10,000 ಬಸವ ಭಕ್ತರ ಸೇರಿಸಿ ಭರ್ಜರಿಯಾಗಿ ಬಸವ ಜಯಂತಿ ಆಚರಿಸಲು ನಿರ್ಣಯ

ಬಸವ ಮೀಡಿಯಾ
ಬಸವ ಮೀಡಿಯಾ

‘ಬಸವ ಬಳಗಗಳ ಒಕ್ಕೂಟ’ ರಚಿಸಿದ ಲಿಂಗಾಯತ, ವೀರಶೈವ ಸಂಘಟನೆಗಳು

ಚಾಮರಾಜನಗರ :

ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಮೇ 22ರಂದು ಅದ್ಧೂರಿ ಹಾಗೂ ವೈಭವಯುತವಾಗಿ ಆಚರಿಸಲು ಬಸವ ಬಳಗಗಳ ಒಕ್ಕೂಟದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನಗರದ ಸಿದ್ಧಮಲ್ಲೇಶ್ವರ ವಿರಕ್ತಮಠದ ಆವರಣದಲ್ಲಿ ಬಳಗದ ಗೌರವಾಧ್ಯಕ್ಷರಾದ ಚನ್ನಬಸವಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮುಖಂಡರುಗಳ ಸಲಹೆ, ಸೂಚನೆಗಳನ್ನು ಪಡೆದು ನಂತರ ಅದ್ಧೂರಿಯಾದ ಮೆರವಣಿಗೆ ನಡೆಸಲು ತೀರ್ಮಾನಕ್ಕೆ ಬರಲಾಯಿತು.

ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿ ಎಲ್ಲಾ ಲಿಂಗಾಯತ, ವೀರಶೈವ ಮಹಾಸಭಾಗಳು, ಸಂಘ ಸಂಸ್ಥೆಗಳೊಡಗೂಡಿ ಬಸವ ಬಳಗಗಳ ಒಕ್ಕೂಟ ರಚಿಸಿ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿ ಬಸವ ಜಯಂತಿ ಆಚರಿಸಲು ತೀರ್ಮಾನಿಸಿದ್ದೀರಿ, ಬಸವ ಜಯಂತಿ ಆಚರಣೆಯ ಯಶಸ್ಸಿಗೆ ಎಲ್ಲರ ಸಹಕಾರ ಮುಖ್ಯವಾಗಿ ಬೇಕೆಂದರು.

ಸಿದ್ದಮಲ್ಲೇಶ್ವರ ಮಠದ ವತಿಯಿಂದ ಮೇ 21, 22 ಗ್ರಾಮಾಂತರ ಬಸವ ಜಯಂತಿ ನಡೆಯುತ್ತಿರುವುದರಿಂದ ಶ್ರೀಗಳ ಜತೆಗೂಡಿ ಮೇ 22ರಂದು ಸುಮಾರು 10 ಸಾವಿರಕ್ಕೂ ಅಧಿಕ ಜನರು ಸೇರಿ ಅದ್ಧೂರಿಯಾಗಿ ಬಸವಣ್ಣನ ಭಾವಚಿತ್ರದ ಮೆರವಣಿಗೆಯನ್ನು ವಿವಿಧ ಜಾನಪದ ಕಲಾತಂಡಗಳ ಜೊತೆಗೆ ಮಾಡೋಣ ಎಂದರು.

ಇದಕ್ಕಾಗಿ ಹಣಕಾಸು ಸಮಿತಿ, ಪ್ರಚಾರ ಸಮಿತಿ, ಸ್ವಾಗತ ಸಮಿತಿ ಸೇರಿದಂತೆ ಹಲವು ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲೆಯ 5 ತಾಲೂಕಿನ ಮುಖಂಡರು, ಯುವಕರು, ಮಹಿಳಾ ಸಂಘಟನೆಗಳು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸಬೇಕಾಗಿ ಮನವಿ ಮಾಡಿದರು.

ಮೆರವಣಿಗೆಯು ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಪ್ರಾರಂಭಗೊಂಡು, ನಗರದ ಪ್ರಮುಖ ಬೀದಿಗಳಲ್ಲಿ ನಡೆದು ಸಿದ್ದಮಲ್ಲೇಶ್ವರ ವಿರಕ್ತ ಮಠದಲ್ಲಿ ಕೊನೆಗೊಳ್ಳಲಿದೆ. ನಂತರ ಶ್ರೀ ಮಠದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದರು.

ಪೂಜ್ಯ ಚನ್ನಬಸವಸ್ವಾಮೀಜಿ ಮಾತನಾಡಿ, ಮಠದ ಹಾಗೂ ಭಕ್ತರ ವತಿಯಿಂದ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರು ಸಲಹೆ ಸೂಚನೆಗಳನ್ನು ನೀಡಿ ಎಲ್ಲರು ಒಗ್ಗೂಡಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸೋಣ ಎಂದರು.

ಸಭೆಯಲ್ಲಿ ಮುಖಂಡರಾದ ಮೂಡ್ಲುಪುರ ನಂದೀಶ, ಕಾಳನಹುಂಡಿ ಗುರುಸ್ವಾಮಿ, ಎನ್. ಗುರುಸ್ವಾಮಿ, ಬಿ.ಕೆ. ರವಿಕುಮಾರ, ಎನ್‌ರಿಚ್ ಮಹದೇವಸ್ವಾಮಿ, ಗಿರೀಶ ದೊಡ್ಡರಾಯಪೇಟೆ, ಸಿದ್ದಮಲ್ಲಪ್ಪ, ಶ್ವೇತಾ ಶಶಿಧರ, ವಸಂತಮ್ಮ, ಸುಧಾ ಮಲ್ಲಣ್ಣ, ಬಾಲಚಂದ್ರಮೂರ್ತಿ, ಮಹದೇವಸ್ವಾಮಿ, ಮಹದೇವಪ್ಪ, ಸೋಮಶೇಖರ, ಗುರುಪ್ರಸಾದ, ಆಲೂರು ಮಲ್ಲು, ಗುರು, ಕೆ. ವೀರಭದ್ರಸ್ವಾಮಿ, ಎಲ್, ಸುರೇಶ, ಜಗದೀಶ ಸೇರಿದಂತೆ ಭಾಗವಹಿಸಿದ್ದ ಮುಖಂಡರು ತಮಗೆ ವಹಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತೇವೆ ಎಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *