ಬೀದರ್
‘ಸಮ ಸಮಾಜ ನಿರ್ಮಿಸಿದ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಕರ್ಮಭೂಮಿಯಲ್ಲಿರುವ ಭಾಲ್ಕಿ ಹಿರೇಮಠ ಸಂಸ್ಥಾನವು ಬಸವತತ್ವದ ಚೈತನ್ಯ ಕೇಂದ್ರವಾಗಿ, ಬಸವೇಶ್ವರರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದೆ’ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ವರ್ಣಿಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರ 75ನೇ ಜನ್ಮದಿನದ ಅಂಗವಾಗಿ ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಬುಧವಾರ ಏರ್ಪಡಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಸಮಾನತೆ, ಸಾಮಾಜಿಕ ಕ್ರಾಂತಿ, ಧಾರ್ಮಿಕ ಕ್ರಾಂತಿ, ಸಮಾಜ ಸುಧಾರಣೆಗೆ ಶ್ರಮಿಸಿದ ಬಸವಣ್ಣನ ನಾಡಿನಲ್ಲಿ ಬಸವಾದಿ ಶರಣರ ಆಶಯಗಳಂತೆ ಭಾಲ್ಕಿ ಹಿರೇಮಠ ಸೇವೆ ಸಲ್ಲಿಸುತ್ತಿದೆ ಎಂದರು.
ಡಾ. ಬಸವಲಿಂಗ ಪಟ್ಟದೇವರು ಅನಾಥ ಮಕ್ಕಳನ್ನು ಅಪ್ಪಿಕೊಂಡು ಅವರಿಗೆ ಆಶ್ರಯ, ಗೌರವ ಮತ್ತು ಶಿಕ್ಷಣವನ್ನು ನೀಡಿದ್ದಾರೆ. ಇಂದು 500ಕ್ಕೂ ಹೆಚ್ಚು ಮಕ್ಕಳು ಅವರ ಆರೈಕೆಯಲ್ಲಿ ಮನೆ, ಭವಿಷ್ಯವನ್ನು ಕಂಡಿದ್ದಾರೆ. ಅವರ ಶ್ರಮದಿಂದ 60ಕ್ಕೂ ಹೆಚ್ಚು ಸಂಸ್ಥೆಗಳು ವಿಶಾಲವಾಗಿ ಬೆಳೆದಿವೆ. 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.

ಲಿಂಗಾಯತ ಸ್ವಾಮೀಜಿಗಳ ಒಕ್ಕೂಟದ ಅಧ್ಯಕ್ಷರಾಗಿ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಸ್ವಾಮೀಜಿ ಅವರ ಸತ್ಯ, ಸೇವಾ, ಮಾನವೀಯತೆ ಎಲ್ಲರಿಗೂ ದಾರಿದೀಪವಾಗಿದೆ. ಬಸವಣ್ಣನವರ ವಿಶ್ವಮಾನವ ಸಂದೇಶ ಎಲ್ಲೆಡೆ ಪಸರಿಸಿ, ಸಮ ಸಮಾಜ ನಿರ್ಮಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು.’
ಪ್ರಗತಿಪರ ಕೆಲಸ
ಯಾವುದೇ ಒಂದು ಸಂಸ್ಥೆ, ವಿಚಾರಧಾರೆ ಬೆಳೆಯಬೇಕಾದರೆ ಆ ವಿಚಾರಗಳ ಪ್ರಚಾರ–ಪ್ರಸಾರ, ಅನುಷ್ಠಾನ ಅಗತ್ಯ. ಬೌದ್ಧ ಧರ್ಮ ಸಾಕಷ್ಟು ಪ್ರಚಲಿತದಲ್ಲಿತ್ತು. ಭಾರತದಲ್ಲಿ ಹುಟ್ಟಿದ ಈ ಧರ್ಮವನ್ನು ಬೇರೆ ದೇಶದ ಜನ ಸ್ವೀಕರಿಸಿ ಪ್ರಚಾರ ಮಾಡಿದರು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅದೇ ರೀತಿ ಬಸವಣ್ಣನವರ ತತ್ವಗಳ ಪ್ರಚಾರ ಆಗಬೇಕು. ಅದು ನಮ್ಮ ನಡವಳಿಕೆ ಆಧರಿಸಿದೆ. ಎಲ್ಲರೂ ನಮ್ಮವರು ಎಂಬ ಭಾವನೆ ಬಂದರೆ ಬಸವತತ್ವ ಬೆಳೆಯಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಬಸವಲಿಂಗ ಪಟ್ಟದ್ದೇವರು ಕೆಲಸ ಮಾಡುತ್ತಿದ್ದಾರೆ. ಇಂದು ಬಸವಣ್ಣನವರ ವಚನ ಸಾಹಿತ್ಯದ ಬಗ್ಗೆ ಇಂದು ಸಾಕಷ್ಟು ಪ್ರಚಾರ ಆಗಿದೆ ಎಂದರು.
‘ಬಸವಲಿಂಗ ಪಟ್ಟದ್ದೇವರು ಸೇವೆ–ಸಾಧನೆ–ಸಮರ್ಪಣೆಯ ಸಂಗಮವಾಗಿದ್ದಾರೆ. ಅವರ ಬದುಕು ತ್ಯಾಗದ ಪ್ರತೀಕವಾಗಿದೆ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ಎಲ್ಲರನ್ನೂ ಸಮನಾಗಿ ಕಂಡಿದ್ದೇವೆ
‘ಭಾಲ್ಕಿ ಹಿರೇಮಠ ಸಂಸ್ಥಾನವು ಬಸವಣ್ಣನವರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದೆ. ಭಾಲ್ಕಿಯ ಎಲ್ಲ ಓಣಿಗಳ ಬಾವಿ ನೀರು ದೀನ–ದಲಿತರಿಗೆ ಸಿಗಬೇಕೆಂದು ದೊಡ್ಡ ಹೋರಾಟ ಮಾಡಿ, ಅದನ್ನು ಸಾಧ್ಯವಾಗಿಸಿದ ಕೀರ್ತಿ ನಮ್ಮ ಮಠಕ್ಕೆ ಸಲ್ಲುತ್ತದೆ. ಬಸವತತ್ವದ ನಿಜಾಚರಣೆಯಲ್ಲಿ ಮಠ ತೊಡಗಿದೆ’ ಎಂದು ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಮ್ಮ ಮಠದಿಂದ ಬಸವಣ್ಣ–ಅಂಬೇಡ್ಕರ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಎಲ್ಲರಿಗೂ ಲಿಂಗದೀಕ್ಷೆ ನೀಡುತ್ತೇವೆ. ಎಲ್ಲರನ್ನೂ ಸಮನಾಗಿ ಕಂಡಿದ್ದೇವೆ. ನಮ್ಮ ಹೃದಯದಲ್ಲಿ ಬಸವ, ಅಂಬೇಡ್ಕರ್ ನೆಲೆಸಿದ್ದಾರೆ ಎಂದರು.

ಕೃತಿ ಬಿಡುಗಡೆ
12ನೇ ಶತಮಾನದ ಬಸವಾದಿ ಶರಣರ ಸಾಮಾಜಿಕ ಕ್ರಾಂತಿ ಮತ್ತು ಅವರ ವೈಚಾರಿಕ ನಿಲುವುಗಳನ್ನು ವಿಶ್ಲೇಷಿಸುವ ಸಂಶೋಧನಾ ಕೃತಿ (ಶರಣರ ಕ್ರಾಂತಿ ಪಥ), ನಿತ್ಯ ಜೀವನಕ್ಕೆ ವಚನಗಳ ಪ್ರಸ್ತುತತೆಯನ್ನು ಸಾರುವ ಲೇಖನಗಳ ಸಂಗ್ರಹ (ವಚನ ವೈಭವ ಸಂಪುಟಗಳು), ಭಾಲ್ಕಿ ಹಿರೇಮಠದ ಇತಿಹಾಸ ಮತ್ತು ಸಮಾಜ ಸೇವೆಯನ್ನು ದಾಖಲಿಸಿರುವ ಸ್ಮರಣ ಸಂಚಿಕೆ (ಮಠದ ಪರಂಪರೆ), ಶರಣರ ಅನುಭವ ಮಂಟಪದ ಚರ್ಚೆಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಾರುವ ಪುಸ್ತಕಗಳನ್ನು (ಅನುಭವ ಮಂಟಪದ ಬೆಳಕು) ಗಣ್ಯರು ಬಿಡುಗಡೆಗೊಳಿಸಿದರು.

ಬಾಬು ವಾಲಿ ನಿರೂಪಿಸಿದರು. ವಿವಿಧ ಭಾಗದ ಶರಣರು, ಮಠದ ಭಕ್ತಾಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಗದಗ ಡಂಬಳ ತೋಂಟದಾರ್ಯ ಜಗದ್ಗುರು ಮಠದ ತೋಂಟದ ಸಿದ್ದರಾಮ ಸ್ವಾಮೀಜಿ, ಸಚಿವ ಈಶ್ವರ ಖಂಡ್ರೆ, ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಸಂಸದ ಸಾಗರ್ ಖಂಡ್ರೆ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಉಪಸ್ಥಿತರಿದ್ದರು.
