ಹೊಳಲ್ಕೆರೆ :
ಪಟ್ಟಣದ ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವದ ಅರ್ಥಪೂರ್ಣ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಮಾತನಾಡಿದ ಕೊಟ್ರೆ ನಂಜಪ್ಪ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ ಅವರು, ಹನ್ನೆರಡನೆಯ ಶತಮಾನದವರೆಗೂ ಸಂಸ್ಕೃತ ಭಾಷೆಯನ್ನು ದೈವಭಾಷೆ ಎಂದು ಗೌರವಿಸಲಾಗುತ್ತಿತ್ತು. ಆದರೆ ಶರಣರು ತಮ್ಮ ವಚನಗಳ ಮೂಲಕ ಜನಸಾಮಾನ್ಯರ ಆಡುನುಡಿಯಾಗಿದ್ದ ಕನ್ನಡ ಭಾಷೆಯನ್ನೇ ಅಧ್ಯಾತ್ಮ, ತತ್ತ್ವಜ್ಞಾನ ಮತ್ತು ಅನುಭಾವದ ಅಭಿವ್ಯಕ್ತಿಗೆ ಸಮರ್ಥವಾದ ಭಾಷೆಯನ್ನಾಗಿ ರೂಪಿಸಿ, ಕನ್ನಡಕ್ಕೂ ದೈವಿಕ ಅಭಿವ್ಯಕ್ತಿಯ ಗೌರವ ತಂದುಕೊಟ್ಟರು.
ಆ ಮೂಲಕ ಕನ್ನಡ ಭಾಷೆಯ ಅಭಿವ್ಯಕ್ತಿ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದರು. ಕನ್ನಡ ಸಾಹಿತ್ಯಕ್ಕೆ ಶರಣರು ನೀಡಿದ ಬಹುದೊಡ್ಡ ಕೊಡುಗೆಯೇ ವಚನ ಸಾಹಿತ್ಯ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಲೋಕಕ್ಕೆ ವಚನ ಸಾಹಿತ್ಯ ನೀಡಿದ ಕೊಡುಗೆ ಅನನ್ಯ. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣರ ಸಾಮಾಜಿಕ, ಧಾರ್ಮಿಕ ಮತ್ತು ಸಾಹಿತ್ಯಿಕ ಚಳವಳಿ ಕನ್ನಡ ಭಾಷೆಗೆ ಹೊಸ ಆಯಾಮವನ್ನು ನೀಡಿತು. ಸರಳ ಜನಭಾಷೆಯಲ್ಲಿ ರಚನೆಯಾದ ವಚನಗಳು ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಿದವು. ವಚನ ಸಾಹಿತ್ಯವು ಕೇವಲ ಸಾಹಿತ್ಯ ಪ್ರಕಾರವಾಗಿ ಉಳಿಯದೆ, ಸಮಾಜದ ಪರಿವರ್ತನೆಗೆ ದಾರಿದೀಪವಾಯಿತು ಎಂದು ಹೇಳಿದರು.
ಕರ್ನಾಟಕ ಏಕೀಕರಣದ ಇತಿಹಾಸವನ್ನು ಸ್ಮರಿಸಿದ ಅವರು, ಆರಂಭದಲ್ಲಿ ಒಂಬತ್ತು ಜಿಲ್ಲೆಗಳನ್ನು ಒಳಗೊಂಡಿದ್ದ ಪುಟ್ಟ ಮೈಸೂರು ಸಂಸ್ಥಾನಕ್ಕೆ 1953ರಲ್ಲಿ ಹತ್ತನೇ ಜಿಲ್ಲೆಯಾಗಿ ಬಳ್ಳಾರಿ ಜಿಲ್ಲೆ ಸೇರ್ಪಡೆಯಾಯಿತು. ನಂತರ 1956ರ ನವೆಂಬರ್ 1ರಂದು ರಾಜ್ಯಗಳ ಪುನರ್ವಿಂಗಡಣೆಯ ಪರಿಣಾಮವಾಗಿ ಕನ್ನಡ ಭಾಷಿಕ ಪ್ರದೇಶಗಳ ಒಂಬತ್ತು ಜಿಲ್ಲೆಗಳು ಮೈಸೂರು ರಾಜ್ಯದೊಂದಿಗೆ ವಿಲೀನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
ಹೀಗೆ ವಿವಿಧ ಪ್ರದೇಶಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಒಂದೇ ಆಡಳಿತದ ಅಡಿಯಲ್ಲಿ ಒಂದಾದರು. ಈ ಐತಿಹಾಸಿಕ ಏಕೀಕರಣದ ಮುಂದುವರಿದ ಮಹತ್ವದ ಘಟ್ಟವಾಗಿ 1973ರ ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿದರು. ಇದು ಕನ್ನಡಿಗರ ಭಾಷಾ ಸ್ವಾಭಿಮಾನ, ಸಾಂಸ್ಕೃತಿಕ ಅಸ್ಮಿತೆ ಮತ್ತು ಐಕ್ಯತೆಯ ಸಂಕೇತವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗುಂಡೇರಿ ಸರ್ಕಾರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕರಾದ ಚಂದ್ರಾ ನಾಯಕ್ ಅವರು ಮಾತನಾಡಿ, ಆದಿಕವಿ ಪಂಪನು ಬನವಾಸಿಯ ಪ್ರಕೃತಿ ಸೌಂದರ್ಯ, ನಾಡಿನ ಹಿರಿಮೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಹಾಗೂ ಪ್ರೀತಿಯನ್ನು ಹೊಂದಿದ್ದನು. ತನ್ನ ಕಾವ್ಯದಲ್ಲಿ ಬನವಾಸಿಯ ಸೊಬಗನ್ನು ಅತ್ಯಂತ ಸುಂದರವಾಗಿ ವರ್ಣಿಸುವ ಮೂಲಕ ಕನ್ನಡ ನಾಡಿನ ಮೇಲಿನ ತನ್ನ ಪ್ರೇಮವನ್ನು ಅಭಿವ್ಯಕ್ತಿಸಿದ್ದಾನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ರೊಟೇರಿಯನ್ ಡಾ. ಎಸ್.ಪಿ. ರವಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮಾರುತೇಶ್ವರ ಅವರು ವಂದನಾರ್ಪಣೆ ಸಲ್ಲಿಸಿದರೆ, ಗುರುಶಾಂತಪ್ಪ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯದರ್ಶಿಗಳಾದ ಶಿವಶಂಕರ್, ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷರು ಮತ್ತು ಸದಸ್ಯ ಮಹಿಳೆಯರು ಹಾಜರಿದ್ದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯೆಂದರೆ ರೋಟರಿ ಕ್ಲಬ್ನ ಬಹುತೇಕ ಸದಸ್ಯರು ತಮ್ಮ ವೈಯಕ್ತಿಕ ಸಂಗ್ರಹದಲ್ಲಿದ್ದ ಅಮೂಲ್ಯ ಕನ್ನಡ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದುದು. ಕನ್ನಡ ಸಾಹಿತ್ಯ ಮತ್ತು ಪುಸ್ತಕ ಸಂಸ್ಕೃತಿಯ ಮೇಲಿನ ಅವರ ಅಭಿಮಾನ ಹಾಗೂ ಆಸಕ್ತಿಗೆ ಈ ಪುಸ್ತಕ ಪ್ರದರ್ಶನ ಸಾಕ್ಷಿಯಾಗಿತ್ತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
