ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಗುರುಬಸವ ಪಟ್ಟದ್ದೇವರು ಸಮಾಜಸೇವೆ ಮುಂದುವರಿಸಲಿ

ಸಂಗಮೇಶ ಜವಾದಿ
ಸಂಗಮೇಶ ಜವಾದಿ

ಬೀದರ/ಭಾಲ್ಕಿ/ಚಿಟಗುಪ್ಪಾ :

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಗುರುಬಸವ ಪಟ್ಟದ್ದೇವರು ತಮ್ಮ ಜೀವನವನ್ನು ಸಮಾಜಸೇವೆ, ಶಿಕ್ಷಣ, ಮಾನವೀಯತೆ, ಧಾರ್ಮಿಕ ಸಾಮರಸ್ಯ ಹಾಗೂ ಬಸವ ತತ್ವದ ಪ್ರಸಾರಕ್ಕೆ ಮುಡಿಪಾಗಿಟ್ಟಿರುವುದು ಇಡೀ ನಾಡಿನ ಹೆಮ್ಮೆಯ ಶ್ರೇಷ್ಠ ಸಂಗತಿಯಾಗಿದೆ.

ಅವರ ನಿಸ್ವಾರ್ಥ ಸೇವೆ ಮತ್ತು ಜನಪರ ಕಾಳಜಿಯನ್ನು ಸಹಿಸಿಕೊಳ್ಳಲಾಗದ ಕೆಲವರು ಅನಗತ್ಯ ಟೀಕೆ-ಟಿಪ್ಪಣಿಗಳು ಹಾಗೂ ಆರೋಪಗಳು ಮಾಡುತ್ತಿರುವುದು ವಿಷಾದನೀಯ ಎಂದು ಸಾಹಿತಿ, ಬರಹಗಾರ ಹಾಗೂ ಬಸವತತ್ವ ಅನುಯಾಯಿ ಸಂಗಮೇಶ ಎನ್. ಜವಾದಿ ತಿಳಿಸಿದ್ದಾರೆ.

ಅವರು ಪತ್ರಿಕಾ ಹೇಳಿಕೆ ನೀಡಿ, ಮಾತನಾಡಿದ ಅವರು ಪೂಜ್ಯ ಗುರುಬಸವ ಪಟ್ಟದ್ದೇವರು ಜಾತಿ, ಧರ್ಮದ ಭೇದವಿಲ್ಲದೆ ಬಡವರು, ಅನಾಥರು ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ವಸತಿ ಮತ್ತು ಶಿಕ್ಷಣದ ಸೌಲಭ್ಯ ಕಲ್ಪಿಸುವ ಮೂಲಕ ಸಾವಿರಾರು ಮಕ್ಕಳ ಬಾಳಿಗೆ – ಬದುಕಿಗೆ ಬೆಳಕಾಗುತ್ತಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸುವುದರ ಜೊತೆಗೆ ಸರ್ವಧರ್ಮ ಸಾಮರಸ್ಯ, ಸಾಮಾಜಿಕ ಸಮಾನತೆ ಮತ್ತು ವಿಶ್ವ ಗುರು ಬಸವಣ್ಣನವರ ಕಾಯಕ-ದಾಸೋಹದ ತತ್ವಗಳನ್ನು ಜನಮಾನಸದಲ್ಲಿ ಬಿತ್ತುವ ಮಹತ್ತರ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ.

ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆ ಹೋರಾಟ, ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಪ್ರಯತ್ನ ಹಾಗೂ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನಲ್ಲಿಯೂ ಶ್ರೀಗಳ ಕೊಡುಗೆ ಅಪಾರವಾಗಿದೆ. ಇಂತಹ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯವಾಗಿದೆ.

ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರನ್ನು ಟೀಕಿಸುವವರು ಇದ್ದೇ ಇರುತ್ತಾರೆ. ಆದರೆ ಅಂತಹ ಟೀಕೆಗಳಿಗೆ ಹೆಚ್ಚು ಮಹತ್ವ ನೀಡದೆ ತಮ್ಮ ಗುರಿ ಮತ್ತು ಸೇವಾ ಸಂಕಲ್ಪದ ಕಡೆಗೆ ಗಮನಹರಿಸುವುದು ನಿಜವಾದ ಮಹಾತ್ಮರ ಗುಣವಾಗಿದೆ.

ಒಂದು ಗಾದೆ ಮಾತಿನಂತೆ, ಆನೆ ತನ್ನ ಪಾಡಿಗೆ ತಾನು ಸಾಗುವಾಗ ನಾಯಿಗಳು ಬೊಗಳುತ್ತವೆ. ಆದರೆ ಆನೆಯ ಪಯಣ ಎಂದಿಗೂ ನಿಲ್ಲುವುದಿಲ್ಲ. ಅದೇ ರೀತಿ ಟೀಕೆಗಳು ಬರುತ್ತಲೇ ಇರಲಿ, ಪೂಜ್ಯರು ತಮ್ಮ ನಿಸ್ವಾರ್ಥ ಸಮಾಜಸೇವೆಯನ್ನು ನಿರಂತರವಾಗಿ ಮುಂದುವರಿಸಲಿ.

ಯಾವುದೇ ಟೀಕೆ, ಟಿಪ್ಪಣಿ ಅಥವಾ ಆರೋಪಗಳಿಗೆ ಹೆದರದೆ ಜನಪರ ಆಶಯಗಳಿಗೆ ಹಾಗೂ ಬಸವತತ್ವದ ಮೌಲ್ಯಗಳಿಗೆ ಅನುಗುಣವಾಗಿ ಮುನ್ನಡೆಯಬೇಕು. ತಮ್ಮೊಂದಿಗೆ ಇಡೀ ನಾಡಿನ ಬಸವಭಕ್ತರು, ಸಾಹಿತಿಗಳು, ಚಿಂತಕರು ಹಾಗೂ ಸರ್ವಜನಾಂಗದ ಬಂಧುಗಳು ಇದ್ದಾರೆ ಎಂಬ ಆತ್ಮವಿಶ್ವಾಸವನ್ನು ಹೊಂದಿರಬೇಕು.

ಪೂಜ್ಯರ ಸೇವೆ ಭಾಲ್ಕಿ, ಬೀದರ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ವಿಶ್ವದಾದ್ಯಂತ ಬಸವತತ್ವದ ಬೆಳಕು ಪಸರಿಸುವಂತಾಗಲಿ. ಅವರ ನಿಸ್ವಾರ್ಥ ಸೇವೆ ಸದಾಕಾಲ ಹೀಗೆ ಮುಂದುವರಿಯಲಿ ಎಂಬುದು ಸಮಸ್ತ ಬಸವಾಭಿಮಾನಿಗಳ ಪರವಾಗಿ ನನ್ನ ಹಾರೈಕೆ ಹಾಗೂ ವಿನಮ್ರ ಮನವಿಯಾಗಿದೆ ಎಂದು ಸಂಗಮೇಶ ಜವಾದಿ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *