ಬಳ್ಳಾರಿ :
ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕದ ಆಶ್ರಯದಲ್ಲಿ, ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಮಹೋತ್ಸವ ಒಂದು ತಿಂಗಳು ಕಾಲ ಭಕ್ತಿ, ಶ್ರದ್ಧೆ, ಶರಣಾಗತಿ ಹಾಗೂ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು.
ಮಾರ್ಚ್ 20 ಯುಗಾದಿ ದಿನ ಶೂನ್ಯ ಪೀಠಾಧೀಶ ಅಲ್ಲಮ ಪ್ರಭುದೇವರ ಜಯಂತಿ ಆಚರಣೆಯೊಂದಿಗೆ ಪ್ರಾರಂಭಗೊಂಡಿತು. 23ಕ್ಕೆ ಜೇಡರ ದಾಸಿಮಯ್ಯ ಜಯಂತಿ, ಮಾರ್ಚ್ 27 ಯಡಿಯೂರು ಸಿದ್ದಲಿಂಗ ಶಿವಯೋಗಿಗಳ ಸಂಸ್ಮರಣ ಕಾರ್ಯಕ್ರಮ, ಇದು ಬಸವ ಸಮಿತಿಯ ಡಾ. ಅರವಿಂದ ಜತ್ತಿ ಅವರ ನೇತೃತ್ವದಲ್ಲಿ ನಡೆಯಿತು.

ಏಪ್ರಿಲ್ 1ರಂದು ಲಿಂಗೈಕ್ಯ ಸಿದ್ದಗಂಗಾ ಶಿವಕುಮಾರ ಸ್ವಾಮಿಗಳ ಜನ್ಮದಿನ, 2ರಂದು ಜಗನ್ಮಾತೆ ಅಕ್ಕಮಹಾದೇವಿ ಅವರ ಜಯಂತಿ ಆಚರಣೆ, 10ರಿಂದ ನಗರದ ಬಸವ ಮಂಟಪದಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ಬಸವಕಲ್ಯಾಣದ ಬಸವತತ್ವ ಪ್ರಚಾರಕರಾದ ಪೂಜ್ಯ ಬಸವದೇವರು ಅವರಿಂದ ವಚನ ದರ್ಶನ ಪ್ರವಚನ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಪ್ರತಿದಿನ ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗಾರ್ಚನೆ, ವಿವಿಧ ಗ್ರಾಮಗಳಲ್ಲಿ ಶರಣ ಸಂಗಮ ಕಾರ್ಯಕ್ರಮ, ಸಕ್ಕರೆ ಕರಡೀಶ ಮಹಾಮನೆಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಗುರುಬಸವ ಜಯಂತಿ ಆಚರಿಸಲ್ಪಟ್ಟಿತು.
ಏಪ್ರೀಲ್ 15ರಂದು ಬುದ್ಧ, ಬಸವ, ಅಂಬೇಡ್ಕರ್ ಸಂಸ್ಮರಣೆ ಪ್ರವಚನ ಕಾರ್ಯದಲ್ಲಿ ನಡೆಯಿತು. ಶರಣ ಸಂಗಮ ಕಾರ್ಯಕ್ರಮ ಬಳ್ಳಾರಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಏರ್ಪಡಿಸಿ, ನೂರಾರು ರೈತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

16, 17ರಂದು ವಚನ ಸಂಗೀತ, ಅನುಭವ ಮಂಟಪ ರೂಪಕ ಪ್ರದರ್ಶನ ಆಯೋಜಿಸಲಾಗಿತ್ತು. ಏಪ್ರಿಲ್ 18 ರಂದು ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾಷ್ಟ್ರೀಯ ಬಸವದಳ ಬಳ್ಳಾರಿ ಜಿಲ್ಲಾ ಘಟಕದ ಆಶ್ರಯದಲ್ಲಿ ಭುವನದ ಬೆಳಕು ಬಸವಣ್ಣ ಕೃತಿ ಲೋಕಾರ್ಪಣೆ ಮಾಡಲಾಯಿತು.
19ರಂದು ನಗರದ ಬಸವೇಶ್ವರ ನಗರದಲ್ಲಿ ಬಸವ ಪಥಸಂಚಲನ ಮಾಡಲಾಗಿ, ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
20 ಸೋಮವಾರ ಬಸವ ಜಯಂತಿ ದಿನದಂದು ಬೆಳಿಗ್ಗೆ 6 ಗಂಟೆಗೆ ಬಸವ ಧ್ವಜಾರೋಹಣ, ಗುರುಬಸವ ಅರ್ಚನೆ, ಇಷ್ಟಲಿಂಗ ಅನುಸಂಧಾನ, ತೊಟ್ಟಿಲ ಕಾರ್ಯಕ್ರಮ ನಡೆದವು.

ಇದೇ ಸಂದರ್ಭದಲ್ಲಿ ಕೂಡಲಸಂಗಮ ಸುಕ್ಷೇತ್ರದಿಂದ ಆಗಮಿಸಿದ್ದ ಬಸವ ಜ್ಯೋತಿಯನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿ, ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ಜ್ಯೋತಿಯೊಂದಿಗೆ ನೂರಾರು ಸಂಖ್ಯೆಯ ಬೈಕ್ ರ್ಯಾಲಿ ನಡೆಸಲಾಯಿತು.
ವಿಶ್ವಗುರು ಬಸವಣ್ಣನವರ ಪುತ್ತಳಿಗೆ ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗೌರವ ಸಮರ್ಪಣೆ ನಡೆಯಿತು. ಬಸವೇಶ್ವರ ಪುತ್ತಳಿಯ ಬಳಿ ರಾಷ್ಟ್ರೀಯ ಬಸವದಳ, ಯುವ ಘಟಕದ ವತಿಯಿಂದ ಮಹಾದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ 6 ಗಂಟೆಗೆ ಮುನ್ಸಿಪಾಲ್ ಹೈಸ್ಕೂಲ್ ಮೈದಾನದಲ್ಲಿ ಭವ್ಯ ಮೆರವಣಿಗೆ ಸಾವಿರಾರು ಬಸವ ಭಕ್ತರೊಡನೆ ನಡೆಯಿತು.
ಸಂಜೆ 7 ಗಂಟೆಗೆ ಜಿಲ್ಲಾಡಳಿತದಿಂದ ವೇದಿಕೆ ಕಾರ್ಯಕ್ರಮ ಆಯೋಜಿಸಲ್ಪಟ್ಟಿತ್ತು.

ವಚನ ಸಂಗೀತ, ವಿಶೇಷ ಉಪನ್ಯಾಸಗಳು, ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿವಿಧ ಗಣ್ಯರಿಗೆ ಬಸವ ಕಾಯಕ ರತ್ನ ಪ್ರಶಸ್ತಿ ನೀಡಲಾಯಿತು.
ಮಹಾದಾಸೋಹ ವ್ಯವಸ್ಥೆಯೊಡನೆ 893ನೇ ವಿಶ್ವಗುರು ಬಸವ ಜಯಂತಿ ಮಹೋತ್ಸವ ಯಶಸ್ವಿ ರೀತಿಯಿಂದ ಮಂಗಲಗೊಂಡಿತು.
