ಸಾಣೇಹಳ್ಳಿಯಲ್ಲಿ ನೂರಕ್ಕೂ ಹೆಚ್ಚು ಹಸುಗಳ ತಪಾಸಣೆ

ಹೈನುಗಾರಿಕೆ ಕುರಿತು ವಿಚಾರ ಸಂಕಿರಣ

ಸಾಣೇಹಳ್ಳಿ :

ಶ್ರೀಮಠದಲ್ಲಿ ನಡೆಯುತ್ತಿರುವ “ನಾಟಕೋತ್ಸವ 2026″ರ ಅಂಗವಾಗಿ ಬುಧವಾರ “ಬರಡು ರಾಸು ತಪಾಸಣೆ” ಮತ್ತು “ಹೈನುಗಾರಿಕೆ” ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.

ಡಾ. ಟಿ. ವಿ. ಗಿರೀಶ್ ಮತ್ತು ಶಿವಪ್ರಸಾದ್ ಅವರ ತಂಡವು ಸರ್ವೋದಯ ಕೃಷಿ ಘಟಕ, ಶಿಮುಲ್ ಮತ್ತು ಎಂ. ಪಿ. ಸಿ. ಎಸ್, ಸಾಣೇಹಳ್ಳಿ, ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಿತು.

ಸಾಣೇಹಳ್ಳಿ ಮತ್ತು ಸುತ್ತಲಿನ ಗ್ರಾಮದ 100ಕ್ಕೂ ಹೆಚ್ಚು ಹಸುಗಳನ್ನು ತಪಾಸಣೆ ಮಾಡಿ ಔಷಧ ವಿತರಿಸಲಾಯಿತು. ಜಾನುವಾರು ತಪಾಸಣೆ ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ನುರಿತ ವೈದ್ಯರು ಭಾಗವಹಿಸಿದ್ದರು.

ಆನಂತರ 11.30 ಗಂಟೆಯಿಂದ ಮಧ್ಯಾನ್ಹ 2.00 ಗಂಟೆಯವರೆಗೆ “ಹೈನುಗಾರಿಕೆ” ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ವಿಚಾರ ಸಂಕಿರಣದಲ್ಲಿ ಹೈನುಗಾರಿಕೆ ಮತ್ತು ಸ್ವಯಂ ಉದ್ಯೋಗ, ಹಾಲು ಕರೆವ ಹಸುಗಳಿಗೆ ವೈಜ್ಞಾನಿಕ ಆಹಾರ ಪೂರೈಕೆ, ರಸಮೇವು ಉತ್ಪಾದನೆ, ಬಳಕೆಯ ಮಹತ್ವ ಮತ್ತು ಕೆಚ್ಚಲುಬಾವು ತಡೆಗೆ ಮುಂಜಾಗ್ರತಾ ಕ್ರಮಗಳು ಎಂಬ ವಿಷಯಗಳ ಮೇಲೆ ನುರಿತ ಪಶುಸಂಗೋಪನಾ ತಜ್ಞರಿಂದ ಉಪನ್ಯಾಸ ಮತ್ತು ರೈತರೊಟ್ಟಿಗೆ ಸಂವಾದ ನಡೆಸಲಾಯಿತು.

ಜೊತೆಗೆ, ವೈಜ್ಞಾನಿಕವಾಗಿ ರಸಮೇವು ಉತ್ಪಾದನೆ ಮತ್ತು ಸಂಗ್ರಹದ ಮಾದರಿಗಳನ್ನು ಪ್ರದರ್ಶಿಸಿ ತೋರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಡಾ. ಟಿ. ವಿ. ಗಿರೀಶ್, ಡಾ. ಮಹದೇವ ಶರ್ಮಾ, ಡಾ. ದೀಪಕ್, ಡಾ. ರುದ್ರೇಶ್, ಡಾ. ನವೀನ್ , ಡಾ. ಪೂಜಾ, ಡಾ. ಕಿರಣ್ ಇವರುಗಳು ಭಾಗವಹಿಸಿದ್ದರು.

ಮಠಗಳ ಮೌಲ್ಯಮಾಪನ ಅಗತ್ಯ

ರಾಜ್ಯದಲ್ಲಿರುವ ಮಠಗಳ ಮೌಲ್ಯಮಾಪನ ಆಗಬೇಕಿದೆ. ಅನೇಕ ಮಠಗಳಿಗೆ ಮಾನದಂಡಗಳಿಲ್ಲ. ಆದರೆ ಎಲ್ಲ ಚಟುವಟಿಕೆಗಳ ಮೂಲಕ ಸದಾ ಕ್ರಿಯಾಶೀಲವಾಗಿದೆ ಸಾಣೇಹಳ್ಳಿಮಠ ಎಂದು ಚಿತ್ರದುರ್ಗ ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಶ್ಲಾಘಿಸಿದರು.

ನಾಟಕೋತ್ಸವ ಅಂಗವಾಗಿ ಬುಧವಾರ ಇಲ್ಲಿ ಹೈನುಗಾರಿಕೆ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದ ಸಾನಿಧ್ಯ ವಹಿಸಿಕೊಂಡು ಮಾತನಾಡಿದರು.

ಕಾಯಕ, ದಾಸೋಹಗಳನ್ನು ದೂರೀಕರಿಸುವ ಪ್ರಕ್ರಿಯೆಗಳು ಸಮಾಜದಲ್ಲಿ ಹೆಚ್ಚುತ್ತಿವೆ. ಇದಕ್ಕೆ ಕಾರಣ; ನಮಗೆ ನಾವೇ ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ. ಆದರೆ ಸಾಣೇಹಳ್ಳಿಯೆಂಬ ಪುಟ್ಟಗ್ರಾಮದಲ್ಲಿ ಶಿಕ್ಷಣ, ರಂಗಭೂಮಿ, ಕೃಷಿ, ಮದ್ಯಮುಕ್ತ ನಾಡಿಗಾಗಿ ಶ್ರಮಿಸುವ ಪಂಡಿತಾರಾಧ್ಯ ಶ್ರೀಗಳು ಅವಿರತವಾಗಿ ದುಡಿಯುತ್ತಿದ್ದಾರೆ ಎಂದು ಕೊಂಡಾಡಿದರು.

ಗೋವುಗಳಿಗೆ ಉತ್ತಮ ಆಹಾರ ಸಿಗಬೇಕು, ಅನಾರೋಗ್ಯದಿಂದ ಬಳಲಬಾರದು, ಅವುಗಳ ಸಂತತಿ ಹೆಚ್ಚಬೇಕು ಎನ್ನುವ ಕಾಳಜಿಯಿಂದ ಸಾಣೇಹಳ್ಳಿ ನಾಟಕೋತ್ಸವದಲ್ಲಿ ಹೈನುಗಾರಿಕೆ ಕುರಿತು ವಿಚಾರ ಸಂಕಿರಣ ಏರ್ಪಡಿಸಿರುವುದು ಮಹತ್ವವಾದುದು ಎಂದರು.

ಹೈನುಗಾರಿಕೆ ಮತ್ತು ಸ್ವಯಂ ಉದ್ಯೋಗ ಕುರಿತು ಹಾರನಹಳ್ಳಿಯ ಪಶುವೈದ್ಯಾಧಿಕಾರಿ ಡಾ.ಟಿ.ವಿ. ಗಿರೀಶ ಮಾತನಾಡಿ, ರಾಜ್ಯದಲ್ಲಿ ನಿತ್ಯವೂ ಒಂದು ಕೋಟಿ ಲೀಟರ್ ಹಾಲು ಕೆಎಂಎಫ್‌ಗೆ ಸಂಗ್ರಹವಾಗುತ್ತಿದೆ. ಆದರೆ ಕೃಷಿಯಲ್ಲಿ ಇಳುವರಿ ಕಡಿಮೆಯಾಗುತ್ತಿದೆ. ಖರ್ಚು ಹೆಚ್ಚುತ್ತಿದೆ. ನೀರು ಹಿಡಿದಿಟ್ಟುಕೊಳ್ಳುವ ಭೂಮಿಯ ಸಾಮರ್ಥ್ಯ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮೇವು ಬೆಳೆಯಲು ಜಮೀನನಲ್ಲಿ ಶೇ.10ರಷ್ಟನ್ನು ರೈತರು ಮೀಸಲಿಡಬೇಕು. ಹಾಗೆಯೇ ಬೇಲಿಯ ರೂಪದಲ್ಲಿ ನುಗ್ಗೆ ಮೊದಲಾದ ಗಿಡಗಳನ್ನು ಬೆಳೆಸಿಬೇಕು. ಪ್ರತಿ ಹೈನುಗಾರರು ತಮ್ಮ ಪಶುಗಳಿಗೆ ತಾವೇ ಮೇವು ಬೆಳೆಯಬೇಕು ಎಂದು ಸಲಹೆ ನೀಡಿದರು.

ಕೆಚ್ಚಲುಬಾವು ತಡೆಗೆ ಮುಂಜಾಗ್ರತಾ ಕ್ರಮಗಳು ಕುರಿತು ಪುರದಾಳು ಮುಖ್ಯ ಪಶುವೈದ್ಯಾಧಿಕಾರಿ ಡಾ.ಬಿ.ಎಂ. ಮಹದೇವ ಶರ್ಮಾ ಹಾಗೂ ರಸಮೇವು ಉತ್ಪಾದನೆ ಮತ್ತು ಬಳಕೆಯ ಮಹತ್ವ ಕುರಿತು ಕಾಟಿನಗೆರೆ ಎಂ.ಎಂ., ಸೈಲೋ ಅಗ್ರೊ ಇಂಡಸ್ಟ್ರೀಸ್ ನ ಕೆ.ಎಸ್. ಮಧುಕೇಶ್ವರ ಮಾತನಾಡಿದರು.

ಸಮಾರಂಭದ ಆರಂಭಕ್ಕೆ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿದ, ಆರ್. ಚಂದ್ರಮ್ಮ ನಿರ್ದೇಶಿಸಿದ, ಗುರುಪಾದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ಮುಖವಾಡ’ ನಾಟಕ ಪ್ರದರ್ಶನಗೊಂಡಿತು.

ಇದಕ್ಕೂ ಮೊದಲು ಇಲ್ಲಿನ ಎಸ್.ಡಿ. ಸಿದ್ಧರಾಮಯ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬರಡು ರಾಸುಗಳ ತಪಾಸಣೆ ಮತ್ತು ಚಿಕಿತ್ಸೆ ಶಿಬಿರಕ್ಕೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಚಾಲನೆ ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *