ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಲಿಂಗಾಯತರು 25 ಟಿಕೆಟ್ ಕೇಳಬೇಕು

ಎಂ. ಎ. ಅರುಣ್
ಎಂ. ಎ. ಅರುಣ್
  • 2015 ಪಾಲಿಕೆ ಚುನಾವಣೆಯಲ್ಲಿ ಲಿಂಗಾಯತರಿಗೆ ಸಿಕ್ಕ ಟಿಕೆಟ್ ಕೇವಲ ಎರಡು

ಬೆಂಗಳೂರು

ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷ.

ಹಳೇ ಮೈಸೂರು ಲಿಂಗಾಯತರ ಜೊತೆ ಉತ್ತರ ಕರ್ನಾಟಕದಿಂದ ಬಂದವರನ್ನು ಸೇರಿಸಿದರೆ ನಗರದಲ್ಲಿ ಸುಮಾರು 8 ಲಕ್ಷ ಲಿಂಗಾಯತರಿದ್ದಾರೆ ಎನ್ನುವುದು ಒಬ್ಬ ಪ್ರಮುಖ ರಾಜಕಾರಣಿಯ ಅಂದಾಜು.

ಅಂದರೆ ಲಿಂಗಾಯತರು ಬೆಂಗಳೂರಿನಲ್ಲಿ ಶೇಕಡಾ 5ಕ್ಕಿಂತಲೂ ಹೆಚ್ಚಿದ್ದಾರೆ. ಬೆಂಗಳೂರು ಸಣ್ಣ ಸಣ್ಣ ಸಮುದಾಯಗಳಿರುವ ವಲಸಿಗರ ನಗರ. ಅವರಿಗೆ ಹೋಲಿಸಿದರೆ ಲಿಂಗಾಯತರದು ದೊಡ್ಡ ಸಮುದಾಯ.

ಬೆಂಗಳೂರಿನಲ್ಲಿ 28 ಶಾಸಕರಿದ್ದಾರೆ. ಅದರಲ್ಲಿ ಲಿಂಗಾಯತರ ಸಂಖ್ಯೆ ಶೂನ್ಯ. ಕಳೆದ ಏಳು ದಶಕಗಳ ರಾಜಕೀಯದಲ್ಲಿ ಕೇವಲ ಇಬ್ಬರು ಲಿಂಗಾಯತರು ಮಾತ್ರ ಶಾಸಕರಾಗಿದ್ದಾರೆ – ಸೋಮಣ್ಣ ಮತ್ತು ಪ್ರಮೀಳಾ ನೇಸರ್ಗಿ.

ಬೆಂಗಳೂರು ನಗರ ಮಹಾಪಾಲಿಕೆಗೆ ಈ ಮೊದಲು ಚುನಾವಣೆಯಾಗಿದ್ದು 2015ರಲ್ಲಿ. ಆಗ 198 ವಾರ್ಡುಗಳಿದ್ದವು. ಅವುಗಳಲ್ಲಿ ನಗರದ ಶೇಕಡಾ ಐದರಷ್ಟು ಇರುವ ಲಿಂಗಾಯತರಿಗೆ ಸಿಕ್ಕಿದ್ದು ಎರಡೇ ಟಿಕೇಟು. ಒಂದು ಕಾಂಗ್ರೆಸ್ ಕೊಟ್ಟಿತ್ತು, ಮತ್ತೊಂದು ಬಿಜೆಪಿ ಕೊಟ್ಟಿತ್ತು.

ಬೆಂಗಳೂರಿನಲ್ಲಿ ಸಣ್ಣ ಸಣ್ಣ ತೆಲುಗು ಮಾತನಾಡುವ ನಾಯ್ಡು, ರಾಜು, ಬಲಿಜ, ರೆಡ್ಡಿ ಮುಂತಾದ ಸಮುದಾಯಗಳಿವೆ. 2015ರ ಬೆಂಗಳೂರು ಚುನಾವಣೆಯಲ್ಲಿ ಇವರಿಗೆ ಸಿಕ್ಕ ಟಿಕೆಟ್ ಸಂಖ್ಯೆ 50ಕ್ಕೂ ಹೆಚ್ಚು.

“ಇಲ್ಲಿ ಬೇರೆ ಸಮುದಾಯಕ್ಕೆ ಎಷ್ಟು ಟಿಕೆಟ್ ಸಿಕ್ಕಿದೆ ಅನ್ನುವುದು ಮುಖ್ಯವಲ್ಲ. ಪ್ರಜಾಪ್ರಭುತ್ವದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಇರಬೇಕಾಗುತ್ತದೆ ಎನ್ನುವುದು ಮುಖ್ಯ,” ಎಂದು ರಾಜಕೀಯ ವಿಶ್ಲೇಷಕ ಬಿ ಎಸ್ ಮೂರ್ತಿ ಹೇಳುತ್ತಾರೆ.

ಈ ಶೋಚನೀಯ ಅಂಕಿ ಅಂಶ ಹಂಚಿಕೊಳ್ಳಲು ಮುಜುಗರವಾಗುತ್ತದೆ. ಲಿಂಗಾಯತರಿಂದ ಯಾರೂ ಟಿಕೆಟ್ ಕೇಳುವವರೇ ಇಲ್ಲ ಎಂದು ಪಕ್ಷಗಳ ಮುಖಂಡರು ಸಾಮಾನ್ಯವಾಗಿ ಹೇಳುವ ಮಾತು.

ಈ ನಿರಾಸಕ್ತಿಗೆ ಕಾರಣ ಗೊತ್ತಿಲ್ಲ. ಆದರೆ ಪರಿಣಾಮ ಮಾತ್ರ ಸ್ಪಷ್ಟ.

ಬೆಂಗಳೂರಿನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹೆಸರಿನಲ್ಲಿ ಮೆಟ್ರೋ ಅಥವಾ ವಿಮಾನ ನಿಲ್ದಾಣದಂತಹ ದೊಡ್ಡ ಸ್ಮಾರಕ ಇರಬೇಕು ಅಂತ ನಾಡಿನ ಬಸವ ಅಭಿಮಾನಗಳ ಬಹು ದಿನಗಳ ಆಗ್ರಹ.

ಆದರೆ ನಮ್ಮ ರಾಜಕೀಯ ಸಾಮರ್ಥ್ಯದ ಕೊರತೆಯಿಂದ ಯಾವ ರಾಜಕಾರಣಿಗೂ ಅದರ ಬಗ್ಗೆ ಆಸಕ್ತಿಯಿಲ್ಲ. ಬೆಂಗಳೂರಿನಲ್ಲಿ ಐದಾರು ಲಿಂಗಾಯತ ಶಾಸಕರಿದ್ದರೆ ಅಥವಾ ಒಂದು 25 ಕಾರ್ಪೊರೇಟರುಗಳಿದ್ದರೆ ಇದು ಕಷ್ಟದ ಕೆಲಸವೇ?

ರಾಜಾಜಿನಗರದಲ್ಲಿ ಪೂರ್ಣಗೊಂಡ ಬಸವಣ್ಣನವರ ಪ್ರತಿಮೆ ಮೂರು ವರ್ಷ ಮುಸುಕು ಹಾಕಿಕೊಂಡು ನಿಂತಿತ್ತು. ಬಸವ ಸಂಘಟನೆಗಳ, ಪೂಜ್ಯ ಸಿದ್ದಲಿಂಗ ಸ್ವಾಮೀಜಿಯವರ ಶ್ರಮದಿಂದ ಕೊನೆಗೂ ಹೋದ ವರ್ಷ ಅದರ ಅನಾವರಣವಾಯಿತು.

ಲಿಂಗಾಯತರಲ್ಲಿ ಐದಾರು ಲಿಂಗಾಯತ ಶಾಸಕರಿದ್ದರೆ ಅಥವಾ 25 ಕಾರ್ಪೊರೇಟರುಗಳಿದ್ದರೆ ಸ್ಥಳೀಯ ಶಾಸಕರು ಅಷ್ಟೊಂದು ನಿರಾಸಕ್ತಿ ತೋರಿಸುತ್ತಿದ್ದರೆ?

ಲಿಂಗಾಯತರಲ್ಲಿ ಐದಾರು ಲಿಂಗಾಯತ ಶಾಸಕರಿದ್ದರೆ ಅಥವಾ 25 ಕಾರ್ಪೊರೇಟರುಗಳಿದ್ದರೆ ಬೆಂಗಳೂರಿನಲ್ಲಿ ಬಸವ ಜಯಂತಿ ಯಾವ ಪ್ರಮಾಣದಲ್ಲಿ ನಡೆಯುತ್ತಿತ್ತು?

ಯೋಚಿಸಿ.

ಗ್ರೇಟರ್ ಬೆಂಗಳೂರು ಮರುವಿಂಗಡಣೆಯಾಗಿ ಈಗ 369 ವಾರ್ಡುಗಳಾಗಿವೆ. ಒಂದೊಂದು ವಾರ್ಡಿನಲ್ಲಿ ಸರಾಸರಿ 20,000ದಷ್ಟು ಜನಸಂಖ್ಯೆಯಿದೆ.

ಬೆಂಗಳೂರಿನ 52ನೇ ಮೇಯರ್ ಆಗಿದ್ದ ಗಂಗಾಂಬಿಕೆ ಮಲ್ಲಿಕಾರ್ಜುನ್

ಒಂದು ಅಂದಾಜಿನ ಪ್ರಕಾರ ನೂರೈವತ್ತಿಕ್ಕಿಂತ ಹೆಚ್ಚಿನ ವಾರ್ಡುಗಳಲ್ಲಿ ನಾಲ್ಕು ಸಾವಿರಕ್ಕಿಂತ ಹೆಚ್ಚು ಲಿಂಗಾಯತ ಮತಗಳಿವೆ. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 20,000 ಲಿಂಗಾಯತ ಮತಗಳಿವೆ. ಲಿಂಗಾಯತ ಸಮುದಾಯದ ಶಕ್ತಿಯನ್ನು ಗ್ರಹಿಸಿಯೇ ರಾಮಲಿಂಗ ರೆಡ್ಡಿಯವರು ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿ ಮೇಯರ್ ಆಗಲು ನೆರವಾಗಿದ್ದು.

ವಿಜಯನಗರ, ಚಂದ್ರಾ ಲೇಔಟ್, ಹೊಸಹಳ್ಳಿ, ನಾಗರಭಾವಿ, ,ಬಸವೇಶ್ವರ ನಗರ, ಬನಶಂಕರಿ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಗೋವಿಂದರಾಜ ನಗರ, ಆರ್‌ಆರ್ ನಗರ, ಉತ್ತರಹಳ್ಳಿ, ಜೆಪಿ ನಗರ, ಜಯನಗರ, ನೈಸ್ ರಸ್ತೆಯ ಸಂಪೂರ್ಣ ಸ್ಟೆಚ್, ಯಶವಂತಪುರ ಗ್ರಾಮಾಂತರ ಭಾಗಗಳಲ್ಲಿ ಲಿಂಗಾಯತರ ಸಂಖ್ಯೆ ಹೆಚ್ಚಿದೆ.

ಮೇ ಅಥವಾ ಜೂನ್ ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಡೆಯುವ ಚುನಾವಣೆಗೆ ಸದ್ಯದಲ್ಲೇ ಅರ್ಜಿಗಳನ್ನು ಕರೆಯಲಾಗುವುದು. ಬಸವ ಸಂಘಟನೆಗಳು ಟಿಕೇಟಿಗಾಗಿ ಎಲ್ಲಾ ಪಕ್ಷಗಳಿಗೆ ಕನಿಷ್ಠ 100 ಅರ್ಜಿಗಳು ಹೋಗುವಂತೆ ನೋಡಿಕೊಳ್ಳಬೇಕು.

ಬಿಜೆಪಿ, ಕಾಂಗ್ರೆಸ್ ಪಕ್ಷಗಳು ತಲಾ ಕನಿಷ್ಠ 25 ಟಿಕೆಟ್ ಲಿಂಗಾಯತರಿಗೆ ಕೊಡುವಂತೆ ಒತ್ತಡ ಹಾಕಬೇಕು.

ಗ್ರೇಟರ್ ಬೆಂಗಳೂರು ಚುನಾವಣೆಗೆ ಸದ್ಯದಲ್ಲೇ
ಅರ್ಜಿಗಳನ್ನು ಕರೆಯಲಾಗುವುದು.

ಬಸವ ಸಂಘಟನೆಗಳು ಪಕ್ಷಗಳ ಮುಖಂಡರನ್ನು, ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಒತ್ತಡ ಹಾಕಿದರೆ ಇದು ಕಷ್ಟದ ಕೆಲಸವಲ್ಲ. ಪಕ್ಷಗಳಿಗೆ ಲಿಂಗಾಯತರ ಮತ ಕಳೆದುಕೊಳ್ಳುವ ಭೀತಿಯೂ ಇದೆ.

2008ರಲ್ಲಿ ಹಂಪನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದು ಲಿಂಗಾಯತ ಅಭ್ಯರ್ಥಿಯೊಬ್ಬರು ರೆಬೆಲ್ ಆಗಿ ನಿಂತು 3,000 ಮತ ಕಿತ್ತ ಮೇಲೆ.

ಇದೇ ಕ್ಷೇತ್ರದ 2013 ಚುನಾವಣೆಯಲ್ಲಿ ಎಂ ಕೃಷ್ಣಪ್ಪ ಸೋಮಣ್ಣನವರನ್ನು 32,642 ಮತಗಳಿಂದ ಸೋಲಿಸಿದರು. ಆದರೆ 2015ರ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ಕೊಡಲು ನಿರಾಕರಿಸಿದರು. ಬಸವ ಸಂಘಟನೆಗಳು, ಕಾರ್ಯಕರ್ತರು ಅವರನ್ನು ಭೇಟಿ ಮಾಡಿ ಸಮುದಾಯಕ್ಕೆ ಟಿಕೆಟ್ ಕೊಡಲು ಮನವಿ ಮಾಡಿದರು. ಆದರೂ ಕೃಷ್ಣಪ್ಪ ಮನಸ್ಸು ಬದಲಿಸಲಿಲ್ಲ.

ಇದರಿಂದ ಸಿಟ್ಟಾಗಿ ಲಿಂಗಾಯತರು ಕೃಷ್ಣಪ್ಪನವರ ವಿರುದ್ಧ ತಿರುಗಿ ಬಿದ್ದಮೇಲೆ 2018ರಲ್ಲಿ ಅವರ ಗೆಲುವಿನ ಅಂತರ 2,775ಕ್ಕೆ ಕುಸಿಯಿತು.

ಈ ಘಟನೆ ಲಿಂಗಾಯತರಲ್ಲಿ ಮತಗಳ ಸಾಮರ್ಥ್ಯ, ಅರಿವು ಎರಡೂ ಇದೆ ಎಂದು ತೋರಿಸುತ್ತದೆ. ಇದೇ ಸಾಮರ್ಥ್ಯ ಬಳಸಿಕೊಂಡು ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಸಮುದಾಯ ಮತ್ತೆ ಮೋಸ ಹೋಗದಂತೆ ನೋಡಿಕೊಳ್ಳಬೇಕು.

“ಸಮುದಾಯದ ಮತಗಳಿದ್ದರೆ ಕಾರ್ಪೊರೇಟರ್ ಆಗುವುದು ಕಷ್ಟವಿಲ್ಲ,” ಎಂದು ಮೇಲೆ ಹೇಳಿದ ರಾಜಕಾರಣಿಯೊಬ್ಬರು ಹೇಳಿದರು.

“ಎರಡೂ ಮುಖ್ಯ ಪಕ್ಷಗಳು ಸಾಮಾನ್ಯವಾಗಿ 15 ಲಕ್ಷದ ತನಕ ಅಭ್ಯರ್ಥಿಗಳಿಗೆ ಕೊಡುತ್ತವೆ. ಒಂದು ಸ್ಕೂಟರಿನಲ್ಲಿ ವಾರ್ಡಿನಲ್ಲಿರುವ ಎಲ್ಲಾ ಮತದಾರರನ್ನು ಎರಡು ದಿನದಲ್ಲಿ ಸಂಪರ್ಕಿಸಬಹುದು. ಗಟ್ಟಿಯಾದ ಇಚ್ಚಾಶಕ್ತಿಯಿದ್ದರೆ ಇದು ಸಾಧ್ಯ,” ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
9 Comments
  • ಬೆಂಗಳೂರಿನ ಎಲ್ಲ 369 ವಾರ್ಡ ಗಳಲ್ಲಿ ಒಬ್ಬರಾದರೂ ಲಿಂಗಾಯತರು ಇದ್ದಾರೋ ಇಲ್ಲವೋ?
    ಒಬ್ಬನೇ ಒಬ್ಬ ಮನುಷ್ಯ ವಾರ್ಡ್ ನಲ್ಲಿ ಇದ್ದರು ಸಾಕು, ಅವರ ಪರಿಚಯದ 12 ಜನರು ಅವರ ನಾಮಪತ್ರಕ್ಕೆ ಸಹಿ ಹಾಕುವಷ್ಟು ಗೆಳೆತನ ಇದ್ದರೆ… ಅವರು ಒಬ್ಬರೇ ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಲಿ.
    ಅಂತಹ ವಾರ್ಡ್ ನಲ್ಲಿ ಆರಿಸಿ ಬರುವುದು ಬೇಡ, ಆದರೆ ಹೆಸರು ಸಲ್ಲಿಕೆ ಆದರೂ ಉಳಿದ ವಾರ್ಡ್ ಗಳಲ್ಲಿ ನಿಂತವರು ಆರಿಸಿ ಬರುತ್ತಾರೆ.

    ರಾಜಕೀಯ ಪಕ್ಷದವರೇ ಬಿ ಪಾರ್ಮ್ ಕೊಡಲಿ ಅಂತ ಕಾಯ ಬೇಕೆ ಏಕು ❓

  • ಲಿಂಗಾಯತರೇ ಎಚ್ಚೆತ್ತುಕೊಳ್ಳಿ ರಾಜಕೀಯದಲ್ಲಿ ನಮ್ಮ ಭವಿಷ್ಯವನ್ನು ನಾವು ರೂಪಿಸಬೇಕಾಗಿದೆ

  • ಶುಭವಾಗಲಿ.ಲಿಂಗಾಯತರಿಗೆ ಯಾವ ಕ್ಷೇತ್ರದಲ್ಲಿ ಬಿಜೆಪಿ,ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಟಿಕೆಟ್ ಸಿಗುವುದಿಲ್ಲವೂ ಅಂತಹ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿ. ಕಾದು ನೋಡೋಣ ಲಿಂಗಾಯತರ ನಡವಳಿಕೆಯ ನ್ನು.

  • ಬೆಂಗಳೂರಿನ 369 ಕ್ಷೇತ್ರಗಳ ಪೈಕಿ ಬಿಜೆಪಿ ,ಕಾಂಗ್ರೆಸ್ ,ಜೆಡಿಎಸ್ ಪಕ್ಷದಿಂದ ಕನಿಷ್ಠ 20 ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಟಿಕೆಟ್ ಕೊಡದಿದ್ದರೆ ಯಾವ ಕ್ಷೇತ್ರದಲ್ಲಿ ಮೂರೂ ಪಕ್ಷಗಳ ಲಿಂಗಾಯತ ಅಭ್ಯರ್ಥಿ ಇರುವುದಿಲ್ಲವೂ ಅಂತಹ ಕ್ಷೇತ್ರಗಳಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ದಿಟ್ಟತನ ಪ್ರದರ್ಶನ ತೋರಲಿ.ನನ್ನ ಸಂಪೂರ್ಣ ಬೆಂಬಲ ಇದೆ.

    • ನಾನು ಬೆಂಗಳೂರಿನ ರಹವಾಸಿ ಅಲ್ಲ. ದೂರದ ಬೆಳಗಾವಿ ಜಿಲ್ಲೆ ಯವನು. ಬೆಂಗಳೂರಿನ ಎಲ್ಲ ವಾರ್ಡ್ ಗಳಿಗೆ ಲಿಂಗಾಯತರು ಸ್ಪರ್ಧೆ ಮಾಡಲಿ.
      ಈ ಸ್ಪರ್ಧೆ ಪ್ರತಿಭಟನೆ ತರಹ ಇರಲಿ. ಆಗ ರಾಜಕೀಯ ನಾಯಕರಿಗೆ ಎಚ್ಚರಿಕೆ ಗಂಟೆ ಆಗುತ್ತದೆ.
      ಹಾಗೂ ಬೆಂಗಳೂರ ಲಿಂಗಾಯತ ರಿಗೆ ರಾಜಕೀಯವಾಗಿ ಬೆಳೆಯಲಿಕ್ಕೆ ಪ್ರೋತ್ಸಾಹ ಆಗುತ್ತದೆ.

      ಯಾವುದೇ ಕ್ಷೇತ್ರದಲ್ಲಿ ನಿಲ್ಲಲು ಯಾರು ಇಲ್ಲ, ಅನ್ನುವುದಾದರೆ, ಬೆಳಗಾವಿ ಜಿಲ್ಲೆಯ ನನಗೆ ಸ್ಪರ್ಧೆ ಮಾಡಲು ಅನುಕೂಲ ಮಾಡಿ ಕೊಟ್ಟರೆ, ನಾನು ಸ್ಪರ್ಧೆ ಮಾಡುತ್ತೇನೆ
      ನಾನು ಗೆಲ್ಲುವುದಿಲ್ಲ. ನನಗೆ ಗೊತ್ತು. ಸ್ಪರ್ಧೆ ಮಾಡಲು ಹಿಂದೆ ಸರಿಯುವುದಿಲ್ಲ.

  • ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು ಮತ್ತು ತಮ್ಮ ಪ್ರಾತಿನಿಧ್ಯ ಪಡೆಯುವುದು ನಮ್ಮ ಹಕ್ಕು. ನಮ್ಮ ಅಸ್ಮಿತೆಯ ಕೊರತೆ ಮತ್ತು ಸ್ವಾಭಿಮಾನ ಇಲ್ಲದೆ ಇರುವುದು ನಮ್ಮ ಇರುವನ್ನೇ ಇಲ್ಲವಾಗಿಸಿದೆ. ನಾವು ಬೇರೆ ಯಾರದೋ ಸೇವಕರಾಗಿ ಚಿಲ್ಲರೆ ಕಾಸಿಗೆ ಮಾರಿಕೊಳ್ಳುವುದಕ್ಕಿಂತ ನಮ್ಮ ಹಕ್ಕನ್ನು ಚಲಾಯಿಸುವ ಎದೆಗಾರಿಕೆ ತೋರಬೇಕು. ನಮ್ಮ ಪ್ರಾತಿನಿಧ್ಯ ಇಲ್ಲದಿದ್ದರೆ ನಮ್ಮ ಶಕ್ತಿಯ ಅರಿವು ರಾಜಕೀಯ ಪಕ್ಷಗಳಿಗೆ ಆಗುವುದಿಲ್ಲ.

    • Being true lingayath, we should only support those who uphold the true spirit of Basavanna (those who work for secular, fighting for uplifting the weak,voiceless people) and not these people like Somanna who is a Manuvadi.

  • ಸೋಮಣ್ಣ ಮತ್ತು ಪ್ರಮೀಳಾ ನೇಸರ್ಗಿಯವರು ಜಾತಿಯಿಂದ ಲಿಂಗಾಯತರಾಗಿದ್ದರೂ ಸ್ವಭಾವದಿಂದ ಮತ್ತು ಸೈದ್ಧಾಂತಿಕವಾಗಿ ಮನುವಾದಿಗಳಾಗಿರುತ್ತಾರೆ. ಇಂತಹವರನ್ನು ಬೆಂಬಲಿಸುವುದರಿಂದ ನಾವು ಜಾತಿವಾದಿಗಳಾಗುತ್ತೇವೆ. ನಿಜವಾದ ಬಸವವಾದಿಗಳು ಜಾತಿವಾದಿಗಳಾಗಬಾರದು. ಇಂತಹವರನ್ನು ಬೆಂಬಲಿಸುವುದರಿಂದ ಲಿಂಗಾಯತ ಶೂದ್ರ ಸಮಾಜದಲ್ಲಿರುವ ಬಸವಪ್ರೇಮಿಗಳು ನಮ್ಮಿಂದ ದೂರವಾಗುವ ಆತಂಕವಿದೆ. ಮತ್ತು ಲಿಂಗಾಯತದ ಆಚೆಗೆ ಬಸವತತ್ವವನ್ನು ವಿಸ್ತರಿಸುವುದು ಕಷ್ಟಕರವಾಗುತ್ತದೆ. ಬ್ರಾಹ್ಮಣರು ಶೇ 3 ರಷ್ಟಿದ್ದರು ಕೂಡ ಬಹುತೇಕ ಶೂದ್ರ ಸಮಾಜವನ್ನು ಮನುವಾದಿಗಳಾಗಿ ಪರಿವರ್ತಿಸಿದ್ದರಿಂದ ಅವರ ಸಂಘಟನೆಯನ್ನು(RSS) ಬಲಗೊಳಿಸಲು ಮತ್ತು ರಾಜಕೀಯ ಅಧಿಕಾರ(ಕೇಂದ್ರದಲ್ಲಿ) ಹಿಡಿಯಲು ಅವರಿಗೆ ಸಾಧ್ಯವಾಯಿತು ಎಂಬುದನ್ನು ನಾವು ಮನಗಾಣಬೇಕಾಗಿದೆ. ಅದೇರೀತಿ ಬಸವ ತತ್ವವು ಬಹುತೇಕ ಶೂದ್ರ ಸಮಾಜವನ್ನು ಪ್ರಭಾವಿಸುವಂತಾದಾಗ ಮಾತ್ರ ಬೆಂಗಳೂರು ನಗರದಲ್ಲಾಗಲಿ ರಾಜ್ಯದಲ್ಲಾಗಲಿ ಬಸವ ಸಂಘಟನೆಯನ್ನು ಬಲಪಡಿಸಲು ಮತ್ತು ರಾಜಕೀಯ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ. ನಿಜವಾದ ಬಸವವಾದಿಗಳು ಸಮಾಜಮುಖಿಗಳಾಗಿದ್ದರಿಂದ ಅವರಲ್ಲಿ ಸಹಜವಾಗಿಯೆ ನಾಯಕತ್ವ ಗುಣ ರೂಢಿಗತವಾಗಿರುತ್ತದೆ. ನಾವು ನಿಜವಾದ ಬಸವವಾದಿಗಳಾಗಬೇಕಷ್ಟೆ.
    ಕಾರಣ ಯಾವುದೆ ಜಾತಿಯವರಿರಲಿ ಅವರು ಬಸವ ಸಂಘಟನೆಗಳಲ್ಲಿ ಭಾಗವಹಿಸಿದ್ದರೆ ಇಲ್ಲವೆ ಬಸವ ಸಂಘಟನೆಯ ಹೋರಾಟಕ್ಕೆ ಬಹಿರಂಗವಾಗಿ ಬೆಂಬಲಿಸಿದ್ದರೆ ಬಸವಪ್ರಮಿಗಳು ಅಂತಹವರನ್ನು ಬೆಂಬಲಿಸುವಂತಾಗಬೇಕು. ನಿಜವಾದ ಬಸವವಾದಿಗಳು ಸಮಾಜಮುಖಿಗಳಾಗಿರುವದರಿಂದ ಸಹಜವಾಗಿಯೆ ಅವರಲ್ಲಿ ನನಾಯಕತ್ವ ಗುಣ ರೂಢಿಗತವಗಿರುತ್ತದೆ. ನಾವು ನಿಜವಾದ ಬಸವವಾದಿಗಳಾಗಬೇಕಷ್ಟೆ.

Leave a Reply

Your email address will not be published. Required fields are marked *