ಯಾಕೆ ಬೇಕಿತ್ತು ಗೌರಿ ಲಂಕೇಶ ಕೊಲೆ ಮಾಡೋದು?
ಮಂಗಳೂರು:
ಜಗಜ್ಯೋತಿ ಬಸವಣ್ಣನವರು ಹಿಂದೂ ಧರ್ಮದ ವಿರುದ್ಧ ಬಂಡಾಯ ಎದ್ದು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದ್ರು. ಗೌತಮ ಬುದ್ಧರು ಹಿಂದೂ ಧರ್ಮದ ನ್ಯೂನತೆ ಸರಿ ಮಾಡಲು ಬೌದ್ಧ ಧರ್ಮ ಸ್ಥಾಪನೆ ಮಾಡಿದ್ರು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.
ಪುರಭವನದಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಶ್ರೀ ನಾರಾಯಣಗುರು 172ನೇ ಜನ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದೂ ಧರ್ಮದಲ್ಲಿದ್ದುಕೊಂಡೆ ಸುಧಾರಣೆ ಮಾಡಿದರು. ಶತಮಾನಗಳ ಕಾಲ ದೇವಸ್ಥಾನದ ಪ್ರವೇಶ ಮಾತ್ರವಲ್ಲ, ದೇವಸ್ಥಾನದ ಸುತ್ತಮುತ್ತಲೂ ಓಡಾಡಲು ಶೂದ್ರರಿಗೆ ಅವಕಾಶವೇ ಇರಲಿಲ್ಲ. ಅದಕ್ಕಾಗಿ ನಾರಾಯಣಗುರುಗಳು ಶೂದ್ರ ಶಿವನ ದೇವಸ್ಥಾನವನ್ನೇ ಸ್ಥಾಪನೆ ಮಾಡಿದ್ರು. ಈ ಹಿಂದೆ ನಮಗೆ ದೇವಸ್ಥಾನಕ್ಕೆ ಅನುಮತಿ ಕೊಡದವರನ್ನ ಕಾಪಾಡಲು ನಮ್ಮ ಶೂದ್ರರೇ ಹೋಗುತ್ತಿದ್ದಾರೆ. ಅತೀ ಹೆಚ್ಚು ಧರ್ಮ ದ್ವೇಷಕ್ಕೆ ಬಲಿಯಾಗುತ್ತಿರುವವರು ನಾರಾಯಣ ಗುರುಗಳ ಅನುಯಾಯಿಗಳೇ ಎಂಬುದು ವಿಷಾದನೀಯ.
ಪತ್ರಕರ್ತೆ ಗೌರಿ ಲಂಕೇಶ ಅವರನ್ನು ಕೊಂದಿದ್ದು ನಮ್ಮ ಬಿಲ್ಲವ ಸಮಾಜದವನು. ನಮಗೆ ಯಾಕೆ ಬೇಕಿತ್ತು ಆ ಹೆಣ್ಣು ಮಗಳನ್ನ ಕೊಲೆ ಮಾಡೋದು. ಹಿಂದುಳಿದವರ ಮಕ್ಕಳು ಧರ್ಮದ ವಿಷವರ್ತುಲದಲ್ಲಿ ಬಿದ್ದಿದ್ದಾರೆ. ಕೋಮುವಾದದ ಅಮಲಿನಲ್ಲಿ, ಕೊಲೆ ಕೇಸುಗಳಲ್ಲಿ ಜೈಲು ಸೇರುತ್ತಿದ್ದಾರೆ. ಇದರಿಂದ ನಮ್ಮ ಹಿಂದುಳಿದವರ ಮಕ್ಕಳನ್ನು ರಕ್ಷಿಸಬೇಕಿದೆ.
ನಾನು 25 ವರ್ಷಗಳ ರಾಜಕೀಯವನ್ನ ನಾರಾಯಣ ಗುರುಗಳ ಆದರ್ಶವನ್ನು ಪಾಲಿಸುತ್ತಾ ನಡೆಸಿದ್ದೇನೆ. ಜಾತಿ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ರಾಜಕಾರಣ ಮಾಡಿದವನಲ್ಲ. ಗುರುಗಳ ಚಿಂತನೆ, ಮಾರ್ಗದರ್ಶನದಲ್ಲಿ ಸಾರ್ವಜನಿಕ ಜೀವನದಲ್ಲಿ ಬದುಕಲು ನಾವೆಲ್ಲ ಪ್ರಯತ್ನಿಸಬೇಕು.

ನಮ್ಮ ಮುಂದಿನ ಪೀಳಿಗೆಗೆ ನಾರಾಯಣ ಗುರುಗಳ ಬದುಕು, ಚಿಂತನೆ ಹಾಗೂ ಮಾರ್ಗದರ್ಶನಗಳನ್ನು ಮಕ್ಳಳಲ್ಲಿ ಬೆಳಿಸಬೇಕಿದೆ. ಶಿಕ್ಷಣ, ಉದ್ಯಮದಲ್ಲಿ ನಮ್ಮ ಮಕ್ಕಳು ತೊಡಗಿಸಿಕೊಳ್ಳುವಂತೆ ಜಾಗೃತಿಗೊಳಿಸಬೇಕು.
ವೇದಿಕೆಯಲ್ಲಿ ಅತ್ಯಂತ ಪ್ರೀತಿಯಿಂದ ನನ್ನ ಸನ್ಮಾನಿಸಿದ ಆಯೋಜಕರಿಗೂ ಹಾಗೂ ಸಾರ್ವಜನಿಕರಿಗೆ ವಿಶೇಷವಾಗಿ ನನ್ನ ಕೃತಜ್ಣತೆಗಳನ್ನು ಸಲ್ಲಿಸುವೆ ಎಂದರು.
ವೇದಿಕೆಯಲ್ಲಿ ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನಚಂದ್ರ ಡಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸುನೀಲಕುಮಾರ, ಎಂಎಲ್ಸಿ ಐವಾನ್ ಡಿಸೋಜಾ, ಸುಮಲತಾ ಸುವರ್ಣ ಸೇರಿದಂತೆ ಆಯೋಜಕರು, ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
