ರಾಯಚೂರು ಬಸವಕೇಂದ್ರದಲ್ಲಿ ಬಸವ ಜಯಂತಿ, ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ

ರಾಯಚೂರು :

ನಗರದ ಬಸವ ಕೇಂದ್ರದಲ್ಲಿ ಬಸವಪರ ಸಂಘಟನೆಗಳಿಂದ 24ರಂದು ಬಸವ ಜಯಂತಿ ಆಚರಿಸಲಾಯಿತು.

ಪ್ರಮುಖ ಉಪನ್ಯಾಸಕರಾಗಿ ಆಗಮಿಸಿದ್ದ ನಗರ ಪೌರಾಡಳಿತ ಉಪ ಆಯುಕ್ತರಾದ ಬಿ. ಶರಣಪ್ಪ ಸತ್ಯಂಪೇಟೆ ಮಾತನಾಡುತ್ತಾ, ನಮ್ಮ ದೇಶದಲ್ಲಿ ಇಂದು ಮಹಿಳಾ ಮೀಸಲಾತಿ ಚರ್ಚೆಯ ವಿಷಯವಾಗಿದೆ. ಅಂದು ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ವಾಕ್ ಸ್ವಾತಂತ್ರ, ವಿಚಾರ ಸ್ವಾತಂತ್ರ್ಯ ಶರಣರು ನೀಡಿದ್ದರು ಎಂದರು.

ಅನುಭವ ಮಂಟಪದ ಅಕ್ಕ ಮತ್ತು ಅಲ್ಲಮರ ಸಂವಾದದ ಕುರಿತು ವಿವರಿಸಿದರು. ಶೂನ್ಯ ಸಂಪಾದನೆಗಳು, ಪ್ರಭುಲಿಂಗಲೀಲೆ ಕುರಿತು ಮಾರ್ಮಿಕವಾಗಿ ಮಾತನಾಡಿದರು.

ಕಲ್ಯಾಣ ಕ್ರಾಂತಿಯ ಕುರಿತು ಅಲ್ಲಮಪ್ರಭುವಿನ ಈ ವಚನ ವಿವರಿಸಿ, ಅವಧಿ ಅಳಿಯಿತ್ತು, ವ್ಯವಧಾನ ಉಳಿಯಿತ್ತು. ನಿಜವು ನಿಜವನೊಳಗೂಡಿತ್ತು ಕೇಳಾ ಬಸವಣ್ಣ. ಇನ್ನು ಕಲಿಯುಗದಲ್ಲಿ ಮುಂದೆ ಇರಬಾರದು. ಈ ಶರಣರಿಗೆ ನೆಲೆ ನೀಡು ಕಪ್ಪಡಿ ಸಂಗಮನಲಿ ಒಳಗೂಡು. ಉಳಿದವರು ನಿಜವನೈದು ನಡೆಸು ಉಳವಿಗೆ ಚನ್ನಬಸವಣ್ಣ. ಮಹವನೊಡಗೂಡು ಮಡಿವಾಳಯ್ಯ. ಸೊಡ್ಡಳ ಬಾಚರಸ ಮೊದಲಾದ ಪ್ರಮಥರೆಲ್ಲ ನಿಜವನೈದು ನಿರ್ವಯ ಬಯಲಾಗಿ. ನಮಗೆ ತಪ್ಪದು ಕದಳಿ ಹೊಕ್ಕು ನಿಜವನೈದುವುದು ಇದು ನಮ್ಮ ಗುಹೇಶ್ವರ ಲಿಂಗದ ಆಜ್ಞೆ.  ಎಂದು ಕಲ್ಯಾಣದ ಕ್ರಾಂತಿಯ ಮುನ್ಸೂಚನೆ ಶರಣರಿಗೆ ಹೊಳೆದಿತ್ತೆ? ಹೌದು ಎಂದು ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಧ್ವನಿಸುರುಳಿ ಬಿಡುಗಡೆ:

ಅಕ್ಕನ ಬಳಗದ ಚಂದ್ರಕಲಾ ಡಾ. ವಿರುಪಾಕ್ಷಪ್ಪ ಪಾಟೀಲ ಅವರು ಬರೆದ ಬಸವ ಭಾವ ಕಿರಣ ಹೆಸರಿನ ಕವನ ಸಂಕಲನ ಧ್ವನಿಸುರುಳಿಯನ್ನು ಗಿರಿಜಾ ಶಂಕರ ನವಸುಂದಿ ಬಿಡುಗಡೆಗೊಳಿಸಿದರು.

ವಚನ ಕಂಠಪಾಠ ಮಾಡಿದ ಮಕ್ಕಳಿಗೆ ಪ್ರಶಸ್ತಿ ನೀಡಲಾಯಿತು.

ಅತಿಥಿ ಮಡಿವಾಳ ಸಮಾಜದ ಅಧ್ಯಕ್ಷ ಜಂಬಣ್ಣ ಯಕ್ಲಾಸಪುರ ಮಾತನಾಡಿ, ಬಸವಣ್ಣನವರಿಗೆ ಎಲ್ಲಾ ಸೌಲಭ್ಯಗಳಿದ್ದರೂ ಅವನ್ನು ತೊರೆದು ಸಾರ್ವಜನಿಕವಾಗಿ ಕಾಯಕ, ಸಮಾನತೆ ಮತ್ತು ಎಲ್ಲರಲ್ಲಿಯೂ ದೇವರನ್ನು ಕಾಣುತ್ತಾರೆ. ಹಾಗಾಗಿ ಜಗತ್ತು ಇಂದು ಅವರನ್ನು ವಿಶ್ವಗುರು ಎಂದು ಜಾಗತಿಕವಾಗಿ ಒಪ್ಪಿಕೊಂಡಿದೆ ಎಂದರು.

ಕಾರ್ಯಕ್ರಮವನ್ನು ಕೇಂದ್ರದ ಉಪಾಧ್ಯಕ್ಷ ವಿಜಯಕುಮಾರ ಸಜ್ಜನ ಉದ್ಘಾಟಿಸಿದರು. ರಾಚನಗೌಡ ಕೋಳೂರು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ನಾಗನಗೌಡ ಹರವಿ ಮತ್ತಿತರರು ವೇದಿಕೆ ಮೇಲಿದ್ದರು.

ತಾಯಮ್ಮ ಎಲ್ಲನಗೌಡ ಸ್ವಾಗತಿಸಿದರು. ಜಯಶ್ರೀ ಮಹಾಜನಶೆಟ್ಟಿ ಅತಿಥಿಗಳ ಪರಿಚಯ ಮಾಡಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *