ನಿಜಾಚರಣೆ: ಗಂಗಾವತಿಯಲ್ಲಿ ‘ಬಸವಾದಿ ಶರಣರ ನಿಲಯ’ದ ಗುರುಪ್ರವೇಶ

ಗಂಗಾವತಿ

“ಲಿಂಗವಿದ್ದಲ್ಲಿ ನಿಂದೆಯಿರದು, ನಿಂದೆಯಿದ್ದಲ್ಲಿ ಲಿಂಗವಿರದು. ಅವರೆಂತಿದ್ದಡೇನು? ಹೇಗಿದ್ದಡೇನು? ಲಿಂಗವಂತರು ಉಪಮಿಸಬಾರದ ಮಹಾಘನವು ಕೂಡಲಸಂಗನ ಶರಣರು.”

ಗಂಗಾವತಿಯಲ್ಲಿ ದಿನಾಂಕ ಜೂನ್ 21ರಂದು ಎ.ಕೆ. ಮಹೇಶ ಅವರ “ಬಸವಾದಿ ಶರಣರ ನಿಲಯ” ಹೆಸರಿನ ನೂತನ ಮನೆಯ ಗುರುಪ್ರವೇಶ ನಡೆಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಇಳಕಲ್ಲಿನ ವಿಜಯಮಹಾಂತೇಶ್ವರ ಮಠದ ಪೂಜ್ಯ ಡಾ. ಗುರುಮಹಾಂತಪ್ಪಗಳು ವಹಿಸಿಕೊಂಡಿದ್ದರು.

ಅಧ್ಯಕ್ಷತೆಯನ್ನು ಗಂಗಾವತಿಯ ಬಸವತತ್ವ ಚಿಂತಕರಾದ ಸಿ. ಹೆಚ್. ನಾರಿನಾಳ ವಹಿಸಿಕೊಂಡಿದ್ದರು.

ಲಿಂಗಸೂರಿನ ವಿಜಯಮಹಾಂತೇಶ್ವರ ಶಾಖಾ ಮಠದ ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು, ಸಿಂಧನೂರಿನ ಗಂಗಮ್ಮ ವೀರಭದ್ರಪ್ಪ ಕುರಕುಂದಿ, ಬಸವಕೇಂದ್ರದ ಅಧ್ಯಕ್ಷರಾದ ಕೆ. ಬಸವರಾಜ, ಬಸವದಳದ ಅಧ್ಯಕ್ಷರಾದ ದಿಲೀಪ ವಂದಾಲ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಸಾನಿಧ್ಯವಹಿಸಿಕೊಂಡ ಡಾ. ಗುರುಮಹಾಂತಪ್ಪಗಳು ಬೆಳಿಗ್ಗೆ ನೂತನ ಮನೆಯಲ್ಲಿ ಇಷ್ಟಲಿಂಗ ಯೋಗವನ್ನು ಮಾಡಿಕೊಂಡರು. ಕಾರ್ಯಕ್ರಮದ ವೇದಿಕೆಯಲ್ಲಿ ಮಾತಾಡುತ್ತಾ, ಇಂದು “ಇಷ್ಟಲಿಂಗವೆನ್ನುವುದು ಪೂಜಿಸುವ ವಸ್ತುವಲ್ಲ, ಅದು ಸಾಧನೆ ಮಾಡುವ ಕುರುಹು” ಎಂದು ಮಾರ್ಮಿಕವಾಗಿ ನುಡಿದರು.

ಯಾಕೆಂದರೆ ಇಷ್ಟಲಿಂಗವನ್ನು ಬರಿ ಪೂಜೆಗೆ ಸೀಮಿತಗೊಳಿಸಿ ಅದರ ಮೂಲ ಆಶಯವನ್ನು ಮರೆಮಾಚಿಸಿ, ಇಷ್ಟಲಿಂಗದ ತುಂಬಾ ಹೂ-ಪತ್ರಿಗಳನ್ನು ಹಾಕಿ ಇಷ್ಟಲಿಂಗವನ್ನು ಸ್ಥಾವರಗೊಳಿಸಿದ ಈ ಕಾಲಘಟ್ಟದಲ್ಲಿ ಪೂಜ್ಯ ಶ್ರೀಗಳ ಮಾತು ಅತ್ಯಂತ ಪರಿಣಾಮಕಾರಿಯಾದ ಮಾತು ಅನಿಸಿತು.

ಅವರು ಮಾತನಾಡುತ್ತಾ, ಯಾವ ಇಷ್ಟಲಿಂಗ ಮಡಿ ಮೈಲಿಗೆಯ ವಿರುದ್ದವಾಗಿ ಬಂಡಾಯವಾಗಿ ಹುಟ್ಟಿತ್ತೋ, ಅಂತಹ ಇಷ್ಟಲಿಂಗಕ್ಕೆ ಮಡಿ ಮೈಲಿಗೆ ಹಚ್ಚಿದವರು ಪಟ್ಟಭದ್ರರು. ಇಷ್ಟಲಿಂಗಕ್ಕೆ ಮಡಿ ಮೈಲಿಗೆ ಇಲ್ಲ, ನಾವು ಸ್ನಾನ ಮಾಡಿ ಇಷ್ಟಲಿಂಗ ಮುಟ್ಟ ಬೇಕು ಎನ್ನುವ ಇನ್ನಿತರ ಮೌಢ್ಯಗಳು ಬೇಡ.

ಸ್ನಾನವಿಲ್ಲದಿದ್ದರೂ ಪರವಾಗಿಲ್ಲ ದಿನದಲ್ಲಿ ಯಾವ ಸಮಯ ಸಿಗುತ್ತೆ ಆ ಸಮಯದಲ್ಲಿ ನೀವು ಇಷ್ಟಲಿಂಗ ಯೋಗವನ್ನು ಮಾಡಬಹುದು. ಇಷ್ಟು ಸರಳವಾದ ಇಷ್ಟಲಿಂಗ ಯೋಗವನ್ನು ಅತ್ಯಂತ ಕಠಿಣಗೊಳಿಸಿ ಜನಸಾಮಾನ್ಯನಿಗೆ ಅದರ ಬಗ್ಗೆ ಭಯ ಹುಟ್ಟಿಸಿ ಬದುಕು ಪರಾವಲಂಬಿ ಜೀವಿಗಳು ಹೇಳಿದಂತಿಲ್ಲ, ಬಸವಾದಿ ಶರಣರು ಹೇಳಿದ ದೃಷ್ಠಿಯೋಗದ ಮಹತ್ವ ಎಂದು ನುಡಿದರು.

“ಲಿಂಗವಿದ್ದಲ್ಲಿ ಕಠಿಣವುಂಟೆ ? ಜಂಗಮದಲ್ಲಿ ಕುಲವೆಂಟೆ ? ಪ್ರಸಾದದಲ್ಲಿ ಅರುಚಿಯುಂಟೆ ? ” ಎಂಬ ಶರಣರ ಮಾತುಗಳನ್ನು ನನೆಯುತ್ತಾ, ಲಿಂಗವಂತರು ಬರಿ ಲಿಂಗಾರ್ಚನೆಗೆ ಸೀಮಿತವಾಗಬಾರದು, ಅವರು ಜಂಗಮಲಿಂಗದ ಕಡೆ ಮುಖ ಮಾಡಬೇಕೆಂದರು.

” ಎರೆದಡೆ ನನೆಯದು , ಮರೆದಡೆ ಬಾಡದು ಹುರುಳಿಲ್ಲ, ಹುರುಳಿಲ್ಲ ಲಿಂಗಾರ್ಚನೆ ; ಕೂಡಲಸಂಗಮದೇವಾ, ಜಂಗಮಕ್ಕೆರೆದಡೆ ಸ್ಥಾವರ ನನೆಯಿತ್ತು ” ಎನ್ನುವ ಬಸವಣ್ಣನವರ ಎಚ್ಚರಿಕೆಯ ವಚನವನ್ನು ಜ್ಞಾಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ಬಸವ ತ್ವ ಚಿಂತಕರಾದ ಸಿ.ಹೆಚ್. ನಾರನಾಳ ಇಂದು ಮನೆಗಳು ಸಂಸ್ಕಾರ ನೀಡುವ ಮಠಗಳು ಆಗಬೇಕು. ಮನೆಗಳು ಹೇಗಿರಬೇಕೆಂದರೆ ” ದುರ್ವವ್ಯಸನಿ ದುರಾಚಾರಿಯಂದೆನಿಸದಿರಯ್ಯಾ , ಎನ್ನ ಲಿಂಗವ್ಯಸನಿ ಜಂಗಮ ಪ್ರೇಮಿಯೆಂದೆನಿಸಯ್ಯಾ ” ಎನ್ನುವಂತ ಸಂಸ್ಕಾರ ನೀಡಬೇಕು. ಮನೆಗೆ ಬಂದವರಿಗೆ ಸಂಸ್ಕಾರದಿಂದ ಮಾತಾಡಿಸುವ ಉಪಚರಿಸುವ ಸಂಸ್ಕಾರ ನೀಡಬೇಕು. ಅಂತಹ ಬಸವ ಸಂಸ್ಕಾರದ ಕುಟುಂಬ ಇದು ಎಂದು ತಿಳಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕತೆಯನ್ನು ಮಾತಾಡಿದ ಬಸವ ಕೇಂದ್ರದ ಅಧ್ಯಕ್ಷರಾದ ಕೆ. ಬಸವರಾಜ ಅವರು ಇಂದು ಲಿಂಗವಂತ ಮನೆಗಳು ಮೌಢ್ಯಾಚರಣೆಗಳನ್ನು ಮೀರಿ ಬದುಕಬೇಕು. ‘ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ” ಎನ್ನುವಂತೆ ಲಿಂಗವಂತ ಮನೆಗಳು ಇರಬೇಕು ಎಂದು ತಿಳಿಸಿದರು .

ಕಾರ್ಯಕ್ರಮದ ಪ್ರಾರ್ಥನೆಯನ್ನು ವಿಜಯಲಕ್ಷ್ಮಿ ನಾರನಾಳ ನಡೆಸಿಕೊಟ್ಟರು, ನಿರೂಪಣೆಯನ್ನು ವೀರೇಶ ಅಸರೆಡ್ಡಿ ನಡೆಸಿಕೊಟ್ಟರು. ನಂತರ ಕವಿತಾ ಮತ್ತು ಎ.ಕೆ. ಮಹೇಶ ಅವರಿಗೆ ಅವರ ಗೆಳೆಯರ ಬಳಗ, ಮಿತ್ರರು, ಬಂಧು ಬಳಗದವರು ಸನ್ಮಾನಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *