‘ಮರ ಬೆಳೆಸಿ–ಧರೆ ಉಳಿಸಿ’ ಪರಿಸರ ಸಂರಕ್ಷಣೆ ಅಭಿಯಾನಕ್ಕೆ ಚಾಲನೆ

ಪೂಜ್ಯ ಉದ್ದಾನ ಸ್ವಾಮೀಜಿ ಅವರಿಂದ ಭಕ್ತರಿಗೆ ಬಿಲ್ವಪತ್ರೆ ಸಸಿ ವಿತರಣೆ

ಗುಂಡ್ಲುಪೇಟೆ:

ಪರಿಸರ ಸಂರಕ್ಷಣೆ ಮತ್ತು ಶರಣ ಸಂಸ್ಕೃತಿಯ ಮೌಲ್ಯಗಳ ಉಳಿವಿಗೆ ಮತ್ತು ರಕ್ಷಣೆಗೆ ಪ್ರತಿಯೊಬ್ಬರೂ ತಮ್ಮ ಗ್ರಾಮದಲ್ಲಿ ಬಿಲ್ವಪತ್ರೆ ವೃಕ್ಷವನ್ನು ಬೆಳೆಸುವ ಸಂಕಲ್ಪ ಮಾಡಬೇಕು ಮತ್ತು ಪರಿಸರ ಉಳಿಸಲು ಮುಂದಾಗಬೇಕು ಎಂದು ಪೂಜ್ಯ ಮೂಡುಗೂರು ಇಮ್ಮಡಿ ಉದ್ದಾನ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಮೂಡುಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ದಾಸೋಹ ಭವನ ಮುಂದಿನ ತಿಂಗಳಲ್ಲಿ ಲೋಕಾರ್ಪಣೆಯಾಗಲಿರುವ ಹಿನ್ನೆಲೆಯಲ್ಲಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಕ್ತರನ್ನು ಆಹ್ವಾನಿಸುವ ಕಾರ್ಯಕ್ರಮದ ಅಂಗವಾಗಿ ಭಕ್ತರಿಗೆ ಬಿಲ್ವಪತ್ರೆ ಸಸಿಗಳನ್ನು ವಿತರಿಸುವ ಮೂಲಕ ಈ ವರ್ಷದ “ಮರ ಬೆಳೆಸಿ – ಧರೆ ಉಳಿಸಿ” ಪರಿಸರ ಕಾಪಾಡಿ ಅಭಿಯಾನಕ್ಕೆ ಶ್ರೀಗಳು ಚಾಲನೆ ನೀಡಿದರು.

“ಪ್ರಕೃತಿಯೇ ಪರಮಾತ್ಮನ ಸ್ವರೂಪ ಎಂಬ ಭಾವನೆಯನ್ನು ನಮ್ಮ ಸಂಸ್ಕೃತಿ ಸಾರುತ್ತದೆ. ನದಿ, ಬೆಟ್ಟ, ಗಿಡ-ಮರ ಹಾಗೂ ಜೀವಜಗತ್ತನ್ನು ಆರಾಧಿಸುವ ಪರಂಪರೆ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪರಿಸರ ಮತ್ತು ಆಧ್ಯಾತ್ಮಿಕತೆಯ ನಡುವೆ ಅವಿನಾಭಾವ ಸಂಬಂಧವಿದ್ದು, ವೃಕ್ಷಾರೋಪಣೆಯು ಪುಣ್ಯದ ಕಾರ್ಯವಾಗಿದೆ”ಎಂದು ಹೇಳಿದರು.

ಬಿಲ್ವ, ಅರಳಿ, ತುಳಸಿ, ಪಾರಿಜಾತ ಹಾಗೂ ಬನ್ನಿ ಮರಗಳು ಧಾರ್ಮಿಕ ಮತ್ತು ಔಷಧೀಯ ಮಹತ್ವವನ್ನು ಹೊಂದಿವೆ. ವಿಶೇಷವಾಗಿ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ವೃಕ್ಷವನ್ನು ಪ್ರತಿಯೊಂದು ಗ್ರಾಮದಲ್ಲೂ ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಯ ಜೊತೆಗೆ ಧಾರ್ಮಿಕ ಮೌಲ್ಯಗಳನ್ನೂ ಉಳಿಸಬಹುದು ಎಂದರು.

“ಬಿಲ್ವ ವೃಕ್ಷ ಫಲ ನೀಡುವ ಹಂತಕ್ಕೆ ಬೆಳೆಯುವವರೆಗೆ ಅದನ್ನು ಪ್ರೀತಿಯಿಂದ ಪೋಷಿಸಿ, ಅದರ ಬೆಳವಣಿಗೆಗೆ ನಾವು ಸಹ ಬೆನ್ನೆಲುಬಾಗಿ ನಿಲ್ಲುತ್ತೇವೆ”ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಮೂಡುಗೂರು ಶ್ರೀಮಠದಿಂದ ಉಚಿತವಾಗಿ ವಿತರಿಸಲಾಗುತ್ತಿರುವ ಬಿಲ್ವ ಸಸಿಗಳನ್ನು ಭಕ್ತರು ಸಂತೋಷದಿಂದ ಸ್ವೀಕರಿಸಿದರು. ಸಸಿಗಳನ್ನು ನೆಟ್ಟು ಪೋಷಿಸುವುದಾಗಿ ಭಕ್ತರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಬಸವಭಕ್ತರು, ವಿವಿಧ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
1 Comment
  • ಶ್ರೀಗಳ ಇಂತಹ ಕಾರ್ಯಕ್ರಮಗಳು ಪರಿಸರ ರಕ್ಷಣೆಯ ಜೊತೆಗೆ ಧಾರ್ಮಿಕ ಭಾವನೆಗಳಿಂದ ಜನರು ಆರೋಗ್ಯವಂತರಾಗಲು ಅನುಕೂಲವಾಗಲಿದೆ. ಶ್ರೀಗಳಿಗೆ ಅನಂತ ಶರಣು

Leave a Reply

Your email address will not be published. Required fields are marked *