ಗದಗ ಬಸವದಳದಿಂದ ೭೧ ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ

ಶರಣು ಶಿಣ್ಣೂರ್
ಶರಣು ಶಿಣ್ಣೂರ್

ಗದಗ :

ಬಸವದಳದ ವತಿಯಿಂದ ಆಯೋಜಿಸಲಾದ ೧೭೨೨ನೇ ಶರಣ ಸಂಗಮ ಕಾರ್ಯಕ್ರಮವು ಕನ್ನಡ ರಾಜ್ಯೋತ್ಸವದ ಅಂಗವಾಗಿ ವಚನ ಚಿಂತನೆ, ಕನ್ನಡ ನಾಡು-ನುಡಿಯ ಇತಿಹಾಸ ಹಾಗೂ ಶರಣರ ವೈಚಾರಿಕ ಕ್ರಾಂತಿಯ ಆಶಯಗಳೊಂದಿಗೆ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮದಲ್ಲಿ ವಚನ ಚಿಂತಕಿ ಮಂಗಳಕ್ಕ ಕಾಮಣ್ಣವರ, ಶರಣ ಅಂಗಸೋಂಕಿನ ಲಿಂಗ ತಂದೆಗಳು ರಚಿಸಿದ “ಭೋಗಬಂಕೇಶ್ವರ” ಅಂಕಿತದ ಎರಡು ವಚನಗಳನ್ನು ವಿಶ್ಲೇಷಿಸಿದರು.

ಅಂಗ, ಆತ್ಮ ಮತ್ತು ಲಿಂಗದ ತ್ರಿವಿಧ ಅನುಸಂಧಾನದಿಂದ ಮನುಷ್ಯನ ಅರಿವು ಪರಿಪೂರ್ಣಗೊಳ್ಳುತ್ತದೆ. ಹಾಗೂ ಆಧ್ಯಾತ್ಮಿಕ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಮತ್ತೊಂದು ವಚನದ ಮೂಲಕ ಕುರುಡು ಭಕ್ತಿ ಮತ್ತು ವಿವೇಚನಾರಹಿತ ವೈರಾಗ್ಯವನ್ನು ಟೀಕಿಸುತ್ತಾ, ಗುರು, ಲಿಂಗ, ಜಂಗಮರನ್ನು ಸಹ ಪರೀಕ್ಷಿಸಿ ಸ್ವೀಕರಿಸುವ ಶರಣರ ವೈಚಾರಿಕ ನಿಲುವು, ಭಾವಶುದ್ಧಿ ಮತ್ತು ಆತ್ಮವಿಮರ್ಶೆಯ ಮಹತ್ವವನ್ನು ವಿವರಿಸಿದರು.

ನಂತರ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ವಿವೇಕಾನಂದಗೌಡ ಪಾಟೀಲ ಅವರು, ‘ಕನ್ನಡ ನಾಡು-ನುಡಿ, ಇತಿಹಾಸ ಮತ್ತು ಕರ್ನಾಟಕದ ಏಕೀಕರಣ’ ಕುರಿತು ಉಪನ್ಯಾಸ ನೀಡಿದರು.

ಕನ್ನಡದ ಪ್ರಾಚೀನತೆ, ಇಮ್ಮಡಿ ಪುಲಕೇಶಿಯ ಕಾಲದ ಕರ್ನಾಟಕದ ಪ್ರಾದೇಶಿಕ ಅಸ್ಮಿತೆ, ಕನ್ನಡದ ಬೆಳವಣಿಗೆಗೆ ಶ್ರಮಿಸಿದ ಡೆಪ್ಯುಟಿ ಚೆನ್ನಬಸಪ್ಪ, ಭಾಲ್ಕಿ ಪಟ್ಟದ್ದೇವರು, ಅಂದಾನಪ್ಪ ದೊಡ್ಡಮೇಟಿ ಸೇರಿದಂತೆ ಅನೇಕ ಮಹನೀಯರ ಕೊಡುಗೆಗಳನ್ನು ಸ್ಮರಿಸಿದರು.

ಕರ್ನಾಟಕದ ಏಕೀಕರಣದ ಹೋರಾಟ, ಭಾಷಾವಾರು ಪ್ರಾಂತ್ಯಗಳ ರಚನೆ ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಯ ಅಗತ್ಯವನ್ನು ಐತಿಹಾಸಿಕ ಹಿನ್ನೆಲೆಯಲ್ಲಿ ವಿವರಿಸಿದರು.

ಕನ್ನಡದ ಅಭಿಮಾನವನ್ನು ಕೇವಲ ಮಾತಿಗೆ ಸೀಮಿತಗೊಳಿಸದೆ ದೈನಂದಿನ ಬದುಕಿನಲ್ಲಿ ಕನ್ನಡವನ್ನು ಬಳಸುವ ಮೂಲಕ ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು. ಅಲ್ಲದೇ ಕನ್ನಡ ಸ್ವಾಮಿಗಳೆಂದೇ ಹೆಸರಾಗಿದ್ದ ಪೂಜ್ಯ ಲಿಂಗೈಕ್ಯ ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಕನ್ನಡ ಕಳಕಳಿಯನ್ನು ಸ್ಮರಿಸಿದರು.

ಅತಿಥಿಗಳಾಗಿ ಉಪಸ್ಥಿತರಿದ್ದ ಶರಣ ಚಿಂತಕ ಶರಣು ಶಿಣ್ಣೂರ ಅವರು ಮಾತನಾಡಿ, ಭಾಷಾವಾರು ರಾಜ್ಯಗಳ ರಚನೆಯ ನಂತರದ ಗಡಿ ವಿವಾದಗಳು ಹಾಗೂ ಮಹಾಜನ ಆಯೋಗದ ವರದಿಯ ಕುರಿತು ವಿವರಿಸಿದರು.

ಅಕ್ಕಲಕೋಟೆ, ಜತ್ತ, ಸೋಲಾಪುರ, ಕಾಸರಗೋಡು ಸೇರಿದಂತೆ ೨೪೦ಕ್ಕೂ ಹೆಚ್ಚು ಪ್ರದೇಶಗಳ ಕುರಿತು ವರದಿಯಲ್ಲಿ ಕರ್ನಾಟಕದ ಪರವಾದ ಅಂಶಗಳಿದ್ದರೂ ರಾಜಕೀಯ ಕಾರಣಗಳಿಂದ ಅವು ಅನುಷ್ಠಾನಕ್ಕೆ ಬಂದಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಫ್ರೆಂಚ್ ಮತ್ತು ರಷ್ಯನ್ ಕ್ರಾಂತಿಗಳನ್ನು ಒಳಗೊಂಡಂತೆ ಜಗತ್ತಿನ ವಿವಿಧ ಕ್ರಾಂತಿಗಳನ್ನು ಉಲ್ಲೇಖಿಸಿದ ಅವರು, ಅಂತಹ ಕ್ರಾಂತಿಗಳ ಆಶಯಗಳೆಲ್ಲವೂ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣರ ಸಮಗ್ರ ಸಾಮಾಜಿಕ ಕ್ರಾಂತಿಯಲ್ಲಿ ಅಡಕವಾಗಿದ್ದವು ಎಂದು ತಿಳಿಸಿದರು.

ಶರಣರ ವಚನಗಳು ಕನ್ನಡದಲ್ಲಿ ದೊರೆತಿರುವುದು ಕರ್ನಾಟಕದ ಜನರ ಪುಣ್ಯ. ಪ್ರತಿಯೊಬ್ಬರೂ ವಚನಗಳನ್ನು ಓದಿ, ಅವುಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಕರ್ನಾಟಕದಲ್ಲಿ ಜನಿಸಿರುವುದಕ್ಕೆ ಧನ್ಯತಾಭಾವ ಹೊಂದಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷ  ಪ್ರಕಾಶ್ ಟಿ. ಅಸುಂಡಿ ವಹಿಸಿ ಮಾತನಾಡುತ್ತ, “ಬಸವಣ್ಣ ಎಂದರೆ ಕನ್ನಡ, ಕನ್ನಡವೆಂದರೆ ಬಸವಣ್ಣ”. ಕನ್ನಡಿಗರ ಸಂಸ್ಕೃತಿ ಶರಣ ಸಂಸ್ಕೃತಿ ಇಂಥಹ ಸಂಸ್ಕೃತಿಯನ್ನು ಆಚರಿಸುವ ಮೂಲಕ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಮಾತನಾಡುವ ಮೂಲಕ ಕನ್ನಡವನ್ನು ಉಳಿಸೋಣ, ಬೆಳೆಸೋಣ ಎಂದು ತಿಳಿಸಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂತೋಷ ಅಂಗಡಿ ಅವರು ‘ನನ್ನ ದೇಶ ನನ್ನ ಜನ’ ಕನ್ನಡ ಕವನ ವಾಚಿಸಿದರು.

ಸುಜಾತಾ ವಾರದ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಕರೇಗೌಡ್ರ ಹಾಗೂ ಸುವರ್ಣಾ ಗಾಳಪ್ಪನವರ ಪ್ರಾರ್ಥನೆ ಮಾಡಿದರು. ಡಾ. ಗಿರಿಜಾ ಹಸಬಿ ಅವರು ಸ್ವಾಗತ ಕೋರಿದರು. ವೇದಿಕೆ ಮೇಲಿನ ಎಲ್ಲ ಗಣ್ಯರು ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕೊನೆಯಲ್ಲಿ ಗಿರಿಜಕ್ಕ ಧರ್ಮರಡ್ಡಿ ಅವರು ಶರಣು ಸಮರ್ಪಣೆ ಮಾಡಿದರು.

ಒಟ್ಟಾರೆ, ೧೭೨೨ನೇ ಶರಣ ಸಂಗಮವು ವಚನಗಳ ವೈಚಾರಿಕತೆ, ಶರಣರ ಸಾಮಾಜಿಕ ಕ್ರಾಂತಿ ಹಾಗೂ ಕನ್ನಡ ನಾಡು-ನುಡಿಯ ಅಭಿಮಾನವನ್ನು ಸಾರುವ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂತು.

ಪ್ರಸಾದ ಸೇವೆಯನ್ನು ವಿದ್ಯಾಶ್ರೀ ಶರಣಬಸಪ್ಪ ಶಿಣ್ಣೂರ ವಹಿಸಿಕೊಂಡಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.