ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆ
ಚಿತ್ರದುರ್ಗ:
ಕನ್ನಡ ನಾಡಿನ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ಹರಸುತ್ತಿರುವ ಗುರುಪೀಠಗಳಲ್ಲಿ ಒಂದಾದ ಸುಮಾರು ೧೦೦೦ ವರ್ಷಗಳ ಇತಿಹಾಸ ಪರಂಪರೆ ಹೊಂದಿರುವ ಕರ್ನಾಟಕದ ಅತ್ಯಂತ ಪ್ರಭಾವಶಾಲಿ ಹಾಗೂ ಸಮೃದ್ಧ ಮಠಗಳಲ್ಲಿ ಸುತ್ತೂರು ಮಠವೂ ಒಂದು ಎಂದು ಚಿತ್ರದುರ್ಗ ಅಂಚೆ ಇಲಾಖೆಯ ಅಂಚೆ ಸಹಾಯಕರಾದ ಆರ್.ತಿಪ್ಪೇಸ್ವಾಮಿ ಹೇಳಿದರು.
ಅವರು ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶ್ರಾವಣಮಾಸದ ಅಂಗವಾಗಿ ಶ್ರೀಮಠದ ಬಸವೇಶ್ವರ ಸಭಾಂಗಣದಲ್ಲಿ ಶನಿವಾರ ನಡೆದ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳವರ ಜೀವನ ಸಾಧನೆ ಕುರಿತು ವಿಷಯಾವಲೋಕನ ಮಾಡುತ್ತಿದ್ದರು.

ಸುತ್ತೂರು ಮಠ ಹೇಗೆ ಉಗಮವಾಯಿತು ಎಂದರೆ ಕಂಚಿಯ ಅರಸರು ಮತ್ತು ತಲಕಾಡಿನ ಗಂಗರೂ ಯುದ್ಧಕ್ಕೆ ಸಿದ್ಧತೆಯನ್ನು ಮಾಡಿಕೊಂಡಿದ್ದನ್ನು ತಿಳಿದ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳು ಶಾಂತಿ ಸ್ಥಾಪನೆಗಾಗಿ ಕಪಿಲಾ ನದಿಯ ದಂಡೆಯ ಮೇಲೆ ತಪಸ್ಸಿಗೆ ಕುಳಿತರು. ತಲಕಾಡಿನ ದಂಡಯಾತ್ರೆಗೆ ಹೊರಟಿದ್ದ ರಾಜೇಂದ್ರ ಚೋಳನ ಕುದುರೆ ರಾಜನ ನಿಯಂತ್ರಣ ಮೀರಿ ಸ್ವಾಮೀಜಿಗಳ ಬಳಿ ಬರುತ್ತದೆ. ಆಗ ರಾಜರು ಸಹ ಶಿವಯೋಗಿಗಳ ಬಳಿ ಬಂದಾಗ ಯುದ್ಧದ ಪರಿಣಾಮವನ್ನು ತಿಳಿಹೇಳಿ ಯುದ್ಧವನ್ನು ನಿಲ್ಲಿಸುತ್ತಾರೆ.
ಸುತ್ತೂರು ಮಠದ ಆರಂಭದ ಕಥೆಯ ಪ್ರಮುಖ ಹಂತ ಏನೆಂದರೆ ಯುದ್ಧವನ್ನು ನಿಲ್ಲಿಸಿದ ಒಬ್ಬ ಶಿವಯೋಗಿಯ ಕಥೆ. ಇದರರ್ಥ ಯುದ್ಧಕ್ಕಿಂತ ಶಾಂತಿ ಮುಖ್ಯ. ಅಧಿಕಾರಕ್ಕಿಂತ ಧರ್ಮ ದೊಡ್ಡದು. ಸ್ವಾರ್ಥಕ್ಕಿಂತ ಸಮಾಜ ಸೇವೆ ಬಹಳ ದೊಡ್ಡದು ಎನ್ನುವುದಾಗಿದೆ.
ಸುತ್ತೂರು ಮಠದ ಇತಿಹಾಸವನ್ನು ಕೇವಲ ಒಂದು ಧಾರ್ಮಿಕ ಕೇಂದ್ರ ಎಂದು ನೋಡುವುದಕ್ಕಿಂತ ತಾನು ಸವೆಸಿರುವ ಧರ್ಮ, ಶಿಕ್ಷಣ, ದಾಸೋಹ, ಪರಂಪರೆ, ಸಮಾಜ ಸೇವೆಯ ಪರಂಪರೆಯ ಹಾದಿಯನ್ನು ನೋಡುವುದು ಸೂಕ್ತ. ತಮ್ಮ ಬೋಧನೆಯ ಮೂಲಕ ಜನಸಾಮಾನ್ಯರನ್ನು ಜ್ಞಾನಿಗಳನ್ನಾಗಿ ಮಾಡಿ ಲೋಕಕಲ್ಯಾಣವನ್ನು ಮಾಡಿದವರು. ಜತೆಗೆ ತಮ್ಮ ಮುಕ್ತಿಯನ್ನು ಸಾಧಿಸಿಕೊಂಡು ಸಾರ್ಥಕ ಭಾವದಿಂದ ಈ ಜಗತ್ತಿನಿಂದ ನಿರ್ಗಮಿಸಿದವರು ಎಂದು ನುಡಿದರು.

ಸುತ್ತೂರು ಮಹಾಸಂಸ್ಥಾನದ ೨೩ನೆಯ ಜಗದ್ಗುರುಗಳಾದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ೧೯೧೬ರಲ್ಲಿ ಜನಿಸಿದರು. ಬಾಲ್ಯದಿಂದಲೇ ಆಧ್ಯಾತ್ಮಿಕ ದಿವ್ಯತೇಜಸ್ಸನ್ನು ಹೊಂದಿದ್ದರು. ಸಾಧಕರಿಗೆ ಅನೇಕ ಸವಾಲುಗಳನ್ನು ಭಗವಂತ ಒಡ್ಡುತ್ತಾನೆ. ಅಂತಹ ಸವಾಲುಗಳನ್ನು ಆತ್ಮವಿಶ್ವಾಸದಿಂದ ಅಂಜದೆ ಅಳುಕದೆ ಶ್ರದ್ಧಾಭಕ್ತಿಯಿಂದ ಎಂತಹ ಸಂಕಲ್ಪಗಳೂ ಸಹ ಸಾಕಾರಗೊಳ್ಳುತ್ತವೆ ಎಂಬುದಕ್ಕೆ ಪೂಜ್ಯ ಜಗದ್ಗುರುಗಳವರೇ ಸಾಕ್ಷಿ.
ರಾಜ್ಯಾದ್ಯಂತ ನೂರಾರು ಶೈಕ್ಷಣಿಕ ಸಂಸ್ಥೆಗಳನ್ನಲ್ಲದೆ ವಿದ್ಯಾರ್ಥಿ ನಿಲಯಗಳು, ಸಂಸ್ಕೃತಿ, ಸಾಹಿತ್ಯ, ಕಲಾಪೋಷಕರಾಗಿ ಅವರು ಕಲಾಮಂಟಪ ಸ್ಥಾಪಿಸಿದರು. ಹಾಗೆಯೇ ಶರಣ ಸಾಹಿತ್ಯ ಪ್ರಚಾರಕ್ಕಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಿದರು. ತಾಂತ್ರಿಕ, ವೈದ್ಯಕೀಯ, ಸಂಸ್ಥೆಯನ್ನು ಹೊಂದಿ ೪೫ ಸಾವಿರ ವಿದ್ಯಾರ್ಥಿಗಳು ಪ್ರತಿವರ್ಷ ಶಿಕ್ಷಣ ಪಡೆಯುತ್ತಿದ್ದು, ೫೫ ಸಾವಿರ ಜನರಿಗೆ ಉದ್ಯೋಗ ನೀಡಿದೆ.

ಸುತ್ತೂರು ಜಾತ್ರೆ ಎಂದರೆ ಕೇವಲ ದೇವರ ಜಾತ್ರೆಯಲ್ಲ ಅದೊಂದು ಧರ್ಮ, ದಾಸೋಹ, ಕೃಷಿ, ಕಲೆ, ಗ್ರಾಮೀಣ ಕ್ರೀಡೆ, ಶಿಕ್ಷಣ, ಸಾಮಾಜಿಕ ಸೇವೆಗಳು ಒಂದೇ ವೇದಿಕೆಯಲ್ಲಿ ಸೇರಿಸುವ ಮಹೋತ್ಸವವಾಗಿದೆ ಎಂದು ವಿಶ್ಲೇಷಿಸಿದರು.
ಮೈಸೂರಿನ ಮಹಾರಾಜರು ಶಿಕ್ಷಣ ಮತ್ತು ದಾಸೋಹಕ್ಕೆ ಹಲವಾರು ಕಡೆ ಜಾಗಗಳನ್ನು ನೀಡಿದ್ದರ ಫಲವಾಗಿ ಸುತ್ತೂರು ಮಠವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಬೃಹದಾಕಾರವಾಗಿ ಬೆಳೆಯಲು ಹಾಗೂ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಯಿತು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ರಾವಂದೂರು ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಮುರುಘರಾಜೇಂದ್ರ ಬೃಹನ್ಮಠಕ್ಕೆ ಶ್ರೀ ಮಲ್ಲಿಕಾರ್ಜುನ ಶ್ರೀಗಳು ಹೇಗೋ ಹಾಗೆ ಸುತ್ತೂರು ಮಠಕ್ಕೆ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು. ಯಾರು ಬಡವರು ಅನಾಥರು ನಿರ್ಗತಿಕರಾಗಿದ್ದರೋ ಅವರಿಗೆಲ್ಲ ಆಶ್ರಯವನ್ನು ನೀಡಿದರು.
೩೫೦ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ. ಯಾವುದೇ ತಾರತಮ್ಯವಿಲ್ಲದೆ ಶಿಕ್ಷಣ ನೀಡುತ್ತಿದ್ದಾರೆ. ಇಂಥ ಮಠಗಳಿಂದಾಗಿ ಕರ್ನಾಟಕವು ಇಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀ ಬಸವಮುರುಘೇಂದ್ರ ಸ್ವಾಮೀಜಿ, ಆಳಂದ ತೋಂಟದಾರ್ಯ ಅನುಭವ ಮಂಟಪದ ಕೋರಣೇಶ್ವರ ಸ್ವಾಮಿಗಳು, ಬೇಲೂರಿನ ಶಿವಕುಮಾರ ಶ್ರೀಗಳು ಇದ್ದರು.

ಎಸ್.ಜೆ.ಎಂ. ಕನ್ನಡ ಮಾಧ್ಯಮ ಶಾಲೆ ಹಾಗೂ ಎಸ್.ಜೆ.ಎಂ. ಬ್ಯಾಂಕ್ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಜಮುರಾ ಕಲಾವಿದ ಉಮೇಶ ಪತ್ತಾರ ಪ್ರಾರ್ಥನಾ ಗೀತೆ ಹಾಡಿದರು. ನವೀನ ಕಿರಣ್ ಸ್ವಾಗತಿಸಿದರು. ನಿರ್ಮಲಾ ಎಂ. ನಿರೂಪಿಸಿದರು.
