ಬೆಂಗಳೂರು:
ಬಸವನಗರದ ಬಸವ ಸೇವಾ ಸಮಿತಿಯ ಮಾಸಿಕ ವಚನಾಮೃತ ಕಾರ್ಯಕ್ರಮದಲ್ಲಿ ‘ದೇವಾಲಯ’ ವಿಷಯದ ಮುಕ್ತ ಚರ್ಚೆ ನಡೆಸಲಾಯಿತು.
ತಲಕಾವೇರಿ ಬಡಾವಣೆಯ ಬಸವಾರೆಡ್ಡಿ ಕುಟುಂಬದ ಶರಣ ಸಹೋದರರಾದ ನಾಗರಾಜ ಮತ್ತು ಧರ್ಮೇಂದ್ರಪ್ಪರವರ ನಿವಾಸದಲ್ಲಿ ಕಾರ್ಯಕ್ರಮ ರವಿವಾರ ನಡೆಯಿತು.

ಕಾರ್ಯಕ್ರಮವನ್ನು ದಿಲೀಪ ಪಾಟೀಲ, ಮಲಿಕ್ ನಧಾಪ ಮತ್ತು ಮಂಜುನಾಥ ಹಿರೇಮಠ ಅವರಗಳು ಬಸವೇಶ್ವರರ ಎನ್ನ ಕಾಲೇ ಕಂಬ, ದೇಹವೇ ದೇಗುಲ ಎಂಬ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.
ಸಮಿತಿಯ ಪ್ರಧಾನಕಾರ್ಯದರ್ಶಿಗಳಾದ ಎ. ಎಸ್. ಓಂಕಾರಪ್ಪ ಅವರು ಸಮಸ್ತರನ್ನು ಸ್ವಾಗತಿಸಿದರು.
ಪದ್ಧತಿಯಂತೆ ಡಾ. ಐ.ಆರ್. ನಾಗನಗೌಡರ, ಅಂತಾರಾಷ್ಟ್ರೀಯ ಗ್ರಂಥಪಾಲಕರು ಇವರನ್ನು ಸರ್ವಾನುಮತದಿಂದ ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸಮಿತಿಯ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಹಂಜಿ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ದೇವಾಲಯ ಬೇಕೋ ಅಥವಾ ಬೇಡವೋ, ಬೇಕಿದ್ದರೆ ಏಕೆ ಬೇಕು ಮತ್ತು ಬೇಡವಾದರೆ ಏಕೆ ಬೇಡ ಎನ್ನುವ ತಮ್ಮ ಅನಿಸಿಕೆಗಳನ್ನು ಪುಷ್ಟಿಕರಿಸುವಂತೆ ನೆರೆದ ಶರಣರು ವಿಶೇಷವಾಗಿ ಶರಣೆಯರು ತಮ್ಮ ವಿಷಯ ಮಂಡನೆ ಮಾಡಬೇಕೆಂದು ಸರ್ವರನ್ನು ಮುಕ್ತ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಆಹ್ವಾನಿಸಿದರು.
ವಿಮಾನ ಕಾರ್ಖಾನೆಯ ಬಸವ ಸೇವಾ ಸಮಿತಿಯ ಅಧ್ಯಕ್ಷರಾದ ಬೇಲೂರಪ್ಪ ಅವರು ಕಾರ್ಯಕ್ರವನ್ನು ಜ್ಯೋತಿ ಬೆಳಗಿಸುತ್ತಾ, ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು.
ಅವರು ತಮ್ಮ ಉದ್ಘಾಟನಾ ನುಡಿಗಳಲ್ಲಿ ಬಸವಾದಿ ಶರಣರ ದೇವಾಲಯ ಕುರಿತಾದ ಪರಿಕಲ್ಪನೆಯನ್ನು ವಿವರಿಸುತ್ತಾ, ಇಷ್ಟಲಿಂಗದ ಮಹತ್ವವನ್ನು ವಿವರಿಸಿದರು.
ಪ್ರಾರಂಭದಲ್ಲಿ ವಾಣಿಯವರು ದೇವಾಲಯ ವಿಶೇಷವಾಗಿ ಮಕ್ಕಳಲ್ಲಿ ದೇವರ ಬಗ್ಗೆ ಶ್ರದ್ಧೆ ಮತ್ತು ಭಕ್ತಿ ಹುಟ್ಟುಹಾಕುವಲ್ಲಿ ಮತ್ತು ದೊಡ್ಡವರಲ್ಲಿ ಮಾನಸಿಕ ಶಾಂತಿ ದೊರತಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರತಿಪಾದಿಸಿದರು.
ಪ್ರತಿಯಾಗಿ ಶಾಬಾದಿ ಗುರುಗಳು ಬಸವಣ್ಣನವರು ಕೊಟ್ಟ ಇಷ್ಟಲಿಂಗವಿರಲು ದೇವಸ್ಥಾನದ ಅವಶ್ಯಕತೆ ಇಲ್ಲವೆಂದು ತಿಳಿಸಿದರು.

ರಂಗಾರೆಡ್ಡಿ ಅವರು ಮನೆಯ ಗೊಂದಲಮಯ ವಾತಾವರಣದಿಂದ ಮುಕ್ತಿ ಪಡೆಯಲು ದೇವಸ್ಥಾನದ ಅವಶ್ಯಕತೆಯನ್ನು ಮನಮುಟ್ಟುವಂತೆ ತಿಳಿಸಿದರು.
ಓಂಕಾರಪ್ಪ ಅವರು ಬಸವಾದಿ ಶರಣರು ಕೊಟ್ಟ ಇಷ್ಟಲಿಂಗದ ಪೂಜೆಯಲ್ಲಿ ಮನಶಾಂತಿಯನ್ನು ಪಡೆಯಬಹುದೆಂದು ತಿಳಿಸಿದರು. ನಂತರ ಕಲ್ಲಿನಾಥ ಅವರು ಇಷ್ಟಲಿಂಗ ಪೂಜೆಯಲ್ಲಿ ಸಿಗದ ಶಾಂತಿ ನೆಮ್ಮದಿ ಇಂದಿನ ಜನನಿಬಿಡ ವ್ಯಾಪಾರೀಕರಣದಿಂದ ಕೂಡಿದ ದೇವಾಲಯಗಳಲ್ಲಿ ಸಿಗುವ ಸಾಧ್ಯತೆ ವಿರಳವಾಗಿದೆ ಎಂದು ಪ್ರತಿಪಾದಿಸಿದರು.
ಶಿವಾನಂದ ಅವರು ದೇವಸ್ಥಾನದಲ್ಲಿ ನಿತ್ಯ ಕಸಗುಡಿಸುವ ಸತ್ಯ ಶುದ್ಧ ಕಾಯಕ ಮಾಡುವ ಬಡ ಮಹಿಳೆ ದೇವರ ದರ್ಶನದ ಅವಶ್ಯಕತೆಯನ್ನು ವೈದಿಕರ ಎದುರು ಅಲ್ಲಗಳೆದ ನೈಜ ಕಥೆಯನ್ನು ಮನ ಮುಟ್ಟುವಂತೆ ವಿವರಿಸಿದರು.
ಎಚ್. ಏ. ಎಲ್. ಬಸವ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಗುರುಸ್ವಾಮಿ ಅವರು ಬಸವಾದಿ ಶರಣರ ವಚನಗಳಲ್ಲಿರುವ ಇಷ್ಟಲಿಂಗದ ಮಹತ್ವವನ್ನು ವಿವರಿಸಿದರು.
ಸಮಿತಿಯ ಅಧ್ಯಕ್ಷರಾದ ಡಾ ಮಲ್ಲಿಕಾರ್ಜುನ ಹಂಜಿ ಅವರು ೨೦೦೦ ವರ್ಷಗಳಿಂದೀಚೆ ಪ್ರಾರಂಭವಾದ ದೇವಸ್ಥಾನದ ಇತಿಹಾಸವನ್ನು ವಿವರಿಸುತ್ತಾ, ಪಂಚಭೂತಗಳ ಆರಾಧನೆಯೊಂದಿಗೆ ಪ್ರಾರಂಭವಾದ ಪೂಜೆ, ಸಂಸ್ಕೃತಿ ಭಯದಿಂದ ಭಕ್ತಿಯನ್ನು ಸೃಷ್ಟಿಸಿ ನಂತರ ರಾಜಾಶ್ರಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ವಾಸ್ತು ಶಿಲ್ಪ ಕೇಂದ್ರಗಳಾಗಿ ಪರಿವರ್ತನೆಗೊಂಡು ವೈದಿಕ ಪರಂಪರೆ ಹಿಡಿತದಲ್ಲಿ ಅನ್ಯ ವರ್ಗದವರಿಗೆ ಪ್ರವೇಶಕ್ಕೆ ಮುಕ್ತವಾಗದಿದ್ದಾಗ ಬಸವಾದಿ ಶರಣರು ಇಷ್ಟಲಿಂಗವನ್ನು ದಯಪಾಲಿಸಿ ಧಾರ್ಮಿಕ ಸಾಮಾಜಿಕ ಸಮಾನತೆಯನ್ನು ಸರ್ವರಿಗೂ ದಯಪಾಲಿಸಿದರು.
ಇದರಿಂದಾಗಿ ದೇವಾಲಯ ಸಂಸ್ಕೃತಿಯ ಅವಶ್ಯಕತೆಯನ್ನು ಅವರು ಹೋಗಲಾಡಿಸಿದರು ಎಂದು ತಿಳಿಸಿದರು.
ಸಭಾ ಅಧ್ಯಕ್ಷರಾದ ನಾಗನಗೌಡ ಅವರು ತಮ್ಮ ಮಗಳ ಪ್ರೇರಣೆಯಿಂದ, ಸಿದ್ಧಗಂಗಾ ಶ್ರೀಗಳ ಅಮೃತ ಹಸ್ತದಿಂದ ಪಡೆದ ತಮ್ಮ ಇಷ್ಟಲಿಂಗದ ಅನುಭವವನ್ನು ಹಂಚಿಕೊಳ್ಳುತ್ತಾ, ದೇವಾಲಯಕ್ಕೆ ಪರ್ಯಾಯವಾಗಿ ಗುರು ಕೊಟ್ಟ ಲಿಂಗ ಹೇಗೆ ಪ್ರಭಾವಶಾಲಿಯಾಗಿ ಕಾರ್ಯ ಮಾಡಬಲ್ಲದು ಎಂದು ವಿವರಿಸಿದರು.

ಬಸವಾರೆಡ್ಡಿ ಕುಟುಂಬದವರು ಸಭೆಗೆ ಆಗಮಿಸಿದ ಹಿರಿರೆಲ್ಲರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಬಸವ ಸೇವಾ ಸಮಿತಿ ಬಸವಾರೆಡ್ಡಿ ಕುಟುಂಬದವರನ್ನು ಮತ್ತು ಗಣ್ಯವ್ಯಕ್ತಿಗಳನ್ನು ಅಂಗವಸ್ತ್ರ ಮತ್ತು ಬಸವ ಭಾವಚಿತ್ರ ಮತ್ತು ಬಸವ ಸಾಹಿತ್ಯವನ್ನೊಳಗೊಂಡ ಪುಸ್ತಗಳನ್ನು ಕೊಡುವುದರೊಂದಿಗೆ ಸನ್ಮಾನಿಸಿದರು.
ವಿಷಯ ಮಂಡನೆ ಮಾಡಿದ ಸಮಸ್ತರಿಗೆ ಶರಣ ಸಾಹಿತ್ಯ ವಿವರಿಸುವ ಪುಸ್ತಕಗಳನ್ನು ವಿತರಿಸಲಾಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನಾಡಗೌಡರು ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಿದರು. ಹಾಗೂ ಎಲ್ಲರಿಗೂ ಶರಣು ಸಮರ್ಪಣೆ ಮಾಡಿದರು.

ಶರಣೆ ಶ್ರೀಮತಿ ಶಕುಂತಲಾ ಸಾಲಿಮಠ ಅವರು ಮಂಗಳ ಗೀತೆ ಹಾಡಿದರು. ಹಿಂದಿನ ಅಧ್ಯಕ್ಷರಾದ ಶರಣ ಶ್ರೀ ಆರ್ ಡಿ ಪಾಟೀಲರು, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶರಣ ಶ್ರೀ ಅಣ್ಣೇಗೌಡರು, ಸಮಿತಿಯ ಪದಾಧಿಕಾರಿಗಳಾದ ಶರಣ ಶ್ರೀ ಮಲ್ಲಿಕಾರ್ಜುನ ಕಳಹಾಳ, ಶರಣ ಶ್ರೀ ವೀರೇಶ ಜಿ ಕೆ, ಮತ್ತು ಸಮಾಜ ಸೇವಕರಾದ ಶರಣೆ ಶ್ರೀಮತಿ ಗಿರಿಜಮ್ಮ, ಶರಣ ಶ್ರೀ ಕೃಷ್ಣೇಗೌಡರು, ಶರಣ ಶ್ರೀ ಶಿವರಾಜರವರು ಉಪಸ್ತಿತರಿದ್ದರು. ಕಾರ್ಯಕ್ರಮವು ಪ್ರಸಾದ ವಿತರಣೆಯೊಂದಿಗೆ ಸಮಾಪ್ತಿಯಾಯಿತು.
