ಸಂಕಷ್ಟಕ್ಕೆ ಸಿಲುಕಿಸುವ ಪಶ್ಚಿಮ ಘಟ್ಟ ನಾಶ; ಅಖಿಲೇಶ್ ಚಿಪ್ಳಿ ಆತಂಕ

ಗಣೇಶ ಅಮೀನಗಡ
ಗಣೇಶ ಅಮೀನಗಡ

ಪರಿಸರಕ್ಕೆ ಗೌರವ ನೀಡದಿದ್ದರೆ ತೀವ್ರ ಪರಿಣಾಮ: ವಿಜಯೇಂದ್ರ

ಸಾಣೇಹಳ್ಳಿ :

ಪಶ್ಚಿಮ ಘಟ್ಟಗಳು ಎಲ್ಲ ನದಿಗಳ ಮೂಲ ನಿಜ. ಹಾಗೆಯೇ ಪಶ್ಚಿಮ ಘಟ್ಟಗಳು ಇಡೀ ರಾಜ್ಯಕ್ಕೆ ಸೇರಿವೆ. ಆದರೆ ಬಹಳ ಬೇಗ ನಾಶವಾಗುತ್ತಿವೆ. ಹೀಗಾಗಿ ಪಶ್ಚಿಮ ಘಟ್ಟಗಳು ನಾಶವಾದರೆ ನಮ್ಮ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಪರಿಸರ ಬರಹಗಾರ ಅಖಿಲೇಶ್ ಚಿಪ್ಳಿ ಆತಂಕ ವ್ಯಕ್ತಪಡಿಸಿದರು.

ನಾಟಕೋತ್ಸವ ಅಂಗವಾಗಿ ಬುಧವಾರ ಇಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ‘ಪರಿಸರದ ಸವಾಲುಗಳು’ ವಿಷಯ ಕುರಿತು ಮಾತನಾಡಿದರು.

ದೇಶದಲ್ಲಿ ಹೆಚ್ಚು ಬರಪೀಡಿತ ರಾಜ್ಯವೆಂದರೆ ಕರ್ನಾಟಕ. ವರ್ಷದಿಂದ ವರ್ಷಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ.
ಶರಾವತಿ ನದಿಯಿಂದ ವಿದ್ಯುತ್ ಉತ್ಪಾದಿಸಿ ಬೆಂಗಳೂರು ಬೆಳೆದಿದೆ. ಕಾವೇರಿ ನೀರು ಕುಡಿದು ಬೆಂಗಳೂರು ಬೆಳೆದಿದೆ. ಆದರೆ ರಾಜ್ಯಕ್ಕೆ ಬೆಂಗಳೂರು ಕೊಡುಗೆ ಏನು ಎಂದು ಪ್ರಶ್ನಿಸಿದರು.

ನೀರು ಜೀವಜಲ. ನೀರಿಲ್ಲದೆ ಮೂರು ದಿನಗಳಿಗಿಂತ ಹೆಚ್ಚು ಬದುಕಲಾರೆವು. ಆದರೆ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಪೂರ್ವಾಭಿಮುಖವಾಗಿ ಹರಿಸುವ ಸಾಹಸ ಏಕೆ? ನದಿ ತಿರುವು ಒಂದೇ ಮುಖ್ಯವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಏಕೆಂದರೆ ಬರಪೀಡಿತ ಜಿಲ್ಲೆಗಳಲ್ಲಿ ಕಬ್ಬು ಬೆಳೆಯುತ್ತಿದ್ದೇವೆ. ನೀರು ಸಾಲದಾದಾಗ ನದಿ ತಿರುವಿಗೆ ಒತ್ತಾಯಿಸುತ್ತೇವೆ. ನದಿಗಳ ತಿರುವು ಯೋಜನೆ ಫಲಪ್ರದವಾಗಿದ್ದು ಬಹಳ ಕಡಿಮೆ ಎಂದು ವಿವರಿಸಿದರು.

ಕಳೆದ 10-12 ವರ್ಷಗಳಿಂದ ಎತ್ತಿನಹೊಳೆ ನದಿ ತಿರುವು ಯೋಜನೆ ನಡೆಯುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಒದಗಿಸುವ ಯೋಜನೆಯು ಇದುವರೆಗೆ ಪೂರ್ಣಗೊಂಡಿಲ್ಲ. ಮೂಲನದಿಯಿಂದ 24 ಟಿಎಂಸಿ ನೀರು ಸಿಗುತ್ತದೆಂದು ತಜ್ಞರು ಹೇಳಿದ್ದರು. ಈಗ 4 ಟಿಎಂಸಿ ನೀರು ಮಾತ್ರ ಸಿಗುತ್ತದೆ ಎನ್ನುತ್ತಿದ್ದಾರೆ. ರೂ. 33 ಸಾವಿರ ಕೋಟಿ ವೆಚ್ಚದ ಯೋಜನೆ ಪ್ರಯೋಜನ ಯಾವಾಗ ಆಗುತ್ತದೆ ಎಂದು ಕೇಳಿದರು.

ಮಲೆನಾಡಿನಲ್ಲಿ ಸಮೃದ್ಧ ಕಾಡನ್ನು ಕಡಿದು ಅಕೇಶಿಯಾ ಗಿಡಗಳನ್ನು ಅರಣ್ಯ ಇಲಾಖೆಯವರು ನೆಟ್ಟರು. ಮಳೆಕಾಡು ತೆಗೆದು ಏಕಜಾತಿಯ ಅಕೆಶಿಯಾ ತೋಪು ನೆಡಲಾಯಿತು. ಹೀಗೆಯೇ ಲಿಂಗನಮಕ್ಕಿ ಅಣೆಕಟ್ಟೆಯಿಂದ 326 ಚದರ ಕಿ.ಮೀ. ಅರಣ್ಯ ನಾಶವಾದಾಗ ಮಳೆ ಕಡಿಮೆಯಾಯಿತು. ಇದರಿಂದ ಈಚಿನ ವರ್ಷಗಳಲ್ಲಿ ಕೆರೆಗಳು ತುಂಬುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕಳೆದ 30-40 ವರ್ಷಗಳಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಈಗ ಭೂಮಿ ಕುದಿಯುತ್ತಿದೆ. ಈಗಿನ ಕಾಡುಗಳನ್ನು ಅವಶ್ಯವಾಗಿ, ಅನಿವಾರ್ಯವಾಗಿ ಉಳಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಶಿವಮೊಗ್ಗ ಜಿಲ್ಲೆ ಮಲೆನಾಡಿನ ಹೆಬ್ಬಾಗಿಲು ಎನ್ನುತ್ತಾರೆ. ಆದರೆ ಅತಿ ಹೆಚ್ಚು ಕಾಡು ಒತ್ತುವರಿಯಾದ ಜಿಲ್ಲೆಯೂ ಶಿವಮೊಗ್ಗ ಆಗಿದೆ. ನಮ್ಮ ಮಲೆನಾಡಿನ ಶಾಸಕರಿಗೆ ಪಶ್ಚಿಮ ಘಟ್ಟದ ಮಹತ್ವವನ್ನು ತಿಳಿಸುವಲ್ಲಿ ನಾವು ವಿಫಲರಾಗಿದ್ದೇವೆ. ನಮ್ಮ ಮಲೆನಾಡಿನಲ್ಲಿ 4 ತಿಂಗಳು ಸೋನೆ ಮಳೆಯಾಗುತ್ತಿತ್ತು. ಆದರೆ ಈಗ ತೀವ್ರವಾಗಿ ಮಳೆ ಕಡಿಮೆಯಾಗಿದೆ. ಇದಕ್ಕಾಗಿ ನಾವು ಐಷಾರಾಮಿ ಬದುಕನ್ನು ಬಿಟ್ಟು, ಗಾಂಧಿ ಮಾರ್ಗದೆಡೆಗೆ ಹೋಗುವುದು ಭೂಮಿಗೆ ನಾವು ತೀರಿಸುವ ಋಣಸಂದಾಯ ಎಂದರು.

ಪರಿಸರಕ್ಕೆ ಗೌರವ ನೀಡದಿದ್ದರೆ ತೀವ್ರ ಪರಿಣಾಮ: ವಿಜಯೇಂದ್ರ

ಪರಿಸರಕ್ಕೆ ಗೌರವ ಕೊಡದೆ ಇರುವ ಪರಿಣಾಮ ವಿಪರೀತ ಮಳೆ ಮತ್ತು ಬರಗಾಲ ಎದುರಿಸುತ್ತಿದ್ದೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆತಂಕ ವ್ಯಕ್ತಪಡಿಸಿದರು. ನಾಟಕೋತ್ಸವ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮೌಲ್ಯವಾದ ಸಂಪತ್ತು ಎಂದರೆ ಕುಟುಂಬಗಳು. ಆದರೆ ಬಂಧುಗಳ ನಡುವೆ ಸಂಬಂಧಗಳು ಹಳಸುತ್ತಿವೆ. ಯಾವುದೇ ಸಮಾಜದವರಾದರೂ ಒಂದಾಗಿ, ಒಕ್ಕಟ್ಟಾಗಿ ಹೋಗುವ ಅನಿವಾರ್ಯತೆ ಇದೆ ಎಂದರು.

ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂದು ಹೆತ್ತವರು ಕಷ್ಟಪಡುತ್ತಾರೆ. ಆದರೆ ಉದ್ಯೋಗದಾತರಾದ ನಂತರ ಹೆತ್ತವರನ್ನು ಮರೆತು ವೃದ್ಧಾಶ್ರಮಕ್ಕೆ ಸೇರಿಸುವ ಯೋಜನೆಯಲ್ಲಿರುತ್ತಾರೆ. ಪ್ರೀತಿ, ನಂಬಿಕೆಯಿದ್ದರೆ ಸಂಬಂಧಗಳು ಗಟ್ಟಿಯಾಗಿರುತ್ತವೆ. ಇದಕ್ಕಾಗಿ ಇಂಥ ನಾಟಕೋತ್ಸವಗಳು ಸಂಬಂಧಗಳನ್ನು ಬೆಸೆಯುವಲ್ಲಿ ನೆರವಾಗುತ್ತವೆ ಎಂದರು.

ಅಂಗಾಂಗ ದಾಸೋಹ ಅಗತ್ಯ; ಸಂಸದೆ ಪ್ರಭಾ

ರಕ್ತದಾನ ಮಾಡಬಹುದು, ಕಿಡ್ನಿ ಕೊಡಬಹುದು, ಆದರೆ ನಾವು ತೀರಿಕೊಂಡ ನಂತರವೂ ಇತರರಿಗೆ ನೆರವಾಗಲು ಸಾಧ್ಯವಾಗುವುದು ದೇಹದಾನದ ಮೂಲಕ. ಇದರ ಮಹತ್ವ ಅರಿಯಬೇಕಿದೆ. ಹೀಗಾಗಿ ಅಂಗಾಂಗ ದಾಸೋಹ ಅಗತ್ಯವಿದೆ ಎಂದು ದಾವಣಗೆರೆಯ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಾಟಕೋತ್ಸವ ಅಂಗವಾಗಿ ಬುಧವಾರ ಇಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ದಾವಣಗೆರೆಯ ನರೇಶ ಅವರು ನಿಮ್ಹಾನ್ಸ್ ನಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತೀರಿಕೊಂಡರು. ಅವರ ಮಿದುಳು ನಿಷ್ಕ್ರಿಯವಾಗಿದ್ದರ ಪರಿಣಾಮ ಅವರ ಪತ್ನಿ ದೇಹದಾನ ಮಾಡಿದರು. ಇದರಿಂದ ಆರು ಜೀವಗಳಿಗೆ ನೆರವಾಗಿದೆ.

ನಮ್ಮ ರಾಜ್ಯದಲ್ಲಿ 90 ಸಾವಿರ ಜನರು ಅಂಗಾಂಗಗಳಿಗೆ ಕಾಯುತ್ತಿದ್ದಾರೆ. ಆದರೆ ಪ್ರತಿ ವರ್ಷ 30 ಸಾವಿರ ಜನರ ಅಂಗಾಂಗಳು ಲಭ್ಯವಾಗುತ್ತಿವೆ. ಇದಕ್ಕಾಗಿ ನಾವು ದೇಹದಾನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ವೇದಿಕೆ ಮೇಲೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮಿಗಳು, ಚಿಕ್ಕಮಗಳೂರಿನ ಬಸವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ, ಹೊಳಲ್ಕೆರೆ ಮಾಜಿ ಶಾಸಕರಾದ ಪಿ. ರಮೇಶ, ಚಿಂತಕ ಮಹಿಮಾ ಪಟೇಲ, ಸಿಂಡಿಕೇಟ್ ಸದಸ್ಯ ಶಾಂತಕುಮಾರ ಮತ್ತಿತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
1 Comment

Leave a Reply

Your email address will not be published. Required fields are marked *