ಲಿಂಗಾಯತರ ಪರವಾಗಿ ಒಂದೇ ದನಿಯಲ್ಲಿ ಮಾತಾಡುವ ಪೀಠ ಎಲ್ಲಿದೆ? (ಭಾಗ 3) 

ನಮ್ಮ ಮನೆಯ ಮೂರು ಶೂನ್ಯಗಳು: ಪೀಠ ಶೂನ್ಯ 

ಬೆಂಗಳೂರು 

ಕಳೆದ ವರ್ಷದ ಜಾತಿ ಸಮೀಕ್ಷೆ ನೆನಪಿದೆಯಾ? ಗಣತಿದಾರರು ಮನೆ ಬಾಗಿಲಿಗೆ ಬಂದು ಕೇಳಿದರು, ನಿಮ್ಮ ಧರ್ಮ ಯಾವುದು? ಒಬ್ಬ ಸ್ವಾಮಿಗಳು ಒಂದು ಹೇಳಿದರು, ಇನ್ನೊಬ್ಬರು ಇನ್ನೊಂದು. 

ಇಷ್ಟು ವರ್ಷ ಪ್ರತ್ಯೇಕ ಧರ್ಮದ ಪರ ನಿಂತಿದ್ದ ಒಬ್ಬರು ಸಮೀಕ್ಷೆ ಶುರುವಾಗುವ ಕೆಲವೇ ದಿನ ಮುಂಚೆ ಹಿಂದೂ ಎಂದು ಬರೆಸಿ ಎಂದರು. ಹಳ್ಳಿಯ ರೈತ ಯಾರ ಮಾತು ಕೇಳಬೇಕು?

ಈ ಗೊಂದಲಕ್ಕೆ ಒಬ್ಬ ಸ್ವಾಮಿಗಳನ್ನು ದೂರಿ ಏನು ಪ್ರಯೋಜನ? ತಪ್ಪು ವ್ಯವಸ್ಥೆಯಲ್ಲಿದೆ. ವೀರಶೈವ ಪಕ್ಷದ ಬೆನ್ನಿಗೆ ಪಂಚಪೀಠಗಳಿವೆ, ಆಗಮವಿದೆ, ಸಿದ್ಧಾಂತ ಶಿಖಾಮಣಿ ಇದೆ. ಅವರು ಒಂದು ಪ್ರಶ್ನೆಗೆ ಒಂದೇ ದನಿಯಲ್ಲಿ ಉತ್ತರ ಕೊಡಬಲ್ಲರು. 

ಬಸವ ಪಕ್ಷದಲ್ಲಿ ಪ್ರತಿ ಮಠವೂ ತನ್ನಷ್ಟಕ್ಕೆ ತಾನು ಸ್ವತಂತ್ರ. ಶರಣರ ಮೂರ್ತಿಗೆ ಜನಿವಾರ ಸರಿಯೇ? ಕುಂಭಮೇಳದ ವೇದಿಕೆಗೆ ಶರಣರನ್ನು ಕರೆದೊಯ್ಯುವುದು ಸರಿಯೇ? ಸಮುದಾಯದ ಪರವಾಗಿ ಉತ್ತರ ಕೊಡುವ ಒಂದು ಮಾನ್ಯ ದನಿ ಎಲ್ಲಿದೆ?

ಮತ್ತೆ ಸಿಖ್ಖರ ಕಡೆ ನೋಡೋಣ. ೧೮೯೮ರಲ್ಲಿ ಭಾಯಿ ಕಾಹ್ನ್ ಸಿಂಗ್ ನಾಭಾ “ಹಮ್ ಹಿಂದೂ ನಹೀಂ” ಎಂಬ ಪುಸ್ತಕ ಬರೆದರು. ಇಪ್ಪತ್ತೇಳು ವರ್ಷದೊಳಗೆ ಆ ಸಮುದಾಯಕ್ಕೆ ತನ್ನದೇ ಕೇಂದ್ರ ಸಮಿತಿ ಬಂತು, ಅದಕ್ಕೊಂದು ಕಾನೂನೂ ಬಂತು. ಅದೇ ದಶಕಗಳಲ್ಲಿ ನಾವು ಕಟ್ಟಿದ ಮಹಾಸಭೆ ಸಮುದಾಯದ ಹಿತ ಕಾಯುವ ಸಂಘವಾಯಿತು. ಸಿದ್ಧಾಂತದ ಪ್ರಶ್ನೆಗೆ ತೀರ್ಮಾನ ಕೊಡುವ ವೇದಿಕೆ ಆಗಲಿಲ್ಲ.

ಅನುಭವ ಮಂಟಪ ಹುಟ್ಟಿದ್ದೇ ಇಂಥ ಪ್ರಶ್ನೆಗಳನ್ನು ಚರ್ಚಿಸಿ ತೀರ್ಮಾನಿಸಲು. ಬಸವಕಲ್ಯಾಣದಲ್ಲಿ ಆರುನೂರು ಕೋಟಿಗೂ ಹೆಚ್ಚು ಖರ್ಚಿನ ಹೊಸ ಅನುಭವ ಮಂಟಪದ ಕಟ್ಟಡ ನಿಮಗೆ ಗೊತ್ತೇ ಇದೆ. ಸಂತೋಷ. ಆದರೆ ಆ ಕಟ್ಟಡದೊಳಗೆ ಕೂತು ತೀರ್ಮಾನ ಕೊಡುವ ಸಭೆ ಎಲ್ಲಿದೆ? 

ಎಂಟುನೂರು ವರ್ಷದಲ್ಲಿ ನಾವು ಅನುಭವ ಮಂಟಪಕ್ಕೆ ಸ್ಮಾರಕ ಕಟ್ಟಿದೆವು. ಸಭೆ ಕಟ್ಟಲಿಲ್ಲ.

ಪೀಠ ಇಲ್ಲದ ಸಮುದಾಯ ಏನು ಮಾಡುತ್ತದೆ? ಪ್ರತಿಭಟಿಸುತ್ತದೆ. ಕಳೆದ ವರ್ಷ ಬಸವ ಸಂಸ್ಕೃತಿ ಅಭಿಯಾನದ ಹೊತ್ತಿನಲ್ಲಿ “ಬಸವ ತಾಲಿಬಾನ್” ಎಂಬ ಹೆಸರು ಹುಟ್ಟಿತು. ಲಿಂಗಾಯತರು ಮಾಂಸ ಮದ್ಯಕ್ಕೆ ಪ್ರೋತ್ಸಾಹ ಕೊಡುತ್ತಾರೆ ಎಂಬ ಅಪಪ್ರಚಾರ ಹರಡಿತು. 

ವೇದಿಕೆಯೊಂದರಿಂದ ನಮ್ಮ ಸ್ವಾಮಿಗಳ ಬಗ್ಗೆ ಕೀಳು ಮಾತು ಬಂತು. ಮಾತಾಡಿದವರಿಗೆ ಖರ್ಚು ಒಂದು ಸಂಜೆ. ನಾವು ಸಾವಿರಾರು ಜನ ಬೀದಿಗಿಳಿದೆವು, ಪ್ರತಿಕೃತಿ ಸುಟ್ಟೆವು, ಮಠಗಳು ವಾರಗಟ್ಟಲೆ ಅದೇ ಮಾತಾಡಿದವು. 

ಟಿವಿಯಲ್ಲಿ ಬಂದದ್ದು ಅವರಿಗೆ ಬೇಕಾದ ಚಿತ್ರ. ಒಂದು ರೂಪಾಯಿ ಹಾಕಿ ನಮ್ಮಿಂದ ಸಾವಿರ ಖರ್ಚು ಮಾಡಿಸಿದರು. ಯಾವ ಅಂಗಡಿಯವನೂ ಇಂಥ ವ್ಯಾಪಾರ ಮಾಡುವುದಿಲ್ಲ.

ಜೈನರ ದಾರಿ ನೋಡಿ. ೧೯೯೩ರಲ್ಲೇ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಜೈನರ ಪರ ಶಿಫಾರಸು ಮಾಡಿತ್ತು. ಕೇಂದ್ರ ಕಿವಿಗೊಡಲಿಲ್ಲ. ೨೦೦೫ರಲ್ಲಿ ಸುಪ್ರೀಂ ಕೋರ್ಟ್ ವಿಷಯವನ್ನು ರಾಜ್ಯಗಳಿಗೆ ಬಿಟ್ಟಿತು. 

ಜೈನರು ಬೀದಿ ಗದ್ದಲಕ್ಕಿಂತ ಕಾಗದದ ಕೆಲಸ ಹೆಚ್ಚು ಮಾಡಿದರು. ಹನ್ನೊಂದು ರಾಜ್ಯಗಳ ಮಾನ್ಯತೆ ಕೈಯಲ್ಲಿತ್ತು. ೨೦೧೪ರ ಜನವರಿಯಲ್ಲಿ ಕೇಂದ್ರವೂ ಒಪ್ಪಿತು. 

ನಾವು ಅದೇ ಬಾಗಿಲನ್ನು ೨೦೧೮ರಲ್ಲಿ ತಟ್ಟಿದೆವು, ವಿಧಾನಸಭಾ ಚುನಾವಣೆಗೆ ಎರಡು ತಿಂಗಳಿರುವಾಗ, ಸಮಾವೇಶಗಳ ಅಬ್ಬರದಲ್ಲಿ. ಕೇಂದ್ರ ತಿರಸ್ಕರಿಸಿತು. 

ಜೈನರು ಇಪ್ಪತ್ತು ವರ್ಷ ಮೆಲ್ಲಗೆ ತಟ್ಟಿದರು. ನಾವು ಒಂದು ದಿನ ಒದ್ದೆವು.

ಹಾಗಾದರೆ ಮಾಡಬೇಕಾದ್ದೇನು? ಮಠಗಳದ್ದೂ ಅಲ್ಲದ, ಪಕ್ಷಗಳದ್ದೂ ಅಲ್ಲದ ವಿದ್ವಾಂಸರ ಶಾಶ್ವತ ಸಭೆಯೊಂದು ಬೇಕು. ಪ್ರತಿ ವಿವಾದಕ್ಕೂ ಅದು ಆಕರ ಸಹಿತ, ಸಹಿ ಹಾಕಿದ ತೀರ್ಮಾನ ಪತ್ರ ಹೊರಡಿಸಲಿ. 

ಆ ದನಿ ಅಧಿಕಾರದಿಂದ ಮಾನ್ಯವಾಗಬಾರದು, ವಾದದ ಬಲದಿಂದ ಮಾನ್ಯವಾಗಲಿ. ಅದರ ಖರ್ಚು ನಮ್ಮ ಶಿಕ್ಷಣ ಸಂಸ್ಥೆಗಳ ವರ್ಷದ ಆದಾಯದ ಒಂದೇ ಒಂದು ಪ್ರತಿಶತದಿಂದ ಬರಲಿ. 

ಸರ್ಕಾರದ ಅನುದಾನವಿಲ್ಲ, ಮಠದ ಹಿಡಿತವಿಲ್ಲ. ಯಾರ ಅನ್ನ ಉಣ್ಣುತ್ತೇವೋ ಅವರ ಹಾಡು ಹಾಡಬೇಕಾಗುತ್ತದೆ.

ಜೊತೆಗೆ ಒಂದು ವರ್ಷ ಪ್ರತಿಭಟನೆಗೆ ರಜೆ ಕೊಡೋಣ. ಪ್ರತಿ ಪ್ರಚೋದನೆಗೆ ಮೂವತ್ತು ದಿನದೊಳಗೆ ಆಕರ ಸಹಿತ ಒಂದು ಲೇಖನ, ಕನ್ನಡ ಇಂಗ್ಲಿಷ್ ಹಿಂದಿ ಮರಾಠಿಯಲ್ಲಿ. ಸಿಟ್ಟು ವಾರದಲ್ಲಿ ಆರುತ್ತದೆ. ಲೇಖನ ವರ್ಷಗಟ್ಟಲೆ ಉಳಿಯುತ್ತದೆ. 

ಅಕ್ಕ ಹೇಳಿಲ್ಲವೇ,

“ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯಾ…
ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.”

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *