ಲಿಂಗಾಯತರು ಹಿಂದೂ, ಮುಸ್ಲಿಂ, ಕ್ರೈಸ್ತರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು: ಯಡಿಯೂರಪ್ಪ

ಬಸವ ಮೀಡಿಯಾ
ಬಸವ ಮೀಡಿಯಾ

ಚಿಕ್ಕಮಗಳೂರು:

ವೀರಶೈವ ಲಿಂಗಾಯತ ಸಮುದಾಯ ಒಗ್ಗೂಡುವ ಜತೆಗೆ ಹಿಂದೂ, ಮುಸ್ಲಿಮ್, ಕ್ರೈಸ್ತರು ಸೇರಿದಂತೆ ಎಲ್ಲರನ್ನೂ ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗಬೇಕು. ಭೇದಭಾವ ಮಾಡದೆ ಎಲ್ಲರನ್ನೂ ಒಗ್ಗಟ್ಟಿನಿಂದ ತೆಗೆದುಕೊಂಡು ಹೋದಾಗ ಜೀವನ ಸಾರ್ಥಕವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನಗರದ ಎಐಟಿ ಕಾಲೇಜು ಸಮೀಪ ನೂತನವಾಗಿ ನಿರ್ಮಿಸಲಾಗಿರುವ ಮೈತ್ರಾದೇವಿ ಬಿ.ಎಸ್. ಯಡಿಯೂರಪ್ಪ ವೀರಶೈವ ಲಿಂಗಾಯತ ಸಮುದಾಯ ಭವನ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಸಮಾಜದ ಒಗ್ಗಟ್ಟು, ಪರಸ್ಪರ ಸಹಕಾರ, ಸಹಯೋಗದೊಂದಿಗೆ ಈ ಭವನ ಮುಂದುವರಿಯಲಿ. ಸಮಾಜ ಸಂಘಟಿತವಾದಾಗ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ.

ಎಲ್ಲರ ಸಂಘಟಿತ ಪ್ರಯತ್ನದ ಫಲವಾಗಿ ಭವ್ಯ ಭವನ ತಲೆಯೆತ್ತಿ ನಿಂತಿದೆ. ಆತ್ಮೀಯ ಮತ್ತು ಅಭಿಮಾನದಿಂದ ತಮ್ಮ ಶ್ರೀಮತಿ ಮೈತ್ರಾದೇವಿಯವರ ಹೆಸರು ಇಟ್ಟಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ರಾಜ್ಯ ಅರಣ್ಯ ಸಚಿವ ಈಶ್ವ‌ರ್ ಬಿ. ಖಂಡ್ರೆ ಮಾತನಾಡಿ, ವೀರಶೈವ ಲಿಂಗಾಯುತ ಸಮಾಜಕ್ಕೆ ಇತಿಹಾಸ, ಪರಂಪರೆ ಇದೆ. ದಯೆಯನ್ನು ಧರ್ಮದ ಮೂಲವಾಗಿಸಿಕೊಂಡು ವೈಚಾರಿಕತೆ, ವೈಜ್ಞಾನಿಕತೆ, ಆಧ್ಯಾತ್ಮ, ಸ್ವಾತಂತ್ರ, ಸಮನ್ವಯತೆಯ ಸುಂದರ ಸಮಾಜ, ಕಂದಚಾರರಹಿತ ವೀರಶೈವ ಲಿಂಗಾಯತ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕೆಂದು ಹೇಳಿದರು.

ಮಲೆನಾಡು ಭಾಗದಲ್ಲಿ ಮಾನವ ಮತ್ತು ಕಾಡುಪ್ರಾಣಿ ಸಂಘರ್ಷ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅವರು, ಜೀವ ಉಳಿಸುವ ಕೆಲಸ ಮಾಡುವುದಾಗಿ ಹೇಳಿದರು.

ಸಮಾರಂಭದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ, ಟಿ.ಡಿ. ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ. ಎಸ್.ಎಲ್. ಭೋಜೇಗೌಡ, ಕೃಷಿ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ ಮತ್ತಿತರರು ಉಪಸ್ಥಿತರಿದ್ದರು.

ಕೃಪೆ: ವಾರ್ತಾ ಭಾರತಿ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *