ಕೂಡಲಸಂಗಮ :
ಬಸವಣ್ಣನವರ ಲಿಂಗೈಕ್ಯ ದಿನವನ್ನು ಸರ್ಕಾರಿ ದಿನವನ್ನಾಗಿ ರಾಜ್ಯ ಸರ್ಕಾರ ಘೋಷಿಸಬೇಕು ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೂಜ್ಯ ಮಹಾದೇಶ್ವರ ಸ್ವಾಮೀಜಿ ಹೇಳಿದರು.
ಸೋಮವಾರ ಸಂಜೆ ಬಸವಣ್ಣನವರ ೮೩೧ನೇ ಲಿಂಗೈಕ್ಯ ಸಂಸ್ಮರಣೆಯ ನಿಮಿತ್ತ ಬಸವಣ್ಣನವರ ಐಕ್ಯಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.
ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ಕೂಡಲಸಂಗಮದಲ್ಲಿ ಆರಂಭವಾದ ಬಸವ ಅಂತಾರಾಷ್ಟ್ರೀಯ ಕೇಂದ್ರದ ಕಾಮಗಾರಿ ಸ್ಥಗಿತಗೊಂಡು ೨ ವರ್ಷವಾಯಿತು ಇನ್ನೂ ಆರಂಭವಾಗಿಲ್ಲ. ಸರ್ಕಾರ ಕೂಡಲೇ ಕಾಮಗಾರಿ ಆರಂಭಿಸಿ, ಮುಕ್ತಾಯಗೊಳಿಸಬೇಕು.

೨೫ ವರ್ಷಗಳಿಂದ ಅನಾವರಣಕ್ಕೆ ಕಾಯ್ದುಕುಳಿತ ಬಸವಭಕ್ತರ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು.
ಮಂಡಳಿಯು ಕೂಡಲಸಂಗಮ ಕ್ಷೇತ್ರವನ್ನು ಕಟ್ಟಡಗಳ ಕೇಂದ್ರ ಮಾಡದೇ ಜನಾಕರ್ಷಣಿಯ ಕೇಂದ್ರವಾಗಿ ನಿರ್ಮಿಸಬೇಕು. ಸ್ವಚ್ಚತೆಗೆ ಅಧಿಕ ಆದ್ಯತೆ ಕೊಡಬೇಕು, ಯಾತಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು, ಭಕ್ತರ ಶೋಷಣೆಯನ್ನು ತಡೆಯಬೇಕು. ಕೇಂದ್ರ ಸರ್ಕಾರವು ಬಸವಣ್ಣನ ವಿದ್ಯಾಭೂಮಿ, ಐಕ್ಯಸ್ಥಳದ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿ ಅಭಿವೃದ್ಧಿ ಪಡಿಸಬೇಕು.
ಬಸವಾದಿ ಶರಣರ ವಿಚಾರಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿಸುವ ಕಾರ್ಯವನ್ನು ಮಾಡಬೇಕು ಎಂದರು.
ಖೊಜನವಾಡಿ ರಾಷ್ಟ್ರೀಯ ಬಸವ ದಳದ ಮಲ್ಲಿಕಾರ್ಜುನ ಕಾರಜನಗಿ, ಮಹಾದೇವಪ್ಪ, ಕಗ್ಗೋಡದ ಪ್ರವೀಣ, ಶಿವಶಂಕರ ಬಿ. ಮುಂತಾದವರು ಇದ್ದರು.
ವಚನ ಪಠಣದ ಮೂಲಕ ಪ್ರಾರ್ಥನೆ ಸಲ್ಲಿಸಿದರು. ನಂತರ ವಿದ್ಯಾರ್ಥಿಗಳಿಗೆ ಸಿಹಿ ಭೋಜನ ವಿತರಿಸಿದರು.
