‘ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ’

ಬಸವ ಮೀಡಿಯಾ
ಬಸವ ಮೀಡಿಯಾ

ಶಿವಾನುಭವದಲ್ಲಿ ಕರ್ನಾಟಕ ರಾಜ್ಯೋತ್ಸವ, ‘ಕಲ್ಯಾಣದ ಕ್ರಾಂತಿಯ ಕಿಡಿ’ ರೂಪಕ ಪ್ರದರ್ಶನ

ಗದಗ :

ಗದುಗಿನ ಸುಪ್ರಸಿದ್ಧ ಕವಿಗಳಾದ ಚಾಮರಸ, ಕುಮಾರವ್ಯಾಸ ಮುಂತಾದವರು ಸಾಹಿತ್ಯ ನಾಟಕ, ಕಲೆ, ಸಂಗೀತ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆ ಅನನ್ಯವಾದುದು. ಕನ್ನಡ ಸಾಹಿತ್ಯ, ಕಲೆ, ಸಂಗೀತ, ನಾಟಕ, ಸಂಸ್ಕೃತಿಗಳಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರವಾದದ್ದು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ನುಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೨೨ನೇ ಶಿವಾನುಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕರ್ನಾಟಕದ ಏಕೀಕರಣಕ್ಕಾಗಿ ಅಂದಾನಪ್ಪ ದೊಡ್ಡಮೇಟಿ, ನಾರಾಯಣರಾವ ಹುಯಿಲಗೋಳ, ಅಬ್ಬಿಗೇರಿ ವಿರೂಪಾಕ್ಷಪ್ಪ, ಆಲೂರು ವೆಂಕಟರಾಯ ಮುಂತಾದವರು ಮಾಡಿದ ತ್ಯಾಗ ಹೋರಾಟ ಅಪಾರವಾದದ್ದು ಎಂದರು.

ಲಿಂಗೈಕ್ಯ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು ಗೋಕಾಕ ಚಳುವಳಿಯ ನೇತೃತ್ವ ವಹಿಸಿ ಮಾಡಿದ ಹೋರಾಟ ಐತಿಹಾಸಿಕವಾದುದು. ಕನ್ನಡ ಸಮೃದ್ಧ ಭಾಷೆ. ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ ಅರಸರು, ಮೈಸೂರು ಮಹಾರಾಜರು ಈ ಭಾಷೆಗೆ ನೀಡಿದ ಪ್ರೋತ್ಸಾಹ ಅನಂತವಾದುದು.

ವಚನಕಾರರು, ದಾಸವರೇಣ್ಯರು ನೀಡಿದ ಕೊಡುಗೆ ಅನನ್ಯವಾದವುಗಳು ಎಂದರು. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಪದದ ಅನುಕರಣೆ ಇಂದಿನ ಅಗತ್ಯವಾಗಿದೆ ಎಂದರು. ಕನ್ನಡ ಭಾಷೆ ವಿಜೃಂಭಿಸಬೇಕಾದರೆ ಪ್ರತಿಯೊಬ್ಬ ಕನ್ನಡಿಗರು ಭಾಷೆಯನ್ನು ಅಭಿಮಾನದೊಂದಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮೊಬೈಲ್, ಕಂಪ್ಯೂಟರ್ ಜಗತ್ತಿನಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವೀಣಾ ಪಾಟೀಲ ಮಾತನಾಡಿ, ಯುವಕರಲ್ಲಿ ಕನ್ನಡ ಪುಸ್ತಕ ಓದುವ ಹವ್ಯಾಸ ಹೆಚ್ಚಬೇಕು. ಜೊತೆಗೆ ಕನ್ನಡ ಅಭಿಮಾನ ಮೂಡಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಧಾರವಾಡದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಪ್ರೊ. ಇಬ್ರಾಹಿಂ ಸೌದಾಗರ ಅವರು, ಕರ್ನಾಟಕ ಇತಿಹಾಸದ ಮೈಲುಗಲ್ಲುಗಳು ಎನ್ನುವ ವಿಷಯ ಕುರಿತು ಮಾತನಾಡಿ, ಕರ್ನಾಟಕದ ಚರಿತ್ರೆ ರೋಮಾಂಚನಕಾರಿಯಾಗಿದೆ. ೧ ನೆಯ ಶತಮಾನದಿಂದ ಇಂದಿನವರೆಗೂ ವೈಭವಪೂರ್ಣ ಘಟನೆಗಳನ್ನು ಹೊಂದಿ ಕದಂಬರಿಂದ ಆದಿಯಾಗಿ ಕರ್ನಾಟಕ ಏಕೀಕರಣ ಆಗುವವರೆಗಿನ ವಿಷಯಗಳನ್ನು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು.

ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ಮನೆಯಲ್ಲಿ ಗ್ರಂಥಾಲಯ ಮಾಡಿದ ಅಣ್ಣಿಗೇರಿಯ ಪತ್ರೇಶ್ವರ ಸಿ. ನವಲಗುಂದ ಅವರ ಸೇವೆಯನ್ನು ಪ್ರಶಂಸಿಸಿ ಪೂಜ್ಯರು ಅವರಿಗೆ ಗೌರವ ಸನ್ಮಾನ ಮಾಡಿದರು.
ಅಣ್ಣಿಗೇರಿಯ ಶ್ರೀಮತಿ ನಿಂಗಮ್ಮ ಹೂಗಾರ ಪ್ರೌಢಶಾಲೆಯ ಮಕ್ಕಳಿಂದ ‘ಕಲ್ಯಾಣದ ಕ್ರಾಂತಿಯ ಕಿಡಿ’ ರೂಪಕ ಜರುಗಿತು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಸ್ವಾಗತ ಕೋರಿದರು. ಎಸ್. ಎಸ್. ಹರ್ಲಾಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧರ್ಮಗ್ರಂಥ ಪಠಣ ಪ್ರಣವಿ ಅಣ್ಣಿಗೇರಿ, ವಚನ ಚಿಂತನ ಛಾಯಾ ಜಂಗಮನಿ ಮಾಡಿದರು. ದಾಸೋಹ ಸೇವೆ ಅಣ್ಣಿಗೇರಿಯ ಬಸಪ್ಪ ಅಮೃತಪ್ಪ ಪಲ್ಲೆದ ವಹಿಸಿಕೊಂಡಿದ್ದರು.

ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಮಾಜಿ ಸಚಿವ ಶಿವಾನಂದ ಕೌಜಲಗಿ, ಸಾಹಿತಿ ಜಿನದತ್ತ ದೇಸಾಯಿ, ಸಿದ್ದಯ್ಯ ಹಿರೇಮಠ ಹಾಗೂ ಸರೋಜಿನಿ ಬಳ್ಳೊಳ್ಳಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರೇವಣಸಿದ್ದಯ್ಯ ಮರಿದೇವರಮಠ, ಮೃತ್ಯುಂಜಯ ಮತ್ತು ಸುತಾರ ಅವರಿಂದ ಕನ್ನಡ ಗೀತೆಗಳ ಗಾಯನ, ಮಲ್ಲಿಕಾರ್ಜುನ ಬಜಂತ್ರಿ ಅವರಿಂದ ಶಹನಾಯಿ ವಾದನ ಜರುಗಿತು.

ಶಿವಾನುಭವದಲ್ಲಿ ಗಂಗಾಧರ ಹಿರೇಮಠ, ದಾನಯ್ಯ ಗಣಾಚಾರಿ, ಡಾ. ರಮೇಶ ಕಲ್ಲನಗೌಡರ, ಡಾ. ಆದೇಶ ಅಂಗಡಿ, ಸೋಮು ಪುರಾಣಿಕ, ಸುನಂದ ಪಿಳ್ಳೆ, ಕೆ.ಎಸ್. ಕೋರಿಮಠ, ಎಸ್. ಐ. ಪಟ್ಟೇದ, ಡಾ. ಪ್ರಭು ಗಂಜಿಹಾಳ ಮುಂತಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *