ಲಿಂಗಾಯತ ಸ್ವಾಮಿಗಳ ಬಾಯಿ ಮುಚ್ಚಿಸಲು ಗೂಂಡಾಗಳನ್ನು ಬಿಟ್ಟಿದ್ದಾರೆ

ಎಂ. ಎ. ಅರುಣ್
ಎಂ. ಎ. ಅರುಣ್

ಲಿಂಗಾಯತರ ಹೆಸರು ಬಳಸಲು ಶ್ರೀರಾಮ ಸೇನೆಗೆ ಯಾರು ಪಾಳೆಗಾರಿಕೆ ಕೊಟ್ಟಿದ್ದಾರೆ?

ಬೆಂಗಳೂರು

ಲಿಂಗಾಯತ ಸ್ವಾಮಿಗಳಿಗೆ ಯಾರು, ಏನು ಬೇಕಾದರೂ ಹೇಳಬಹುದು.

ಅವರ ಮೇಲೆ ಯಾವ ಭಾಷೆಯಾದರೂ ಬಳಸಬಹುದು, ಅವರು ಸಿಕ್ಕಿದಾಗ ‘ನೋಡಿಕೊಳ್ಳಿ’ ಅಥವಾ ಸಿಕ್ಕಿದರಲ್ಲಿ ‘ಹೊಡೆಯಿರಿ’ ಅನ್ನಬಹುದು.

ಅವರ ವಿರುದ್ಧ ಬೇಕ್ಕಾದ್ದ ಸುಳ್ಳು ಹೇಳಬಹುದು, ಮದ್ಯ, ಮಾಂಸ ತಿನ್ನಿಸುತ್ತಾರೆ, ದೇಶದ್ರೋಹಕ್ಕೆ ಬೆಂಬಲ ಕೊಡುತ್ತಾರೆ, ಮತಾಂತರ ಮಾಡಿಸುತ್ತಾರೆ – ಹೀಗೆ ಏನು ಬೇಕಾದರೂ ಯಾವುದೇ ಹಿಂಜರಿಕೆ, ಆತಂಕವಿಲ್ಲದೆ ಹೇಳಬಹುದು.

ಇದನ್ನೆಲ್ಲಾ ಸುಲುಭವಾಗಿ ಮಾಡಬಹುದು, ಯಾಕೆಂದರೆ ಇಲ್ಲಿ ಲಿಂಗಾಯತ ಸ್ವಾಮಿಗಳ ಪರವಾಗಿ ಹೇಳುವವರು, ಕೇಳುವವರು ಯಾರೂ ಇಲ್ಲ.

ಈಗ ಹೊಸದಾಗಿ ಟಾರ್ಗೆಟ್ ಆಗಿರುವವರು ಭಾಲ್ಕಿಯ ಪೂಜ್ಯ ಗುರುಬಸವ ಸ್ವಾಮೀಜಿ.

ಬಾಲ ಯೇಸು ಜಾತ್ರೆಯ ಬಗ್ಗೆ ಅವರು ಮಾಡಿರುವ ವಿಡಿಯೋ ವಿರುದ್ಧ ಕನ್ನೇರಿ ಸ್ವಾಮಿ ಶಿಷ್ಯರು ಗುಟುರು ಹಾಕುತ್ತಿದ್ದಾರೆ.

ಗುರುಬಸವ ಸ್ವಾಮೀಜಿ ಮತಾಂತರಕ್ಕೆ ಪ್ರೋತ್ಸಾಹ ನೀಡಿದ್ದಾರೆ, ದೇಶದ್ರೋಹ ಮಾಡಿದ್ದಾರೆ, ಮಠದಿಂದ ಹೊರಹಾಕಬೇಕು – ಇವೆಲ್ಲ ಈ ವಿಡಿಯೋಗೆ ಬಂದಿರುವ ಪ್ರತಿಕ್ರಿಯೆಗಳು.

ಶ್ರೀರಾಮ ಸೇನೆ

ಮೊನ್ನೆ ಶ್ರೀರಾಮ ಸೇನೆಯವರೂ ಸ್ವಾಮೀಜಿಯವರ ಮೇಲೆ ಕ್ರಮ ತೆಗೆದುಕೊಳ್ಳಲು ಬೀದರ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ದೂರನ್ನು ‘ಲಿಂಗಾಯತ ಸಮಾಜದ’ ಪರವಾಗಿ ಕೊಟ್ಟಿದ್ದಾರೆ ಅನ್ನುವುದನ್ನು ಗಮನಿಸಬೇಕು.

ಲಿಂಗಾಯತರ ಹೆಸರು ಬಳಸಲು ಶ್ರೀರಾಮ ಸೇನೆಗೆ ಯಾರು ಪಾಳೆಗಾರಿಕೆ ಕೊಟ್ಟಿದ್ದಾರೆ?

ಶ್ರೀರಾಮ ಸೇನೆಗೂ ಲಿಂಗಾಯತರಿಗೂ ಏನು ಸಂಬಂಧ? ಕಳೆದ ಐದು ವರ್ಷದಲ್ಲಿ ಅವರು ಎಷ್ಟು ಶರಣ ಜಯಂತಿ, ಲಿಂಗಾಯತ ಕಾರ್ಯಕ್ರಮಗಳನ್ನು ಮಾಡಿದ್ದಾರೆ? ಎಷ್ಟು ಕಾರ್ಯಕ್ರಮಗಲ್ಲಿ ವಚನ ಪಠಿಸುತ್ತಾರೆ, ಎಲ್ಲಿ ಬಸವಣ್ಣನವರ ಫೋಟೋ ಇಡುತ್ತಾರೆ?

ಲಿಂಗಾಯತರ ಧರ್ಮಗುರು ಬಸವಣ್ಣ, ಲಿಂಗಾಯತರ ಅಸ್ಮಿತೆ ಬಸವಣ್ಣ. ವಚನಗಳು ಮಾತ್ರ ನಮ್ಮ ಧರ್ಮಗ್ರಂಥ. ಲಿಂಗಾಯತರ ಪರವಾಗಿ ಮಾತನಾಡಲು ಮುಂದೆ ಬರುವವರಿಗೆ ಇರಬೇಕಾದ ಕನಿಷ್ಠ ಅರ್ಹತೆ ಇವು.

ಹಗರಿಬೊಮ್ಮನಹಳ್ಳಿಯ ಚಿಂತಕ ಅಕ್ಕಿ ಬಸವೇಶ ಸರಳವಾಗಿ ಹೇಳುವಂತೆ ಶರಣರು ಮಾಡಿದ್ದು ಮನುಷ್ಯರು ಮನುಷ್ಯರನ್ನು ಅಪ್ಪಿಕೊಳ್ಳುವ ಚಳುವಳಿ.

ಸಿಕ್ಕಸಿಕ್ಕಲ್ಲಿ ಬೆಂಕಿ ಹಚ್ಚುವ ಇವರಿಗೆ ಬಸವತತ್ವ ಪಾಲಿಸುವುದು ಬಿಡಿ, ಅದರ ಸಹೃದಯತೆ ಅರ್ಥವಾಗುವ ಸಾಧ್ಯತೆಯೂ ಇದೆಯೇ?

ಯಾರು ಬೇಕಾದರೂ ನಮ್ಮ ಹೆಸರು ಬಳಸಬಹುದೇ? ಅದನ್ನು ನೋಡಿ ನಾವು ಸುಮ್ಮನೆ ಕುಳಿತಿರಬೇಕೇ?

ಕೂಡಲಸಂಗಮ ಎಲ್ಲರಿಗೂ ಪುಣ್ಯಕ್ಷೇತ್ರ

ಸನಾತನಿಗಳ ಈ ಬಾಲಂಗೋಚಿಗಳು ಇಷ್ಟೊಂದು ಕೆರಳುವಂತೆ ಗುರುಬಸವ ಸ್ವಾಮೀಜಿ ಹೇಳಿದ್ದೇನು?
ವೈರಲ್ ಆಗಿರುವ ಈ ವಿಡಿಯೋದಲ್ಲಿ ಯಾವ ಮತಾಂತರದ, ದೇಶ ದ್ರೋಹದ ಮಾತಾಡಿದ್ದಾರೆ?

ಭಾಲ್ಕಿಯಲ್ಲಿ ನಡೆಯಲಿರುವ ಬಾಲ ಯೇಸು ಜಾತ್ರೆಗೆ ಆಹ್ವಾನ ನೀಡಿದ್ದಾರೆ. ಭಾಲ್ಕಿಯನ್ನು ಬಾಲ ಯೇಸುವಿನ ಪುಣ್ಯಭೂಮಿ ಎಂದಿದ್ದಾರೆ.

ಭಾಲ್ಕಿಯಲ್ಲಿ ಬಾಲಯೇಸು ಭಕ್ತರಿದ್ದಾರೆ. ಅವರ ಧಾರ್ಮಿಕ ಭಾವನೆಗಳನ್ನು ಗೌರವಿಸಿ ‘ಪುಣ್ಯಭೂಮಿ’ ಪದ ಬಳಸಿದ್ದಾರೆ.

ಸಿಖ್ಖರಿಗೆ ಅಮೃತಸರ್, ಹಿಂದೂಗಳಿಗೆ ವಾರಾಣಸಿ, ಮುಸ್ಲಿಮರಿಗೆ ಅಜ್ಮೇರ್ ಪುಣ್ಯಕ್ಷೇತ್ರಗಳು. ಮಿಕ್ಕವರೂ ಈ ಊರುಗಳನ್ನು ಪುಣ್ಯಕ್ಷೇತ್ರಗಳೆಂದೇ ಪರಿಗಣಿಸಬೇಕು. ಬಹುತ್ವ ಸಂಸ್ಕೃತಿಯ ದೇಶದಲ್ಲಿ, ಎಲ್ಲಾ ಸಮುದಾಯಗಳ ಸಹಬಾಳ್ವೆಗೆ ಇದು ಅನಿವಾರ್ಯ.

ಕೂಡಲಸಂಗಮ ಲಿಂಗಾಯತರಿಗೆ ಮಾತ್ರವಲ್ಲ ಎಲ್ಲರಿಗೂ ಪುಣ್ಯಕ್ಷೇತ್ರವೇ.

ಜಾತ್ರೆಗೆ ಆಹ್ವಾನ ನೀಡಿದ್ದು, ಬಂದು ಆಶೀರ್ವಾದ ಪಡೆಯಿರಿ ಎನ್ನುವುದು ಸೌಜನ್ಯ. ಸರ್ವಧರ್ಮಗಳ ಕಾರ್ಯಕ್ರಮಗಳಲ್ಲಿ ಲಿಂಗಾಯತ ಪೂಜ್ಯರು ಭಾಗಿಯಾಗೇ ಬಂದಿದ್ದಾರೆ. ಅದು ನಮ್ಮ ಪರಂಪರೆ. ಅದು ಹಾಗೇಯೇ ಮುಂದುವರೆಯುತ್ತದೆ. ಇದಕ್ಕೆ ಯಾವ ಮಕ್ಕಳ ಒಪ್ಪಿಗೆಯ ಅಗತ್ಯವಿಲ್ಲ.

ಎಲ್ಲಾ ಪೂಜ್ಯರು ಟಾರ್ಗೆಟ್

ಸಂಘ ಪರಿವಾರ, ಶ್ರೀ ರಾಮಸೇನೆಯಂತಹ ವಿಷಕಕ್ಕುವ ಜನರ ಅಜೆಂಡಾಕ್ಕೆ ಹೊಂದದ ಯಾವುದೇ ಕೆಲಸ ಮಾಡಿದರೂ ಅದು ‘ದೇಶದ್ರೋಹ’ದ ಕೆಲಸವಾಗುತ್ತದೆ.

ಹತ್ತನೇ ತರಗತಿಯೂ ದಾಟದಿರುವ ಇವರಿಗೆ ರಾಷ್ಟ್ರಭಕ್ತಿಯ ಪ್ರಮಾಣಪತ್ರ ಕೊಡುವ ಅಧಿಕಾರ ಕೊಟ್ಟವರು ಯಾರು?

ಪೂಜ್ಯ ಕೋರಣೇಶ್ವರ ಸ್ವಾಮೀಜಿ ಇದೇ ಬಾಲ ಯೇಸುವಿನ ಜಾತ್ರೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ಇವರ ಪ್ರಕಾರ ಮತಾಂತರ ಪ್ರೋತ್ಸಾಹಿಸುವ ಕೆಲಸವಾಯಿತು.

ತೋಂಟದಾರ್ಯ ಮಠ ಬಸವತತ್ವದ ಮಠ. ಲಿಂಗಾಯತ ಪರಂಪರೆಗೆ ಅನುಗುಣವಾಗಿ ಎಲ್ಲಾ ಸಮುದಾಯಗಳಿಗೆ ಮುಕ್ತವಾಗಿ ತೆರೆದುಕೊಂಡಿರುವ ಆದರ್ಶ ಸಂಸ್ಥೆ.

ಮಠದ ಕಾರ್ಯಕ್ರಮಗಳಲ್ಲಿ ಮುಸ್ಲಿಮರನ್ನು ಹೊರಗಿಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಕೆಲವು ವರ್ಷಗಳಿಂದ ಶ್ರೀಮಠದ ಮೇಲೆ ಶ್ರೀರಾಮ ಸೇನೆ ಮೂಲಕ ಕಿರಿಕಿರಿಯುಂಟು ಮಾಡಲಾಗುತ್ತಿದೆ.

ಸಾಣೇಹಳ್ಳಿಯ ಪಂಡಿತಾರಾಧ್ಯ ಪೂಜ್ಯರು ಇವರ ಮೆಚ್ಚಿನ ಟಾರ್ಗೆಟ್. ಇವರ ಬಗ್ಗೆ ತಲೆ ಕೆಡಸಿಕೊಳ್ಳದೆ ಪೂಜ್ಯರು ತಾವೇನು ಮಾಡಬೇಕು ಅದನ್ನು ಮಾಡುತ್ತಲೇ ಇರುತ್ತಾರೆ.

ಒಂದು ವರ್ಷದ ಹಿಂದೆ ನಡೆದ ಒಂದು ಸಭೆಯಲ್ಲಿ ಕೆಲವು ಲಿಂಗಾಯತ ಪೂಜ್ಯರು ಒಬ್ಬರು ಪ್ರಭಾವಿ ಮಂತ್ರಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಕೆಲಸದಲ್ಲಿದ್ದ ಮಂತ್ರಿಗಳು ಅವರ ಕರೆಯನ್ನು ಸ್ವೀಕರಿಸಲಿಲ್ಲ. ಆಗ ಅಲ್ಲಿದ್ದ ಪೂಜ್ಯರು ಒತ್ತಾಯ ಮಾಡಿ ಸಾಣೇಹಳ್ಳಿ ಸ್ವಾಮೀಜಿಯವರ ಕೈಯಲ್ಲಿ ಕರೆ ಮಾಡಿಸಿದರು. ಮೂರು ರಿಂಗ್ ಆಗುವುದರ ಒಳಗೆ ಮಂತ್ರಿ ಫೋನಿಗೆ ಬಂದಿದ್ದರು.

ಅಂತಹ ಪ್ರಭಾವಿ ಪಂಡಿತಾರಾಧ್ಯ ಸ್ವಾಮೀಜಿಯವರ ಮಾತಿನಲ್ಲಿ ಲಿಂಗಾಯತರಿಗೆ ಮಾತ್ರವಲ್ಲ, ಬೇರೆ ಸಮುದಾಯದವರಿಗೂ ಮುಖ್ಯವಾಗಿ ದಲಿತರು, ಅಲ್ಪಸಂಖ್ಯಾತರಿಗೂ ವಿಶ್ವಾಸವಿದೆ.

ಇಂತವರನ್ನು ಸನಾತನಿಗಳು ನಿರಾಳವಾಗಿ ಏಕವಚನದಲ್ಲಿ ಸಂಬೋಧಿಸುತ್ತಾರೆ. ಅದು ಕೇಳಿದರೂ ಲಿಂಗಾಯತರು ಎಂದು ಎದೆ ತಟ್ಟಿಕೊಳ್ಳುವವರು ಕಿವುಡರಂತೆ ಕುಳಿತಿರುತ್ತಾರೆ.

ದೇಶದ್ರೋಹಿಗಳು ಯಾರು?

ಕೆಲವು ವರ್ಷದ ಹಿಂದೆ ಪಂಡಿತಾರಾಧ್ಯ ಪೂಜ್ಯರು ಲಿಂಗಾಯತ, ಇಸ್ಲಾಂ ಧರ್ಮಗಳ ನಡುವೆ ಕೆಲವು ಸಾಮ್ಯತೆಗಳಿವೆ ಎಂದಿದ್ದರು. ಅದರ ಬಗ್ಗೆ ಇಲ್ಲದ ಅಪಪ್ರಚಾರವಾಯಿತು.

ಪೂಜ್ಯರು ಹೇಳಿದ್ದು ಸತ್ಯದ ಮಾತು. ಜಗತ್ತಿನ ಎಲ್ಲಾ ಧರ್ಮಗಳ ನಡುವೆ ಸಾಮ್ಯತೆಯಿದೆ. ಸನಾತನಿಗಳು ಇಷ್ಟೊಂದು ದ್ವೇಷಿಸುವ ಇಸ್ಲಾಂ ಕ್ರೈಸ್ತ ಧರ್ಮಗಳು ಅನೇಕ ವಿಷಯಗಳಲ್ಲಿ ಹಿಂದೂ ಧರ್ಮಕ್ಕಿಂತ ಭಿನ್ನವಾಗಿಲ್ಲ.

ಸಿಖ್ಖರ ಬೌದ್ಧರ ನಡುವೆ ಸಾಮ್ಯತೆಯಿದೆ, ಜೈನರ ಯಹೂದಿಗಳ ನಡುವೆ ಸಾಮ್ಯತೆಯಿದೆ. ಎಲ್ಲಾ ಧರ್ಮಗಳೂ ಎರಡು ಕಾಲುಗಳ ಮೇಲೆಯೇ ನಡೆಯುತ್ತಿರುವುದು. ಯಾವುದೂ ತಲೆ ಕೆಳಗೆ ಮಾಡಿಕೊಂಡು ಕೈಗಳ ಮೇಲೆ ನಡೆಯುತ್ತಿಲ್ಲ.

ಈ ಎಲ್ಲಾ ಧರ್ಮಗಳ ನಡುವೆ ಅಷ್ಟೇ ವಿಭಿನ್ನತೆಗಳೂ ಇವೆ. ನಾಗರೀಕ ಸಮಾಜದಲ್ಲಿ ಬಿನ್ನತೆಯ ಬಿರುಕಿಗೆ ಒತ್ತು ಕೊಡದೆ ಸಾಮ್ಯತೆಯ ಸೇತುವೆಯನ್ನು ಕಟ್ಟಿಕೊಂಡು ಬಾಳುವುದು ಅನಿವಾರ್ಯ. ಇದು ಬಸವತತ್ವದ ಆಶಯ, ಭಾರತ ಸಂವಿಧಾನದ ಆಶಯ.

ಇದಕ್ಕೆ ವಿರುದ್ಧವಾಗಿ ನಡೆಯುತ್ತಿರುವವರು ದೇಶದ್ರೋಹಿಗಳು, ಬಸವ ದ್ರೋಹಿಗಳು.

ಆರೆಸ್ಸೆಸ್ ಕೈವಾಡ

ಲಿಂಗಾಯತ ಸ್ವಾಮಿಗಳನ್ನು ಟಾರ್ಗೆಟ್ ಮಾಡುತ್ತಿರುವವರು ಆರೆಸ್ಸಿಸ್ಸಿನವರು ಇವರು ಕನ್ನೇರಿ ಸ್ವಾಮಿಯಂತವರ ಹಿಂದಿನ ಸೂತ್ರಧಾರಿಗಳು.

ಅವರಿಗೆ ತಮ್ಮ ಹಿಡಿತದಿಂದ ಸ್ವತಂತ್ರವಾಗಿರುವ ಯಾವುದೇ ಪರಂಪರೆ, ಸಮುದಾಯ ಬೇಕಿಲ್ಲ. ಅದರಲ್ಲೂ ಹಿಂದೂ ಹಣೆಪಟ್ಟಿ ಕಳಚಿ ಲಿಂಗಾಯತರು ಸ್ವತಂತ್ರವಾಗುವಲ್ಲಿ ಯಶಸ್ವೀಯಾದರೆ ಅವರ ಸಿದ್ದಾಂತ, ಸಂಘಟನೆಗೆ ಭಾರಿ ಹಿನ್ನಡೆಯಾಗುತ್ತದೆ.

ಅದಕ್ಕೆ ಲಿಂಗಾಯತದ ಮುಂಚೂಣಿಯಲ್ಲಿರುವವರನ್ನು ಬೆದರಿಸಿ ಬಾಯಿಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ.

ಕನ್ನೇರಿ ಸ್ವಾಮಿ ಮುಂದೆ ಬಿಟ್ಟು, ಲಿಂಗಾಯತ ರಾಜಕಾರಣಿಗಳಿಂದಲೇ ಹಣ ಹಾಕಿಸಿ, ಬಾಡಿಗೆ ಜನರನ್ನು ಸೇರಿಸಿ ಬಸವಾದಿ ಶರಣರ ಹಿಂದೂ ಸಮಾವೇಶ ನಡೆಸುತ್ತಿದ್ದಾರೆ.

ಈ ಕನ್ನೇರಿ ಸ್ವಾಮಿ ಸಮಾವೇಶಗಳಿಗೆ ಹೋಗಿ ಎಷ್ಟು ಜನ ಬದಲಾಗುತ್ತಿದ್ದಾರೆ ಎನ್ನುವುದು ಸಂಸ್ಕೃತದಲ್ಲಿ ಮಾತನಾಡುವವರಿಗೆ ಮಾತ್ರ ಗೊತ್ತು.

ಆದರೆ ಈ ಸಮಾವೇಶಗಳ ಮೂಲಕ ಲಿಂಗಾಯತ ಸ್ವಾಮಿಗಳ ಬೆದರಿಸಿ ಅವರು ಮುಂದೆ ಯಾವತ್ತೂ ಬಾಯಿಬಿಡದಂತೆ ಮಾಡುವ ಕುತಂತ್ರವೂ ನಡೆಯುತ್ತಿರುವುದನ್ನು ಅರ್ಥಮಾಡಿಕೊಳ್ಳಬೇಕು.

ಬರೀ ಲಿಂಗಾಯತ ಸ್ವಾಮಿಗಳು ಮಾತ್ರವಲ್ಲ, ಅವರನ್ನು ಬೆದರಿಸಿದರೆ ಇಡೀ ಲಿಂಗಾಯತ ಸಮುದಾಯದ ಬಾಯಿ ಮುಚ್ಚಿಕೊಳ್ಳುತ್ತದೆ ಎಂಬ ಲೆಕ್ಕಾಚಾರವಿದೆ ಇಲ್ಲಿ.

ಇದನ್ನು ಲಿಂಗಾಯತರು ಮಾತ್ರವಲ್ಲ, ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕು.

ಒಬ್ಬ ದಲಿತ ಸ್ನೇಹಿತರು ಹೇಳುವ ಹಾಗೆ ಕರ್ನಾಟಕದಲ್ಲಿ ಲಿಂಗಾಯತರ ಬಾಯಿ ಮುಚ್ಚಿಸಿದರೆ ಬೇರೆ ಯಾರೂ ಬಾಯಿ ತೆಗೆಯಲು ಸಾಧ್ಯವಾಗುವುದಿಲ್ಲ. ಅದಕ್ಕೆ ಸುಪ್ರೀಂ, ಹೈ ಕೋರ್ಟುಗಳು ಛೀಮಾರಿ ಹಾಕಿದರೂ ಲೆಕ್ಕಿಸದೆ ಇಷ್ಟು ಹಣ ಹಾಕಿ, ಶ್ರಮಬಿದ್ದು ಕನ್ನೇರಿ ಸ್ವಾಮಿ ಸಮಾವೇಶ ಮಾಡುತ್ತಿರುವುದು.

ಬಲಿಷ್ಠ ಸಮುದಾಯ?.

ಇಲ್ಲಿರುವ ವಿಪರ್ಯಾಸ ನೋಡಿ. ಕೆಲವರ ಪ್ರಕಾರ ಲಿಂಗಾಯತರು ಕರ್ನಾಟಕದ ಅತಿ ಬಲಿಷ್ಠ ಸಮುದಾಯ.

ಜನಶಕ್ತಿ, ರಾಜಕೀಯ ಬಲ, ಸಂಪನ್ಮೂಲ, ಸಂಘಟನೆ, ಇತರ ಸಮುದಾಯಗಳೊಂದಿಗೆ ಗಳಿಸಿರುವ ಭಾಂದವ್ಯ – ಈ ಯಾವುದೇ ದೃಷ್ಟಿಯಿಂದ ನೋಡಿದರೂ ಲಿಂಗಾಯತರು ಪ್ರಭಾವಿಗಳು.

ಇಷ್ಟು ದೊಡ್ಡ ಪ್ರಭಾವಿ ಸಮುದಾಯವನ್ನು ಒಂದು ಸಣ್ಣ ಜಾತಿಯ ನಿಯಂತ್ರಣದಲ್ಲಿರುವ ಒಂದು ಸಂಘಟನೆ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ.

ಆರೆಸ್ಸೆಸ್ಸಿಗೆ ಮೊದಲು ಯಡಿಯೂರಪ್ಪನ್ನವರ ಜೊತೆ ಸಮಸ್ಯೆ, ಘರ್ಷಣೆಯಿತ್ತು. ಈಗ ಇಡೀ ಸಮುದಾಯದ ಜೊತೆ ಸಮಸ್ಯೆ, ಘರ್ಷಣೆಯಿದೆ.

ದುಡ್ಡು, ಅಧಿಕಾರಕ್ಕೆ ಲಿಂಗಾಯತರು ಲಿಂಗಾಯತರ ಕತ್ತು ಕುಯ್ಯಲು ಮುಂದಾಗುತ್ತಾರೆ. ಇದನ್ನು ನೋಡಿ ಮಿಕ್ಕ ಲಿಂಗಾಯತರು ಏನೂ ಮಾಡಲು ತೋಚದೆ ಸುಮ್ಮನಿರುತ್ತಾರೆ. ಇದರ ಲಾಭ ಆರೆಸ್ಸೆಸ್ ಪಡೆದುಕೊಳ್ಳುತ್ತಿದೆ.

ಜೊತೆಗೆ ಲಿಂಗಾಯತರಲ್ಲಿ ಸೈದ್ಧಾಂತಿಕ, ರಾಜಕೀಯ ಪ್ರಜ್ಞೆಯ ಕೊರತೆಯಿದೆ. ಇದರಿಂದ ಸಂಘಟಿತರಾಗಿ ಮಾಡಬೇಕಾದ ಮುಖ್ಯ ಕೆಲಸಗಳನ್ನು ಕೈ ಬಿಟ್ಟಿದ್ದೇವೆ. ಬೇಡದ ವಿಷಯಗಳನ್ನು ತಲೆಯ ಮೇಲೆ ಹಾಕಿಕೊಂಡಿದ್ದೇವೆ.

ರಾಜ್ಯದಲ್ಲಿ ನೂರಾರು ಬಸವ ಸಂಘಟನೆ, ಸಾವಿರಾರು ಕಾರ್ಯಕರ್ತರಿದ್ದರೂ ಅವರೆಲ್ಲ ಇಂತಹ ಸಂಘರ್ಷಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಹೊಸಪೇಟೆಯ ಬಸವ ಕಾರ್ಯಕರ್ತ ಟಿ ಎಚ್ ಬಸವರಾಜ್ ಹೇಳುವಂತೆ ಅತೀ ಹೆಚ್ಚು ಸಂಘಟನೆಗಳಿರುವ ಇರುವ ಅಸಂಘಟಿತ ಸಮಾಜ ಲಿಂಗಾಯತ.

ಲಿಂಗಾಯತರಲ್ಲಿ ಜಾಗೃತಿ, ಸಂಘಟನೆಯ ಅಗತ್ಯವಿದೆ. ನಮ್ಮ ಸಿದ್ದಾಂತ, ಸ್ವಾಮಿಗಳ, ಸಮಾಜದ ಮೇಲೆ ನಡೆಯುತ್ತಿರುವ ದಾಳಿಗಳಿಗೆ ವಿರುದ್ಧವಾಗಿ ಕೂಗಾಡುವುದಲ್ಲ, ಸಾಂಸ್ಥಿಕವಾಗಿ ಉತ್ತರ ಕೊಡಬೇಕು.

ಆ ಪ್ರಯತ್ನ ಬಸವಶಕ್ತಿ ಶಿಬಿರಗಳ ಮೂಲಕ ಶುರುವಾಗಿದೆ. ಸಧ್ಯಕ್ಕೆ ಒಳ್ಳೆಯ ಸ್ಪಂದನೆಯಿದೆ, ಆದರೆ ಇವು ಇನ್ನೂ ಆರಂಭದ ದಿನಗಳು. ನಮ್ಮ ಜನಶಕ್ತಿ, ಸಂಪನ್ಮೂಲ, ಸಿದ್ದಾಂತ ಬೂತ್ ಮಟ್ಟದಲ್ಲಿ ಪಕ್ಷಾತೀತವಾಗಿ ಮತಗಳ ಮೇಲೆ ಕೆಲಸ ಮಾಡುವ ತನಕ ಕನ್ನೇರಿ ಸ್ವಾಮಿಯಂತಹ ತೊಗಲು ಬೊಂಬೆಗಳು ಮತ್ತವರ ಸೂತ್ರಧಾರಿಗಳ ಆಟ ನಿಲ್ಲುವುದಿಲ್ಲ.

ನಮ್ಮ ಪೂಜ್ಯರಲ್ಲೂ ಸಮಸ್ಯೆಯಿದೆ

ವಿನಯ್ ಶಿರಹಟ್ಟಿಮಠ ಅವರು ಹೇಳುವಂತೆ ಲಿಂಗಾಯತದ ಬಾಗಿಲು ಯಾರೂ ಒಡೆದಿಲ್ಲ, ನಾವೇ ತೆರೆದಿಟ್ಟುಕೊಂಡಿದ್ದೇವೆ.

ಇದು ಸತ್ಯದ ಮಾತು. ನಮ್ಮ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ನಮ್ಮ ಪೂಜ್ಯರ ಕೊಡುಗೆಯೂ ಇದೆ.

ಬಸವ ಮೀಡಿಯಾದ ಅನುಭವದಲ್ಲಿ ಎಲ್ಲಾ ಜಿಲ್ಲೆಗಳ ಬಸವ ಕಾರ್ಯಕರ್ತರಲ್ಲಿ ಲಿಂಗಾಯತ ಪೂಜ್ಯರ ಮೇಲೆ ಸಣ್ಣ ಅಸಮಾಧಾನವಿದೆ.

ನಮಗೆ ಸಾಮಾನ್ಯವಾಗಿ ಕೇಳಿಸುವ ಅವರ ಮನದಲ್ಲಿರುವ ಕೆಲವು ಮಾತುಗಳು:

  1. * ಇಂತಹ ವಿವಾದವಾದಾಗ ಲಿಂಗಾಯತ ಸ್ವಾಮೀಜಿಗಳು ಗಟ್ಟಿ ನಿಲುವು ತೆಗೆದುಕೊಳ್ಳುವುದಿಲ್ಲ. ಬದಲಾಗಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ನೋಡುತ್ತಾರೆ.

    ಸಮಾಜ ಸಂಘಟಿಸುವುದು ಪೂಜ್ಯರಿಗೆ ಸುಲಭ, ಆದರೆ ಆ ಕೆಲಸ ಮಾಡುವ ವಿಶ್ವಾಸ, ಸಂಬಂಧ ಅವರು ಬೆಳೆಸಿಕೊಳ್ಳಬೇಕು.
  1. * ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ನಿಷ್ಕ್ರಿಯವಾಗಿರುವುದು ಯಾಕೆ? ಅಭಿಯಾನದ ನಂತರ ಕಣ್ಮರೆಯಾಗಿರುವುದು ಯಾಕೆ?

    ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಲ್ಲಿರುವ ಬಿರುಕುಗಳು ಎಲ್ಲರಿಗೂ ಕಾಣಿಸುತ್ತಿವೆ. ಅದನ್ನು ಮುಚ್ಚಿ ಕೆಲಸ ಮಾಡಲು ಆಸಕ್ತಿಯಿರುವವರನ್ನು ಮುನ್ನೆಲೆಗೆ ತಂದು, ಅವರ ಬೆಂಬಲಕ್ಕೆ ನಿಲ್ಲಬೇಕು.

    ಕನ್ನೇರಿ ಸ್ವಾಮಿಯಂತವರು ಮತ್ತೊಂದು ಜನ್ಮ ತಾಳಿದರೂ ಸುಧಾರಿಸಿಕೊಳ್ಳಲಾಗದಂತಹ ರೀತಿಯಲ್ಲಿ ಉತ್ತರ ಕೊಡಬಲ್ಲ ಸ್ವಾಮಿಗಳು, ಜ್ಞಾನಿಗಳು ನಮ್ಮಲ್ಲಿದ್ದಾರೆ. ಅವರಿಗೆ ವೇದಿಕೆ ನೀಡಿ, ಜೊತೆಗೆ ನಿಂತರೆ ಸಾಕು, ಪರಿಸ್ಥಿತಿ ಬದಲಾಗುತ್ತದೆ.

    ಒಕ್ಕೂಟದ ನಿಯಂತ್ರಣಕ್ಕಿಂತಲೂ ಕಟ್ಟುವ ಕೆಲಸವಾಗಲಿ.
  1. * ನಿಮ್ಮನ್ನು ರಕ್ಷಿಸಿಕೊಳ್ಳಲು ವಿರೋಧಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳಬೇಡಿ. ಅವರು ಬೇಕಾದಾಗ ನಿಮ್ಮನ್ನು ಬಳಸಿಕೊಳ್ಳುತ್ತಾರೆ, ಸಮಯ ಬಂದಾಗ ಬಾವಿಗೆ ತಳ್ಳುತ್ತಾರೆ.

    ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟದೇವರು ಬಸವಣ್ಣ ನಮ್ಮನೆಲ್ಲ ಬುಲೆಟ್ ಪ್ರೂಫ್ ಮಾಡಿದ್ದಾರೆ ಅನ್ನುತ್ತಾರೆ. ಬಸವಣ್ಣ, ಬಸವ ಸಂಘಟನೆ, ಮತ್ತು ಸಮಾಜವೇ ನಿಮ್ಮ ರಕ್ಷಾ ಕವಚ. ಇದು ಎಂದೆಂದಿಗೂ ನಿಮ್ಮ ಜೊತೆಯಿರಲು ಸಿದ್ದ. ಆದರೆ ಈ ರಕ್ಷಾ ಕವಚ ಕೆಲಸ ಮಾಡಬೇಕಾದರೆ ನೀವು ನಿಸ್ವಾರ್ಥದಿಂದ ಸಮಾಜಕ್ಕೆ ದುಡಿಯಬೇಕು.
  1. * ಕೆಲವು ಸ್ವಾಮಿಗಳು ಧಾರ್ಮಿಕ ಕಾರ್ಯಕ್ಕೆ ಬಂದಿದ್ದಾರೋ ಅಥವಾ ರಾಜಕೀಯ, ಬಿಸಿನಸ್ ಮಾಡಲು ಬಂದಿದ್ದಾರೋ ಸ್ಪಷ್ಟತೆ ನೀಡಬೇಕು.

ಇತ್ತೀಚೆಗೆ ತೋಂಟದಾರ್ಯ ಮಠದಲ್ಲಿ ಮಾತನಾಡಿದ ಇಳಕಲ್ ಪೂಜ್ಯರು ಈ ಸಂಘರ್ಷದ ಸನ್ನಿವೇಶದಲ್ಲಿ ಭಕ್ತರು ಸ್ವಾಮಿಗಳ ಜೊತೆ ನಿಲ್ಲಬೇಕು ಎಂದರು.

ಅದಕ್ಕೆ ಭಕ್ತರು ಸಿದ್ಧರಿದ್ದಾರೆ. ಆದರೆ ಮೊದಲು ಸ್ವಾಮಿಗಳೂ ಗಟ್ಟಿಯಾಗಿ, ಸ್ಪಷ್ಟವಾಗಿ ನಿಲ್ಲಬೇಕು. ಆಮೇಲೆ ಇಡೀ ಸಮಾಜವೇ ಅವರ ಹಿಂದೆ ಬರುತ್ತದೆ. ಅದಾದರೆ ಯಾವ ಕನ್ನೇರಿ ಸ್ವಾಮಿಯೂ ಅವರ ಬಳಿ ಬರಲೂ ಸಾಧ್ಯವಾಗುವುದಿಲ್ಲ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *