ಬೀದರ್
ʼವೈದಿಕ ಕೋಮುವಾದಿಗಳ ಕುತಂತ್ರವನ್ನು ತಿಳಿಸಿ ಹೇಳಲು ವಿವಿಧ ಸಂಘಟನೆಗಳ ನೇತ್ರತ್ವದಲ್ಲಿ ಮೇ 15ರಂದು ಶಹಾಪುರದಲ್ಲಿ ʼಬಸವಾದಿ ಶರಣರ ಜಾಗೃತಿ ಸಮಾವೇಶʼ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿಯ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಜಿ.ಶೆಟಗಾರ ಮಂಗಳವಾರ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 18ರಂದು ನಡೆಯಲಿರುವ ʼಬಸವಾದಿ ಶರಣರ ಹಿಂದೂ ಸಮಾವೇಶ’ದಲ್ಲಿ ಶರಣರ ಸಮಾನತೆಯ ತತ್ವಗಳಿಗೆ ವಿರುದ್ಧವಾದ ಹಿಂದುತ್ವದ ವಿಚಾರಧಾರೆಗಳನ್ನು ಸೇರಿಸುವ ಷಡ್ಯಂತ್ರ ನಡೆಯುತ್ತಿದೆ.
ಪುರೋಹಿತ ವರ್ಗವು ದೇವರ ಹೆಸರಿನಲ್ಲಿ ನಡೆಸುತ್ತಿದ್ದ ಶೋಷಣೆಯನ್ನು ಮನಗಂಡಿದ್ದ ಶರಣರು ದೇವಾಲಯಗಳನ್ನು ಧಿಕ್ಕರಿಸಿ ದೇಹವೇ ದೇವಾಲಯ, ಅಂತರಂಗದಲ್ಲಿನ ಚೈತನ್ಯವೆ ದೇವರು ಎಂದು ಘೋಷಿಸಿದರು. ಕರ್ಮ ಸಿದ್ಧಾಂತದ ಬದಲಿಗೆ ಕಾಯಕ ಸಿದ್ಧಾಂತ ಜಾರಿಗೊಳಿಸಿ ಸಮ ಸಮಾಜಕ್ಕಾಗಿ ಶರಣರು ಶ್ರಮಿಸಿದರು.
ಇದೀಗ ಕೋಮುವಾದಿ ಶಕ್ತಿಗಳು ಮತ್ತೆ ಚಾತುರ್ವಣ ಧರ್ಮವನ್ನು ಖಾಯಂಗೊಳಿಸಿ ಶರಣ ಧರ್ಮವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ. ಬಸವಣ್ಣನವರನ್ನು ಹಿಂದುತ್ವದ ಖೆಡ್ಡಾಕ್ಕೆ ಬೀಳಿಸಿ ಸಾಂಸ್ಕೃತಿಕ ನಾಯಕತ್ವವನ್ನು ವಿಕೃತಿಗೊಳಿಸಲು ಯತ್ನಿಸುತ್ತಿವೆ. ಹಿಂದೂ ಸಮಾವೇಶದ ಹೆಸರಿನಲ್ಲಿ ಶರಣರ ಅನುಯಾಯಿಗಳಿಗೆ ದ್ವಂದ್ವಕ್ಕೆ ಸಿಲುಕಿಸುವ ಪ್ರಯತ್ನ ನಡೆಸುತ್ತಿದ್ದಾರೆʼ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಂತಕಿ ಮೀನಾಕ್ಷಿ ಬಾಳಿ ಬಹುಸಂಖ್ಯಾತ ದುಡಿಯುವ ಜನಸಮುದಾಯಗಳನ್ನು ತಮ್ಮ ರಾಜಕೀಯ ಅಜೇಂಡಾಕ್ಕೆ ಬಳಸಿಕೊಳ್ಳಲು ಹಿಂದೂ ಹೆಸರಿನಲ್ಲಿ ವರ್ಣಾಶ್ರಮ ಪದ್ಧತಿಯನ್ನು ಪುನಃ ಪ್ರತಿಷ್ಠಾಪಿಸಲು ಹೊರಟಿದ್ದಾರೆ. ಅದರ ಭಾಗವಾಗಿಯೆ ಶಹಾಪೂರದಲ್ಲಿ ಬಸವಾದಿ ಶರಣ ಹಿಂದೂ ಸಮಾವೇಶ ಮಾಡಲು ಹೊರಟಿದ್ದಾರೆ, ಎಂದು ಹೇಳಿದರು.
ಅಸಲಿಗೆ ಅವರಿಗೆ ಬಸವಣ್ಣನವರ ಅಥವಾ ಶರಣರ ಬಗೆಗೆ ಭಕ್ತಿಯೂ ಇಲ್ಲ. ಅಭಿಮಾನವಂತೂ ಮೊದಲೇ ಇಲ್ಲ. ಇಂತಹ ಸಮಾವೇಶಗಳ ಮುಖಾಂತರ ಶರಣರ ಅಯಾಯಿಗಳಾಗಿರುವ ಅಸಂಖ್ಯ ದುಡಿಯುವ ಜನರನ್ನು ತಮ್ಮತ್ತ ಸೆಳೆದುಕೊಳ್ಳುವ ಹುನ್ನಾರವಾಗಿದೆ. ಶರಣರು ಪುರಾತನರೆ ಹೊರತು ಸನಾತನಿಗಳಲ್ಲ. ಬಸವಾದಿ ಶರಣರನ್ನು ಹಿಂದುತ್ವದ ಕುಟಿಲ ಆವರಣದೊಳಗೆ ಸೆಳೆದುಕೊಳ್ಳಲು ಮತ್ತು ಇಡೀ ನಾಡನ್ನು ಕೋಮುವಾದಿಕರಿಸಲು ಹೆಣಗುತ್ತಿರುವ ಈ ಯೋಜನೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ, ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಮಾತನಾಡಿ, ʼಬಸವಾದಿ ಶರಣರನ್ನು ಹಿಂದುತ್ವದ ಕುಟಿಲ ಆವರಣದೊಳಗೆ ಸೆಳೆದುಕೊಳ್ಳಲು ಪ್ರಚೋದನೆ ನೀಡುತ್ತಿರುವ ಕನ್ನೇರಿ ಸ್ವಾಮಿಯನ್ನು ರಾಜ್ಯದಿಂದ ಗಡಿಪಾರು ಮಾಡಬೇಕುʼ ಎಂದು ಆಗ್ರಹಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಸಂಚಾಲಕ ರವೀಂದ್ರ ಶಾಬಾದಿ ಮಾತನಾಡಿ, ʼಬಸವಾದಿ ಶರಣರ ಜಾಗೃತಿ ಸಮಾವೇಶದಲ್ಲಿ ನಾಡಿನ ಬಸವಪರ ಮಠಾಧೀಶರು, ವಿಚಾರವಾದಿಗಳು ಮಾತನಾಡಲಿದ್ದಾರೆ. ಶರಣ ತತ್ವಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ವೈದಿಕರ ಮುಖವಾಡ ಕಳಚುವುದೇ ಸಮಾರಂಭದ ಮುಖ್ಯ ಉದ್ದೇಶವಾಗಿದೆ.
ಬಸವಾದಿ ಶರಣರನ್ನು ವೈದಿಕ ಚಾತುರ್ವರ್ಣ ವ್ಯವಸ್ಥೆಯ ವಿಷ ವರ್ತುಲದಲ್ಲಿ ಸಿಲುಕಿಸುವ ಅವರ ಹುನ್ನಾರವನ್ನು ನಾವು ತಿಳುವಳಿಕೆ ಮೂಡಿಸುವ ಕಾರ್ಯಕ್ರಮದ ಮೂಲಕವೆ ಉಗ್ರವಾಗಿ ಖಂಡಿಸುತ್ತೇವೆʼ ಎಂದರು.
ಕಾರ್ಯಕ್ರಮ ವಿವರ
ಮೇ 15ರಂದು ಸಂಜೆ 3 ಗಂಟೆಯಿಂದ ಶಹಾಪೂರ ನಗರದ ಹಳೆಯ ಬಸ್ ನಿಲ್ದಾಣ ಎದುರಿನ ಶಾಲಾ ಮೈದಾನದಿಂದ ವಚನ ಗಾಯನದೊಂದಿಗೆ ಮೆರವಣಿಗೆ ಹೊರಟು, ಸಂಜೆ 5 ಗಂಟೆಗೆ ಸಮಾವೇಶಗೊಳ್ಳಲಿದ್ದೇವೆ. ಜಾಗತಿಕ ಲಿಂಗಾಯತ ಮಹಾಸಭಾ, ಸೌಹಾರ್ದ ಕರ್ನಾಟಕ, ಬಸವಪರ ಸಂಘಟನೆಗಳ ಒಕ್ಕೂಟ, ದಲಿತಪರ ಸಂಘಟನೆಗಳು, ಕಾಯಕಜೀವಿಗಳ ಒಕ್ಕೂಟ, ರೈತ, ಮಹಿಳಾ, ವಿದ್ಯಾರ್ಥಿ, ಕಾರ್ಮಿಕ ಸಂಘಟನೆಗಳು ನೇತ್ರತ್ವದಲ್ಲಿ ಸಮಾವೇಶ ನಡೆಯಲಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ನಾಡಿನ ವಿವಿಧ ಜಿಲ್ಲೆಗಳ ಮಠಾಧೀಶರು, ಬಸವತತ್ವ ಚಿಂತಕರು, ಬಸವಾಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆʼ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.
ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧಕ್ಷೆ ರೇಷ್ಮಾ ಕುಂದನ್, ಮುಖಂಡ ಅಲ್ಲಮಪ್ರಭು ನಾವದಗೇರಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಾಂತಪ್ಪ ಪಾಟೀಲ, ಹಣಮಂತರಾಯ ಪಾಟೀಲ, ಜಗದೀಶ್ವರ ಬಿರಾದರ್, ಪ್ರಭು ಸಂತೋಷಕರ್, ಶಶಿಕಾಂತ ಡಾಂಗೆ, ಗೌಸೊದ್ದೀನ್, ಆರ್.ಪಿ.ರಾಜು ಮತ್ತಿತರರಿದ್ದರು.
