ಬೀದರ:
ಕಲ್ಯಾಣ ಕ್ರಾಂತಿಯ ಗಾಥೆಯನ್ನು ಯಾರೂ ಮರೆಯಬಾರದು ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಇಲ್ಲಿಯ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಇತ್ತೀಚೆಗೆ ನಡೆದ ಒಂಬತ್ತು ದಿನಗಳ ಮರಣವೇ ಮಹಾನವಮಿ ಮಹೋತ್ಸವ ಹಾಗೂ ಕಲ್ಯಾಣಕ್ರಾಂತಿ ವಿಜಯೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶರಣರು ಬಲಿದಾನ ನೀಡಿದ್ದ ಕಲ್ಯಾಣ ಕ್ರಾಂತಿ ನೆನೆದರೆ ಮೈ ರೋಮಾಂಚನಗೊಳ್ಳುತ್ತದೆ ಎಂದು ತಿಳಿಸಿದರು.
ಹನ್ನೆರಡನೆಯ ಶತಮಾನದಲ್ಲಿ ಕಟ್ಟಿದ್ದ ಕಲ್ಯಾಣ ಸಮೃದ್ಧ ಕಲ್ಯಾಣವಾಗಿತ್ತು. ಎಲ್ಲಿ ನೋಡಿದರೂ ಶಿವನ ಪ್ರಕಾಶ ಬೆಳಗುತ್ತಿತ್ತು. ದೃಷ್ಟಿತಾಗಿತೇನೋ ಎಂಬಂತೆ ಕೊಂಡಿ ಮಂಚಣ್ಣಾದಿಗಳ ಕಾರಸ್ಥಾನದಿಂದ ಕಲ್ಯಾಣವೆಂಬ ಪ್ರಣತೆ ಒಡೆದು, ಬತ್ತಿ ಚೆಲ್ಲಿ, ಜ್ಯೋತಿ ಆರಿತು. ಶರಣರು ನಾಡಿನಾದ್ಯಂತ ಚದುರಿದರು ಎಂದು ತಿಳಿಸಿದರು.

ಎಂಟೆದೆಯ ಬಂಟರಾಗಿದ್ದ ಶರಣರು ಧೃತಿಗೆಡದೆ ಉಳವಿಯ ಕಾಡಿನೊಳಗೆ ಒಯ್ದು ವಚನ ಸಾಹಿತ್ಯ ಉಳಿಸಿದರು. ಜೇನುಗೂಡಿಗೆ ಕಲ್ಲಿಟ್ಟರೆ, ಜೇನು ನೊಣಗಳು ಮತ್ತೆ ಬೇರೆಡೆ ಗೂಡು ಕಟ್ಟುವಂತೆ, ಉಳವಿಯೊಳು ಅನುಭವ ಮಂಟಪ ಆರಂಭಿಸಿದರು ಎಂದು ಹೇಳಿದರು.
ಅಕ್ಕ ನಾಗಮ್ಮ ಕಾಡಿನಿಂದ ವಚನಗಳನ್ನು ನಾಡಿಗೆ ತಂದು ಬಸವ ತತ್ವ ಪ್ರಸಾರ ಮಾಡಿದರು. ಇದರ ಸವಿ ನೆನಪಿಗಾಗಿ ಕಲ್ಯಾಣ ಕ್ರಾಂತಿ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕಲಬುರಗಿ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಶರಣಬಸವ ಮಠಪತಿ ಮಾತನಾಡಿ, ನವರಾತ್ರಿ ಉತ್ಸವಕ್ಕೆ ನವ ನವೀನ ನವಚಿಂತನೆಗಳು ಅದ್ಭುತ ಕಲ್ಪನೆ. ಒಂಬತ್ತು ದಿನ ವೈವಿಧ್ಯಮಯ 9 ಚಿಂತನ ಗೋಷ್ಠಿಗಳನ್ನು ಹಮ್ಮಿಕೊಂಡಿರುವುದು ಅರ್ಥಪೂರ್ಣ ಎಂದು ಬಣ್ಣಿಸಿದರು.

ಶರಣರ ಸಂಗದಲ್ಲಿ ಒಂದು ಸೂಳ್ನುಡಿಯನಿತ್ತರೆ ಎನ್ನನೆ ಇತ್ತೆ ಎಂದಿದ್ದಾರೆ ದಾಸಿಮಯ್ಯ ಶರಣರು. ಅಂಥದ್ದೇ ಅನುಭವ ಇಲ್ಲಿ ಸೇರಿದವರೆಲ್ಲ ಅನುಭವಿಸಿದ್ದೇವೆ. ಸಮಾಜದ ಡೊಂಕು ತಿದ್ದಲು ಇಂಥ ಕಾರ್ಯಕ್ರಮಗಳು ಅವಶ್ಯಕ.
ಅನ್ನಪೂರ್ಣ ಅಕ್ಕನವರ ಸಂಕಲ್ಪ ನೆರವೇರಿಸುವತ್ತ ಮುನ್ನಡೆದಿರುವ ಲಿಂಗಾಯತ ಮಹಾಮಠದ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ದೇವಕಿ ಅಶೋಕಕುಮಾರ ನಾಗೂರೆ ಮಾತನಾಡಿ, ಗೃಹಸ್ಥ ಜೀವನವೂ ಶ್ರೇಷ್ಠವೆಂದು ತೋರಿದವರು ಬಸವಣ್ಣ. ಹನ್ನೆರಡನೆ ಶತಮಾನದಲ್ಲಿ ಅನುಭವ ಮಂಟಪದತ್ತ ಬಂದ ಎಲ್ಲ ಶರಣರನ್ನು ತನ್ನೆತ್ತರಕ್ಕೆ ಬೆಳೆಸಿದ ಮಹಾತ್ಮ ಅವರು ಎಂದು ನುಡಿದರು.
ಬಸವಣ್ಣನವರ ವಿನೂತನ ಕ್ರಾಂತಿಯಿಂದ ಮಹಿಳೆಯರು ಸಹ ಶತ ಶತಮಾನಗಳ ಅಜ್ಞಾನ ಕಳಚಿ, ಪುರುಷರ ಸಮನಾಗಿ ಎದ್ದು ನಿಂತರು. ಅನುಭಾವ ಗೋಷ್ಠಿಗಳಲ್ಲಿ ಚರ್ಚಿಸಿದರು. ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಮಟ್ಟಕ್ಕೆ ಬೆಳೆದರು ಎಂದು ಹೇಳಿದರು.
ಬೀದರದಲ್ಲಿ ಮರಣವೇ ಮಹಾನವಮಿ ಮಹೋತ್ಸವ ಆಯೋಜಿಸುವ ಮೂಲಕ ನೂರಾರು ಶರಣೆಯರನ್ನು ವೇದಿಕೆಗೆ ತಂದು ಚಿಂತನೆಗೈಯಲು ಅವಕಾಶ ಕಲ್ಪಿಸಿದ ಶ್ರೇಯಸ್ಸು ಅಕ್ಕ ಅನ್ನಪೂರ್ಣತಾಯಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ನೇತೃತ್ವ ವಹಿಸಿದ್ದ ಪರುಷ ಕಟ್ಟೆಯ ಚೆನ್ನಬಸವಣ್ಣ ಮಾತನಾಡಿ, ಎಲ್ಲ ನದಿಗಳನ್ನು ಸಮುದ್ರ ಇಂಬಿಟ್ಟುಕೊಳ್ಳುವಂತೆ, ಸರ್ವರನ್ನು ಇಂಬಿಟ್ಟುಕೊಳ್ಳುವವನೆ ಗುರು. ಅಂಥ ಗುರುವಿನ ಕಾರ್ಯ ಲಿಂಗಾಯತ ಮಹಾ ಮಠದಲ್ಲಿ ಸಮರ್ಥವಾಗಿ ನಡೆದಿದೆ ಎಂದರು.
ಗಂಗಮ್ಮ ಲದ್ದೆ ವಚನ ಪಠಣ ಮಾಡಿದರು. ನೀಲಮ್ಮನ ಬಳಗದ ಸದಸ್ಯರು ಪ್ರಾರ್ಥನೆಗೈದರು. ಬಸವ ಗೀತೆಗಳ ಮೇಲೆ ಕೋಲಾಟ ಪ್ರದರ್ಶಿಸಿದರು. ಕಂಟೆಪ್ಪ ಗಂದಿಗುಡಿ, ಚಂದ್ರಕಲಾ ಮಂಗಲಪೇಟ್ ವಚನ ಗಾಯನ ಮಾಡಿದರು. ಮಹೇಶ ಬಿರಾದಾರ ತಬಲಾ ಸಾಥ್ ನೀಡಿದರು.
ನಿವೃತ್ತ ಅಗ್ನಿಶಾಮಕ ಅಧಿಕಾರಿ ಅಮೃತ ಚಿಮಕೋಡ್, ಮುಖ್ಯಶಿಕ್ಷಕ ರಾಜಕುಮಾರ ಬಗದಲ್ ಉಪಸ್ಥಿತರಿದ್ದರು.
ನೀಲಮ್ಮನ ಬಳಗದ ಉಮಾ ರಿಕ್ಕೆ ಭಕ್ತಿ ದಾಸೋಹಗೈದರು. ಲಿಂಗಾಯತ ಸೇವಾ ದಳದ ಬಸವ ಪ್ರಸಾದ ನಿರೂಪಿಸಿದರು. ಅಭಿಷೇಕ್ ಮಠಪತಿ ಸ್ವಾಗತಿಸಿದರು.