ರಾಯಚೂರು ಬಸವಕೇಂದ್ರದಲ್ಲಿ ಗಂಗಾಂಬಿಕಾ ತಾಯಿಯವರ ಸ್ಮರಣೆ

ರಾಯಚೂರು :

ನಗರದ ಬಸವ ಕೇಂದ್ರದಲ್ಲಿ ಮಹಾನ್ ಶರಣೆ  ಗಂಗಾಂಬಿಕಾ ತಾಯಿ ಅವರ ಸ್ಮರಣೆಯ ಅಂಗವಾಗಿ ವಿಶೇಷ ಚಿಂತನಾ ಗೋಷ್ಠಿ ಏರ್ಪಡಿಸಲಾಗಿತ್ತು.

ಅಮರಗುಂಡಪ್ಪ ಹೂಗಾರ ಮಾತನಾಡಿ, ಜಗಜ್ಯೋತಿ ಬಸವಣ್ಣನವರ ಧರ್ಮಪತ್ನಿಯರದು ಬಸವಣ್ಣನವರ ಸರ್ವತೋಮುಖ ಬೆಳವಣಿಗೆಗೆ ಅವರ ಕೊಡುಗೆ ಅಪಾರ. ಕಲ್ಯಾಣವೆಂದರೆ ಜಗತ್ತಿನ ಒಳಿತನ್ನು ಬಯಸುವುದು. ಅದನ್ನು ಸಾಧಿಸಿ ತೋರಿಸಿದವರು 12ನೇ ಶತಮಾನದ ಬಸವಾದಿ ಶರಣರೆಂದರು.

ಅಶೋಕ ಕಾರ್ಪೆ ಅವರು ಮಾತನಾಡುತ್ತಾ, ಬಸವಣ್ಣನವರ ಉತ್ತರಾರ್ದ, ಪೂರ್ವಾರ್ಧಗಳ ಬದುಕನ್ನು ರೂಪಿಸಿದ ಚಿತ್ ಶಕ್ತಿಗಳು ‘ಮಹಾಮನೆ’ಯಲ್ಲಿದ್ದರು. ಗಂಗಾಂಬಿಕೆ ಬಲದೇವರ ಮಗಳಾಗಿ ಸಾಹಿತ್ಯ, ಸಂಗೀತ, ಧೈರ್ಯ, ಸ್ಥೈರ್ಯಗಳ ಮೂರ್ತಿಯಾಗಿದ್ದರು. ವಚನಕಾರ್ತಿಯರಾಗಿದ್ದರು. ಹಾಗೂ ಅನುಭವ ಮಂಟಪದಲ್ಲಿ ಮತ್ತು ದಾಸೋಹ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಹಾನ್ ಸಾಧ್ವಿಯಂದರು.

ವಿಶ್ರಾಂತ ಎಎಸ್ಐ ನಾಗೇಶ್ವರಪ್ಪ ಮಾತನಾಡಿ, ಅಕ್ಕನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆ ಈ ಶರಣೆಯರು ತಮ್ಮ ಧೈರ್ಯ, ಸ್ಥೈರ್ಯ, ಸಹನೆ, ಭಕ್ತಿ, ವಿವೇಚನೆ, ಸಹಕಾರತ್ವ, ಅನುಕಂಪ, ಸಮಚಿತ್ತ ಗುಣಗಳಿಂದ ಅಧ್ಯಾತ್ಮ ಜೀವಿಗಳಾಗಿ ಮಹಾಮನೆ ಬೆಳಗಿದ ಜ್ಯೋತಿಯಾಗಿದ್ದರಲ್ಲದೆ ಬಸವಣ್ಣನವರ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರಾಗಿದ್ದರೆಂಬುದು ಇತಿಹಾಸ ಪುಟಗಳಲ್ಲಿ ಕಂಡು ಬರುತ್ತದೆಂದರು.

ಮಲ್ಲಿಕಾರ್ಜುನ ಗುಡುಮನಿ ಅವರು ಮಾತನಾಡಿ, ಭಾರತದ ಸಂಸ್ಕೃತಿ ದ್ರಾವಿಡ ಸಂಸ್ಕೃತಿ. ಬುದ್ಧ ಪೂರ್ವದಲ್ಲಿ ದ್ರಾವಿಡ ಸಂಸ್ಕೃತಿಯನ್ನು ಬಿಟ್ಟರೆ ಬೇರೆ ಸಂಸ್ಕೃತಿಗಳು ಭಾರತದಲ್ಲಿ ಕಂಡು ಬರುತ್ತಿರಲಿಲ್ಲ. ಆ ಸಮಯದಲ್ಲಿ ಇಲ್ಲಿ ನಾಗರಾಜರುಗಳು ಇದ್ದರು. ಬುದ್ಧನ ನಂತರ ಆರ್ಯ ಸಂಸ್ಕೃತಿ ನಮ್ಮ ದೇಶದಲ್ಲಿ ಬಂದಿದ್ದರಿಂದ ದ್ರಾವಿಡ ಸಂಸ್ಕೃತಿಯನ್ನು ನಾಶ ಮಾಡುವ ಉದ್ದೇಶದಿಂದ ಕಾಲ್ಪನಿಕ ದೇವತೆಗಳಾದ ನವ ದುರ್ಗೆಯರ ಅವತಾರದಲ್ಲಿ ನಾಗರಾಜರುಗಳನ್ನು ನಾಶಮಾಡಿ ಆರ್ಯ ಸಂಸ್ಕೃತಿಯನ್ನು ಈ ದೇಶದಲ್ಲಿ ಬೆಳೆಸಿದ್ದನ್ನು ಇತಿಹಾಸ ಪುಟದಲ್ಲಿ ನಾವು ನೋಡಬಹುದೆಂದರು.

ನೀಲಕಂಠರಾವ ವಕೀಲರು ಮಾತನಾಡಿ, ನಗರದ ಬಸವ ಕೇಂದ್ರದಲ್ಲಿ ಬಸವಾದಿ ಶರಣ ಶರಣೆಯರ ಜಯಂತಿ ಮತ್ತು ಚಿಂತನೆಗಳನ್ನು ಹಾಗೂ ಶರಣರ ಆದರ್ಶಗಳನ್ನು ಜನಮಾನಸದಲ್ಲಿ ಮುಟ್ಟಿಸುವ ಉದ್ಧೇಶದಿಂದ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ನಿಜವಾಗಿಯೂ ಶ್ಲಾಘನಿಯವೆಂದರು.

ಗೌರವಾಧ್ಯಕ್ಷ ಹರವಿ ನಾಗನಗೌಡರು ಶರಣ – ಶರಣೆಯರ ಜಯಂತಿ, ಸ್ಮರಣೆ ಮುಂತಾದ ಬಸವಾದಿ ಶರಣರ ಆದರ್ಶಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಇಂದಿನ ಮಠಾಧಿಪತಿಗಳು ಮಾಡಬೇಕಾಗಿತ್ತು. ಆದರೆ ಇಂದು ಕೆಲವೊಂದು ಮಠಾಧೀಶರನ್ನು ಹೊರತುಪಡಿಸಿ ಬಹಳಷ್ಟು ಮಠಗಳ ಸ್ವಾಮಿಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಒಲವು ತೋರಿಸುತ್ತಿಲ್ಲ.

ಈ ಕಾರಣಕ್ಕಾಗಿ ಇಂದು ಬಸವಪರ ಸಂಘಟನೆಗಳು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶರಣರು ಸಮಸಮಾಜಕ್ಕೆ ನೀಡಿದ ಕೊಡುಗೆಯನ್ನು ಸಮಾಜಕ್ಕೆ ತಿಳಿಸಿಕೊಡುತ್ತಿರುವುದು ನಿರಂತರವಾಗಿ ನಡೆಯುತ್ತಿರುವುದು ಸಂತೋಷವಾಗಿದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.

ವಚನ ಗಾಯನ ಮತ್ತು ಸಾಮೂಹಿಕ ಬಸವ ಪ್ರಾರ್ಥನೆಯನ್ನು ನಾಗೇಶ್ವರಪ್ಪ ನಡೆಸಿಕೊಟ್ಟರು, ವೆಂಕಣ್ಣ ಆಶಾಪುರ ಸ್ವಾಗತಿಸಿದರು,  ಜೆ. ಬಸವರಾಜ ವಕೀಲರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಧನಂಜಯ ಹಡಪದ ವಂದಿಸಿದರು.

ಕಾರ್ಯಕ್ರಮದಲ್ಲಿ ಅಮರಪ್ಪ ಅಮೀನಗಡ, ವನಜಾಕ್ಷಿ, ಗಿರಿಜಾ ಶಂಕರ, ಸರೋಜಮ್ಮ ಮಾಲಿಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *