ರಾಯಚೂರು
ಬಸವ ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ರೇಣುಕಾಚಾರ್ಯರ ಚಿತ್ರ ಹಾಕಿ ಮುದ್ರಿಸಿರುವುದನ್ನು ನಗರದ ಬಸವ ಸಂಘಟನೆಗಳು ಉಗ್ರವಾಗಿ ಖಂಡಿಸಿವೆ.
ಏಪ್ರಿಲ್ 20, 21 ನಗರದಲ್ಲಿ ಜಿಲ್ಲಾಡಳಿತ ಹಾಗೂ ಬಸವ ಸಂಘಟನೆಗಳ ಸಹಯೋಗದಲ್ಲಿ ಬಸವ ಜಯಂತಿ ನಡೆಯುತ್ತಿದೆ. ಈ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕರಪತ್ರದಲ್ಲಿ ಬಸವಣ್ಣನವರ ಜೊತೆ ರೇಣುಕಾಚಾರ್ಯರ ಚಿತ್ರ ಮುದ್ರಿಸಿ ‘ವೀರಶೈವ ಲಿಂಗಾಯತ ಸಮಾಜ’ ಹಂಚುತ್ತಿದೆ.
ಇದನ್ನು ವಿರೋಧಿಸಿ ಬಸವ ಸಂಘಟನೆಗಳು ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಏಪ್ರಿಲ್ 18 ದೂರು ನೀಡಿವೆ.
21ರ ಮೆರವಣಿಗೆಯಲ್ಲಿ ಕಪ್ಪುಪಟ್ಟಿ ಧರಿಸಿ ಪಾಲ್ಗೊಳ್ಳಲು ಬಸವ ಸಂಘಟನೆಗಳು ನಿರ್ಧರಿಸಿದ್ದರೂ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ ನಿರ್ಣಯ ಹಿಂಪಡೆದಿವೆ. ಏಪ್ರಿಲ್ 24ರಂದು ಪ್ರತ್ಯೇಕವಾಗಿ ಮತ್ತೊಮ್ಮೆ ಬಸವ ಜಯಂತಿ ಆಚರಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಲು ನಿರ್ಧರಿಸಿವೆ.

ವೀರಶೈವ ಲಿಂಗಾಯತ ಸಮಾಜದ ಕರಪತ್ರ
ಪೂರ್ವಭಾವಿ ಸಭೆಯಲ್ಲೇ ವಿವಾದ
ಬಸವ ಜಯಂತಿಗೆ ಸಿದ್ಧವಾಗಲು ಜಿಲ್ಲಾಡಳಿತ ಅನೇಕ ಪೂರ್ವಭಾವಿ ಸಭೆಗಳನ್ನು ನಡೆಸಿತ್ತು. ಒಂದು ಸಭೆಯಲ್ಲಿ ವೀರಶೈವ ಸಮಾಜದ ಪ್ರತಿನಿಧಿಯೊಬ್ಬರು ಕರಪತ್ರದಲ್ಲಿ ರೇಣುಕಾಚಾರ್ಯರ ಚಿತ್ರವನ್ನೂ ಪ್ರಕಟಿಸಲು ಸಲಹೆ ನೀಡಿದರು. ಅದನ್ನು ಬಸವ ಕೇಂದ್ರದ ಸದಸ್ಯರು ತೀವ್ರವಾಗಿ ಪ್ರತಿಭಟಿಸಿದರು.
ಅದರಿಂದ ಕೆರಳಿದ ಪಂಚಪೀಠ ಸಂಪ್ರದಾಯದ ಸ್ವಾಮಿಗಳೊಬ್ಬರೊಡನೆ ತೀವ್ರವಾದ ವಾಗ್ವಾದವೂ ನಡೆಯಿತೆಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಈ ಸಭೆಯಲ್ಲಿ ವಿರೋಧ ಬಂದರೂ ಲೆಕ್ಕಿಸದೆ ‘ವೀರಶೈವ ಲಿಂಗಾಯತ ಸಮಾಜ’ ಸಂಘಟನೆಯ ಪದಾಧಿಕಾರಿಗಳು ತಮ್ಮ ಸಂಘಟನೆಯ ಹೆಸರಿನಲ್ಲಿ ಪ್ರತ್ಯೇಕವಾಗಿ ವಿವಾದಿತ ಕರಪತ್ರ ಪ್ರಕಟಿಸಿ ಹಂಚಲು ಶುರು ಮಾಡಿದರು.
“ಇದನ್ನು ಪ್ರತಿಭಟಿಸಲು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಭೂಪಾಲ ನಾಡಗೌಡರಿಗೆ ಕರೆ ಮಾಡಿದಾಗ ಅವರು ಕರಪತ್ರ ಹಿಂಪಡೆಯಲು ನಿರಾಕರಿಸಿ, ‘ಸಣ್ಣ ವಿಷಯ ದೊಡ್ಡದು ಮಾಡಬೇಡಿ’ ಎಂದು ಹೇಳಿದರು,” ಎಂದು ಬಸವ ಸಂಘಟನೆಗಳ ಪ್ರತಿನಿಧಿಯೊಬ್ಬರು ತಿಳಿಸಿದರು.
ಬಸವ ಸಂಘಟನೆಗಳು ಏಪ್ರಿಲ್ 17ರಂದು ಸಭೆ ನಡೆಸಿ ಕರಪತ್ರದಿಂದ ಲಿಂಗಾಯತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕರಪತ್ರದಲ್ಲಿ ಜಿಲ್ಲಾಡಳಿತದ ಹೆಸರೂ ಬಳಕೆಯಾಗಿರುವುದರಿಂದ ಅದನ್ನು ಹಿಂಪಡೆಯಲು ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಲಾಗಿದೆ.

ಬಸವ ಕೇಂದ್ರದಲ್ಲಿ ಸಭೆ
ಈ ವಿವಾದವನ್ನು ಚರ್ಚಿಸಲು ಏಪ್ರಿಲ್ 17ರಂದು ಬಸವ ಕೇಂದ್ರದಲ್ಲಿ ಕರೆದ ಸಭೆಯಲ್ಲಿ ಕರಪತ್ರದಲ್ಲಿ ರೇಣುಕಾಚಾರ್ಯರ ಭಾವಚಿತ್ರ ಹಾಕಿದ್ದು ಅಕ್ಷಮ್ಯ ಅಪರಾಧ ಎಂದು ಹಲವಾರು ಬಸವ ಸಂಘಟನೆಗಳ ಮುಖಂಡರು ಖಂಡಿಸಿದರು.
“ಬಸವಪಥ ಸಂಚಲನ ಸಮಯದಲ್ಲಿ ಕಪ್ಪುಪಟ್ಟಿ ಧರಿಸಿ ಪಾಲ್ಗೊಳ್ಳಬೇಕೆಂದು,” ಬಸವ ಕೇಂದ್ರದ ಉಪಾಧ್ಯಕ್ಷ ಚನ್ನಬಸವ ಮಹಾಜನಶೆಟ್ಟಿ ಕರೆ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕ ಅಧ್ಯಕ್ಷ ಜೆ. ಬಸವರಾಜ, “ವೀರಶೈವ ಲಿಂಗಾಯತ ಸಮಾಜದ ಏಕಪಕ್ಷೀಯ, ವಿವೇಚನಾರಹಿತ ನಿರ್ಣಯ ಸಮಾಜದಲ್ಲಿ ಕಲುಷಿತ ವಾತಾವರಣವನ್ನು ಸೃಷ್ಟಿಸಿದೆ,” ಎಂದು ಖಂಡಿಸಿದರು.
“ನಮಗೆ ಐತಿಹಾಸಿಕ ಬಸವಣ್ಣನವರು ಬೇಕು, ಕಾಲ್ಪನಿಕ ರೇಣುಕಾಚಾರ್ಯರು ಬೇಡ. ಬಸವಣ್ಣನವರ ಭಾವಚಿತ್ರದ ಜೊತೆ ರೇಣುಕಾಚಾರ್ಯರ ಭಾವಚಿತ್ರ ಸೇರಿಸುವುದು ದ್ರೋಹದ ಕೃತ್ಯ,”
ಎಂದು ರಾಷ್ಟ್ರೀಯ ಬಸವದಳದ ಸಿದ್ದರಾಮಪ್ಪ ಪಾಟೀಲ ಹೇಳಿದರು.
“ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ಪ್ರತಿವರ್ಷ ಸಹಿತ ಗೊಂದಲಗಳು, ಮನಸ್ತಾಪಗಳನ್ನು ವೀರಶೈವ ಸಮಾಜದವರು ಸೃಷ್ಟಿಸುತ್ತಿದ್ದಾರೆ. ಇದರಿಂದಾಗಿ ಮುಂದಿನ ಪೀಳಿಗೆಗೆ ತಪ್ಪು ಮಾಹಿತಿ ಹೋಗುತ್ತಿದೆ,” ಎಂದು ಜಾಗತಿಕ ಲಿಂಗಾಯತ ಮಹಾಸಭೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ. ಸರ್ವಮಂಗಳ ಸಕ್ರಿ ಹೇಳಿದರು.
ರಾಜನ ಗೌಡ ಕೋಳುರು, ಹರಿವಿ ನಾಗನಗೌಡ, ನಾಗರಾಜ ಪಾಟೀಲ್, ಅಮರೇಶ ನಿಲೋಗಲ್, ಜೆ ಬಸವರಾಜ, ನಾಗೇಶಪ್ಪ ನಿವೃತ್ತ ಎ.ಎಸ್.ಐ, ಸೋಮಶೇಖರ ಪಿ., ಡಾ.ವಿರುಪಾಕ್ಷಪ್ಪ ಪಾಟೀಲ್, ಲಲಿತಾ ಎಂ., ಜಗದೇವಿ ಎಂ.ಸಿ., ಮುಕ್ತ ಎಸ್ ನರಕಲದಿನ್ನಿ, ತಾಯಮ್ಮ ಗೌಡ, ಗೀತಾ ಪೂರ್ಣಿಮಾ ಸಭೆಯಲ್ಲಿ ಭಾಗವಹಿಸಿದ್ದರು.

ಏಪ್ರಿಲ್ 24ರ ಬಸವ ಜಯಂತಿಯ ಆಮಂತ್ರಣ ಪತ್ರಿಕೆ
2025ರಲ್ಲಿಯೂ ಘರ್ಷಣೆ
ರೇಣುಕಾಚಾರ್ಯರ ಚಿತ್ರದ ವಿಷಯದಲ್ಲಿ ಲಿಂಗಾಯತ ಮತ್ತು ವೀರಶೈವ ಸಂಘಟನೆಗಳಲ್ಲಿ ಕಳೆದ ವರ್ಷವೂ ಘರ್ಷಣೆ ನಡೆದಿವೆ.
2025ರ ಬಸವ ಜಯಂತಿಯಲ್ಲಿಯೂ ವೀರಶೈವ ಲಿಂಗಾಯತ ಸಮಾಜದ ಕರಪತ್ರದಲ್ಲಿ ರೇಣುಕಾಚಾರ್ಯರ ಚಿತ್ರ ಮುದ್ರಿಸಲಾಗಿತ್ತು. ಅದರ ವಿರುದ್ಧ ಬಸವ ಸಂಘಟನೆಗಳು ಸಿಡಿದೆದ್ದಾಗ ಜಿಲ್ಲಾಡಳಿತವು ಬಸವಣ್ಣವರನ್ನು ಬಿಟ್ಟು ಬೇರೆ ಯಾರ ಭಾವಚಿತ್ರವನ್ನೂ ಮೆರವಣಿಗೆಯಲ್ಲಿ ಬಳಸಬಾರದೆಂದು ಆದೇಶ ನೀಡಿತ್ತು.
ಕಳೆದ ಮಾರ್ಚ್ ತಿಂಗಳು ಇಲ್ಲಿ ನಡೆದ ನಿಜಾಚರಣೆ ಕಮ್ಮಟದಲ್ಲಿ ಲಿಂಗಾಯತ ಸಂಘಟನೆಗಳು ರೇಣುಕಾಚಾರ್ಯರ ಭಾವಚಿತ್ರ ಹಾಕಲು ನಿರಾಕರಿಸಿದ ಮೇಲೆ ವೀರಶೈವ ಸಂಘಟನೆಗಳು ಹೊರನಡೆದವು.
ಇದೇ ವಿಷಯದ ಮೇಲೆ ಕಮ್ಮಟದ ಆಮಂತ್ರಣ ಪತ್ರಿಕೆ, ಕರಪತ್ರಗಳು ಬದಲಾದವು. ಕಮ್ಮಟದ ಸ್ಥಳವೂ ಕೊನೆಗಳಿಗೆಯಲ್ಲಿ ಬದಲಾದರೂ, ಬಸವ ಸಂಘಟನೆಗಳು ಹಠ ಹಿಡಿದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದವು.
ವೀರಶೈವ ಸಮಾಜದ ಪ್ರತಿಕ್ರಿಯೆ
ವೀರಶೈವ ಲಿಂಗಾಯತ ಸಮಾಜದ ಕಾರ್ಯದರ್ಶಿ ವಿರುಪಣ್ಣ ಬಂಡಿ ವಿವಾದದ ಬಗ್ಗೆ ಬಸವ ಮೀಡಿಯಾಗೆ ಪ್ರತಿಕ್ರಿಯೆ ನೀಡಿದರು.
“ನಮ್ಮ ಕಾರ್ಯಕಾರಿ ಸಮಿತಿಯ ಸಭೆಯ ನಿರ್ಣಯದ ಪ್ರಕಾರ 2,000 ಕರಪತ್ರ ಪ್ರಕಟ ಮಾಡಿ ಹಂಚಿದ್ದೇವೆ.
ಪೂರ್ವಭಾವಿ ಸಭೆಯಲ್ಲಿ ಯಾರೂ ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ, ಬಸವಾಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಮಾತ್ರ ಹೇಳಿದರು, ವಿರೋಧವೇನೂ ಮಾಡಿಲ್ಲ.
ನಮ್ಮ ಸಂಘಟನೆ ಹೆಸರೇ ವೀರಶೈವ ಲಿಂಗಾಯತ ಎಂದಿರುವದು. ಅವರಿಬ್ಬರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕೆನ್ನುವ ಉದ್ದೇಶದಿಂದ ರೇಣುಕಾಚಾರ್ಯರ ಭಾವಚಿತ್ರವನ್ನು ಹಾಕಿದ್ದೇವೆ,” ಎಂದು ಹೇಳಿದರು.

ವೀರಶೈವರು ಲಿಂಗಾಯತ ಧರ್ಮದ ಬಗ್ಗೆ ಮೂಗು ತೂರುವದನ್ನು ಬಿಟ್ಟು ತಮ್ಮಷ್ಟಕ್ಕೆ ತಾವು ಇದ್ದರೆ ಎಲ್ಲರಿಗೂ ಒಳ್ಳೆಯದು.ಬಸವಣ್ಣನವರ ಹೆಸರು ಹೇಳಿ ಮುಂದುವರಿದರೆ ಎಲ್ಲವೂ ಸುಗಮವಾಗಿ ಸಾಗುತ್ತದೆ
ಕೂಡುವದು ಉತ್ತಮ ನಾವೀಗ ಕ್ಷಮಾ ಗುಣವನ್ನು ಹಿರಿಯರು ತೋರಿಸಿದರೆ ನಮ್ಮ್ ಮುಂದಿನ ಸಮಾಜದ ಮಕ್ಕಳು ಧರ್ಮ /ಸಮಾಜ ಉಳಿಸಿಕೊಂಡು ಹೋಗುತ್ತಾರೆ. ನಾವು ಹೀಗೆ ಗೊಂದಲಗಳನ್ನು ಬಿಟ್ಟು ಇತರೆ ಸಮಾಜ ದವರಂತೆ ಒಗ್ಗಟ್ಟಾಗಿ ಬಾಳುವದು ಯಾವಾಗ್?
ಸಾಮಾನ್ಯವಾಗಿ ಜಯಂತಿ ಇದ್ದವರ ಭಾವ ಚಿತ್ರಗಳು ಹಾಕಿ ಕರಪತ್ರ, ಬ್ಯಾನರಾಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಆದರೆ ಅನ್ಯ ವ್ಯಕ್ತಿಯ ಭಾವ ಚಿತ್ರ ಸೇರಿಸುವುದು ವಿವಾದಕ್ಕೆ ಎಡೆಮಾಡಿಕೊಡುತ್ತದೆ. ಬಸವ ಜಯಂತಿ ಆಚರಣೆ ಸುಲಭವಾಗಿ ಲಿಂಗಾಯತರ ಸೋಗಿನಲ್ಲಿ ವೀರಶೈವರು ಮಾಡುವದು ಅಷ್ಟು ಸೂಕ್ತವಲ್ಲ. ನಮ್ಮಲ್ಲಿ ಏಕದೇವೋಪಾಸನೆಗೆ ಪ್ರಾಮುಖ್ಯತೆ. ಲಿಂಗಾಯತ ಧರ್ಮದ 11 ಲಕ್ಷಣಗಳನ್ನು ಹೊಂದಿರುವವರು , ಬಸವಗುರುವನ್ನು, ವಚನ ಸಾಹಿತ್ಯ , ಸ್ವತಂತ್ರ ಧರ್ಮ ಒಪ್ಪಿದರೆ, ಯಾರೇ ಆದರೂ ಸುಲಭವಾಗಿ ಬಸವ ಜಯಂತಿಯನ್ನು ಆಚರಣೆ ಮಾಡಬೇಕು. ಅನ್ಯರು ದ್ವೇಷದ ಆಚರಣೆ ಮಾಡಲು ಸಾಧ್ಯವಿಲ್ಲ. ಸರಿಯಾದ ತತ್ವ ತಿಳಿದು ಆಚರಿಸಲು ಯಾರ ಅಡ್ಡಿಯಿಲ್ಲ. ದೇವರು ಎಲ್ಲರಿಗೆ ಒಳ್ಳೆಯದು ಮಾಡಲಿ. ಶರಣು ಶರಣಾರ್ಥಿ.