ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 17
ಕಲಬುರಗಿ:
ಕೂಡಲ ಸಂಗಮದಲ್ಲಿ 21 ವರ್ಷಗಳ ಕಾಲ ವೇದಾಗಮ, ಶಾಸ್ತ್ರಗಳ ಅಧ್ಯಯನ ಮಾಡಿದ ಬಸವಣ್ಣನವರು ಅಲ್ಲಿಯೂ ದೇವ ಮತ್ತು ಭಕ್ತರ ಮಧ್ಯೆ ಮಧ್ಯವರ್ತಿಗಳಿರುವುದನ್ನು ಕಾಣುತ್ತಾರೆ. ಈ ಧಾರ್ಮಿಕ, ಸಾಮಾಜಿಕ ಕಟ್ಟಳೆಯಿಂದ ‘ದೂರ’ ಉಳಿದ ಜನರ ಬದುಕು ಹಸನಾಗುವುದಕ್ಕೆ ಏನು ಮಾಡಬೇಕು? ಇದೆಲ್ಲ ಹೀಗೇಕೆ? ಎಂದು ತನ್ನೊಳಗೆ ತಾನು ಅಂತರ್ಮುಖಿಯಾಗುತ್ತಾನೆ.
ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜವಂಕುರಿಸಿ, ಕಲ್ಲೊಳಗೆ ಹೊನ್ನುಂಟು ಎಂಬಿತ್ಯಾದಿಯಾಗಿ ಚಿಂತಿಸಿ ಜ್ಞಾನ ಗುರುವಾಗಿ ಕರಸ್ಥಲಕ್ಕೆ ಬಂದ ಕಾರಣ ಲಿಂಗದ ಮೂಲಕ ಜಾತಿ, ವರ್ಣ, ವರ್ಗ, ಗಂಡು-ಹೆಣ್ಣು ತಾರತಮ್ಯ ನಿವಾರಿಸಿ ಸಕಲ ಜೀವಾತ್ಮರಿಗೆ ಲೇಸ ಬಯಸಲು ಸನ್ನದ್ಧನಾದ.
ಈ ವೇಳೆ 12 ವರ್ಷಗಳಿಗೊಮ್ಮೆ ನಡೆಯುವ ಕಪಿಲ ಸೃಷ್ಟಿ ಕಾರ್ಯಕ್ರಮ ನಡೆಯುವ ವೇಳೆ ಕಲ್ಯಾಣ ಚಾಲುಕ್ಯರ ಅರಸ ಬಿಜ್ಜಳನ ಮಂತ್ರಿ ಆಗಮಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಬಸವಣ್ಣ ಅತ್ಯಂತ ಪ್ರಖರವಾಗಿ ಮತ್ತು ಸತ್ಯದ ವಿಚಾರಗಳನ್ನು ಪ್ರಚುರಪಡಿಸುತ್ತಾರೆ.
ಮಂತ್ರಿ ಬಲದೇವರು, ಗುರು ಸಂಗಮೇಶ್ವರರಿಗೆ ಯಾರು ಈ ಯುವಕ ಎಂದು ಕೇಳಿದಾಗ, ಇವರು ನಿಮ್ಮ ಸೋದರಳಿಯ ಎನ್ನುತ್ತಾರೆ. ಜೊತೆಗೆ ಬಂದಿದ್ದ ತಂಗಿ ಗಂಗಾಂಬಿಕೆ ಇವರನ್ನು ಮದುವೆಯಾಗಲು ಬಯಸುತ್ತಾಳೆ. ಸರಳ ಮದುವೆಯ ಬಳಿಕ ಬಲದೇವರಸರ ಮಗಳಾದ ನೀಲಾಂಬಿಕೆಯನ್ನೂ ಸಹ ಮದುವೆಯಾಗುತ್ತಾರೆ.
ಇತ್ತಲಿವರ್ ಇರುತ್ತಿರ್ದಾಗಳೆ
ಅತ್ತ ಪರವಾದಿಗಳು ಜನಿಸಿ
ಮತ್ತೆ ಅವರೊಳಗೊಬ್ಬ ವೀರ ಬಿಜ್ಜಳನುತ್ತಮರ ಕಲ್ಯಾಣದಲಿ
ನೃಪವೃತ್ತಿಯಿಂದಿರುತ್ತಿರಲ್ ಕಲ್ಯಾಣದಲಿ ಅನೇಕ ಛತ್ರದಲಿ
ಭೂಮಿಯನು ಪಾಲಿಸುತ್ತಿರ್ದನೊಲವಿನಲಿ.
ಎಂಬ ನುಡಿಯಲ್ಲಿ ಚಾಲುಕ್ಯ ಮನೆತನದ ಬಿಜ್ಜಳನ ಆಳ್ವಿಕೆ, ಅವನ ಆಡಳಿತದ ವೈಖರಿ ಕುರಿತು ಚಾಮರಸ ವಿವರಿಸುತ್ತಾನೆ.
ಬಿಜ್ಜಳನ ಆಸ್ಥಾನದಲ್ಲಿ ಕರಣಿಕನಾಗಿ ಕೆಲಸಕ್ಕೆ ಸೇರಿದ ಬಸವಣ್ಣನವರು ಕೋಶಾಧಿಕಾರಿಯಾಗಿ, ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಾರೆ. ಇದೇ ವೇಳೆಯಲ್ಲಿ ಮಹಾಮನೆ ಮತ್ತು ವಿಶ್ವದ ಮೊದಲ ಪಾರ್ಲಿಮೆಂಟ್ ಎನಿಸಿಕೊಳ್ಳುವ ಅನುಭವ ಮಂಟಪ ಸ್ಥಾಪಿಸುತ್ತಾರೆ. ನಾಡಿನ ಮೂಲೆಗಳಿಂದ ವಿವಿಧ ಕಾಯಕದ ಶರಣರು ಕಲ್ಯಾಣಕ್ಕೆ ಆಗಮಿಸುತ್ತಾರೆ. ಅಲ್ಲಮರ ಆಗಮನವೂ ಆಗುತ್ತದೆ.
