ಗೌರಿ ಸಹ ಕಾಕ್ರೋಚ್: ಹತ್ಯೆಯಾದ ಪತ್ರಕರ್ತೆಗೆ ಜೆನ್‍ಝಿ ನಮನ

ಬಸವ ಮೀಡಿಯಾ
ಬಸವ ಮೀಡಿಯಾ

ಗೌರಿ ನೆನಪಿನಲ್ಲಿ ಜೆನ್‌ ಝೀ ದಿನ

ಬೆಂಗಳೂರು

ನಗರದ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ನೆನಪಿನಲ್ಲಿ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ‘ಗೌರಿ ದಿನ-ಜೆನ್‍ಝಿ ದಿನ’ ಭಾನುವಾರ ಸಂಜೆ ನಡೆಯಿತು.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕೊಂದವರೇ, ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸಹ ಕೊಂದರು, ಎಂದು ದಾನಿಶ್ ಅಲಿ, ಜಂಟಿ ಕಾರ್ಯದರ್ಶಿ, ಜೆಎನ್‍ಯು ವಿದ್ಯಾರ್ಥಿ ಸಂಘಟನೆ, ಹೇಳಿದರು.

ಸರ್ವಾಧಿಕಾರಿಗಳು ಆಡಳಿತ ನಡೆಸಿದರೆ ಪ್ರಜೆಗಳು ಮುಕ್ತವಾಗಿ ಮಾತನಾಡಲು ಆಗದಂತಹ ಸನ್ನಿವೇಶ ನಿರ್ಮಿಸುತ್ತಾರೆ. ಸರಕಾರದ ವಿರುದ್ಧ ಮಾತನಾಡಿದರೆ ಜೈಲಿಗೆ ಅಟ್ಟಲಾಗುತ್ತದೆ.

ಗೋವಿಂದ್ ಪನ್ಸಾರೆ, ಎಂ.ಎಂ. ಕಲಬುರ್ಗಿ, ಜಿ.ಎನ್. ಸಾಯಿಬಾಬಾ ಮತ್ತು ಫಾದರ್ ಸ್ಟಾನ್ ಸ್ವಾಮಿ ಅವರ ಸಾವು, ವಿದ್ಯಾರ್ಥಿ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ನಿರಂತರ ಜೈಲುವಾಸದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೆ ಸಿಲುಕಿದೆ, ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ ಸಂಚಾಲಕ ಆಶುತೋಷ್‌ ರಾಂಕಾ ಒಂದು ವೇಳೆ ಗೌರಿ ಲಂಕೇಶ್ ಜೀವಂತವಾಗಿ ಇದ್ದಿದ್ದರೆ ಈ ದೇಶದ ಹೆಮ್ಮೆಯ ಕಾಕ್ರೋಚ್ ಆಗುತ್ತಿದ್ದರು. ಅವರು ಸಹ ನಮ್ಮ ಹೋರಾಟದ ಭಾಗವಾಗಿ ಉಳಿದುಕೊಳ್ಳುತ್ತಿದ್ದರು, ಎಂದು ಹೇಳಿದರು.

ಈ ದೇಶ ಸಾಮಾಜಿಕವಾಗಿ ಮೊದಲು ಬದಲಾವಣೆ ಕಾಣಬೇಕು.ಇದಕ್ಕಾಗಿ ಶಿಕ್ಷಣ ಸುಧಾರಣೆಯೇ ಪರಿಹಾರ ಎನ್ನುವುದನ್ನು ನಾವು ನಂಬಿದ್ದೇವೆ.

ಆದರೆ, ಸುಧಾರಣೆ ಪ್ರಕ್ರಿಯೆಗೆ ಕೇಂದ್ರ ಸರಕಾರವೇ ಅಡ್ಡಿಯಾಗಿದೆ. ಕಳೆದ ಹನ್ನೇರಡು ವರ್ಷಗಳಿಂದ ಶಿಕ್ಷಣ ಕ್ಷೇತ್ರವನ್ನು ನಡೆಸಿಕೊಂಡಿರುವ ರೀತಿ ಗಮನಿಸಬಹುದು.

ದೇಶದೊಳಗೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಆದಲ್ಲಿ ಅಂಧಭಕ್ತರ ಸೈನ್ಯವು ಇರುವುದಿಲ್ಲ ಎನ್ನುವ ಆತಂಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಇದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ ಸಂಚಾಲಕ ಆಶುತೋಷ್‌ ರಾಂಕಾ ಹೇಳಿದ್ದಾರೆ

ಕಾಕ್ರೋಚ್ ಜನತಾ ಪಾರ್ಟಿಯ ಮುಂದಿನ ಧ್ಯೇಯವೇ ಶಾಲಾ, ಕಾಲೇಜು ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದು.ಇದಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟಗಳನ್ನು ರೂಪಿಸುತ್ತೇವೆ. ಇದೊಂದು ಜನಾಂದೋಲನ ಆಗಬೇಕು.

ಸರಕಾರ ಯಾವ ಪಕ್ಷದ್ದೇ ಆಗಿರಲಿ, ವ್ಯವಸ್ಥೆಯಲ್ಲಿ ಆ ಕಾಲಕ್ಕೆ ಬದಲಾವಣೆ ಆಗಬೇಕು. ಜತೆಗೆ, ನಿರುದ್ಯೋಗ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆಯೂ ನಮ್ಮ ಪಕ್ಷ ದನಿಗೂಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ(ಎಸ್‍ಎಫ್‍ಐ) ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಐಶೆ ಘೋಷ್‌ ಮಾತನಾಡಿ, ಸರ್ವಾಧಿಕಾರ ಧೋರಣೆಯಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ. ಅಧಿಕಾರ ದುರುಪಯೋಗ ಪಡಿಸಿಕೊಳ್ಳುವವರನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಿಂದ ಹೊರಗಿಡಬೇಕು.

ದೇಶದ ಎಲ್ಲೆಡೆ ಖಾಸಗೀಕರಣ ಶಿಕ್ಷಣ ವಿರೋಧಿಸಬೇಕಾಗಿದೆ. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ಮುಂದೆ ಅನ್ಯಾಯ ನಡೆಯುತ್ತಿದ್ದರೆ ಅದನ್ನು ಪ್ರಶ್ನಿಸಬೇಕು. ನೋಡಿ ಸುಮ್ಮನಿದ್ದರೆ ನಾವು ಸಹ ಅದರ ಭಾಗವಾಗುತ್ತೇವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೊ.ವಿ.ಎಸ್.ಶ್ರೀಧರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಗೌರಿ ಸ್ಮಾರಕ ಟ್ರಸ್ಟ್ ಅಧ್ಯಕ್ಷರೂ ಆದ ಮಾನವಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಸಿನೆಮಾ ನಿರ್ದೇಶಕಿ, ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಅವರು ವಿವಿಧ ವಿದ್ಯಾರ್ಥಿ ಸಂಘಟನಗಳ ಮುಖಂಡರಾದ ಶರಣ್ಯಾ, ವೀಣಾ ನಾಯಕ್, ಅರ್ಪಿತಾ, ಮಹಾಂತೇಶ್, ದುರ್ಗೇಶ್, ನಳಿನಿ ಸೇರಿದಂತೆ ಪ್ರಮುಖರನ್ನು ವೇದಿಕೆಗೆ ಸ್ವಾಗತಿಸಿದರು. ಹೋರಾಟಗಾರ ಸರೋವರ್ ಬೆಂಕಿಕೆರೆ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *