿಸಿದರು. ತಾವೇ ಸ್ಥಾಪಿಸಿದ ಶೂನ್ಯಪೀಠಕ್ಕೆ ತಾವೇ ಅಧಿಕಾರಿಗಳಾಗಿ ಬಸವಣ್ಣನವರು ಮೆರೆಯಬಹುದಾಗಿತ್ತು, ಆದರೆ ಅವರು ಆ ಪೀಠದ ಮೇಲೆ ಒಬ್ಬ ಮಹಾಯೋಗಿಯನ್ನು ತಂದು ಕೂಡ್ರಿಸಿದರು, ಅವರೇ ವ್ಯೋಮಮೂರ್ತಿ ಅಲ್ಲಮಪ್ರಭುದೇವರು. ಅಲ್ಲಮಪ್ರಭುದೇವರು ಶೂನ್ಯಪೀಠದ ಪ್ರಥಮಾಧ್ಯಕ್ಷರಾಗಿ ಶರಣ ಸಂದೋಹವನ್ನು ಮುನ್ನಡೆಸಿದರು. ಬಸವಾದಿ ಶಿವಶರಣರ ಈ ನೂತನ ಧರ್ಮಕ್ಕೆ ಒಂದು ಅದ್ಭುತವಾದ ಅಸ್ತಿತ್ವವನ್ನೂ ಅಸ್ಮಿತೆಯನ್ನೂ ಒದಗಿಸಿಕೊಟ್ಟವರು ಅಲ್ಲಮಪ್ರಭುದೇವರು.

ವ್ಯೋಮಾತೀತನಾದ ಅಲ್ಲಮ ಯಾರ ಕೈಗೂ ಸಿಗದೇ ಲೋಕಜಂಗಮನಾಗಿ ವಿವಹರಿಸುತ್ತಿರುವ ಸಂದರ್ಭದಲ್ಲಿ ಪ್ರಭುದೇವರ ಘನವ್ಯಕ್ತಿತ್ವ ಗುರುತಿಸಿ ಅಪಾಂಥಿಕರಾಗಿದ್ದ ಅವರನ್ನು ಲಿಂಗಾಯತಧರ್ಮದ ಚೌಕಟ್ಟಿನೊಳಗೆ ತಂದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಹೀಗಾಗಿ ಶರಣ ಕ್ರಾಂತಿಯ ಹತ್ತಿರದಲ್ಲಿದ್ದ ಹರಿಹರ ಈ ಶರಣರ ಕುರಿತು ರಗಳೆಗಳನ್ನು ಬರೆದು ಚಿತ್ರಿಸಿದ. ಬಸವರಾಜ ದೇವರ ರಗಳೆಯನ್ನು ಬರೆದ ಹರಿಹರ, ಪ್ರಭುದೇವರ ರಗಳೆಯನ್ನೂ ರಚಿಸಿದ. ತದನಂತರ ಚಾಮರಸ ಕವಿಯ ಪ್ರಭುಲಿಂಗಲೀಲೆಯಂತೂ ವಿಶ್ವಕಾವ್ಯವಾಗಿ ಹೊರಹೊಮ್ಮಿತು. ಏಳಂದೂರು ಹರೀಶ್ವರ ಕವಿ ‘ಪ್ರಭುದೇವರ ಪುರಾಣ’ ರಚಿಸಿದ. ಪ್ರಭುದೇವರ ಸಾಂಗತ್ಯ, ಪ್ರಭುದೇವರ ಕಂದ ಮೊದಲಾದ ಕಿರು ಕಾವ್ಯ ಕೃತಿಗಳೂ ರಚನೆಗೊಂಡವು.

ಆಧುನಿಕ ಕಾಲಘಟ್ಟದಲ್ಲಿ ಪ್ರಭುದೇವರನ್ನು ಕುರಿತು ಕಾದಂಬರಿ-ನಾಟಕ-ಕಥೆಗಳು ರಚನೆಗೊಂಡಿದ್ದವು. ಆದರೆ ಮಹಾಕಾವ್ಯ ರೂಪದಲ್ಲಿ ಯಾವ ಕೃತಿಗಳೂ ಬಂದಿರಲಿಲ್ಲ, ಆ ಕೊರತೆಯನ್ನು ನೀಗಿಸಿದವರು ನಮ್ಮ ದಿನಮಾನದ ಅಪರೂಪದ ಕವಿಗಳಾಗಿರುವ ಡಾ. ಪ್ರದೀಪಕುಮಾರ ಹೆಬ್ರಿ ಅವರು. ಪ್ರಭುದೇವರ ಜೀವನ-ಬೆಡಗಿನ ವಚನದ ವ್ಯಾಖ್ಯಾನವನ್ನು ಒಳಗೊಂಡ ಮುಕ್ತ ಚೌಪದಿಯ ರೂಪದಲ್ಲಿ ಡಾ. ಪ್ರದೀಪಕುಮಾರ ಹೆಬ್ರಿ ಅವರು ರಚಿಸಿದ ಅಪರೂಪದ ಕೃತಿಯೇ ‘ಬೆಳಗ ಮಹಾಬೆಳಗು’.

ಡಾ. ಪ್ರದೀಪಕುಮಾರ ಹೆಬ್ರಿ ಅವರು ಒಟ್ಟು ಆರು ಅಧ್ಯಾಯಗಳಲ್ಲಿ ೮೩ ಉಪ ಅಧ್ಯಾಯಗಳಲ್ಲಿ ಈ ಕೃತಿಯನ್ನು ರಚಿಸಿದ್ದಾರೆ. ಮುಕ್ತವಾಗಿ ಓದಿಸಿಕೊಂಡು ಹೋಗುವ ಅಪರೂಪದ ಗುಣ ಈ ಕಾವ್ಯಕ್ಕಿರುವುದು ಗಮನಾರ್ಹ ಸಂಗತಿಯಾಗಿದೆ.

ಬೆಳಗ ಮಹ ಬೆಳಗೆನುವ ಪ್ರಭುದೇವ ದರುಶನದಿ

ಬದುಕಿನನುಭಾವವನು ಅರುಹಿರುವೆ ಚಂದದಲಿ

ನನ್ನದಿಹ ನಂಬಿಕೆಯು ಓದುಗರ ಮನಮುಟ್ಟಿ

ಹರಸುವುದು ನನ್ನನ್ನು ಎಂಬುದೆದೆಯಾಸೆ

ಡಾ. ಹೆಬ್ರಿ ಅವರು ಇದನ್ನು ಪ್ರಭುದೇವರ ‘ದರ್ಶನ’ ಎಂದು ಕರೆದಿರುವುದು ಅತ್ಯಂತ ಔಚಿತ್ಯಪೂರ್ಣವಾದುದು. ಅಲ್ಲಮರ ಬದುಕೇ ಒಂದು ದಿವ್ಯ ‘ದರ್ಶನ’. ಆ ದರ್ಶನದ ಬೆಳಕಿನಲ್ಲಿ ಶರಣ ಸಂದೋಹ ಬೆಳಗಿತು. ಹೀಗಾಗಿ ತಾತ್ವಿಕತೆಯ ಒಂದು ಅನನ್ಯ ದರ್ಶನ ಇಲ್ಲಿರುವುದರಿಂದ ಪ್ರಭುದೇವರ ದಾರ್ಶನಿಕ ಒಳನೋಟಗಳಿಗೆ ಸಾಕ್ಷಿಯಾಗಿದೆ.

ಅಲ್ಲಮನ ಕಾವ್ಯವು ಭಕ್ತಿಯ ಆರ್ದ್ರತೆ, ಅನುಭಾವದ ಗಾಢತೆ ಮತ್ತು ತಾತ್ವಿಕ ಚಿಂತನೆಯ ಸಮನ್ವಯದಿಂದ ರೂಪುಗೊಂಡ ವಿಶಿಷ್ಟ ಕಾವ್ಯಪ್ರಪಂಚವಾಗಿದೆ. ಆರಂಭದ ಅಧ್ಯಾಯಗಳಲ್ಲಿ ಅಲ್ಲಮನ ಬಾಲ್ಯ, ಬದುಕಿನ ಏಳುಬೀಳು, ಆಧ್ಯಾತ್ಮಿಕ ಹಂಬಲ ಮತ್ತು ಭಕ್ತಿಯ ಕಡೆಗೆ ಸಾಗುವ ಮನೋಯಾನವನ್ನು ಸರಳ, ಸುಂದರ ಹಾಗೂ ಭಾವಪೂರ್ಣ ಭಾಷೆಯಲ್ಲಿ ಚಿತ್ರಿಸಲಾಗಿದೆ. ಪ್ರಭುದೇವನ ಸ್ಮರಣೆ, ಇಷ್ಟಲಿಂಗದ ಮಹಿಮೆ ಮತ್ತು ಭಕ್ತನ ಅಂತರಂಗದ ಶುದ್ಧೀಕರಣ ಕಾವ್ಯದ ಪ್ರಮುಖ ಆಶಯಗಳಾಗಿವೆ. ಇಲ್ಲಿನ ಕಾವ್ಯಭಾಷೆ ಕೃತಕ ಅಲಂಕಾರಗಳಿಗಿಂತ ಸಹಜ ಭಾವಾಭಿವ್ಯಕ್ತಿಗೆ ಹೆಚ್ಚು ಒತ್ತು ನೀಡುತ್ತದೆ.

ಮುಂದಿನ ಅಧ್ಯಾಯಗಳಲ್ಲಿ ಅಲ್ಲಮನ ಬದುಕಿನ ಅನುಭವಗಳು ತಾತ್ವಿಕ ನೆಲೆಯನ್ನು ಪಡೆದುಕೊಳ್ಳುತ್ತವೆ. ಹಸಿವು, ಶ್ರಮ, ಬದುಕಿನ ಸಂಘರ್ಷ, ಮಾನವೀಯ ಸಂಬಂಧಗಳು, ದೈವದರ್ಶನ ಮತ್ತು ವೈರಾಗ್ಯದಂತಹ ಅನುಭವಗಳನ್ನು ಕವಿ ಕೇವಲ ಘಟನೆಗಳಾಗಿ ನಿರೂಪಿಸದೆ, ಅವುಗಳ ಮೂಲಕ ಜೀವನದ ಮೌಲ್ಯಗಳನ್ನು ಪ್ರತಿಪಾದಿಸುತ್ತಾರೆ. ಪ್ರತಿಯೊಂದು ಪ್ರಭೆಯ ಶೀರ್ಷಿಕೆಯೂ ಅದರ ಆಶಯವನ್ನು ಸಂಕೇತಿಸುವುದರಿಂದ ನಿರೂಪಣೆಗೆ ಕಾವ್ಯಾತ್ಮಕ ಸಾಂದ್ರತೆ ದೊರೆತಿದೆ. ಸರಳವಾದ ರೂಪಕಗಳು ಮತ್ತು ಅರ್ಥಗರ್ಭಿತ ನುಡಿಮುತ್ತುಗಳು ಓದುಗರ ಮನಸ್ಸಿನಲ್ಲಿ ಚಿಂತನೆಯ ಕಿಡಿಯನ್ನು ಹೊತ್ತಿಸುತ್ತವೆ.

ನಾಲ್ಕನೆಯ ಅಧ್ಯಾಯದಲ್ಲಿ ಕಾವ್ಯವು ತನ್ನ ಮಹತ್ವದ ದಾರ್ಶನಿಕ ಆಯಾಮವನ್ನು ತೆರೆದಿಡುತ್ತದೆ. ಶಿವಶರಣರ ಸಮಾಗಮ, ಅನುಭವ ಮಂಟಪದ ಸ್ಥಾಪನೆ, ವಿಚಾರಮಂಥನ, ಸ್ವತಂತ್ರ ಚಿಂತನೆ, ಕಾಯಕ-ದಾಸೋಹದ ಪರಿಕಲ್ಪನೆ, ಸಮಾನತೆಯ ಸಮಾಜದ ಆಶಯ ಮತ್ತು ಅಕ್ಕಮಹಾದೇವಿಯ ಆಗಮನ ಮೊದಲಾದ ಪ್ರಸಂಗಗಳ ಮೂಲಕ ಹನ್ನೆರಡನೆಯ ಶತಮಾನದ ಶರಣ ಚಳವಳಿಯ ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿಯನ್ನು ಕವಿ ಚಿತ್ರಿಸಿದ್ದಾರೆ. ಇಲ್ಲಿ ಅಲ್ಲಮನ ವ್ಯಕ್ತಿತ್ವವು ವೈಯಕ್ತಿಕ ಸಾಧನೆಯ ನೆಲೆಯಿಂದ ವಿಶ್ವಮಾನವೀಯ ಚಿಂತನೆಯ ಎತ್ತರಕ್ಕೆ ವಿಸ್ತರಿಸುತ್ತದೆ. ಕಾಯಕವೇ ಕೈಲಾಸವಾಗುವ ಮತ್ತು ಲೌಕಿಕ ಬದುಕೇ ಆಧ್ಯಾತ್ಮಿಕ ಸಾಧನೆಯ ನೆಲೆಯಾಗುವ ಪರಿವರ್ತನೆಯು ಕಾವ್ಯದ ಕೇಂದ್ರ ಆಶಯವಾಗಿ ಮೂಡಿಬಂದಿದೆ.

ಐದನೆಯ ಮತ್ತು ಆರನೆಯ ಅಧ್ಯಾಯಗಳಲ್ಲಿ ಅಲ್ಲಮನ ಅನುಭಾವದ ಪ್ರಖರತೆ, ಬಸವಣ್ಣನವರೊಂದಿಗಿನ ಆನುಭಾವಿಕ ಸಂಬಂಧ, ಭಕ್ತಿಯ ಪರಿಪಕ್ವತೆ ಮತ್ತು ಜ್ಞಾನೋದಯದ ನೆಲೆಗಳು ಹೆಚ್ಚು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿವೆ. ಪ್ರಕೃತಿಯ ಚಿತ್ರಣ, ಬೆಳಕು-ಕತ್ತಲೆಯ ರೂಪಕ, ಅಮೃತಧಾರೆ, ಜ್ಞಾನಜ್ಯೋತಿ ಮೊದಲಾದ ಸಂಕೇತಗಳ ಮೂಲಕ ಆಂತರಿಕ ಪರಿವರ್ತನೆಯನ್ನು ಕವಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ವಿಶೇಷವಾಗಿ ಅಲ್ಲಮನ ವ್ಯಕ್ತಿತ್ವವನ್ನು ಕೇವಲ ಭಕ್ತನ ಅಥವಾ ಯೋಗಿಯ ನೆಲೆಯಲ್ಲಿ ಸೀಮಿತಗೊಳಿಸದೆ, ಜೀವನದ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಮಹಾನುಭಾವನನ್ನಾಗಿ ಪರಿಚಯಿಸಿರುವುದು ಕೃತಿಯ ವೈಶಿಷ್ಟ್ಯವಾಗಿದೆ.

ಒಟ್ಟಾರೆಯಾಗಿ, ಈ ಕಾವ್ಯದ ಮುಖ್ಯ ಶಕ್ತಿ ಅದರ ಭಾವಸೌಂದರ್ಯ ಮತ್ತು ತಾತ್ವಿಕ ಆಶಯಗಳ ಸಮತೋಲನದಲ್ಲಿದೆ. ಸರಳ ಭಾಷೆಯೊಳಗೆ ಗಹನವಾದ ಅನುಭಾವವನ್ನು ಅಭಿವ್ಯಕ್ತಿಸುವ ಪ್ರಯತ್ನ ಶ್ಲಾಘನೀಯ. ಅಲ್ಲಲ್ಲಿ ಭಕ್ತಿಪ್ರಧಾನ ನಿರೂಪಣೆ ಮತ್ತು ಆದರ್ಶೀಕರಣ ಹೆಚ್ಚಾಗಿ ಕಾಣಿಸಿಕೊಂಡರೂ, ಶರಣ ಚಳವಳಿಯ ಸಾಮಾಜಿಕ ಪ್ರಜ್ಞೆ, ಅಲ್ಲಮನ ಆಧ್ಯಾತ್ಮಿಕ ವ್ಯಕ್ತಿತ್ವ ಹಾಗೂ ಮಾನವ ಬದುಕಿನ ಉನ್ನತ ಮೌಲ್ಯಗಳನ್ನು ಒಂದೇ ಕಾವ್ಯಧಾರೆಯಲ್ಲಿ ಬೆಸೆಯುವಲ್ಲಿ ಕೃತಿ ಯಶಸ್ವಿಯಾಗಿದೆ. ಓದುಗನಿಗೆ ಅಲ್ಲಮನ ಬದುಕಿನ ಕಥನವನ್ನು ಪರಿಚಯಿಸುವುದಷ್ಟೇ ಅಲ್ಲದೆ, ಅವನ ಅನುಭಾವದ ಒಳಲೋಕವನ್ನು ಪ್ರವೇಶಿಸುವ ಅವಕಾಶವನ್ನೂ ಕಲ್ಪಿಸುತ್ತದೆ. ಈ ದೃಷ್ಟಿಯಿಂದ ಕೃತಿ ಭಕ್ತಿಕಾವ್ಯವಾಗಿ ಮಾತ್ರವಲ್ಲದೆ, ಅನುಭಾವ ಮತ್ತು ಮಾನವೀಯ ಮೌಲ್ಯಗಳ ಸಮನ್ವಯದ ಸಾಹಿತ್ಯಕ ಪ್ರಯತ್ನವಾಗಿಯೂ ಮಹತ್ವ ಪಡೆಯುತ್ತದೆ.

ಕೃತಿ ಕುರಿತು ಪ್ರಕಾಶಕರ ನುಡಿಯಲ್ಲಿ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು- “ಛಂದಮುಕ್ತವಾಗಿದ್ದರೂ ಕಾವ್ಯವು ಧ್ವನಿಪೂರ್ಣವಾಗಿದೆ. ಸಾಂದರ್ಭಿಕ ಅಲಂಕಾರಗಳಿಂದ ಕೂಡಿ ರಸಾನುಭೂತಿಯನ್ನುಂಟು ಮಾಡುವ ವೈಶಿಷ್ಟ್ಯ ಅವರ ಕಾವ್ಯಕೃತಿಗಳಿಗಿದೆ” ಎಂದು ಹೇಳಿರುವುದು ಔಚಿತ್ಯಪೂರ್ಣವಾಗಿದೆ. ಕೃತಿಗೆ ಮುನ್ನುಡಿ ತೋರಣ ಕಟ್ಟಿದ ನಾಡಿನ ಹಿರಿಯ ವಿದ್ವಾಂಸರಾದ ಡಾ. ಅಶೋಕ ನರೋಡೆ ಅವರು “ಬೆಳಗ ಮಹಾಬೆಳಗು ಚೌಪದಿ ಛಂದಸ್ಸಿನಲ್ಲಿ ರಚನೆಗೊಂಡ ಮಹಾಕಾವ್ಯ. ತುಂಬ ಸರಳವಾಗಿ, ಸುಂದರವಾಗಿ, ಸುಲಭವಾಗಿ ಅರ್ಥವಾಗುವಂತೆ ಬರೆದಿದ್ದಾರೆ. ಓದಲು ಪ್ರಾರಂಭಿಸಿದರೆ ನಿಲ್ಲಿಸಲು ಮನಸ್ಸೇ ಆಗುವುದಿಲ್ಲ. ಈ ಕಾವ್ಯದ ಓದುವಿಕೆಯಿಂದ ಹೆಬ್ರಿಯವರ ಪ್ರಖರವಾದ  ಪ್ರತಿಭಾ ಸಂಪನ್ನತೆ ಅರಿವಾಗುತ್ತದೆ” ಎಂದು ಹೇಳಿರುವುದು ಅಕ್ಷರಶಃ ಓದುಗರ ಅರಿವಿಗೆ ಬರುತ್ತದೆ. ಹಿರಿಯ ಕವಿಗಳಾದ ಪ್ರೊ. ಜಯವಂತ ಕಾಡದೇವರ ಅವರು ಬೆನ್ನುಡಿ ರೂಪದಲ್ಲಿ ಬರೆದ ಕೆಲವು ಮೌಲಿಕ ನುಡಿಗಳು ಹೀಗಿವೆ:

“ನಿಗೂಢವೂ ಸಂಕಿರಣವೂ ಆದ ವ್ಯಕ್ತಿತ್ವದ ಮತ್ತು ಹನ್ನೆರಡನೇ ಶತಮಾನದ ಶರಣಗಣದಲ್ಲಿಯೇ ಬಹು ಎತ್ತರದ ಸ್ಥಾನ ಪಡೆದಿರುವ ಅಲ್ಲಮ ಪ್ರಭುವಿನ ಬೆರಗು ಗೊಳಿಸುವ ಬೆಡಗಿನ ವಚನಗಳನ್ನು ವಿಶ್ಲೇಷಿಸುತ್ತ ಅವರ ಬದುಕು- ಸಾಧನೆಯನ್ನು  ಪರಿಚಯಿಸುವ ಮಹಾಕಾವ್ಯವನ್ನು ರಚಿಸುವುದು ನಿಜಕ್ಕೂ ಒಂದು ಸವಾಲೇ ಸರಿ. ಅದನ್ನು ಯಶಸ್ವಿಯಾಗಿ ಸಾಧ್ಯವಾಗಿಸಿರುವ  ಹೆಬ್ರಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು”.

ಈ ಕೃತಿಯಲ್ಲಿ ಒಂದೆರಡು ಚಾರಿತ್ರಿಕ ಘಟನೆಗಳು ತಪ್ಪು ಕಲ್ಪನೆಯಿಂದ ಮೂಡಿವೆ ಎಂಬುದು ನನ್ನ ಭಾವನೆ. ಕವಿಯ ಕಲ್ಪನೆಯಲ್ಲಿ ಅದು ಸರಿಯಿರಬಹುದು, ಆದರೆ ಐತಿಹಾಸಿಕ ದೃಷ್ಟಿಯಿಂದ ನೋಡುವುದಾದರೆ, ಅಲ್ಲಮ ಪ್ರಾರಂಭದ ಘಟ್ಟದಲ್ಲಿ ಶಿವಾಚಾರ್ಯರರೊಬ್ಬರ ಸಂಪರ್ಕದಲ್ಲಿ ಬರುತ್ತಾನೆ ಎಂದು ಚಿತ್ರಿಸಿರುವುದು ಅದು ಚಾರಿತ್ರಿಕವಲ್ಲದ ಅಂಶ ಎಂಬುದು ನನ್ನ ಭಾವನೆ. ಅಲ್ಲಮನ ಕುರಿತಾದ ನೈಜ ಚರಿತ್ರೆಗಳಲ್ಲಿ ಆತ ಯಾವ ಶಿವಾಚಾರ್ಯರ ಸಾನ್ನಿಧ್ಯ ಸಂಪರ್ಕ ಪಡೆಯುವುದಿಲ್ಲ, ನೇರವಾಗಿ ಅನಿಮಿಷನಿಂದ ಲಿಂಗವನ್ನು ಪಡೆಯುತ್ತಾನೆ ಎಂಬುದು ದಾಖಲಾಗಿದೆ. ಶಿವಾಚಾರ್ಯರ ಪಾತ್ರವೊಂದು ಈ ಕಾವ್ಯದಲ್ಲಿ ಬರಬಾರದಿತ್ತು ಎಂಬುದು ನನ್ನ ಒಂದು ವಿನಯಪೂರ್ವಕ ಬೇಡಿಕೆಯಾಗಿದೆ. ಹಾಗೆಯೇ ಅಲ್ಲಮ ಕಲ್ಯಾಣಕ್ಕೆ ಬಂದಾಗ ಆತನನ್ನು ಸ್ವಾಗತಿಸಿದ್ದು ಹಡಪದ ಅಪ್ಪಣ್ಣ. ಆದರೆ ಲೇಖಕರು ಕಥಾಸಾರದಲ್ಲಿ ಇಲ್ಲಿ ಮಂಚಣ್ಣ ಎಂಬ ಹೆಸರನ್ನು ದಾಖಲಿಸಿರುವುದು ಏಕೆಂದು ತಿಳಿಯಲಿಲ್ಲ. ಶೂನ್ಯಸಂಪಾದನೆಯ ಪಠ್ಯಗಳಲ್ಲಿ ಅಪ್ಪಣ್ಣನವರೇ ಅಲ್ಲಮರಿಗೂ ಬಸವಣ್ಣನವರಿಗೂ ನಡುವೆ ಸಂವಾದಕಾರರಾಗಿ ಇರುವುದನ್ನು ಗಮನಿಸಬಹುದು. ಕಾವ್ಯದಲ್ಲಿಯೂ ಅಪ್ಪಣ್ಣನವರ ಹೆಸರೇ ಬಂದಿದೆ, ಆದರೆ ಕಥಾಸಾರದಲ್ಲಿ ಮಾತ್ರ ಮಂಚಣ್ಣನ ಹೆಸರು ತಪ್ಪಾಗಿ ಬಂದಿರಬಹುದಾಗಿದೆ.

ಉಳಿದಂತೆ ಇಡೀ ಮಹಾಕಾವ್ಯ ಸರಾಗವಾಗಿ ಓದಿಸಿಕೊಂಡು ಹೋಗಿ, ಅಲ್ಲಮನ ನಿಜವಾದ ವ್ಯಕ್ತಿತ್ವವೊಂದರ ದರ್ಶನ ಮಾಡಿಸುತ್ತದೆ. ಅದರಲ್ಲೂ ಬೆಡಗಿನ ವಚನಗಳ ಚಿಂತನೆ ಇನ್ನೂ ಅರ್ಥಪೂರ್ಣವಾಗಿ ಅನನ್ಯವಾಗಿ ಮೂಡಿ ಬಂದಿದೆ.

ಇಂತಹ ಅಪರೂಪದ ಮಹಾಕಾವ್ಯವನ್ನು ಸಾರಸ್ವತಲೋಕಕ್ಕೆ ಕೊಡಮಾಡಿದ ಪ್ರದೀಪಕುಮಾರ ಹೆಬ್ರಿ ಅವರಿಗೆ ಅಭಿನಂದನೆಗಳು.

‌‌ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *